Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Monday, March 23, 2020

Kannada News | Karnataka News | India News

Kannada News | Karnataka News | India News


ನವರಾತ್ರಿಯಲ್ಲಿ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬಾರದು

Posted: 23 Mar 2020 01:32 PM PDT

ಮಾರ್ಚ್ 25ರಂದು ನವರಾತ್ರಿ ಶುರುವಾಗ್ತಿದೆ. ಅದೇ ದಿನ ಯುಗಾದಿ. ಕೊರೊನಾ ಹಿನ್ನಲೆಯಲ್ಲಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಿಲ್ಲ. ಆದ್ರೆ ಮನೆಯಲ್ಲಿ ಸರಳವಾಗಿ ನವರಾತ್ರಿ ಆಚರಿಸುವವರು ನವರಾತ್ರಿಯ 9 ದಿನ ಈ ತಪ್ಪುಗಳನ್ನು ಮಾಡಬಾರದು.

ನವರಾತ್ರಿಯ ಸಮಯದಲ್ಲಿ ಉಪವಾಸ ಮಾಡುವ ವ್ಯಕ್ತಿ ಗಡ್ಡ-ಮೀಸೆ ತೆಗೆಯಬಾರದು. ಕ್ಷೌರ ಮಾಡಬಾರದು.

ಕಲಶ ಸ್ಥಾಪಿಸಿದ ನಂತರ ಮನೆಯನ್ನು ಖಾಲಿ ಬಿಡಬಾರದು.

ಒಂಭತ್ತು ದಿನಗಳ ಕಾಲ ಸಾತ್ವಿಕ ಆಹಾರವನ್ನು ಸೇವಿಸಬೇಕು. ಮಾಂಸಾಹಾರ, ಬೆಳ್ಳುಳ್ಳಿ, ಈರುಳ್ಳಿಯನ್ನು ಸೇವಿಸಬಾರದು.

ನವರಾತ್ರಿ ದಿನ ಹಗಲಿನಲ್ಲಿ ಮಲಗಬಾರದು. ಇದು ಕೆಟ್ಟ ಶಕುನ. ಹಾಗೆ ಉಪವಾಸದಲ್ಲಿ ಆಲ್ಕೋಹಾಲ್ ಸೇವನೆ ಮಾಡಬಾರದು.

ಉಪವಾಸದ ಸಮಯದಲ್ಲಿ ತಂಬಾಕು ಸೇವನೆ ಮಾಡಬಾರದು. ಮುಟ್ಟಿನ ಸಮಯದಲ್ಲಿ ಮಹಿಳೆಯರು ಪೂಜೆ ಮಾಡಬಾರದು.

ಉಪವಾಸದಲ್ಲಿ ಹಣ್ಣು, ತರಕಾರಿ, ಜ್ಯೂಸ್ ಜೊತೆ ಆಲೂಗಡ್ಡೆ, ಡ್ರೈ ಫ್ರೂಟ್ಸ್, ಕಡಲೆಕಾಯಿ ಸೇವನೆ ಮಾಡಬೇಕು.

ಒಂಭತ್ತು ದಿನಗಳ ಕಾಲ ಇಪ್ಪತ್ನಾಲ್ಕು ಸಾವಿರ ಗಾಯತ್ರಿ ಮಂತ್ರಗಳನ್ನು ಜಪಿಸಬೇಕು.

ನಿಮ್ಮ ಭವಿಷ್ಯ ತಿಳಿಯಲು ಸಂಪರ್ಕಿಸಿ:
ಪಂಡಿತ್ ಅನಂತ್ ಪ್ರಸಾದ್ ಶರ್ಮಾ
ಮೊಬೈಲ್:‌ 9845626805

ಶ್ವಾನದ ನಟನೆ ನೋಡಿ ಬೆರಗಾದ ಜನ…!

Posted: 23 Mar 2020 08:18 AM PDT

ಈ ಫೋಟೋದಲ್ಲಿರುವ ದೃಶ್ಯವನ್ನು ನೋಡಿ……ಅದೊಂದು ಅಪಾರ್ಟ್ಮೆಂಟ್, ಅದರೊಳಗೆ ನಾಯಿ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಇದನ್ನು ಯಾರು ಇಷ್ಟು ಕ್ರೂರವಾಗಿ ಕೊಂದಿದ್ದಾರೆ ಎಂದು ನಿಮಗೆ ಅನ್ನಿಸಬಹುದು.

ಆದರೆ ನಿಜವಾಗಿ ನಾಯಿ ಕೊಲ್ಲಲ್ಪಟ್ಟಿದೆಯೇ? ಅಥವಾ ಇನ್ನೇನಾಗಿದೆ ಎಂಬ ಕುತೂಹಲ ನಿಮಗೆ ಮೂಡಬಹುದು, ಇದು ಆ ನಾಯಿಯ ಸಹಿತ ಮಾಲೀಕ ಮಾಡಿದ ಬೃಹನ್ನಾಟಕ ಎಂದು ಬಳಿಕ ತಿಳಿಯುತ್ತದೆ. ಅದು ಹೇಗೆ ಎಂಬುದ ಮುಂದೆ ಓದಿ….

ಈ ನಾಯಿಯು ಮೊದಲು ಸ್ಟ್ರಾಬೆರಿ ಜಾಮ್ ಅನ್ನು ಸಿಕ್ಕ ಸಿಕ್ಕಂತೆ ತಿಂದಿದೆ. ಬಳಿಕ ಸುಸ್ತಾಗಿ ಅಂಗಾತ ಮಲಗಿಕೊಂಡಿದೆ. ಹಾಗಾಗಿ ಮೈಯೆಲ್ಲಾ ರಕ್ತಸಿಕ್ತವಾಗಿ ಕಾಣುತ್ತಿತ್ತು. ಒಮ್ಮೆ ಇದನ್ನು ನೋಡಿದ ಮನೆಯ ಮಾಲೀಕನಿಗೆ ಗಾಬರಿಯಾಗಿದೆ.

ಬಳಿಕ ವಿಷಯ ಗೊತ್ತಾಗಿ ಕ್ಯಾಮೆರಾ ತೆಗೆದುಕೊಂಡು ಫೋಟೋ ಹೊಡೆಯಲು ಮುಂದಾಗಿದ್ದಾನೆ. ಇದನ್ನು ಅರಿತ ಶ್ವಾನ ತನ್ನ ನಾಲಿಗೆ ಹೊರಹಾಕಿ ಇನ್ನೊಂದಿಷ್ಟು ನಟನೆ ಮಾಡಿದೆ.

ಆತ ಮಾರ್ಚ್ 20ರಂದು ಈ ಫೋಟೋವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿ, “ಸ್ಟ್ರಾಬೆರಿ ಜಾಮ್ ತಿಂದ ಮೇಲೆ ಒಂದು ಫೋಟೊ ತೆಗೆದಿರುವೆ” ಎಂಬ ಅಡಿ ಬರಹವನ್ನು ಬರೆದಿದ್ದಾನೆ. ಈ ವಿಡಿಯೋ ಈಗಾಗಲೇ 64,900 ಲೈಕ್ ಗಳು ಬಂದಿದ್ದರೆ, 1,000 ಕಮೆಂಟ್ ಗಳು ಬಂದಿವೆ.

Just taking a nap after eating all the strawberry jam from pics

ಕರೋನಾ ತಡೆಗಟ್ಟಲು ಸೂಪರ್‌ ಐಡಿಯಾ ಮಾಡಿದ ಮ್ಯಾಕ್‌ ಡೊನಾಲ್ಡ್ಸ್‌

Posted: 23 Mar 2020 08:16 AM PDT

ಮನುಕುಲ ಎದುರಿಸುತ್ತಿರುವ ಕೊರೋನಾ ತುರ್ತು ಪರಿಸ್ಥಿತಿಯ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದ್ದು, ದೊಡ್ಡ ದೊಡ್ಡ ಕಂಪನಿಗಳು ಸಹ ಈ ಬಗ್ಗೆ ತಮ್ಮದೇ ಅಭಿಯಾನಕ್ಕೆ ಮುನ್ನುಡಿ ಬರೆದಿವೆ.

ಜಗತ್ತಿನಾದ್ಯಂತ ಮೂರು ಲಕ್ಷ ಜನರಿಗೆ ಬಾಧಿಸಿ, 13,068 ಜೀವಗಳನ್ನು ಬಲಿ ತೆಗೆದುಕೊಂಡಿರುವ ಈ ಮಹಾಮಾರಿಯ ವಿರುದ್ಧ ಜನರ ಹೋರಾಟದಲ್ಲಿ ಭಾಗಿಯಾಗಿರುವ ಅಮೆರಿಕನ್ ರೆಸ್ಟಾರಂಟ್‌ ಚೈನ್ ಮ್ಯಾಕ್‌ ಡೊನಾಲ್ಡ್ಸ್‌ ಬ್ರಿಟನ್‌ನಲ್ಲಿರುವ ತನ್ನ ಔಟ್‌ ಲೆಟ್ಗಳಲ್ಲಿ ಬಿಲ್ಲಿಂಗ್‌ ಸರತಿಯಲ್ಲಿ ನಿಲ್ಲುವ ಜನರ ನಡುವೆ ಒಂದು ಮೀಟರ್‌ ಅಂತರ ಕಾಯ್ದುಕೊಳ್ಳಲು ನೆರವಾಗಲು ಎರಡು ಟೈಲ್ಸ್‌ಗಳಷ್ಟು ಅಂತರವನ್ನು ಬಿಟ್ಟು ಮಾರ್ಕಿಂಗ್ ಮಾಡುತ್ತಿದೆ.

ತನ್ನ ಉದ್ಯೋಗಿಗಳು ಹಾಗೂ ಗ್ರಾಹಕರ ಆರೋಗ್ಯಕ್ಕೆ ತಾನೆಷ್ಟು ಕಾಳಜಿ ತೋರುತ್ತೇನೆ ಎಂದು ತನ್ನ ಈ ನಡೆ ತೋರುತ್ತದೆ ಎಂದು ಮ್ಯಾಕ್‌ ಡೊನಾಲ್ಡ್ಸ್‌ ಹೇಳಿಕೊಂಡಿದೆ.

OMG: ಮನೆಯ ಬಾಲ್ಕನಿಯಲ್ಲೇ 42.3 ಕಿ.ಮೀ. ರನ್ನಿಂಗ್…!

Posted: 23 Mar 2020 08:14 AM PDT

ಮನೆಗಳಿಂದ ಕೇವಲ 500 ಮೀಟರ್‌ ದೂರ ನಡೆದುಕೊಂಡು ಹೋಗುವುದೂ ಸಹ ದೊಡ್ಡ ರಿಸ್ಕ್ ಎಂಬಂಥ ಪರಿಸ್ಥಿತಿ ನೆಲೆಸಿರುವ ಸಂದರ್ಭದಲ್ಲಿ, ಫ್ರಾನ್ಸ್‌ನ ವ್ಯಕ್ತಿಯೊಬ್ಬ ತನ್ನ ಫಿಟ್ನೆಸ್‌ ವರ್ಕ್‌‌ಔಟ್ ಮುಂದುವರೆಸಲು ಹೊಸ ಐಡಿಯಾ ಮಾಡಿದ್ದಾನೆ.

ತನ್ನ ಮನೆಯಲ್ಲಿರುವ 7 ಮೀಟರ್‌ನಷ್ಟು ಉದ್ದದ ಬಾಲ್ಕನಿಯಲ್ಲಿ 42.2 ಕಿಮೀಗಳಷ್ಟು ದೂರವನ್ನು ಓಡುವ ಮೂಲಕ ಮ್ಯಾರಾಥಾನ್ ಪೂರೈಸಿದ ಎಲಿಶಾ ನೋಕೋಮೋವಿಟ್ಝ್‌, ಲಾಕ್‌ಡೌನ್‌ನ ನಡುವೆಯೂ ತನ್ನ ಮೆಚ್ಚಿನ ರನ್ನಿಂಗ್‌ ಅನ್ನು ಮಾಡುವ ಮೂಲಕ ನೆಟ್ಟಿಗರನ್ನು ಬೆರಗುಗೊಳಿಸಿದ್ದಾನೆ.

ಮನೆಯಲ್ಲೇ ಇರುವ ಬೋರಿಂಗ್‌ ಅನುಭವವನ್ನು ಹೋಗಲಾಡಿಸಲು ನಾನು ಮಾಡಿದ ಸಣ್ಣದೊಂದು ಚಾಲೆಂಜ್ ಇದು ಎಂದು ನೋಕೋಮೋವಿಟ್ಝ್ ಹೇಳಿಕೊಂಡಿದ್ದಾರೆ.

🎖FINISHER MARATHON DE MON BALCON🎖.🔸Je viens courir pendant près de 7heures sur mon balcon de 7 mètres de long et…

Posted by Elisha Nochomovitz on Tuesday, March 17, 2020

ಮನೆಗೆ ಬಂದ ಯುವತಿಗೆ ಮತ್ತು ಬರುವ ಪಾನೀಯ ಕೊಟ್ಟು ರೇಪ್: ವಿಡಿಯೋ ಮಾಡಿ ನೀಚ ಕೃತ್ಯ

Posted: 23 Mar 2020 08:02 AM PDT

ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ಯುವತಿಯನ್ನು ಮನೆಗೆ ಕರೆದು ಕೊಂಡು ಬಂದ ಯುವಕ ಮತ್ತು ಬರುವ ಪಾನೀಯ ಕುಡಿಸಿ ಅತ್ಯಾಚಾರ ಎಸಗಿದ್ದಾನೆ.

ಅತ್ಯಾಚಾರ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿಕೊಂಡು ಯುವತಿಗೆ ಬ್ಲಾಕ್ಮೇಲ್ ಮಾಡಿದ್ದಾನೆ. ವಿಡಿಯೋ ತೋರಿಸಿ ಮದುವೆಯಾಗುವಂತೆ ಒತ್ತಡ ಹಾಕಿದ್ದಲ್ಲದೆ, ಬೆದರಿಸಿ ಎರಡು ಸಲ ಅತ್ಯಾಚಾರ ಎಸಗಿದ್ದಾನೆ. ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದಾರೆ.

ಮೋನು ಬಂಧಿತ ಯುವಕ. ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಯುವತಿಯನ್ನು ಮದುವೆ ಸಮಾರಂಭವೊಂದರಲ್ಲಿ ಭೇಟಿಯಾಗಿದ್ದು ಪರಿಚಿತರಾಗಿದ್ದಾರೆ. ಬಳಿಕ ಸ್ನೇಹಿತರಾಗಿದ್ದು, ಯುವತಿಯನ್ನು ಹಲವು ಸಲ ಆಸ್ಪತ್ರೆಯಿಂದ ಮನೆಗೆ ಮೋನು ಡ್ರಾಪ್ ಮಾಡಿದ್ದಾನೆ.

ಒಮ್ಮೆ ತನ್ನ ಮನೆಗೆ ಕರೆದುಕೊಂಡು ಹೋದ ಆತ ಮತ್ತು ಬರುವ ಪಾನೀಯ ಕೊಟ್ಟು ಪ್ರಜ್ಞೆ ತಪ್ಪಿದ ಮೇಲೆ ಅತ್ಯಾಚಾರ ಎಸಗಿ ಚಿತ್ರೀಕರಣ ಮಾಡಿಕೊಂಡಿದ್ದಾನೆ. ವಿಡಿಯೋ ತೋರಿಸಿ ಮದುವೆಯಾಗಲು ಒತ್ತಡ ಹಾಕಿದ್ದಲ್ಲದೇ, ಬ್ಲಾಕ್ಮೇಲ್ ಮಾಡಿ ಮತ್ತೆ ಎರಡು ಬಾರಿ ಅತ್ಯಾಚಾರ ಎಸಗಿರುವುದಾಗಿ ಯುವತಿ ದೂರು ನೀಡಿದ್ದಾರೆ. ಆರೋಪಿಯನ್ನು ಬಂಧಿಸಿ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಅಜಯ್ ಸಾಹ್ನಿ ತಿಳಿಸಿದ್ದಾರೆ.

ಮಹಾಮಾರಿ ಕೊರೋನಾ ಭೀತಿಯೇ ಇಲ್ಲದೇ ಯುಗಾದಿ ಹಬ್ಬದ ಖರೀದಿಗೆ ಮುಗಿ ಬಿದ್ದ ಜನ

Posted: 23 Mar 2020 07:29 AM PDT

ಶಿವಮೊಗ್ಗ: ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಏರಿಕೆಯಾಗಿದ್ದು ದೇಶದಲ್ಲಿಯೇ ಮೂರನೇ ಸ್ಥಾನ ಪಡೆದುಕೊಂಡಿದೆ.

ಹೀಗಿದ್ದರೂ ಇಂತಹ ಆತಂಕದ ಸ್ಥಿತಿ ನಡುವೆ ಶಿವಮೊಗ್ಗದ ಜನ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಮುಂದಾಗಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಪೊಲೀಸರ ಸೂಚನೆ ನಡುವೆಯೂ ಶಿವಮೊಗ್ಗದಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ.

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು, ತರಕಾರಿ, ಉಡುದಾರ ಹೀಗೆ ಹಬ್ಬದ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಕಂಡು ಬಂದಿದೆ. ಸಂಜೆ ವೇಳೆಗೆ ಶಿವಮೊಗ್ಗದ ಗಾಂಧಿಬಜಾರ್, ಶಿವಪ್ಪನಾಯಕ ಸುತ್ತಮುತ್ತಲಿನ ರಸ್ತೆಗಳಲ್ಲಿ ಹೆಚ್ಚಿನ ಜನಸಂದಣಿ ಕಂಡು ಬಂದಿದೆ. ಹಬ್ಬದ ಖರೀದಿಗೆ ಜನ ಮುಗಿಬಿದ್ದಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿದೆ ಎಂದು ಹೇಳಲಾಗಿದೆ.

ಅಗ್ಗದ ದರದಲ್ಲಿ ಕಾಲೇಜಲ್ಲೇ ಹ್ಯಾಂಡ್ ಸ್ಯಾನಿಟೈಸರ್ ತಯಾರಿಕೆ

Posted: 23 Mar 2020 07:24 AM PDT

ಕರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು. ಅದರಲ್ಲಿ ಬಹುಮುಖ್ಯವಾಗಿ ಕೈಯನ್ನು ಸ್ವಚ್ಛವಾಗಿ ಆಗಾಗ ತೊಳೆಯುತ್ತಿರಬೇಕು. ಇದಕ್ಕಾಗಿ ಹ್ಯಾಂಡ್ ಸ್ಯಾನಿಟೈಸರ್ ಬೇಕೇ ಬೇಕು.

ಆದರೆ ಈಗ ಇದನ್ನು ಅತಿಯಾಗಿ ಖರೀದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಅದರ ಕೊರತೆ ಕಾಣಿಸಿಕೊಂಡಿದೆ. ಇದನ್ನು ಅರಿತ ದೆಹಲಿ ಐಐಟಿ ತಂಡ ಎರಡೇ ದಿನದಲ್ಲಿ ಕಡಿಮೆ ವೆಚ್ಚದಲ್ಲಿ 50 ಲೀಟರ್ ಸ್ಯಾನಿಟೈಸರ್ ಅನ್ನು ತಯಾರಿಸಿದೆ.

ಐಐಟಿ ಇನ್ಸ್ಟಿಟ್ಯೂಟ್ ನಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಬಳಸಬೇಕೆಂದು ಹೊರಗಡೆ ಅಂಗಡಿಗಳಲ್ಲಿ ಇದರ ನಿರ್ದೇಶಕ, ಪ್ರೊಫೆಸರ್ ರಾಮ್ ಗೋಪಾಲ್ ರಾವ್ ಎಂಬುವರು ವಿಚಾರಿಸಿದ್ದಾರೆ. ಆದರೆ ದುಪ್ಪಟ್ಟು ದರವನ್ನು ಅಲ್ಲಿ ಹೇಳಿದ್ದಾರೆ.

ಇದರಿಂದ ಅಸಮಾಧಾನಗೊಂಡ ಅವರು, ಸೀದಾ ತಮ್ಮ ಇನ್ಸ್ಟಿಟ್ಯೂಟ್ ಗೆ ಬಂದಿದ್ದಾರೆ. ಅಲ್ಲಿ ಕಾಲೇಜಿಗೋಸ್ಕರ ಸ್ವಲ್ಪ ಸ್ಯಾನಿಟೈಸರ್ ಅನ್ನು ತಯಾರಿಸಲು ಸಾಧ್ಯವೇ ಎಂದು ಕೆಮಿಸ್ಟ್ರಿ ಪ್ರೊಫೆಸರ್ ಒಬ್ಬರನ್ನು ಕೇಳಿದ್ದಾರೆ. ಅವರು ಒಪ್ಪಿ ಬಳಿಕ ಅದನ್ನು ತಯಾರಿಸಲಾಗಿದೆ. ಈಗ ಅಗ್ಗದ ದರದಲ್ಲಿ ಸ್ಯಾನಿಟೈಸರ್ ಕಾಲೇಜಿಗೆ ಲಭ್ಯವಾಗಿದೆ.

ಈ ಅಂಶವನ್ನು ಅವರು ಮಾ.20ಕ್ಕೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದುವರೆಗೆ 11 ಸಾವಿರ ಪ್ರತಿಕ್ರಿಯೆಗಳು ಬಂದಿದ್ದರೆ, 3200 ಶೇರ್ ಗಳನ್ನು ಕಂಡಿದೆ. ಇವರ ಈ ನಿರ್ಧಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗಳ ಮಹಾಪೂರವೇ ವ್ಯಕ್ತವಾಗಿವೆ.

A True Story.At IIT Delhi, we were facing issues getting Hand sanitizers in large quantities. Even when they were…

Posted by Ramgopal Rao on Friday, March 20, 2020

ಗಂಡು ಮಗುವಿಗೆ ಜನ್ಮ ನೀಡಿದ ಪ್ರಿಯಾಂಕಾ

Posted: 23 Mar 2020 07:20 AM PDT

ನವದೆಹಲಿ: ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಸುರೇಶ್ ರೈನಾ ಮತ್ತು ಪ್ರಿಯಾಂಕಾ ದಂಪತಿಗೆ ಗಂಡು ಮಗು ಜನಿಸಿದೆ.

ಸುರೇಶ್ ರೈನಾ ಪತ್ನಿ ಪ್ರಿಯಾಂಕಾ ಗಂಡು ಮಗುವಿಗೆ ಜನ್ಮ ನೀಡಿದ್ದು, ದಂಪತಿಗೆ ಇದು ಎರಡನೇ ಮಗುವಾಗಿದೆ. 2016ರಲ್ಲಿ ರೈನಾ ದಂಪತಿಗೆ ಪುತ್ರಿ ಗ್ರೇಸಿಯಾ ಜನಿಸಿದ್ದು ಇಂದು ಅವರ ಮನೆಗೆ ಹೊಸ ಸದಸ್ಯನ ಆಗಮನವಾಗಿದೆ.

ಟೀಂ ಇಂಡಿಯಾ ಪರವಾಗಿ 226 ಏಕದಿನ ಪಂದ್ಯಗಳನ್ನಾಡಿರುವ ಸುರೇಶ್ ರೈನಾ 5615 ರನ್ ಗಳಿಸಿದ್ದಾರೆ. 5 ಶತಕ, 36 ಅರ್ಧ ಶತಕ ಗಳಿಸಿದ್ದು, ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಸುರೇಶ್ ರೈನಾ 2011ರ ವಿಶ್ವಕಪ್ ಮತ್ತು 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಸದಸ್ಯರಾಗಿದ್ದರು.

ಐಸಿಸಿ ಟ್ವೀಟ್ ಗೆ ಕೆರಳಿ ಕೆಂಡವಾದ ರೋಹಿತ್ ಶರ್ಮಾ

Posted: 23 Mar 2020 07:09 AM PDT

ಐಸಿಸಿ ಹಾಕಿದ ಟ್ವೀಟ್ ಒಂದಕ್ಕೆ ಕೋಪಗೊಂಡಿರುವ ಭಾರತದ ಕ್ರಿಕೆಟಿಗ, ಉಪನಾಯಕ ರೋಹಿತ್ ಶರ್ಮಾ ಆ ಟ್ವೀಟ್ ಗೆ ಮರು ಟ್ವೀಟ್ ಮಾಡಿ ಟ್ರೋಲ್ ಮಾಡಿದ್ದಾರೆ.

ಐಸಿಸಿ ನಾಲ್ವರು ಬ್ಯಾಟ್ಸ್ ಮನ್ ಗಳ ಫೋಟೋಗಳನ್ನು ಕೊಲಾಜ್ ಮಾಡಿ, ಇವರಲ್ಲಿ ಬೆಸ್ಟ್ ಪುಲ್ ಶಾಟ್ ಯಾರದ್ದು ಎಂಬುದರ ಬಗ್ಗೆ ತಿಳಿಸಿ ಎಂದು ಟ್ವೀಟ್ ಮಾಡಿತ್ತು.

ಇದರಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಮಾಜಿ ಆಟಗಾರ ರಿಕಿ ಪಾಂಟಿಂಗ್, ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್, ಹಾಗೂ ವಿವಿ ರಿಚರ್ಡ್ ಅವರ ಫೋಟೋಗಳನ್ನು ಹಾಕಲಾಗಿತ್ತು.

ಆದರೆ ಫುಲ್ ಶಾಟ್ ಹೊಡೆಯುವುದರಲ್ಲಿ ರೋಹಿತ್ ಯಾವಾಗಲೂ ಎತ್ತಿದ ಕೈ. ಅವರ ಆ ಹೊಡೆತವನ್ನು ನೋಡುವುದೇ ಒಂದು ಸೊಗಸು. ಆದರೆ ಐಸಿಸಿ ತಮ್ಮನ್ನು ಮರೆತು ಬಿಟ್ಟಿರುವುದು ಅವರಿಗೆ ಸಹಿಸಲಾಗಲಿಲ್ಲ. ಹೀಗಾಗಿ ಅವರು ಆ ಟ್ವೀಟ್ ನ ಸ್ಕ್ರೀನ್ ಶಾಟ್ ಸಹಿತ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು,

“ಇಲ್ಲಿ ಯಾರೋ ಒಬ್ಬರು ಕಾಣಿಸುತ್ತಿಲ್ಲ ಅಲ್ಲವೇ ?? ವರ್ಕ್ ಫ್ರಮ್ ಹೋಂ ಮಾಡುವುದು ಅಷ್ಟು ಸುಲಭವಲ್ಲ ನನಗನ್ನಿಸಿದಂತೆ” ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಗೆ ಈಗಾಗಲೇ 47.1k ಲೈಕ್ ಗಳು ಬಂದಿದ್ದರೆ, 8164 ಕಮೆಂಟ್ ಗಳು ವ್ಯಕ್ತವಾಗಿವೆ. ಆದರೆ ಐಸಿಸಿ ಟ್ವೀಟ್ ಗೆ ಸುಮಾರು 2k ಪ್ರತಿಕ್ರಿಯೆಗಳು ಲಭ್ಯವಾಗಿವೆ.

— Rohit Sharma (@ImRo45) March 22, 2020

ಅಕ್ರಮ – ಸಕ್ರಮ: ರಾಜ್ಯ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

Posted: 23 Mar 2020 07:06 AM PDT

ಬೆಂಗಳೂರು: ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ  ಜಾಗದಲ್ಲಿ ನಿರ್ಮಿಸಿಕೊಂಡ ಮನೆಗಳನ್ನು ಸಕ್ರಮ ಮಾಡಿಕೊಡಲು ಅರ್ಜಿ ಸ್ವೀಕರಿಸುವ ಅವಧಿಯನ್ನು ವಿಸ್ತರಣೆ ಮಾಡುವ ಕುರಿತು ಪರಿಶೀಲನೆ ನಡೆಸುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಭರವಸೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಅವರು, 94ಸಿ, 94ಸಿಸಿ ಅಡಿ ಅರ್ಜಿ ಸ್ವೀಕರಿಸಲು ಮತ್ತೊಂದು ಸಲ ಅವಧಿ ವಿಸ್ತರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಶಾಸಕ ಕೆ.ವೈ. ನಂಜೇಗೌಡ ಅವರ ಪ್ರಶ್ನೆಗೆ ಪ್ರಶ್ನೋತ್ತರ ಕಲಾಪದಲ್ಲಿ ಉತ್ತರ ನೀಡಿದ್ದಾರೆ.

2015 ರಿಂದ 94ಸಿ ಮತ್ತು 94ಸಿಸಿ ಅಡಿ ಅರ್ಜಿ ಸ್ವೀಕರಿಸುತ್ತಿದ್ದು ಇನ್ನೊಂದು ವಾರ ಕಾಲಾವಕಾಶ ಇದೆ ಎಂದು ಸಚಿವರು ತಿಳಿಸಿದ್ದು, ಈ ವೇಳೆ ಬಹುತೇಕ ಶಾಸಕರು ಅರ್ಜಿ ಸ್ವೀಕರಿಸುವ ಅವಧಿ ವಿಸ್ತರಿಸಲು ಮನವಿ ಮಾಡಿದ್ದಾರೆ.

ಸರಿಯಾದ ಮಾಹಿತಿ ಇಲ್ಲದ ಕಾರಣ ಅನೇಕರು ಇನ್ನೂ ಅರ್ಜಿ ಸಲ್ಲಿಸಿಲ್ಲ. ಕೊರೋನಾ ಸೋಂಕು ಭೀತಿಯಿಂದ ಅರ್ಜಿ ಸಲ್ಲಿಕೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಮೂರು ತಿಂಗಳು ಅವಧಿ ವಿಸ್ತರಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ 9 ಸಲ ಅಕ್ರಮ – ಸಕ್ರಮ ಅರ್ಜಿ ಸ್ವೀಕಾರ ಅವಧಿ ವಿಸ್ತರಣೆಯಾಗಿದೆ. ಮತ್ತೊಮ್ಮೆ ವಿಸ್ತರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಮಹಾನಗರಗಳಲ್ಲಿ ಅಪರೂಪಕ್ಕೆ ಕೇಳಿಸಿದೆ ಹಕ್ಕಿಗಳ ಕಲರವ

Posted: 23 Mar 2020 06:55 AM PDT

ದೇಶದಲ್ಲಿ ಕೊರೋನಾ ವೈರಸ್‌ ಸೋಂಕಿನ ಪ್ರಕರಣಗಳು 400ರ ಹತ್ತಿರ ಸುಳಿಯುತ್ತಿದ್ದು, ಈ ಮಹಾಮಾರಿ ನಿಯಂತ್ರಣ ಮೀರಿ ಹೋಗದಿರಲೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ್ದ ಜನತಾ ಕರ್ಫ್ಯೂಗೆ ದೇಶವಾಸಿಗಳು ಅಭೂತಪೂರ್ವ ಪ್ರತಿಕ್ರಿಯೆ ನೀಡಿದ್ದಾರೆ.

ದೇಶದ ದೊಡ್ಡ ದೊಡ್ಡ ನಗರಗಳ ಬೀದಿಗಳೆಲ್ಲಾ ಖಾಲಿ ಖಾಲಿ ಇರುವ ಅನೇಕ ಚಿತ್ರಗಳು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿವೆ.

ಇದೇ ವೇಳೆ, ಸದಾ ವಾಹನಗಳ ಸದ್ದಿನಿಂದ ದೇಶದ ನಗರಗಳ ರಸ್ತೆಗಳೆಲ್ಲಾ ಗಿಜಿಗುಡುತ್ತಿದ್ದ ಜಾಗದಲ್ಲಿ ಹಕ್ಕಿಗಳ ಕಲರವ ಕೇಳಲು ಸಿಕ್ಕಿದ್ದು, ಈ ಚೇಂಜ್‌ ಅನ್ನು ಜನತೆ ಬಹಳ ಖುಷಿಯಿಂದ ಅಂತರ್ಜಾಲದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಕೊರೋನಾ ಹರಡದಂತೆ ಶ್ರಮಿಸಿದ ವೈದ್ಯರಿಗೆ ಚೀನಿಯರಿಂದ ವಿಶಿಷ್ಟ ಗೌರವ

Posted: 23 Mar 2020 06:54 AM PDT

ಕರೋನಾ ವೈರಾಣುಗಳು ಹಬ್ಬುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮನುಕುಲದ ಮುಂದೆ ಅತಿ ದೊಡ್ಡ ಸವಾಲು ಎದುರಾಗಿದೆ. ಇಂತ ತುರ್ತು ಪರಿಸ್ಥಿತಿಯಲ್ಲಿ ಹೊಸ ಹೀರೋಗಳು ಉಗಮವಾಗುತ್ತಿದ್ದಾರೆ.

ಈ ಹೀರೋಗಳು ಮತ್ಯಾರೂ ಅಲ್ಲ ವೈದ್ಯರು, ನರ್ಸ್‌ಗಳು ಹಾಗೂ ವೈದ್ಯಕೀಯ ಸಹಾಯಕ ಸಿಬ್ಬಂದಿ. ಕರೋನಾ ವೈರಾಣುಗಳು ಹಬ್ಬದಂತೆ ಹಗಲು – ಇರುಳು ಶ್ರಮಿಸುತ್ತಿರುವ ಇವರೆಲ್ಲರ ಪಾತ್ರಗಳನ್ನು ಮನುಕುಲ ಹಿಂದೆಂದಿಗಿಂತಲೂ ಇದೀಗ ಕೊಂಡಾಡುತ್ತಿದೆ.

ಇದೀಗ ಪೂರ್ವ ಚೀನಾದಲ್ಲಿರುವ ಫುಜಿಯಾನ್ ಪ್ರಾಂತ್ಯದಲ್ಲಿರುವ ಫುಝೌ ನಗರವು ವುಹಾನ್‌ಗೆ ಕರ್ತವ್ಯದ ಮೇಲೆ ತೆರಳಿದ್ದ ತನ್ನ ವೈದ್ಯರುಗಳ ಮುಖಗಳನ್ನು ತನ್ನಲ್ಲಿರುವ ದೊಡ್ಡ ಕಟ್ಟಡಗಳ ಮೇಲೆ ಬಿತ್ತರಿಸುವ ಮೂಲಕ ಅವರಿಗೆ ವಿಶೇಷ ಗೌರವವನ್ನು ನೀಡಿದೆ.

ವುಹಾನ್‌ನ 16 ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ 200ಕ್ಕೂ ಹೆಚ್ಚು ವೈದ್ಯರು ತಂತಮ್ಮ ಮನೆಗಳಿಗೆ ಕರ್ತವ್ಯ ಮುಗಿಸಿ ಬಂದಾಗ ಈ ಗೌರವ ನೀಡಲಾಗಿದೆ. ವುಹಾನ್‌ನಲ್ಲಿ ಕಳೆದ ಎರಡು ದಿನಗಳಿಂದ ಯಾವುದೇ ಹೊಸ ಕೋವಿಡ್‌-19 ಪಾಸಿಟಿವ್‌ ಪ್ರಕರಣ ಪತ್ತೆಯಾಗಿಲ್ಲ.

ಕೊಳ್ಳುಬಾಕತನಕ್ಕೆ ಕಡಿವಾಣ ಹಾಕಲು ಹೀಗೊಂದು ಐಡಿಯಾ…!

Posted: 23 Mar 2020 06:51 AM PDT

ಕರೋನಾ ವೈರಸ್‌ ನಿಂದಾಗಿ ಗಾಬರಿಗೆ ಬಿದ್ದು ಸಿಕ್ಕಷ್ಟು ಪ್ರಮಾಣದಲ್ಲಿ ಹ್ಯಾಂಡ್ ಸ್ಯಾನಿಟೈಸರ್‌ಗಳು, ಮಾಸ್ಕ್‌ಗಳು ಮತ್ತು ಟಾಯ್ಲೆಟ್ ರೋಲ್‌ಗಳನ್ನು ಖರೀದಿ ಮಾಡುತ್ತಿರುವ ಜನರಿಂದಾಗಿ ಸಮಾಜದ ಬಡವರ್ಗಗಳಿಗೆ ಈ ಅಗತ್ಯ ವಸ್ತುಗಳು ಸಿಗದಂತೆ ಆಗುತ್ತಿದೆ.

ಇದಕ್ಕೆ ಒಂದೊಳ್ಳೆ ಪ್ಲಾನ್‌ ಮಾಡಿರುವ ಡೆನ್ಮಾರ್ಕ್‌‌ ನ ಫುಡ್ ಮಾರ್ಕೆಟ್‌ ಒಂದು, ಜನರಿಗೆ ಲೋಡ್‌ಗಟ್ಟಲೇ ಪ್ರಮಾಣದಲ್ಲಿ ಸರಕುಗಳನ್ನು ಕೊಳ್ಳದಂತೆ ಮಾಡುತ್ತಿದೆ.

ಹೇಗೆ ಎಂದಿರಾ? ಒಂದು ಬಾಟಲ್ ಸ್ಯಾನಿಟೈಸರ್‌ಗೆ 5.73 ಯೂರೋ ಬೆಲೆ ನಿಗದಿ ಮಾಡಿರುವ ಈ ಮಾರ್ಕೆಟ್, ಅದೇ ಎರಡು ಖರೀದಿ ಮಾಡಬೇಕೆಂದಲ್ಲಿ 134 ಯೂರೋಗಳಾಗಲಿವೆ ಎಂದು ನಿಗದಿ ಮಾಡಿದೆ. ಈ ಮಾರ್ಕೆಟ್‌ನಲ್ಲಿಟ್ಟಿರುವ ಸ್ಯಾನಿಟೈಸರ್ ಗಳು ಹಾಗೂ ಅವುಗಳ ರೇಟ್‌‌ ಗಳ ಬೋರ್ಡ್‌ಗಳಿರುವ ಚಿತ್ರಗಳು ಟ್ವಿಟರ್‌ನಲ್ಲಿ ವೈರಲ್ ಆಗಿದೆ.

ವೃದ್ದ ಪತಿಯನ್ನು ಹಾಡಿನ ಮೂಲಕ ಬರಮಾಡಿಕೊಂಡ ಪತ್ನಿ

Posted: 23 Mar 2020 06:49 AM PDT

ನಿಜವಾದ ಪ್ರೀತಿ ಎಂದರೆ ಬಹುಶಃ ಇದೇ ಇರಬೇಕು. ಈ ದಂಪತಿಗೆ ಮದುವೆಯಾಗಿ ಅದೆಷ್ಟು ವರ್ಷ ಕಳೆದಿದೆಯೋ ಗೊತ್ತಿಲ್ಲ. ಆದರೆ ವೃದ್ಧಾಪ್ಯ ಬಂದರೂ ಸಹ ಆ ಪ್ರೀತಿ ಮಾಗಿಲ್ಲ.

ಆರೋಗ್ಯ ಕೆಟ್ಟು ಆಸ್ಪತ್ರೆ ಸೇರಿದ್ದ ಪತಿ ಗುಣಮುಖರಾಗಿ ಮನೆಗೆ ಬರುವ ಸಂಭ್ರಮದಲ್ಲಿದ್ದ ಪತ್ನಿ ಆತನನ್ನು ಹಾಡಿನ ಮೂಲಕ ಬರಮಾಡಿಕೊಂಡಿದ್ದಾರೆ.

ಆಸ್ಪತ್ರೆಯಿಂದ ಮನೆಗೆ ಬಂದು ಬೆಡ್ ರೆಸ್ಟ್ ನಲ್ಲಿದ್ದ ಪತಿಗೆ ಯಾವುದೇ ರೀತಿಯಲ್ಲಿ ಬೇಜಾರು ಆಗಬಾರದು ಎಂಬ ಕಾರಣಕ್ಕೆ ಗಲೀ ಮೇ ಆಜ್ ಚಾಂದ್ ನಿಕ್ಲಾ…..ಎಂಬ ಹಾಡಿಗೆ ಹೆಜ್ಜೆ ಹಾಕುತ್ತಾ ಅವರನ್ನು ನಲಿಸುವ ಪ್ರಯತ್ನ ಮಾಡಿದ್ದಾರೆ. ಬಳಿಕ ಪತಿಯೂ ಸಹ ಡಾನ್ಸ್ ಮಾಡುವ ರೀತಿಯಲ್ಲಿ ಕೈಗಳನ್ನು ಆಡಿಸಿದ್ದಾರೆ.

ಈ ಖುಷಿಯ ಸಂದರ್ಭದಲ್ಲಿ ಮಕ್ಕಳು, ಮೊಮ್ಮಕ್ಕಳು ಇದ್ದು ಅದನ್ನು ವಿಡಿಯೋ ಮಾಡಿಕೊಳ್ಳಲಾಗಿದೆ. ಇದನ್ನು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆಯೇ ಭಾರಿ ವೈರಲ್ ಆಗಿದೆ. 1.2 ಲಕ್ಷ ವೀಕ್ಷಣೆ ಕಂಡಿದ್ದರೆ , 6600 ಲೈಕ್ ಹಾಗೂ 1700 ರೀ ಟ್ವೀಟ್ ಗಳು ಲಭ್ಯವಾಗಿವೆ.

ಮತ್ತೆ ಶಾಕಿಂಗ್ ನ್ಯೂಸ್: ಇಂದೂ 7 ಮಂದಿಯಲ್ಲಿ ಕೊರೋನಾ ಪತ್ತೆ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆ

Posted: 23 Mar 2020 06:28 AM PDT

ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 33 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ 7 ಮಂದಿಗೆ ಸೋಂಕು ತಗಲಿದ್ದು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ ನೀಡಲಾಗಿದೆ.

ಇದರೊಂದಿಗೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಮಾರ್ಚ್ 21 ರಂದು ಐವರಲ್ಲಿ, 22 ರಂದು ಆರು ಮಂದಿಯಲ್ಲಿ ಮತ್ತು ಮಾರ್ಚ್ 23 ರಂದು 7 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 33 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ಸೋಂಕಿತರಲ್ಲಿ ಇಬ್ಬರು ಗುಣಮುಖರಾಗಿದ್ದಾರೆ ಎಂದು ಹೇಳಲಾಗಿದೆ.

ಕೊರೋನಾ ಭೀತಿ ನಡುವೆಯೂ ನಿಯಮ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ, ಅರೆಸ್ಟ್

Posted: 23 Mar 2020 06:23 AM PDT

ಕೇರಳದ ತ್ರಿಶೂರ್ ಜಿಲ್ಲೆಯ ಚಲಕುಡಿಯಲ್ಲಿ ನಿತ್ಯ ಸಹಾಯ ಮಾತಾ ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆ ಕೈಗೊಂಡ ಪಾದ್ರಿಯನ್ನು ಬಂಧಿಸಲಾಗಿದೆ.

ಕ್ಯಾಥೊಲಿಕ್ ಚರ್ಚ್ ನ ಪಾದ್ರಿ ಪಿ. ಪೌಲಿ ಬಂಧಿತ ವ್ಯಕ್ತಿಯಾಗಿದ್ದಾರೆ. ಕೊರೋನಾ ವೈರಸ್ ನಿಯಮಾವಳಿ ಉಲ್ಲಂಘಿಸಿ ಪ್ರಾರ್ಥನೆ ಕೈಗೊಂಡಿದ್ದ ಹಿನ್ನಲೆಯಲ್ಲಿ ಬಂಧಿಸಲಾಗಿದೆ.

ಕೇರಳದಲ್ಲಿ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ವಿಧಿಸಿವೆ. ಪಾದ್ರಿ ಉಲ್ಲಂಘನೆ ಮಾಡಿ ಸೋಮವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಕೈಗೊಂಡ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೂಲಕ ಕರೋನಾ ಜಾಗೃತಿ

Posted: 23 Mar 2020 06:05 AM PDT

ಮಹಾರಾಷ್ಟ್ರದ ಶಾಸ್ತ್ರೀಯ ಸಂಗೀತ ಗಾಯಕರೊಬ್ಬರು ಕೋವಿಡ್-19 ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಶಾಸ್ತ್ರೀಯ ಸಂಗೀತ ಹಾಡಿದ್ದು ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪುಣೆಯ ಸಂದೀಪ್ ರಾನಡೆ ಎನ್ನುವವರು ಈ ಹಾಡು ರಚಿಸಿದ್ದು, ಬಸಂತ್ ರಾಗದಲ್ಲಿ ಹಾಗೂ ಅದ್ಧ-ತೀನ್‌ತಾಲ್ ತಾಲಿನಲ್ಲಿ ಅದನ್ನು ರಚಿಸಿದ್ದಾರೆ. ಅದರಲ್ಲಿ ಮನೆಯಲ್ಲಿದ್ದು ಈ ರೋಗದ ವಿರುದ್ಧ ಹೋರಾಡುವುದರ ಬಗ್ಗೆ ಬರೆದಿದ್ದಾರೆ.

ಈ ಹಾಡು ವೈರಲ್ ಆಗುತ್ತದೆ ಎಂದು ಅವರು ಅಂದುಕೊಂಡಿರಲಿಲ್ಲವಂತೆ. ನೆಟ್ಟಿಗರು ಇವರ ಹಾಡನ್ನು ಮೆಚ್ಚಿದ್ದು ಈ ಸಮಯದಲ್ಲಿ ಇದು ಆತ್ಮಸ್ಥೈರ್ಯ ತುಂಬಿಸುತ್ತದೆ ಎಂದಿದ್ದಾರೆ.

ವಾಟ್ಸಾಪ್ ನಲ್ಲಿ ‘ಕರೋನಾ’ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ್ದಾರಾ…? ಹಾಗಿದ್ದರೆ ನಿಮಗಿದೆ ಗ್ರಹಚಾರ…!

Posted: 23 Mar 2020 06:03 AM PDT

ಶಿವಮೊಗ್ಗ: ವಾಟ್ಸಾಪ್ ಮೂಲಕ ಕೊರೋನಾ ವೈರಸ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ. ಶಾಂತರಾಜು ತಿಳಿಸಿದ್ದಾರೆ.

ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ನಾರಾಯಣಪುರ ಗ್ರಾಮದ ವಾಸಿ ನಾಗರಾಜ್ ತಮ್ಮ ವಾಟ್ಸಾಪ್ ಖಾತೆಯಿಂದ ಕೊರೋನಾ ವೈರಸ್ ಬಗ್ಗೆ ಸುಳ್ಳು ಸುದ್ದಿ ಇರುವ ಸಂದೇಶವನ್ನು ಬೇರೆ ಸಾರ್ವಜನಿಕರ ಮೊಬೈಲ್ ಗೆ ಕಳುಹಿಸಿ ಗೊಂದಲ ಉಂಟಾಗಲು ಕಾರಣರಾಗಿದ್ದಾರೆ. ಸಾರ್ವಜನಿಕರಲ್ಲಿ ಭೀತಿಯನ್ನು ಹುಟ್ಟಿಸಿ ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿರುವ ಬಗ್ಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಕಲಂ 505(1) (ಬಿ) ಐಪಿಸಿ ಅಡಿ ಪ್ರಕರಣ ದಾಖಲಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಗ್ಗೆ ಸುಳ್ಳು ಸುದ್ದಿ ಇರುವ ಸಂದೇಶವನ್ನು ಫಾರ್ವರ್ಡ್ ಮಾಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಈ ಬಗ್ಗೆ ವಾಟ್ಸಾಪ್ ಗ್ರೂಪ್ ಅಡ್ಮಿನ್‍ಗಳು, ಬಳಕೆದಾರರು ಹಾಗೂ ವಿಡಿಯೋ ಫಾರ್ವರ್ಡ್ ಮಾಡುವವರು ಸೂಕ್ತ ಎಚ್ಚರಿಕೆಯನ್ನು ವಹಿಸುವುದು. ಯಾರಿಂದಲೋ ಬಂದಂತಹ ಸುಳ್ಳು ಸುದ್ದಿ ಇರುವ ಸಂದೇಶಗಳನ್ನು ಬೇರೆ ಗ್ರೂಪ್‍ಗಳಿಗೆ ಮರು ಕಳುಹಿಸುವುದು ಕಂಡುಬಂದಲ್ಲಿ, ಸಂದೇಶವನ್ನು ಕಳುಹಿಸಿದ ವ್ಯಕ್ತಿ ಮತ್ತು ಗ್ರೂಪ್ ಅಡ್ಮಿನ್‍ಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಕಾನೂನು ರೀತ್ಯಾ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಅವರು ಎಚ್ಚರಿಕೆ ನೀಡಿದ್ದಾರೆ.

‘ಕ್ರಿಮಿನಲ್‌’ಗಳಿಗೆ ಫ್ರೆಂಡ್ಲಿ ಸಲಹೆ ಕೊಟ್ಟ ಅಸ್ಸಾಂ ಪೊಲೀಸ್

Posted: 23 Mar 2020 05:54 AM PDT

ಕೊರೋನಾ ವೈರಾಣುಗಳು ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಘಳಿಗೆಯಲ್ಲಿ ಮನುಕುಲದ ಮುಂದೆ ದೊಡ್ಡದೊಂದು ಪರೀಕ್ಷೆಯೇ ಎದುರಿಗಿದೆ. ಜಗತ್ತಿನಾದ್ಯಂತ ಮೂರು ಲಕ್ಷಕ್ಕೂ ಹೆಚ್ಚು ಮಂದಿಗೆ ತಗುಲಿರುವ ಈ ವೈರಾಣುಗಳು, 13,548 ಜೀವಗಳನ್ನು ಬಲಿ ತೆಗೆದುಕೊಂಡಿವೆ.

ಇಂಥ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಲು ಎಲ್ಲೆಲ್ಲೂ ಜಾಗೃತಿಯ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ. ಫೇಸ್ಬುಕ್, ಟ್ವಿಟರ್‌, ಇನ್‌ಸ್ಟಾಗ್ರಾಂನಂಥ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿಯ ಸಂದೇಶಗಳನ್ನು ಮೂಡಿಸಲು ಜನರು ಮುಂದೆ ಬಂದಿದ್ದಾರೆ.

ಇಂಥದ್ದೇ ಒಂದು ನಿದರ್ಶನದಲ್ಲಿ ಅಸ್ಸಾಂ ಪೊಲೀಸರು, ಕ್ರಿಮಿನಲ್‌ಗಳಿಗೆ ಫ್ರೆಂಡ್ಲಿ ಸಲಹೆಯೊಂದನ್ನು ನೀಡಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. “ಎಲ್ಲ ಕ್ರಿಮಿನಲ್‌ಗಳಿಗೂ ಒಂದು ಫ್ರೆಂಡ್ಲಿ ಸಲಹೆ. ಈ ಸಮಯದಲ್ಲಿ ನೀವು ನಿಮ್ಮನ್ನು ತಿದ್ದಿಕೊಳ್ಳಬಹುದಾಗಿದೆ.

ಮನೆಯೊಳಗೇ ಇರುವ ಮೂಲಕ ನಿಮ್ಮ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳಿ. ಇಲ್ಲವಾದಲ್ಲಿ ನೀವು ನಿಮಗೆಂದೇ ವಿನ್ಯಾಸ ಮಾಡಲಾದ 'ಕ್ವಾರಂಟೈನ್‌ ಸೌಲಭ್ಯ'ದಲ್ಲಿ ದಿನಗಳನ್ನು ಕಳೆಯಲಿದ್ದೀರಿ” ಎಂದು ತಿಳುವಳಿಕೆ ನೀಡಿದ್ದಾರೆ.

ಕರ್ಫ್ಯೂ ಮಾದರಿ ಲಾಕ್ ಡೌನ್: ಗಡಿ ಬಂದ್, ಎಲ್ಲಾ ಸಾರಿಗೆ ಸ್ಥಗಿತ – ಹಬ್ಬಕ್ಕೆ ನಿರ್ಬಂಧ

Posted: 23 Mar 2020 05:52 AM PDT

ಬೆಂಗಳೂರು: ಕೊರೋನಾ ವೈರಸ್ ತಡೆಯುವ ಉದ್ದೇಶದಿಂದ ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳನ್ನು ಬಂದ್ ಮಾಡಲು ತೀರ್ಮಾನಿಸಲಾಗಿದೆ.

9 ಜಿಲ್ಲೆಗಳಲ್ಲಿ ಮಾರ್ಚ್ 31 ರವರೆಗೆ ಕರ್ಫ್ಯೂ ಮಾದರಿ ಲಾಕ್ ಡೌನ್ ಮಾಡಲಾಗುವುದು ಎಂದು ವಿಧಾನಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ನಾಳೆಯಿಂದ ಬಿಎಂಟಿಸಿ ಬಸ್ ಗಳ ಸಂಚಾರ ಸಂಪೂರ್ಣ ಸ್ಥಗಿತವಾಗಲಿದೆ. ರಾಜ್ಯದ ಎಲ್ಲಾ ಹಬ್ಬಗಳ ಆಚರಣೆಗೆ ನಿರ್ಬಂಧ ವಿಧಿಸಲಾಗಿದೆ. ರಾಜ್ಯದ ಎಲ್ಲ ಗಡಿಗಳನ್ನು ಬಂದ್ ಮಾಡಲು ಆದೇಶ ಹೊರಡಿಸಲಾಗಿದೆ.

ಅಂತರರಾಜ್ಯ ಬಸ್ ಸೇವೆಗಳ ರದ್ದುಗೊಳಿಸಿ ಆದೇಶಿಸಲಾಗಿದೆ. 9 ಜಿಲ್ಲೆಗಳಲ್ಲಿ ಎಲ್ಲಾ ವಾಣಿಜ್ಯ ಸೇವೆ ಬಂದ್ ಮಾಡಲಾಗಿದೆ. ಅಗತ್ಯ ಸೇವಾ ಸೌಲಭ್ಯ ಹೊರತುಪಡಿಸಿ ವಾಣಿಜ್ಯ ಸೇವೆ ಬಂದ್ ಮಾಡಿದ್ದು, ಗೃಹ ಪರೀವೀಕ್ಷಣೆಯಲ್ಲಿರುವವರ ಮನೆಗಳಿಗೆ ನೋಟಿಸ್ ಜಾರಿ ಮಾಡಲಾಗುವುದು. ನಿಗಾ ಇಡುವ ಜವಾಬ್ದಾರಿಯನ್ನು ಪೊಲೀಸ್ ಇಲಾಖೆಗೆ ವಹಿಸಲಾಗುವುದು. ಅಗತ್ಯತೆ ಇರುವ ಇಲಾಖೆ ಹೊರತುಪಡಿಸಿ ಉಳಿದ ಸೇವೆ ಬಂದ್ ಮಾಡಲು ಸೂಚನೆ ನೀಡಲಾಗಿದೆ.

ಏರ್ಪೋರ್ಟ್ ನಲ್ಲಿ ಪ್ರಯಾಣಿಕರಿಗೆ ಆಹಾರ, ಮಾಸ್ಕ್ ಕೊಟ್ಟ ಸಿಬ್ಬಂದಿ; ನೆಟ್ಟಿಗರ ಪ್ರಶಂಸೆ

Posted: 23 Mar 2020 05:51 AM PDT

ಕರೋನಾ ವೈರಸ್ ವಿಶ್ವಾದ್ಯಂತ ಬಹಳ ಅಪಾಯಕಾರಿ ವೇಗದಲ್ಲಿ ಹಬ್ಬುತ್ತಿದೆ. ಈಗಾಗಲೇ ಸಾವಿರಾರು ಜನರ ಜೀವ ತೆಗೆದಿದೆ. ಲಕ್ಷಾಂತರ ಜನರಿಗೆ ಸೋಂಕು ತಗುಲಿದೆ. ಈ ನಿಟ್ಟಿನಲ್ಲಿ ಎಲ್ಲ ದೇಶಗಳು ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿವೆ.

ಇದಕ್ಕೆ ಭಾರತವೂ ಹೊರತಲ್ಲ. ಭಾನುವಾರ ಜನತಾ ಕರ್ಫ್ಯೂ ಆಚರಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ದೇಶಾದ್ಯಂತ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಲ್ಲರೂ ಮನೆಯಲ್ಲಿ ಕುಳಿತು ಬೆಂಬಲಿಸಿದ್ದಾರೆ.

ಇದೇ ರೀತಿ ವಿಮಾನವು ಇರದೆ ಪ್ರಯಾಣಿಕರು ಸಹನೆಯಿಂದ ಕಾದು ಕುಳಿತಿದ್ದರ ಪರಿಣಾಮ ಅಲ್ಲಿನ ಏರ್ಪೋರ್ಟ್ ಸಿಬ್ಬಂದಿ ಅವರಿಗೆ ಆಹಾರ ಮತ್ತು ಮಾಸ್ಕ್ ಗಳನ್ನು ವಿತರಿಸಿದ್ದಾರೆ. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಭಾನುವಾರ ವಿವಿಧ ರಾಜ್ಯಗಳು ಹಾಗೂ ದೇಶಗಳು ಸೇರಿದಂತೆ ಅನೇಕ ಕಡೆಗಳಿಂದ ಬಂದ ಪ್ರಯಾಣಿಕರು ದೆಹಲಿ ಏರ್ಪೋರ್ಟ್ ನಲ್ಲಿ ಸಾಕಷ್ಟು ಸಮಯ ಕಳೆಯುವಂತಾಯಿತು.

ಈ ಸಂದರ್ಭದಲ್ಲಿ ಅವರಿಗೆ ಉಪಹಾರ ಹಾಗೂ ಮಾಸ್ಕ್ ಗಳನ್ನು ನೀಡಿದ ಸಿಬ್ಬಂದಿ ಅದನ್ನು ಏರ್ ಪೋರ್ಟ್ ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಪೋಸ್ಟ್ ಈಗ ಭರ್ಜರಿ ವೈರಲ್ ಆಗಿದೆ.

ಈ ಪರೀಕ್ಷಾ ಸಮಯದಲ್ಲಿ ನಿಮ್ಮೆಲ್ಲರ ಮೆಚ್ಚುಗೆ ನಮಗೆ ಇನ್ನಷ್ಟು ಹುರುಪಿನಿಂದ ಕೆಲಸ ಮಾಡುವ ಸ್ಫೂರ್ತಿ ತಂದಿದೆ. ಪ್ರಯಾಣಿಕರಿಗೆ ಸಹಕಾರ ನೀಡಲು ಹಾಗೂ ಸಾಧ್ಯವಿರುವ ಎಲ್ಲ ಕೆಲಸವನ್ನು ಮಾಡಲು ನಾವು ಇನ್ನಷ್ಟು ಪ್ರಯತ್ನವನ್ನು ಮಾಡುತ್ತೇವೆ ಎಂದು ಟ್ವಿಟ್ಟರ್ ನಲ್ಲಿ ಫೋಟೋಗಳೊಂದಿಗೆ ಬರೆದುಕೊಳ್ಳಲಾಗಿದೆ.

ಈ ವಿಡಿಯೋ ಹಾಗೂ ಫೋಟೊಗಳನ್ನು ಅಪ್ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ 8.3k ವೀಕ್ಷಣೆ ಬಂದಿದ್ದರೆ, 509k ಲೈಕ್ ಗಳು ಬಂದಿವೆ.

— Delhi Airport (@DelhiAirport) March 22, 2020

ಕರೋನಾ ಜಾಗೃತಿ ವಿಡಿಯೋ ನೋಡಲು ಕರೆ ನೀಡಿದ ಮೋದಿ

Posted: 23 Mar 2020 05:49 AM PDT

ನವದೆಹಲಿ: ಒಂದು ನಿಮಿಷದಲ್ಲಿ ನೀವು ತೆಗೆದುಕೊಳ್ಳುವ ಮುಂಜಾಗ್ರತೆ ಅನೇಕರ ಜೀವವನ್ನು ಉಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೋನಾ ವೈರಸ್ ಹರಡದಂತೆ ಮುಂಜಾಗ್ರತೆ ಕ್ರಮವನ್ನು ತೆಗೆದುಕೊಳ್ಳುವ ಬಗ್ಗೆ ಟ್ವೀಟ್ ಒಂದನ್ನು ಮಾಡಿ ಮನವಿ ಮಾಡಿದ್ದಾರೆ. ಜೊತೆಗೆ ಒಂದು ವಿಡಿಯೋವನ್ನು ಅಪ್ಲೋಡ್ ಮಾಡಿ ಇದನ್ನು ಎಲ್ಲರೂ ನೋಡಿ ಎಂದು ಹೇಳಿದ್ದಾರೆ.

ಆ ವಿಡಿಯೋವನ್ನು ಗಮನಿಸಿದಾಗ, ಒಬ್ಬ ವ್ಯಕ್ತಿ ಲಿಫ್ಟ್ ನೊಳಗೆ ಬರುತ್ತಾನೆ. ಆಗ ಆತನಿಗೆ ಸೀನು ಬರುತ್ತದೆ. ಕೇವಲ ಕೈಯನ್ನು ಅಡ್ಡ ಹಿಡಿದು ಸೀನಿ ಬಿಡುತ್ತಾನೆ. ಬಳಿಕ ಅದೇ ಕೈಯಿಂದ ಲಿಫ್ಟ್ ಬಟನ್ ಒತ್ತುತ್ತಾನೆ. ಆತ ಹೊರ ಹೋದಾಗ ಅಲ್ಲಿಗೆ ಡೆಲಿವರಿ ಬಾಯ್ ಒಬ್ಬ ಬರುತ್ತಾನೆ. ಆತನೂ ಸಹ ಅದೇ ಬಟನ್ ಅನ್ನು ಒತ್ತುತ್ತಾನೆ. ಆಗ ಅವನಿಗೆ ವೈರಸ್ ಅಂಟಿಕೊಳ್ಳುತ್ತದೆ.

ಅವನು ಅದೇ ಕೈಯಿಂದ ಆಹಾರದ ಪೊಟ್ಟಣವನ್ನು ಗ್ರಾಹಕರೊಬ್ಬರಿಗೆ ಕೊಡುತ್ತಾನೆ. ಆಗ ಅವರಿಗೂ ವೈರಸ್ ಅಂಟುತ್ತದೆ, ಅವರು ತಿನ್ನುತ್ತಿದ್ದಾಗ ಅಲ್ಲಿಗೆ ಇನ್ನೊಬ್ಬರು ಅಸಿಸ್ಟೆಂಟ್ ಬರುತ್ತಾಳೆ. ಅವಳಿಗೆ ಅದೇ ಕೈಯಿಂದ ಒಂದು ಪುಸ್ತಕವನ್ನು ಕೊಡುತ್ತಾರೆ. ಆಕೆ ಆ ಪುಸ್ತಕವನ್ನು ತನ್ನ ನಾಲ್ವರು ಸ್ನೇಹಿತರಿಗೆ ಕೊಡುತ್ತಾಳೆ. ಹೀಗೆ ಒಬ್ಬರಿಂದೊಬ್ಬರಿಗೆ ಹರಡಿ ಇಡೀ ನಗರವನ್ನು ವ್ಯಾಪಿಸುತ್ತದೆ.

ಬಳಿಕ ಈ ಇಡೀ ಸನ್ನಿವೇಶವನ್ನು ರಿವೈಂಡ್ ಮಾಡಿ, ಒಂದು ವೇಳೆ ಆತ ಸೀನುವಾಗ ಕರ್ಚೀಫ್ ಅನ್ನು ಹಿಡಿದಿದ್ದಲ್ಲಿ ಇದನ್ನು ತಪ್ಪಿಸಬಹುದು. ಬಳಿಕ ಮನೆಗೆ ಹೋಗಿ ಕೈಯನ್ನು ಶುಚಿಯಾಗಿ ತೊಳೆದುಕೊಳ್ಳಬೇಕು ಎಂಬ ಸಂದೇಶ ಆ ವಿಡಿಯೊದಲ್ಲಿದೆ.

ಇದನ್ನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದ ಪ್ರಧಾನಿ ಮೋದಿ ಅವರು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇಂತಹ ವಿಡಿಯೋಗಳು ನಿಮಗೂ ಕಂಡರೆ ಅಪ್ಲೋಡ್ ಮಾಡಿ ಜನರಿಗೆ ಜಾಗೃತಿ ಮೂಡಿಸಿ ಎಂದು ಸಲಹೆ ಕೊಟ್ಟಿದ್ದಾರೆ.

ಇದರಿಂದಾಗಿ ಈಗ ಅನೇಕರು ಇಂತಹ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಅಂದ ಹಾಗೆ ಈ ವಿಡಿಯೋಗೆ ಈಗಾಗಲೇ 67 ಸಾವಿರ ಲೈಕ್ ಗಳು ಹಾಗೂ 24 ಸಾವಿರ ರಿಟ್ವೀಟ್ ಗಳು ಬಂದಿವೆ.

“ಕರೋನಾ ಮುಕ್ತ ಆಸನ” ಟ್ವೀಟ್ ಮಾಡಿದ ಸೆಹ್ವಾಗ್

Posted: 23 Mar 2020 05:34 AM PDT

ನವದೆಹಲಿ: ಕರೋನಾ ವೈರಸ್ ತಡೆಗಟ್ಟಲು ಅನೇಕ ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲಾಗುತ್ತಿದೆ. ಈಗ ದೆಹಲಿಯ ಮೆಟ್ರೋ (ಡಿಎಂಆರ್ಸಿ) ಹಲವು ನಿಬಂಧನೆಗಳನ್ನು ಸೂಚಿಸಿದ್ದು, ಅದರ ಅನ್ವಯ ನಡೆದುಕೊಳ್ಳುವಂತೆ ಹೇಳಿದೆ.

ಆದರೆ ಹೀಗೆ ನಡೆದುಕೊಳ್ಳದಿದ್ದರೆ ಕರೋನಾ ಮುಕ್ತ ಆಸನವನ್ನು ಅಲ್ಲಿ ಹಾಕಿ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಎಲ್ಲರಿಗೂ ಹೇಳಿಕೊಟ್ಟಿದ್ದಾರೆ. ಇದೇನಿದು ಎಂಬುದನ್ನು ಮುಂದೆ ಓದಿ……

ಮೆಟ್ರೋದಲ್ಲಿ ಸಂಚರಿಸುವಾಗ ಒಬ್ಬರು ಕುಳಿತಿದ್ದಾರೆಂದರೆ ಅವರ ಅಕ್ಕಪಕ್ಕದ ಕನಿಷ್ಠ ಪಕ್ಷ ಎರಡು- ಮೂರು ಸೀಟುಗಳನ್ನು ಬಿಟ್ಟಾದರೂ ಕೂರಬೇಕು. ಮತ್ತೆ ಅವರ ಎದುರುಗಡೆ ಯಾರೂ ನಿಲ್ಲಬಾರದು. ಈ ರೀತಿ ಅಂತರವನ್ನು ಕಾಯ್ದುಕೊಳ್ಳಬೇಕು.

ಹೀಗೆ ಮಾಡಿದಾಗ ವೈರಸ್ ಸೋಂಕಿನಿಂದ ಬಚಾವಾಗಲು ಸಹಕಾರಿಯಾಗುತ್ತದೆ ಎಂದು ಹೇಳಲಾಗಿದೆ. ಆದರೆ ಕೆಲವರು ಇದನ್ನು ಅನುಸರಿಸುವುದಿಲ್ಲ, ಇಂಥವರಿಗಾಗಿ ಸೆಹ್ವಾಗ್ ಹೀಗೆ ಹೇಳಿದ್ದಾರೆ.

ಒಂದು ವೇಳೆ ಮೆಟ್ರೋದಲ್ಲಿ ಈ ರೀತಿಯ ಸೂಚನೆಗಳನ್ನು ಅನುಸರಿಸದೆ ಇದ್ದರೆ ನೀವು ಕರೋನಾ ಮುಕ್ತ ಆಸನವನ್ನು ಹಾಕಿ. ಅದು ಹೇಗೆ ಅಂದರೆ ನೀವು ಆಸನದಲ್ಲಿ ಕುಳಿತಾಗ ಎರಡು ಕಾಲುಗಳನ್ನು ಸಮಾನಾಂತರವಾಗಿ ಉಳಿದ ಸೀಟುಗಳ ಮೇಲೆ ಇಟ್ಟುಕೊಳ್ಳಬೇಕು.

ಆಗ ಯಾರೂ ಕೂರಲು ಆಗುವುದಿಲ್ಲ ಎಂಬುದು ಇದರ ತಾತ್ಪರ್ಯ. ಇದೀಗ ಈ ಆಸನದ ಫೋಟೋವುಳ್ಳ ಟ್ವೀಟ್ ಭರ್ಜರಿ ವೈರಲ್ ಆಗಿದೆ. ಮಾ.21 ರಂದು ಅವರು ಇದನ್ನು ಪೋಸ್ಟ್ ಮಾಡಿದ್ದು, 37.3k ಲೈಕ್ ಗಳು ಬಂದಿದ್ದರೆ, 4712 ಕಾಮೆಂಟ್ ಗಳು ಬಂದಿವೆ.

ಶೇಕಡ 50 ರಷ್ಟು ಸಿಬ್ಬಂದಿಗೆ ‘ರಜೆ’ ಘೋಷಣೆ

Posted: 23 Mar 2020 05:31 AM PDT

ಬೆಂಗಳೂರು: ಮಹಾಮಾರಿ ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕೆಎಸ್ಆರ್ ಟಿಸಿಯ ಶೇಕಡ 50 ರಷ್ಟು ಸಿಬ್ಬಂದಿಗೆ ರಜೆ ನೀಡಿ ಆದೇಶ ಹೊರಡಿಸಲಾಗಿದೆ.

ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರು, ಶೇಕಡ 50 ರಷ್ಟು ಸಿಬ್ಬಂದಿಗೆ ರಜೆ ನೀಡಿದ್ದಾರೆ.

ತುರ್ತು ಕೆಲಸಗಳಿಗೆ ಯಾವುದೇ ಧಕ್ಕೆಯಾಗದಂತೆ ರಜೆ ನೀಡಲಾಗಿದೆ. ಮಾರ್ಚ್ 31 ರವರೆಗೆ ಶೇಕಡ 50 ರಷ್ಟು ಸಿಬ್ಬಂದಿಗೆ ರಜೆ ನೀಡಲಾಗಿದೆ ಎಂದು ಹೇಳಲಾಗಿದೆ.

ಹಳ್ಳಿಗಳಿಗೆ ಹೋಗಬೇಡಿ ಎಂದ್ರೂ ಕೇಳದ ಜನ, ಬಸ್ ಟಾಪಲ್ಲಿ ಪ್ರಯಾಣ

Posted: 23 Mar 2020 05:20 AM PDT

ಬೆಂಗಳೂರು: ಕೊರೋನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯುವ ಉದ್ದೇಶದಿಂದ ಸರ್ಕಾರ ಅನೇಕ ಕ್ರಮಕೈಗೊಂಡಿದೆ.

ಕೊರೋನಾ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಯಾರೂ ಹಳ್ಳಿಗಳಿಗೆ ಹೋಗಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದರೂ ಬೆಂಗಳೂರಿನಿಂದ ಜನ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ.

ಕೊರೋನಾ ಭೀತಿಯಿಂದ ಜನ ಬೆಂಗಳೂರು ತೊರೆಯುತ್ತಿದ್ದು ಸ್ವಂತ ಊರುಗಳತ್ತ ಹೊರಟಿದ್ದಾರೆ. ಹಳ್ಳಿಗಳಿಗೆ ಹೋಗಬೇಡಿ ಹಳ್ಳಿಗಳಿಗೆ ಸೋಂಕು ಹರಡಬೇಡಿ ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದರೂ, ಬಸ್ ಟಾಪಲ್ಲಿ ಕುಳಿತುಕೊಂಡು ಜನ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ.

ತುಮಕೂರಿನ ಕ್ಯಾತಸಂದ್ರದಲ್ಲಿ ಬೆಂಗಳೂರಿನಿಂದ ಹಳ್ಳಿಗಳಿಗೆ ತೆರಳುತ್ತಿರುವವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಕಾರು, ಟೆಂಪೋ ಟ್ರಾವೆಲ್ ಗಳಲ್ಲಿಯೂ ಜನ ಪ್ರಯಾಣ ಬೆಳೆಸಿದ್ದಾರೆ. ಯುಗಾದಿಗೆ ಹೆಚ್ಚಿನ ಜನ ಊರಿಗೆ ಹೊರಟಿದ್ದಾರೆ ಎನ್ನಲಾಗಿದೆ.

ಕೊರೊನಾ ಲಕ್ಷಣ ಕಂಡು ಬಂದ್ರೆ ಭಯಬೇಡ, ಈ ‘ನಂಬರ್’ ಗೆ ಕರೆ ಮಾಡಿ

Posted: 23 Mar 2020 05:19 AM PDT

ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಕರ್ನಾಟಕ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಕೊರೊನಾ ಬಗ್ಗೆ ಜನರಲ್ಲಿ ಭಯವಿದ್ರೂ ನಿರ್ಲಕ್ಷ್ಯ ಮನೆ ಮಾಡಿದೆ. ಇದ್ರಿಂದಾಗಿ ರೋಗ ವೇಗವಾಗಿ ಹರಡುತ್ತಿದೆ. ಕೊರೊನಾ ರೋಗದ ಲಕ್ಷಣಗಳು ಕಂಡು ಬಂದ್ರೆ ಭಯಪಡಬೇಕಾಗಿಲ್ಲ. ಕೆಮ್ಮು, ಜ್ವರ, ನೆಗಡಿ ಸೇರಿದಂತೆ ಯಾವುದೇ ಲಕ್ಷಣ ಕಂಡು ಬಂದ್ರೆ ಸಹಾಯವಾಣಿಗೆ ಕರೆ ಮಾಡಬಹುದು.

ಕೊರೊನಾ ವೈರಸ್ ಎದುರಿಸಲು ಕೇಂದ್ರ ಸರ್ಕಾರ ಸೇರಿದಂತೆ ರಾಜ್ಯ ಸರ್ಕಾರಗಳು ಈಗಾಗಲೇ ಸಹಾಯವಾಣಿ ಸಂಖ್ಯೆಯನ್ನು ನೀಡಿವೆ. ಈ ಸಹಾಯ ಕೇಂದ್ರಗಳ ಮೂಲಕ ಜನರು 24 ಗಂಟೆಗಳ ಕಾಲ ಮಾಹಿತಿಯನ್ನು ಪಡೆಯಬಹುದು. ಕರೋನಾ ವೈರಸ್‌ಗೆ ಕೇಂದ್ರ ಸರ್ಕಾರ ಸಹಾಯವಾಣಿ ಸ್ಥಾಪಿಸಿದೆ.  ಸಹಾಯವಾಣಿ ಸಂಖ್ಯೆ 9013151515. ಯಾವುದೇ ಸಮಯದಲ್ಲಿ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಬಹುದು.

ಸಹಾಯವಾಣಿ ಸಂಖ್ಯೆ + 91-11-23978046, ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 1075. ಕರೋನಾ ವೈರಸ್‌ಗೆ ಸಂಬಂಧಿಸಿದ ಮಾಹಿತಿ ಅಥವಾ ಸಲಹೆಗಳನ್ನು ನೀವು ಇಮೇಲ್ ಮೂಲಕ ಸರ್ಕಾರಕ್ಕೆ ಕೇಳಬಹುದು. ಇದಕ್ಕಾಗಿ ಇಮೇಲ್ ID ncov2019@gov.in.

 

ರೆಸಾರ್ಟ್ ಗಳನ್ನೇ ಶುಶ್ರೂಷ ಕೇಂದ್ರಗಳನ್ನಾಗಿಸಲು ಮುಂದಾದ ಆನಂದ್ ಮಹೀಂದ್ರಾ

Posted: 23 Mar 2020 05:13 AM PDT

ಭಾನುವಾರ ರಾಷ್ಟ್ರಾದ್ಯಂತ ಜನತಾ ಕರ್ಫ್ಯೂಗೆ ಕರೆ ನೀಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಕರೆಗೆ ಬೆಂಬಲ ನೀಡಿದ ಉದ್ಯಮಿ ಆನಂದ್ ಮಹೀಂದ್ರಾ, ವೈರಾಣುಗಳ ವಿರುದ್ಧ ದೇಶದ ಹೋರಾಟದಲ್ಲಿ ತಮ್ಮ ಮಹೀಂದ್ರಾ ಸಮೂಹವೂ ನೆರವಾಗಲಿದೆ ಎಂದಿದ್ದಾರೆ.

ಪರಿಸ್ಥಿತಿಯೊಂದಿಗೆ ಹೋರಾಡಲು ಶೀಘ್ರವೇ ತುರ್ತು ಚಿಕಿತ್ಸಾ ಘಟಕಗಳನ್ನು ತಾತ್ಕಾಲಿಕವಾಗಿ ತೆರೆಯುವ ಅಗತ್ಯವಿದ್ದು, ವೆಂಟಿಲೇಟರ್‌ಗಳ ಕೊರತೆ ಇಲ್ಲವೆಂದು ಖಾತ್ರಿ ಪಡಿಸಬೇಕಾದ ಅಗತ್ಯವಿದೆ ಎಂದಿದ್ದಾರೆ.

ವೆಂಟಿಲೇಟರ್‌ಗಳನ್ನು ಉತ್ಪಾದನೆ ಮಾಡಲು ಮಹೀಂದ್ರಾ ಸಮೂಹ ಶೀಘ್ರದಲ್ಲೇ ಕೆಲಸ ಮಾಡಲು ಆರಂಭಿಸಲಿದೆ ಎಂದಿದ್ದಾರೆ ಆನಂದ್.

ತಮ್ಮ ಸಮೂಹದ ಮಹೀಂದ್ರಾ ರೆಸಾರ್ಟ್ಸ್‌‌ಗಳನ್ನು ತಾತ್ಕಾಲಿಕ ಶುಶ್ರೂಷೆ ಕೇಂದ್ರಗಳನ್ನಾಗಿ ಮಾಡಿಕೊಳ್ಳಲು ಬಿಟ್ಟುಕೊಡಲು ತಾವು ಸಿದ್ಧವಿರುವುದಾಗಿ ತಿಳಿಸಿರುವ ಆನಂದ್, ತಾತ್ಕಾಲಿಕ ಸವಲತ್ತುಗಳ ನಿರ್ಮಾಣಕ್ಕೆ ತಮ್ಮ ಪ್ರಾಜೆಕ್ಟ್ ತಂಡವು ಸರ್ಕಾರ ಅಥವಾ ಸೇನೆಗೆ ನೆರವಾಗಲು ಸಿದ್ಧವಿದೆ ಎಂದು ಘೋಷಿಸಿದ್ದಾರೆ.

ದೇಶಿ ವಿಮಾನ ಹಾರಾಟ ಮಧ್ಯರಾತ್ರಿಯಿಂದ ಬಂದ್

Posted: 23 Mar 2020 05:04 AM PDT

कोरोना के कारण हवाई सेवा पर ब्रेक (फाइल फोटो)

ಕೊರೋನಾ ವೈರಸ್ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರೈಲು ಸೇವೆ ನಂತ್ರ ದೇಶಿ ವಿಮಾನ ಹಾರಾಟವನ್ನು ನಿಷೇಧಿಸಲಾಗ್ತಿದೆ. ಮಂಗಳವಾರ ರಾತ್ರಿ 12 ಗಂಟೆಯಿಂದ ವಿಮಾನ ಹಾರಾಟ ಸಂಪೂರ್ಣ ಬಂದ್ ಆಗಲಿದೆ. ಮಂಗಳವಾರ ರಾತ್ರಿ 12 ಗಂಟೆಯ ಮೊದಲು ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನವನ್ನು ಇಳಿಸುವಂತೆ ಯೋಜನೆ ರೂಪಿಸಬೇಕೆಂದು ಸೂಚಿಸಲಾಗಿದೆ.

ರೈಲು ಸೇವೆಯನ್ನು ಈಗಾಗಲೇ ನಿಷೇಧಿಸಲಾಗಿದೆ. ಸಾಂಕ್ರಾಮಿಕ ಕರೋನಾ ವೈರಸ್ ಈಗ ದೇಶದ ವಾಯು ಸೇವೆಗಳಿಗೆ ಬ್ರೇಕ್ ಹಾಕಿದೆ. ದೇಶದಲ್ಲಿ ಪ್ರತಿದಿನ ಸುಮಾರು 6500 ದೇಶೀಯ ವಿಮಾನಗಳು ಹಾರಾಟ ನಡೆಸುತ್ತವೆ. ಪ್ರತಿ ವರ್ಷ 144.17 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.

ಕೊರೊನಾ ವೈರಸ್ ಗೆ ಈವರೆಗೆ 9 ಜನರು ಸಾವನ್ನಪ್ಪಿದ್ದಾರೆ.  ದೇಶದಲ್ಲಿ ಕೊರೊನಾ ರೋಗಿಗಳ ಸಂಖ್ಯೆ 434 ಆಗಿದೆ. ಕೇವಲ 24 ಗಂಟೆಗಳಲ್ಲಿ 50 ಕ್ಕೂ ಹೆಚ್ಚು ಹೊಸ ರೋಗಿಗಳು ದಾಖಲಾಗಿದ್ದಾರೆ.

‘ಜನತಾ ಕರ್ಫ್ಯೂ’ ಡ್ಯೂಟಿ ನಡುವೆ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಐಪಿಎಸ್ ಅಧಿಕಾರಿ

Posted: 23 Mar 2020 04:29 AM PDT

ಇಡೀ ದೇಶವೇ ಒಟ್ಟಾಗಿ ಕೊರೋನಾ ಮಹಾಮಾರಿ ವಿರುದ್ಧ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಭಾನುವಾರ ಮೊದಲ ಬಾರಿಗೆ ಇಡೀ ದೇಶವೇ ಜನತಾ ಕರ್ಫ್ಯೂವನ್ನು ಬಹಳ ಅಚ್ಚುಕಟ್ಟಾಗಿ ಮಾಡಿದೆ.

ಇದೇ ವೇಳೆ ದೇಶದ ಅನೇಕ ನಗರಗಳಿಂದ ಜನರು ಯಾವೆಲ್ಲಾ ಮಟ್ಟದಲ್ಲಿ ಕರ್ಫ್ಯೂಗೆ ಸ್ವಯಂ ಪ್ರೇರಿತರಾಗಿ ಬೆಂಬಲ ಕೊಟ್ಟಿದ್ದಾರೆ ಎಂದು ಅನೇಕ ಚಿತ್ರಗಳನ್ನು ನಾವು ಅದಾಗಲೇ ನೆಟ್‌ನಲ್ಲಿ ನೋಡಿದ್ದೇವೆ.

ತೆಲಂಗಾಣದ ಮೆಹಬೂಬ್‌ನಗರ ಪೊಲೀಸ್‌ ವರಿಷ್ಠೆ ರೇಮಾ ರಾಜೇಶ್ವರಿ, ಕರ್ತವ್ಯದಲ್ಲಿರುವಾಗಲೇ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡ ಬಗೆಯನ್ನು ವಿವರಿಸಿದ್ದಾರೆ.

ಚಪ್ಪಾಳೆ ಹಾಗೂ ಸೈರನ್‌ಗಳ ಮೂಲಕ ಇಲಾಖೆಯ ಸಿಬ್ಬಂದಿಯೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಬಗೆಯನ್ನು ರೇಮಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ದಿನಸಿ ಅಂಗಡಿಯಲ್ಲಿ ಹೆರಿಗೆ; ಗ್ರಾಹಕರಿಂದ ಸಂಭ್ರಮ

Posted: 23 Mar 2020 04:26 AM PDT

ಮಿಸ್ಸೌರಿ, ಅಮೆರಿಕ: ತುಂಬು ಹೆರಿಗೆ ಸಂದರ್ಭದಲ್ಲಿ ದಿನಸಿ ಖರೀದಿಗೋಸ್ಕರ ವಾಲ್ಮಾರ್ಟ್ ಗೆ ಹೋಗಿದ್ದ ಮಹಿಳೆಯೊಬ್ಬಳಿಗೆ ಅಲ್ಲಿಯೇ ನೀರು ಸೋರಿಕೆ ಆರಂಭವಾಗಿದೆ. ಹೀಗಾಗಿ ತಕ್ಷಣ ಆಕೆ ಅಲ್ಲಿನ ಸಿಬ್ಬಂದಿ ಗಮನಕ್ಕೆ ತಂದಿದ್ದಾಳೆ.

ಆಗ ಅಲ್ಲಿಯೇ ಇದ್ದ ನರ್ಸ್ ಒಬ್ಬರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕೇವಲ 45 ನಿಮಿಷಗಳಲ್ಲಿ ಹೆರಿಗೆ ಮಾಡಿಸಿದ್ದಾರೆ.

ಬಳಿಕ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ. ದಿನಸಿ ಅಂಗಡಿಯ ಟಾಯ್ಲೆಟ್ ರೋಲ್ ಇಡುವ ಜಾಗದಲ್ಲಿ ಹೆರಿಗೆಯನ್ನು ಮಾಡಿಸಲಾಗಿದೆ ಎಂದು ಅಲ್ಲಿನ ವ್ಯವಸ್ಥಾಪಕಿ ಜೆಸ್ಸಿಕಾ ಹಿನಕಲ್ ಮಾಹಿತಿ ನೀಡಿದ್ದಾರೆ.

ಈ ಘಟನೆ ಬುಧವಾರ ನಡೆದಿದ್ದು, ಗುರುವಾರ ಅವರು ಆಸ್ಪತ್ರೆಗೆ ಹೋಗಿ ತಾಯಿ- ಮಗುವಿನ ಆರೋಗ್ಯವನ್ನು ವಿಚಾರಿಸಿ ಬಂದಿದ್ದಾಗಿ ಹೇಳಿಕೊಂಡಿದ್ದಾರೆ.

ಆದರೆ ಹೆರಿಗೆ ಸಂದರ್ಭದಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ನೋವಿನ ಚೀರಾಟವನ್ನು ಕಡಿಮೆ ಮಾಡುವ ಸಲುವಾಗಿ ಸೇರಿದ್ದ ಗ್ರಾಹಕರು ಆಕೆಗೆ ಧೈರ್ಯ ತುಂಬುವ ಮಾತುಗಳನ್ನು ಆಡಿದ್ದಾರೆ.

ಅಲ್ಲದೆ ಇನ್ನೇನು ಕೆಲವೇ ಕ್ಷಣಗಳಲ್ಲಿ ನಿನಗೆ ಹೆರಿಗೆ ಆಗುತ್ತದೆ ಎಂಬ ವಿಶ್ವಾಸವನ್ನು ತುಂಬಿದ್ದಾರೆ ಎಂದು ಜೆಸ್ಸಿಕಾ ಹೇಳಿದ್ದಾರೆ.

Gameforumer QR Scan

Gameforumer QR Scan
Gameforumer QR Scan