Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Sunday, March 22, 2020

Kannada News | Karnataka News | India News

Kannada News | Karnataka News | India News


ಆಹಾ…. ಏನು ರುಚಿಯಂತೀರಾ ಮಾವಿನಹಣ್ಣಿನ ಲಸ್ಸಿ

Posted: 22 Mar 2020 07:15 AM PDT

ಬೇಸಿಗೆಯ ಬಿಸಿಲು ಹೆಚ್ಚಾಗುತ್ತಿದೆ. ಏನಾದರೂ ತಂಪು ತಂಪು ಜ್ಯೂಸ್ ಕುಡಿಯಬೇಕು ಅನಿಸುವುದು ಸಹಜ. ಇನ್ನೇನು ಮಾವಿನಹಣ್ಣುಗಳ ಕಾಲ ಶುರುವಾಗುತ್ತಿದೆ. ರುಚಿಕರವಾದ ಮಾವಿನಹಣ್ಣಿನ ಲಸ್ಸಿಮಾಡಿಕೊಂಡು ಕುಡಿಯುವುದರಿಂದ ದೇಹಕ್ಕೂ ಹಿತಕರವಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ ನೋಡಿ.

ಮಾಡುವ ವಿಧಾನ: 4 ಮಧ್ಯಮ ಗಾತ್ರದ ಮಾವಿನ ಹಣ್ಣುಗಳನ್ನು ತೆಗೆದುಕೊಂಡು ಅದರ ಸಿಪ್ಪೆ ತೆಗೆದು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಕತ್ತರಿಸಿಕೊಂಡ ಮಾವಿನಹಣ್ಣನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಅದಕ್ಕೆ 4 ಚಮಚ ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿಕೊಳ್ಳಿ. ಚಿಟಿಕೆ ಏಲಕ್ಕಿ ಪುಡಿ ಸೇರಿಸಿ ರುಬ್ಬಿಕೊಳ್ಳಿ.

ನಂತರ ಇದಕ್ಕೆ ಎರಡು ಕಪ್ ಮೊಸರು ಸೇರಿಸಿ 3 ಟೇಬಲ್ ಸ್ಪೂನ್ ನಷ್ಟು ಕೆನೆ, ಸ್ವಲ್ಪ ಹಾಲು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಮೊಸರು ಮಾವಿನ ಹಣ್ಣಿನ ತಿರುಳು ಚೆನ್ನಾಗಿ ಹೊಂದಿಕೊಳ್ಳುವವರೆಗೆ ರುಬ್ಬಿಕೊಂಡು ಗ್ಲಾಸ್ ಗೆ ಹಾಕಿಕೊಳ್ಳಿ. ರುಬ್ಬುವಾಗ ಬೇಕಿದ್ದರೆ ಐಸ್ ಕ್ಯೂಬ್ ಕೂಡ ಸೇರಿಸಿಕೊಳ್ಳಿ. ಇದನ್ನು ಒಂದು ಗ್ಲಾಸ್ ಹಾಕಿ ಸರ್ವ್ ಮಾಡಿ.

8 ವರ್ಷದ ಬಾಲಕಿ ಕ್ರಿಯೇಟಿವಿಟಿಗೆ ದಂಗಾದ ನೆಟ್ಟಿಗರು

Posted: 22 Mar 2020 06:04 AM PDT

ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬುದು ನಿಮಗೆ ಗೊತ್ತಿರುವ ವಿಷಯ. ಆದರೆ ಈ ಸಂದೇಶವನ್ನು ರವಾನಿಸಬೇಕು ಎಂಬುದು ಈ ಎಂಟು ವರ್ಷದ ಬಾಲಕಿಗೆ ಅತೀವವಾಗಿ ಕಾಡಿದೆ.

ಹೀಗಾಗಿ ಆಕೆ ಮಾಡಿದ್ದಾದರೂ ಏನು ಗೊತ್ತಾ? ಅದು ಬೇರೆ ಕರೋನಾ ವೈರಸ್ ಗೋಸ್ಕರ ಶಾಲೆಗೆ ರಜಾವನ್ನು ಕೊಡಲಾಗಿತ್ತು. ಹೀಗಾಗಿ ಮನೆಯಲ್ಲಿ ಕೂತು ಬೇಜಾರಾಗುತ್ತಿದ್ದರಿಂದ ಟಾಯ್ಲೆಟ್ ನಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದ್ದಾಳೆ. ಅದು ಹೇಗೆ ಗೊತ್ತಾ?

ಇಎಸ್ಪಿಎನ್ ಪ್ಲಸ್ ನಲ್ಲಿ ಕಾರ್ಯಕ್ರಮ ನಿಯೋಜಕನಾಗಿರುವ ಮ್ಯಾಥಿವ್ ಬೆರ್ರಿ ಎಂಬುವರ ಪುತ್ರಿ ಟಾಯ್ಲೆಟ್ ನ ಕಬೋರ್ಡ್ ಮೇಲೆ ಊದುಬತ್ತಿಯ ರಟ್ಟಿನ ರೋಲ್ ಅನ್ನು ಇಟ್ಟಿದ್ದಾಳೆ. ಅದರ ಮೇಲೆ ಪೇಪರ್ ರೋಲ್ ಇಟ್ಟು, ಮೇಲೆ ಟೋಪಿಯನ್ನು ಹಾಕಿದ್ದಾಳೆ.

ಬಳಿಕ ಹೊರಬಂದವಳು ತಂದೆ ಹಾಗೂ ತಾಯಿಯ ಹತ್ತಿರ ಬಂದು ಟಾಯ್ಲೆಟ್ ಧೂಮಪಾನ ಮಾಡುತ್ತಿದೆ ಎಂದು ಹೇಳಿದ್ದಾಳೆ. ಇದರಿಂದ ಗಾಬರಿಗೊಂಡ ದಂಪತಿ ಅಲ್ಲಿ ಓಡಿ ಹೋಗಿ ನೋಡಿದರೆ ಈ ವಿಷಯ ಬೆಳಕಿಗೆ ಬಂದಿದೆ.

ಇದನ್ನು ಕಂಡ ಮ್ಯಾಥಿವ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಇದಕ್ಕೆ ಟ್ವಿಟ್ಟಿಗರಿಂದ ಭರಪೂರ ಪ್ರತಿಕ್ರಿಯೆಗಳು ಲಭ್ಯವಾಗಿವೆ. ಈಗಾಗಲೇ ಈ ಪೋಸ್ಟ್ ಗೆ 28000 ಲೈಕ್ ಗಳು ಬಂದಿದ್ದರೆ, 2100 ಕಮೆಂಟ್ ಗಳು ವ್ಯಕ್ತವಾಗಿವೆ. 1,96,000 ರೀ ಟ್ವೀಟ್ ಗಳು ಲಭ್ಯವಾಗಿವೆ.

— Matthew Berry (@MatthewBerryTMR) March 19, 2020

ನಿಸರ್ಗದ ಮಡಿಲಿನ ಈ ಸುಂದರ ವಿಡಿಯೋ ಈಗ ವೈರಲ್

Posted: 22 Mar 2020 06:02 AM PDT

ಕರೋನಾ….ಕರೋನಾ….ಕರೋನಾ ಈಗ ಎಲ್ಲಿ ನೋಡಿದರೂ ಕರೋನಾ ವೈರಸ್ ಗೆ ಸಂಬಂಧಪಟ್ಟ ಸುದ್ದಿಗಳೇ ಕಾಣುತ್ತಿವೆ. ಇವುಗಳ ಮಧ್ಯೆ ಬೇರೆ ಸುದ್ದಿಗಳು ಅಷ್ಟಾಗಿ ಗಮನಕ್ಕೆ ಬರುತ್ತಿಲ್ಲ. ಆದರೆ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು ಹಾಕಿರುವ ಈ ವಿಡಿಯೋ ಈಗ ಭರ್ಜರಿ ವೈರಲ್ ಆಗಿದೆ. ನೆಟ್ಟಿಗರ ಮನ ಮುಟ್ಟಿದೆ. ಹಾಗಾದರೆ ಏನು ಅಂತಹ ವಿಡಿಯೋ.? ಮುಂದೆ ಓದಿ.

ಅದೊಂದು ದಟ್ಟವಾದ ಕಾಡು, ಮುಂಜಾನೆಯ ಮಂಜು ಕವಿದಿತ್ತು. ಹಳ್ಳದಲ್ಲಿ ನೀರು ಹರಿಯುತ್ತಿದ್ದು, ಸುತ್ತಮುತ್ತ ಹಸಿರು ಕಾಣುತ್ತಿದೆ. ಹಕ್ಕಿಗಳ ಚಿಲಿಪಿಲಿ ಕೇಳುತ್ತಿದೆ, ಮಂಗಗಳು ಅತ್ತಿಂದಿತ್ತ ಇತ್ತಿಂದತ್ತ ಹಾರುತ್ತಿವೆ. ಅಬ್ಬಾ ಅದೆಷ್ಟು ಸುಂದರ ಗೊತ್ತಾ? ಇದನ್ನು ಮತ್ತೆ ಮತ್ತೆ ನೋಡ ಬೇಕೆನಿಸುವಷ್ಟು ಆಹ್ಲಾದಕರವಾಗಿ ಇತ್ತು.

“ನಿಮ್ಮ ಕಾಡನ್ನು ನೀವು ರಕ್ಷಿಸಿ ಇದಕ್ಕಿಂತ ಒಳ್ಳೆಯ, ಸಮಾಧಾನ ಸಿಗುವ ಜಾಗ ನಿಮಗೆ ಸಿಗದು. ಅರಣ್ಯ ದಿನವಾದ ಈ ಸಂದರ್ಭದಲ್ಲಿ ಹಸಿರಾಗಿರುವ ಎಲ್ಲ ಕಾಡುಗಳಿಗೂ ನನ್ನದೊಂದು ಗೌರವ” ಎಂದು ಬರೆದುಕೊಂಡು ಈ ವಿಡಿಯೋವನ್ನು ಸುಶಾಂತ್ ಅಪ್ಲೋಡ್ ಮಾಡಿದ್ದಾರೆ.

ಇದಕ್ಕೆ ನೆಟ್ಟಿಗರಿಂದ ಭರಪೂರ ಪ್ರತಿಕ್ರಿಯೆಗಳು ಲಭ್ಯವಾಗಿದ್ದು, ಇದೊಂದು ಸ್ವರ್ಗದ ರೀತಿ ಕಾಣುತ್ತಿದೆ ಎಂದು ಒಬ್ಬರು ಹೇಳಿದ್ದಾರೆ. ಕರೋನಾ ಸುದ್ದಿಯಿಂದ ಕೊಂಚ ಬಿಡುವು ಸಿಕ್ಕಂತಾಗಿದೆ ಎಂದು ಮಗದೊಬ್ಬ ಬರೆದುಕೊಂಡಿದ್ದಾನೆ. ಈ ವಿಡಿಯೋ ಈಗಾಗಲೇ 9.6k ವೀಕ್ಷಣೆ ಕಂಡಿದೆ.

— Susanta Nanda IFS (@susantananda3) March 21, 2020

ಸ್ವ ದಿಗ್ಬಂಧನ ಹಾಕಿಕೊಂಡು ಮನೆಯನ್ನೇ ಮೆಟ್ರೋ ಸ್ಟೇಷನ್ ಮಾಡಿಕೊಂಡ ಆನಂದ್ ಮಹೀಂದ್ರ

Posted: 22 Mar 2020 06:00 AM PDT

ನವದೆಹಲಿ: ಇಂದು (ಭಾನುವಾರ) ಪ್ರಧಾನಿ ಮೋದಿ ಅವರು ಕರೆ ನೀಡಿದಂತೆ ಜನತಾ ಕರ್ಫ್ಯೂ ಎಲ್ಲೆಡೆ ಜಾರಿಯಲ್ಲಿರುತ್ತದೆ. ಇದೇ ರೀತಿ ತಾವು ಆಚರಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದ ಉದ್ಯಮಿ ಆನಂದ್ ಮಹೀಂದ್ರಾ ಅವರು ಈಗ ತಾವು ಹೇಗೆ ಮೆಟ್ರೊ ಮ್ಯಾಪ್ ಮಾದರಿಯನ್ನು ಮನೆಯಲ್ಲೇ ಅಳವಡಿಸಿಕೊಂಡಿದ್ದೇನೆ ಎಂಬ ಫೋಟೋ ತೆಗೆದು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗಿದೆ.

ಅವರು ಮೆಟ್ರೋ ರೂಟ್ ಮ್ಯಾಪ್ ರೀತಿಯಲ್ಲಿ ಮನೆಯ ವಿನ್ಯಾಸವನ್ನು ಬರೆದುಕೊಂಡಿದ್ದಾರೆ. ಅದರಲ್ಲಿ ಕಿಚನ್, ಲಿವಿಂಗ್ ರೂಮ್, ಹಾಲ್, ಸ್ನಾನದ ಗೃಹ, ಶವರ್, ಮೇಲ್ ಬಾಕ್ಸ್ , ಬುಕ್ಸ್ ರೂಮ್, ಶೆಡ್ ಇತ್ಯಾದಿಗಳನ್ನು ರೂಟ್ ಮ್ಯಾಪ್ ಮಾದರಿಯಲ್ಲಿ ಬಿಡಿಸಿಕೊಂಡಿದ್ದಾರೆ.

ಅಲ್ಲದೆ ತಮ್ಮ ಲಿವಿಂಗ್ ರೂಮ್ ಅನ್ನು ಡೌನ್ಸ್ ಸ್ಟೇಷನ್ ಎಂದು ಬರೆದುಕೊಂಡಿದ್ದರೆ, ಡೈನಿಂಗ್ ರೂಮ್ ಅನ್ನು ಕ್ರಾಫಾರ್ಡ್ ಮಾರ್ಕೆಟ್ ಎಂದು ಬರೆದಿದ್ದಾರೆ.

ಈ ಮೂಲಕ ತಾವು ಹೇಗೆ ಅಂತರ ಕಾಯ್ದುಕೊಳ್ಳುತ್ತೇವೆ ಎಂಬುದನ್ನು ಅವರು ಹೇಳಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಭರ್ಜರಿ ಚರ್ಚೆಗೆ ಕಾರಣವಾಗಿದೆ. ಅಲ್ಲದೇ, ಇದು ಹಾಕಿದ ಕೆಲವೇ ಕ್ಷಣಗಳಲ್ಲಿ 3k ಲೈಕ್ ಗಳು ಬಂದಿವೆ.

ನನ್ನ ಮನೆ ನನ್ನ ಜಗತ್ತು ಎಂದು ಒಬ್ಬ ಬರೆದುಕೊಂಡಿದ್ದರೆ, ಮತ್ತೊಬ್ಬರು ನನ್ನ ಮನೆಯಲ್ಲಿ ಇಡೀ ನಗರವೇ ಇದೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಬಜೆಟ್ ಅಧಿವೇಶನ ಮುಂದುವರಿಕೆ: ಜನತಾ ಕರ್ಫ್ಯೂ ಬೆಂಬಲಿಸಿ ಚಪ್ಪಾಳೆ ತಟ್ಟಿದ ಸಿಎಂ ಹೇಳಿಕೆ

Posted: 22 Mar 2020 05:58 AM PDT

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಟುಂಬದವರೊಂದಿಗೆ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಿದ್ದಾರೆ. ಈ ಮೂಲಕ ಆರೋಗ್ಯ ಸಿಬ್ಬಂದಿ ಸೇರಿದಂತೆ ಸೇವೆ ಸಲ್ಲಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಾದ್ಯಂತ ಸಿಬ್ಬಂದಿಗೆ ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಲಾಗಿದೆ. ಸೋಂಕು ತಡೆಗಟ್ಟಲು ಮಾರ್ಚ್ 31 ರವರೆಗೆ 9 ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡಲಾಗುವುದು. ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪಿಯುಸಿ ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಗೊಂದಲ ಬಗೆಹರಿಸಲಾಗುವುದು. ಬಜೆಟ್ ಅಂಗೀಕಾರವಾಗುವವರೆಗೆ ಅಧಿವೇಶನ ನಡೆಸಲಾಗುವುದು ಎಂದು ಹೇಳಿದ್ದಾರೆ.

ನಾಳೆಯೂ ರಾಜ್ಯಾದ್ಯಂತ ಬಂದ್: ಬಸ್, ಮೆಟ್ರೋ ಸಂಚಾರ ಸ್ಥಗಿತ

Posted: 22 Mar 2020 05:52 AM PDT

ಬೆಂಗಳೂರು: ನಾಳೆಯೂ ರಾಜ್ಯಾದ್ಯಂತ ಬಂದ್ ಇರಲಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ನಿಗಮದ ಬಸ್ ಗಳು ನಾಳೆ ಸಂಚರಿಸುವುದಿಲ್ಲ. ಬಿಎಂಟಿಸಿ ಶೇ. 50 ರಷ್ಟು ಬಸ್ ಗಳು ನಾಳೆ ರಸ್ತೆಗೆ ಇಳಿಯಲಿವೆ. ಎಸಿ ಬಸ್ ಗಳನ್ನು ಬಂದ್ ಮಾಡಲಾಗುವುದು ಎಂದು ಹೇಳಲಾಗಿದೆ.

ನಾಳೆ ಹಾಲು, ತರಕಾರಿ, ದಿನಸಿ, ಪೇಪರ್ ಸಿಗುತ್ತದೆ. ಆಟೋ, ಕ್ಯಾಬ್, ಮೆಡಿಕಲ್, ಆಸ್ಪತ್ರೆ ಸೇವೆ ಲಭ್ಯವಿರುತ್ತದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ನಾಳೆ ಮಾತ್ರ ಅನ್ವಯವಾಗುವಂತೆ ಬಂದ್ ಆದೇಶವಿದೆ. ಮಾರ್ಚ್ 24 ರಿಂದ ಮಾರ್ಚ್ 31 ರವರೆಗೆ  ಕೊರೋನಾ ಸೋಂಕು ಕಾಣಿಸಿಕೊಂಡ 9 ಜಿಲ್ಲೆಗಳಿಗೆ ಆದೇಶ ಅನ್ವಯವಾಗಲಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೆಳಗಾವಿ, ಧಾರವಾಡ, ಕೊಡಗು, ದಕ್ಷಿಣಕನ್ನಡ, ಮೈಸೂರು, ಕಲಬುರ್ಗಿ ಜಿಲ್ಲೆಗಳಿಗೆ ಮಾರ್ಚ್ 31 ರವರೆಗೆ ಆದೇಶ ಅನ್ವಯವಾಗಲಿದೆ. ನಾಳೆ ಮಾತ್ರ ರಾಜ್ಯಾದ್ಯಂತ ಬಂದ್ ಇದ್ದು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರುವುದಿಲ್ಲ ಎಂದು ಹೇಳಲಾಗಿದೆ.

ಗಮನಿಸಿ…! ರಾತ್ರಿ 9 ಗಂಟೆಗೆ ಜನತಾ ಕರ್ಫ್ಯೂ ಮುಗಿತಿದ್ದಂತೆ ನಿಷೇದಾಜ್ಞೆ ಜಾರಿ

Posted: 22 Mar 2020 05:41 AM PDT

ಇಂದು ಬೆಳಿಗ್ಗೆಯಿಂದ ರಾತ್ರಿ 9 ಗಂಟೆಯವರೆಗೆ ಜನತಾ ಕರ್ಫ್ಯೂ ಜಾರಿಯಲ್ಲಿದ್ದು, ಕರ್ಫ್ಯೂ ಅವಧಿ ಮುಕ್ತಾಯಗೊಂಡ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಜನತಾ ಕರ್ಫ್ಯೂ ಅವಧಿ ಮುಕ್ತಾಯವಾದ ಬಳಿಕ ಹೆಚ್ಚಿನ ಸಂಖ್ಯೆಯ ಜನ ಮನೆಯಿಂದ ಹೊರಗೆ ಬಂದು ಜಮಾವಣೆಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಜನತಾ ಕರ್ಫ್ಯೂ ಮುಕ್ತಾಯಗೊಂಡರೂ ರಾಜ್ಯದ 9 ಜಿಲ್ಲೆಗಳಲ್ಲಿ ಮಾರ್ಚ್ 31 ರವರೆಗೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಕೊರೋನಾ ಕಾಣಿಸಿಕೊಂಡ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಮೈಸೂರು, ಕಲಬುರ್ಗಿ, ಧಾರವಾಡ, ಚಿಕ್ಕಬಳ್ಳಾಪುರ, ಕೊಡಗು, ಬೆಳಗಾವಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ದಿನಸಿ, ಮೆಡಿಕಲ್, ಹಾಲು ಮೊದಲಾದ ಅಗತ್ಯ ವಸ್ತುಗಳು ಸಿಗುತ್ತವೆ. ಅಗತ್ಯ ವಸ್ತು ಸೇವೆ ಹೊರತುಪಡಿಸಿ ಉಳಿದ ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.

ಜನತಾ ಕರ್ಫ್ಯೂ ಬೆಂಬಲಿಸಿ ಚಪ್ಪಾಳೆ ತಟ್ಟಿದ ಕಿಚ್ಚ ಸುದೀಪ್

Posted: 22 Mar 2020 05:22 AM PDT

ಕೊರೋನಾ ವೈರಸ್ ತಡೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಎಲ್ಲೆಡೆ ಬೆಂಬಲ ವ್ಯಕ್ತವಾಗಿದೆ.

ಬೆಳಗ್ಗೆಯಿಂದ ಸಂಜೆಯವರೆಗೂ ಮನೆಯಲ್ಲೇ ಸಮಯ ಕಳೆದ ಜನ ಸಂಜೆ ವೇಳೆಗೆ ಹೊರಗೆ ನಿಂತು ಚಪ್ಪಾಳೆ ತಟ್ಟುವ ಮೂಲಕ ಕೊರೋನಾ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿರುವ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ಅಂತೆಯೇ ಕಿಚ್ಚ ಸುದೀಪ್ ಜನತಾ ಕರ್ಫ್ಯೂ ಬೆಂಬಲಿಸಿ ಚಪ್ಪಾಳೆ ತಟ್ಟಿದ್ದಾರೆ. ಮನೆಯ ಮೇಲೆ ಸುದೀಪ್ ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ನೀಡಿದ ವಿಡಿಯೋ ಪೋಸ್ಟ್ ಮಾಡಿದ್ದಾರೆ.

BIG BREAKING: ನಾಳೆ ನಡೆಯಬೇಕಿದ್ದ ಪಿಯುಸಿ ಪರೀಕ್ಷೆ ಮುಂದೂಡಿಕೆ

Posted: 22 Mar 2020 04:59 AM PDT

ಕರೋನಾ ಭೀತಿ ಹಿನ್ನಲೆಯಲ್ಲಿ ರಾಜ್ಯದ 9 ನಗರಗಳಲ್ಲಿ ನಾಳೆಯಿಂದ ಮಾರ್ಚ್‌ 31 ರ ವರೆಗೆ ಲಾಕ್‌ ಡೌನ್‌ ಘೋಷಣೆ ಮಾಡಲಾಗಿದ್ದು, ಈ ಹಿನ್ನಲೆಯಲ್ಲಿ ನಾಳೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮುಂದೂಡಲಾಗಿದೆ.

ನಾಳೆ ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆ ಇದ್ದ ಕಾರಣ ಅದನ್ನು ನಡೆಸಬೇಕೆಂಬ ಚಿಂತನೆಯಲ್ಲಿ ಶಿಕ್ಷಣ ಇಲಾಖೆ ಇತ್ತಾದರೂ 9 ಜಿಲ್ಲೆಗಳಲ್ಲಿ ಲಾಕ್‌ ಡೌನ್‌ ಘೋಷಣೆಯಾಗಿದ್ದ ಕಾರಣ ಆ ಭಾಗದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪಲು ತೊಂದರೆ ಎದುರಾಗಬಹುದೆಂಬ ಕಾರಣಕ್ಕೆ ಅಂತಿಮವಾಗಿ ಪರೀಕ್ಷೆ ಮುಂದೂಡಲು ತೀರ್ಮಾನ ಕೈಗೊಳ್ಳಲಾಯಿತು.

ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಹೊರತುಪಡಿಸಿ ಉಳಿದೆಲ್ಲಾ ವಿಷಯಗಳ ಪರೀಕ್ಷೆ ಈಗಾಗಲೇ ಪೂರ್ಣಗೊಂಡಿದ್ದು, ನಾಳೆ ನಡೆಯಬೇಕಿದ್ದ ಇಂಗ್ಲೀಷ್‌ ಪರೀಕ್ಷೆಯನ್ನು 5 ಲಕ್ಷದ 95 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಬರೆಯಬೇಕಾಗಿತ್ತು. ಅಂತಿಮವಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸೂಚನೆಯಂತೆ ಪರೀಕ್ಷೆ ಮುಂದೂಡಲು ತೀರ್ಮಾನಿಸಲಾಗಿದ್ದು, ಮಾರ್ಚ್‌ 31 ರಂದು ಮುಂದಿನ ಪರೀಕ್ಷಾ ದಿನಾಂಕದ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಕೊರೋನಾ ವಿರುದ್ಧ ಹೋರಾಟ: ಸೇವೆ ಸಲ್ಲಿಸಿದವರಿಗೆ ಚಪ್ಪಾಳೆ ಮೂಲಕ ಕೃತಜ್ಞತೆ ಸಲ್ಲಿಸಿದ ದೇಶದ ಜನ

Posted: 22 Mar 2020 04:54 AM PDT

Image result for clapping hands

ಕೊರೋನಾ ತಡೆಯುವ ಉದ್ದೇಶದಿಂದ ಇಂದು ಜನತಾ ಕರ್ಫ್ಯೂಗೆ ಕರೆ ನೀಡಲಾಗಿದ್ದು ಬೆಳಿಗ್ಗೆಯಿಂದ ಸಂಜೆಯವರೆಗೂ ಮನೆಯೊಳಗೆ ಸಮಯ ಕಳೆದ ಜನ ಮನೆ ಬಾಗಿಲು, ಬಾಲ್ಕನಿ, ಕಿಟಕಿಗಳ ಬಳಿ ಬಂದು ಚಪ್ಪಾಳೆ ತಟ್ಟುವ ಮೂಲಕ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಂಘಟಿತ ಬಲ ನೀಡಿದ್ದಾರೆ.

ದೇಶದ ವೈದ್ಯರು, ಆರೋಗ್ಯ ಸಿಬ್ಬಂದಿ, ಯೋಧರು, ಪೊಲೀಸರು, ಪೌರಕಾರ್ಮಿಕರು ಸೇರಿದಂತೆ ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸಿ ನಮಗಾಗಿ ಸೇವೆ ಸಲ್ಲಿಸಿದವರಿಗಾಗಿ ಚಪ್ಪಾಳೆ ಬಾರಿಸುವ ಮೂಲಕ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಮನೆಯಲ್ಲೇ ಕುಳಿತುಕೊಂಡು ಜನತಾ ಕರ್ಫ್ಯೂಗೆ ಜೈಕಾರ ಹಾಕಿದ್ದಾರೆ. ಪ್ರಧಾನಿ ಮೋದಿ ನೀಡಿದ ಕರೆಗೆ ದೇಶಾದ್ಯಂತ ಜನ ಬೆಂಬಲ ವ್ಯಕ್ತವಾಗಿದ್ದು ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಲಾಗಿದೆ.

ಕೊರೋನಾ ವಿರುದ್ಧ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡ ʼಮೋದಿ ಸರ್ಕಾರʼ

Posted: 22 Mar 2020 04:27 AM PDT

ನವದೆಹಲಿ: ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್ ವಿರುದ್ಧದ ಸಮರವನ್ನು ಕೇಂದ್ರ ಸರ್ಕಾರ ಬಿಗಿಗೊಳಿಸಿದೆ.

111 ಲ್ಯಾಬ್ ಗಳಲ್ಲಿ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗುವುದು. ಕೊರೋನಾ ಚಿಕಿತ್ಸೆಗಾಗಿ ಪ್ರತ್ಯೇಕ ಆಸ್ಪತ್ರೆಗಳನ್ನು ವ್ಯವಸ್ಥೆ ಮಾಡಲಾಗುವುದು. ದಿನಕ್ಕೆ 10 ಸಾವಿರ ಮಂದಿಯ ಆರೋಗ್ಯ ಪರೀಕ್ಷೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ದಿನಕ್ಕೆ 70,000 ಮಂದಿ ಆರೋಗ್ಯ ಪರೀಕ್ಷೆ ನಡೆಸಲಾಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.

ಕೊರೋನಾ ಸೋಂಕಿನ ಸರಪಳಿಯನ್ನು ತಡೆಯಬೇಕಿದೆ. ಜನರು ಮನೆಯಿಂದ ಹೊರಗೆ ಬರಬಾರದು. ಮನೆಯಿಂದ ಹೊರ ಬರದಿದ್ದರೆ ಮಾತ್ರ ಕೊರೋನಾ ಹರಡುವಿಕೆಗೆ ಬ್ರೇಕ್ ಹಾಕಬಹುದಾಗಿದೆ ಎಂದು ಹೇಳಲಾಗಿದೆ.

ನನ್ನಪ್ಪ ಸಿಕ್ಕರೆ ಮನೆಗೆ ಹೋಗಲು ಹೇಳಿ; ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹರಿಬಿಟ್ಟ ಯುವತಿ

Posted: 22 Mar 2020 04:10 AM PDT

ಸ್ಯಾನ್‌ ಫ್ರಾನ್ಸಿಸ್ಕೋ: ಕರೋನಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾದ್ದರಿಂದ ಆದಷ್ಟು ವೃದ್ಧರ ಸಹಿತ ಮಕ್ಕಳು ಕೂಡ ಹೊರಗಡೆ ಹೋಗದಂತೆ ನೋಡಿಕೊಳ್ಳಲು ಅನೇಕ ಸೂಚನೆಗಳು ವ್ಯಕ್ತವಾಗುತ್ತಿವೆ.

ಈ ಮಧ್ಯೆ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ಯುವತಿಯೊಬ್ಬರು ತನ್ನ ತಂದೆ ಹೇಳಿದ ಮಾತನ್ನು ಕೇಳುತ್ತಿಲ್ಲ, ಹೊರಗಡೆ ಹೋಗುತ್ತಿದ್ದಾರೆ ಎಂದು ಬೇಸತ್ತು ಅವರ ಫೋಟೋ ಇರುವ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇವರು ನನ್ನ ತಂದೆ ಪೀಟರ್. ಆರೋಗ್ಯವಾಗಿಯೇ ಇದ್ದಾರೆ. ಆದರೆ, ಎಲ್ಲೇ ಸಿಕ್ಕರೂ ನೇರವಾಗಿ ಮನೆಗೆ ಹೋಗಲು ಹೇಳಿ. ಯಾವುದೇ ಮುಜುಗರ ಬೇಡ.

ನನ್ನ ತಂದೆ ಸಮಾಜದಲ್ಲಿ ಅಂತರ ಕಾಯ್ದುಕೊಳ್ಳಲು ಬಯಸುವುದಿಲ್ಲ. ಅವರು ಎಲ್ಲರೊಂದಿಗೂ ಬೆರೆಯುತ್ತಾರೆ. ಈ ಸಮಯದಲ್ಲಿ ಅವರಿಗೆ ಏನಾದರೂ ಸಾಂಕ್ರಾಮಿಕ ಸೋಂಕು ತಗುಲಿದರೆ? ಮತ್ತು ಅವರಿಂದ ಇನ್ನೊಬ್ಬರಿಗೆ ಹರಡಿದರೆ ಗತಿಯೇನು ಎಂಬ ನಿಟ್ಟಿನಲ್ಲಿ ಈ ರೀತಿ ಪೋಸ್ಟರ್ ಹಾಕಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಲಿಸ್ಸಿ ಲೋಗನ್ ಎಂಬ ಯುವತಿಯೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ನನ್ನ ತಾಯಿಯೂ ಹಾಗೆ ಮಾಲ್ ಗಳಿಗೆ ಹೋಗಬೇಡ ಎಂದರೂ ಕೇಳುವುದಿಲ್ಲ ಎಂದು ಒಬ್ಬರು ಹೇಳಿದ್ದಾರೆ.

ನನ್ನ ತಂದೆಯೂ ಇಂಥವರೇ ಆಗಿದ್ದು, ಅವರಿಬ್ಬರು ಫೋನ್ ಮಾಡಿಕೊಂಡು ಮಾತನಾಡಿಕೊಂಡರೆ ನಮ್ಮಿಬ್ಬರ ಬಗ್ಗೆ ಟೀಕಿಸುತ್ತಿರಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಹ್ಯಾಶ್ ಟ್ಯಾಗ್ #SocialDistancingPickUpLines ಫುಲ್ ಟ್ರೆಂಡಿಂಗ್

Posted: 22 Mar 2020 04:07 AM PDT

ತಡವಾಗಿಯಾದರೂ ಸಾಮಾಜಿಕ ಅಂತರದ ಮಹತ್ವವನ್ನು ಅರಿತಂತೆ ಕಾಣುತ್ತಿರುವ ಮನುಕುಲ, ಕರೋನಾ ವೈರಾಣುಗಳನ್ನು ಹಬ್ಬದಂತೆ ತಡೆಗಟ್ಟಲು ಇದೀಗ ಎಚ್ಚೆತ್ತುಕೊಂಡಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಲು #SocialDistancingPickUpLines ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ.

ಮನೆಗಳಿಂದಲೇ ಕೆಲಸ ಮಾಡುವ ಮೂಲಕ ಪ್ರಯಾಣದ ಅವಧಿಯನ್ನು ಸೇವ್ ಮಾಡುತ್ತಿರುವ ಜನತೆ ವಿಶೇಷವಾದ ಮೆಸೇಜ್‌ಗಳು ಹಾಗೂ ಅರ್ಥಪೂರ್ಣ ಮೆಮೆಗಳನ್ನು ಈ ಹ್ಯಾಶ್‌ಟ್ಯಾಗ್ ಅಡಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

ಕರೋನಾ ಹಿನ್ನೆಲೆಯಲ್ಲಿ ಬಡಜನತೆಗೆ ‘ಬಂಪರ್’ ಕೊಡುಗೆ ನೀಡಿದ ಸಿಎಂ

Posted: 22 Mar 2020 03:47 AM PDT

ಕೋವಿಡ್-19 ಅಥವಾ ಕೊರೊನಾ ವೈರಸ್‌ನಿಂದ ದಿನಗೂಲಿ ಕಾರ್ಮಿಕರಿಗೆ ಹಾಗೂ ಬಡವರಿಗೆ ಹಣಕಾಸಿನ ಹೊಡೆತ ಬಿದ್ದಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಅದಕ್ಕೆ ಪರಿಹಾರವಾಗಿ ಅವರು ಪಡಿತರದಲ್ಲಿ ಉಚಿತವಾಗಿ ಶೇ.50ರಷ್ಟು ಹೆಚ್ಚು ಆಹಾರ ಪದಾರ್ಥ ನೀಡಲಾಗುವುದು ಎಂದಿದ್ದಾರೆ.

ಹಾಗೂ ದೆಹಲಿಯ ರಾತ್ರಿ ತಂಗುದಾಣದಲ್ಲಿ ಮಧ್ಯಾಹ್ನದ ಹಾಗೂ ರಾತ್ರಿಯ ಊಟ ಉಚಿತವಾಗಿ ನೀಡಲಾಗುವುದು ಎಂದಿದ್ದಾರೆ.

ವಿಧವಾ ಹಾಗೂ ವೃದ್ಧಾಪ್ಯ ವೇತನ ದುಪ್ಪಟ್ಟು ಮಾಡಿದ್ದಾರೆ. ಹಾಗೂ ಸಾರ್ವಜನಿಕ ಸಭೆ ಸಮಾರಂಭದಲ್ಲಿ 5ಕ್ಕಿಂತ ಹೆಚ್ಚು ಜನ ಸೇರದಂತೆ ನಿರ್ಬಂಧ ವಿಧಿಸಿದ್ದಾರೆ. ಸದ್ಯಕ್ಕೆ ದೆಹಲಿ ಬಂದ್ ಮಾಡಿಲ್ಲವಾದರೂ ಮುಂದೆ ಸಮಸ್ಯೆಯ ತೀವ್ರತೆ ನೋಡಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಜನತಾ ಕರ್ಫ್ಯೂ ದಿನ ಶೇ.50ರಷ್ಟು ದೆಹಲಿ ಬಸ್‌ಗಳು ಓಡಾಡಲಿವೆಯಂತೆ. ಹಾಗೂ ಹೋಟೆಲ್‌ಗಳಲ್ಲಿ ಒಂಟಿಯಾಗಿ ಇರುವವರಿಗೆ ಜಿಎಸ್‌ಟಿಯಿಂದ ವಿಮುಕ್ತಿ ನೀಡಲಾಗಿದೆ.

BIG NEWS: ರಾಜ್ಯದ 9 ಜಿಲ್ಲೆಗಳು ಲಾಕ್‌ ಡೌನ್ -‌ ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ಮಿಕ್ಕೆಲ್ಲವು ‌ʼಬಂದ್ʼ

Posted: 22 Mar 2020 02:54 AM PDT

ಕೊರೋನಾ ಸೋಂಕು ವ್ಯಾಪಿಸಿದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಕೊರೋನಾ ಸೋಂಕು ಕಾಣಿಸಿಕೊಂಡ ಬೆಂಗಳೂರು ಸೇರಿದಂತೆ ರಾಜ್ಯದ ಒಂಭತ್ತು ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲಿದ್ದು ನಾಳೆಯಿಂದ ಅಗತ್ಯ ವಸ್ತುಗಳು ಮಾತ್ರವೇ ಲಭ್ಯವಾಗುತ್ತವೆ.

ಹಾಲು, ಹೂವು, ಹಣ್ಣು, ತರಕಾರಿ, ಆಸ್ಪತ್ರೆ, ಮೆಡಿಕಲ್ ಶಾಪ್ ಓಪನ್ ಇರುತ್ತವೆ. ಆಂಬುಲೆನ್ಸ್, ಪೊಲೀಸ್ ಸೇವೆ, ನೀರು, ಇಂಧನ ಸೇವೆ ಲಭ್ಯ ಇರುತ್ತದೆ. ನಾಳೆಯಿಂದ 9 ಜಿಲ್ಲೆಗಳು ಲಾಕ್ ಡೌನ್ ಆದರೂ ಅಗತ್ಯ ವಸ್ತುಗಳ ಪೂರೈಕೆ, ಸೇವೆ ಇರಲಿದೆ.

ರಾಜ್ಯದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಗಳೂರು, ಬೆಳಗಾವಿ, ಕಲಬುರ್ಗಿ, ಕೊಡಗು, ಮೈಸೂರು, ಚಿಕ್ಕಬಳ್ಳಾಪುರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಲಾಗುವುದು.

ಕೊರೋನಾ ಪತ್ತೆಯಾದ ಬೆಂಗಳೂರು, ಮೈಸೂರು ಸೇರಿ ರಾಜ್ಯದ 6 ಜಿಲ್ಲೆ ನಾಳೆಯಿಂದ ಸಂಪೂರ್ಣ ಬಂದ್

Posted: 22 Mar 2020 02:34 AM PDT

ಕೊರೋನಾ ಸೋಂಕು ವ್ಯಾಪಿಸಿದ ಹಿನ್ನಲೆಯಲ್ಲಿ ರಾಜ್ಯದ 6 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲಾಗುವುದು. ಬೆಂಗಳೂರು, ಚಿಕ್ಕಬಳ್ಳಾಪುರ, ಮೈಸೂರು ಮೊದಲಾದ ಜಿಲ್ಲೆಗಳನ್ನು ಬಂದ್ ಮಾಡಲಾಗುವುದು.

ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರು ನಮ್ಮ ಮೆಟ್ರೋ ಸಂಚಾರವನ್ನು ಮಾರ್ಚ್ 31ರವರೆಗೆ ರದ್ದುಪಡಿಸಲಾಗಿದೆ.

ರಾಜ್ಯದ ಬೆಂಗಳೂರು, ಕಲಬುರ್ಗಿ, ಕೊಡಗು, ಮೈಸೂರು, ಚಿಕ್ಕಬಳ್ಳಾಪುರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಲಾಗುವುದು. ಬೆಂಗಳೂರು ಸೇರಿದಂತೆ ಆರು ಜಿಲ್ಲೆಗಳನ್ನು ಸಂಪೂರ್ಣ ಬಂದ್ ಆಗಲಿವೆ ಎಂದು ಹೇಳಲಾಗಿದೆ.

BIG BREAKING: ಬೆಂಗಳೂರು ಸೇರಿ ಆರು ಜಿಲ್ಲೆಗಳು ಲಾಕ್ ಡೌನ್

Posted: 22 Mar 2020 02:28 AM PDT

ಕರೊನಾ ತಡೆಗಟ್ಟುವ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಒಟ್ಟು ಆರು ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡಲಾಗಿದೆ.

ಬೆಂಗಳೂರು, ಕಲಬುರಗಿ, ಕೊಡಗು, ಮೈಸೂರು, ಧಾರವಾಡ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದ್ದು, ಗಮನೀಯ ಸಂಗತಿಯೆಂದರೆ ಈ ಜಿಲ್ಲೆಗಳಲ್ಲಿ ಕರೋನಾ ಪಾಸಿಟಿವ್ ಕೇಸ್ ಗಳು ವರದಿಯಾಗಿದ್ದವು.

ಕೈ ಮೀರಿದ ಕೊರೋನಾ: ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ, 75 ಜಿಲ್ಲೆ ಲಾಕ್ ಡೌನ್

Posted: 22 Mar 2020 02:26 AM PDT

ನವದೆಹಲಿ: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದ 75 ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಅಂತರ ರಾಜ್ಯ ಸಂಚಾರ ನಿರ್ಬಂಧಿಸಲು ಕೂಡ ಕ್ರಮಕೈಗೊಳ್ಳಲಾಗಿದೆ. ಕೊರೋನಾ ಸೋಂಕು ಹರಡುತ್ತಿಉರವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮಕೈಗೊಂಡಿದೆ. ಕೊರೋನಾ ಸೋಂಕು ವ್ಯಾಪಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಮೆಟ್ರೋ ಸಂಚಾರವನ್ನು ಕೂಡ ಬಂದ್ ಮಾಡಲಾಗುವುದು.

ಮಾರ್ಚ್ 31ರವರೆಗೆ ಮೆಟ್ರೋ ಸಂಚಾರ ಬಂದ್ ಮಾಡಲು ತೀರ್ಮಾನಿಸಲಾಗಿದ್ದು, ಇದರೊಂದಿಗೆ 75 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲಾಗುವುದು.

ಗೌರಿಬಿದನೂರಲ್ಲಿ ಕೊರೋನಾ ಸೋಂಕಿತ ವ್ಯಕ್ತಿ ನಮಾಜ್ ಮಾಡಿದ್ದ ಮಸೀದಿ ಬಂದ್, 19 ಮಂದಿ ಮೇಲೆ ನಿಗಾ

Posted: 22 Mar 2020 02:24 AM PDT

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನಲ್ಲಿ ಸೋಂಕಿತ ವ್ಯಕ್ತಿ ನಮಾಜ್ ಮಾಡಿದ್ದ ಮಸೀದಿ ಬಂದ್ ಮಾಡಲಾಗಿದೆ. ಗೌರಿಬಿದನೂರಿನ ವ್ಯಕ್ತಿಗೆ ಕೊರೋನಾ ಸೋಂಕು ತಗಲಿದ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿ ನಮಾಜ್ ಮಾಡಿದ್ದ ಮಸೀದಿಯನ್ನು ಬಂದ್ ಮಾಡಲಾಗಿದೆ. ನಗರಸಭೆ ಅಧಿಕಾರಿಗಳು ಮಸೀದಿಯನ್ನು ಬಂದ್ ಮಾಡಿಸಿದ್ದಾರೆ.

ಗೌರಿಬಿದನೂರಿನಲ್ಲಿ ಕರ್ಫ್ಯೂ ಉಲ್ಲಂಘಿಸಿ ಕಾರ್ಖಾನೆಗಳನ್ನು ಓಪನ್ ಮಾಡಲಾಗಿದೆ. ಕೈಗಾರಿಕಾ ಪ್ರದೇಶದಲ್ಲಿರುವ ಕೆಲವು ಕಾರ್ಖಾನೆಗಳನ್ನು ಓಪನ್ ಮಾಡಿ ಕೆಲಸ ನಿರ್ವಹಿಸಲಾಗುತ್ತಿದೆ. 144 ಸೆಕ್ಷನ್ ಕೂಡ ಉಲ್ಲಂಘಿಸಲಾಗಿದೆ ಎಂದು ಹೇಳಲಾಗಿದೆ.

ಗೌರಿಬಿದನೂರಿನ ವ್ಯಕ್ತಿಗೆ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ 19 ಜನರಿಗೆ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಆತನ ಸಂಪರ್ಕದಲ್ಲಿದ್ದ 19 ಜನರಿಂದ ಸೋಂಕು ಹರಡುವ ಸಾಧ್ಯತೆ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೋಮ್ ಕ್ವಾರಂಟೈನ್ ನಲ್ಲಿ ಇಡಲಾಗಿದೆ.

ಬಸ್ ಪ್ರಯಾಣಿಕರಿಗೆ ಮುಖ್ಯ ಮಾಹಿತಿ: ಮಾರ್ಚ್ 31 ರವರೆಗೆ ಹೊರ ರಾಜ್ಯಗಳಿಗೆ KSRTC ಬಂದ್

Posted: 22 Mar 2020 02:22 AM PDT

ಬೆಂಗಳೂರು: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮಾರ್ಚ್ 31ರವರೆಗೆ ಹೊರ ರಾಜ್ಯಗಳಿಗೆ ತೆರಳುವ ಕೆಎಸ್ಆರ್ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.

ರಾಜ್ಯದಿಂದ ತಮಿಳುನಾಡು, ಕೇರಳ, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹೊರ ರಾಜ್ಯಗಳಿಗೆ ತೆರಳುವ ಎಲ್ಲಾ ಕೆಎಸ್ಆರ್ಟಿಸಿ ಬಸ್ ಗಳನ್ನು ರದ್ದು ಮಾಡಲಾಗಿದೆ.

ಅದೇ ರೀತಿ, ಹೊರರಾಜ್ಯದ ಬಸ್ ಗಳನ್ನು ಕೂಡ ರಾಜ್ಯಕ್ಕೆ ಕಳುಹಿಸದಂತೆ ವಿವಿಧ ರಾಜ್ಯಗಳ ರಾಜ್ಯದ ಸಾರಿಗೆ ಸಂಸ್ಥೆಗಳಿಗೆ ಕೆಎಸ್ಆರ್ಟಿಸಿ ವತಿಯಿಂದ ಮನವಿ ಮಾಡಲಾಗಿದೆ. ಮಾರ್ಚ್ 31 ರ ವರೆಗೆ ಹೊರರಾಜ್ಯಗಳಿಗೆ ಕೆಎಸ್ಆರ್ಟಿಸಿ ಬಸ್ ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ.

ಕಾಯ್ದಿರಿಸಿದ ಟಿಕೆಟ್ ಕ್ಯಾನ್ಸಲ್ ಆದರೆ ಪೂರ್ಣ ಹಣ ವಾಪಾಸು: ರೈಲ್ವೇ ಇಲಾಖೆ

Posted: 22 Mar 2020 01:47 AM PDT

ದೇಶದಲ್ಲಿ ತನ್ನ ಕರಾಳ ಛಾಯೆಯನ್ನು ಮುಂದುವರಿಸುತ್ತಿರುವ ಕರೋನಾದಿಂದ ಜನರನ್ನು ತಪ್ಪಿಸಲು ಇದೀಗ ರೈಲ್ವೆ ಇಲಾಖೆ ಹಲವು ಟ್ರೈನ್ ಕ್ಯಾನ್ಸಲ್ ಮಾಡಿದೆ.

ಇದೀಗ ರದ್ದಾಗಿರುವ ರೈಲುಗಳಲ್ಲಿ ಈಗಾಗಲೇ ಕಾಯ್ದಿರಿಸಿದ ಟಿಕೆಟ್ ಹಾಗೂ ಸ್ವ‌ಇಚ್ಛೆಯಿಂದ ಟಿಕೆಟ್ ರದ್ದುಪಡಿಸುವ ಪ್ರಯಾಣಿಕರಿಗೆ ಶೇ.100ರಷ್ಟು ಹಣ ಹಿಂದಿರುಗಿಸಲಾಗುವುದು ಎಂದು ಇಲಾಖೆ ಹೇಳಿದೆ.

ಈ ಬಗ್ಗೆ ಶನಿವಾರ ಪ್ರಕಟಣೆ ಹೊರಡಿಸಿರುವ ರೈಲ್ವೇ ಇಲಾಖೆ, ಕರೋನಾ ಹಿನ್ನೆಲೆಯಲ್ಲಿ ಮಾ.21ರಿಂದ ಏ.15ರವರೆಗೆ ಕಾಯ್ದಿರಿಸಿದ ಟಿಕೆಟ್ ರದ್ದಿಗೆ ಪೂರ್ಣ‌ಪ್ರಮಾಣದಲ್ಲಿ ಹಣ ನೀಡಲಾಗುವುದು ಹಾಗೂ ಆನ್‌ಲೈನ್ ಬುಕ್ ಮಾಡಿರುವ ಪ್ರಯಾಣಿಕರಿಗೆ ಈ ಹಿಂದಿನಂತೆ ಹಣ ಜಮೆಯಾಗಲಿದೆ ಎಂದು ಸ್ಪಷ್ಟಪಡಿಸಿದೆ.

ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ಶನಿವಾರ ಮಧ್ಯರಾತ್ರಿಯಿಂದ ಭಾನುವಾರದ ತನಕ ಯಾವುದೇ ರೈಲು ಸಂಚಾರ ನಡೆಸುವುದಿಲ್ಲ. ಇದು ಗೂಡ್ಸ್ ಹಾಗೂ ಮೇಲ್ ಟ್ರೇನ್‌ಗಳಿಗೂ ಅನ್ವಯವಾಗಲಿದೆ ಎಂದಿದೆ.

ಬಿಗ್ ನ್ಯೂಸ್: ದೇಶಾದ್ಯಂತ ಮಾರ್ಚ್ 31 ರವರೆಗೆ ಎಲ್ಲಾ ರೈಲು ಸಂಚಾರ ಬಂದ್

Posted: 22 Mar 2020 01:46 AM PDT

ನವದೆಹಲಿ: ಮಾರ್ಚ್ 31 ರವರೆಗೆ ದೇಶಾದ್ಯಂತ ಎಲ್ಲ ರೈಲುಗಳ ಸಂಚಾರ ಬಂದ್ ಮಾಡುವಂತೆ ಭಾರತೀಯ ರೈಲ್ವೆ ಮಂಡಳಿ ಆದೇಶಿಸಿದೆ.

ಕೊರೋನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಿ ಭಾರತೀಯ ರೈಲ್ವೆ ಆದೇಶ ಹೊರಡಿಸಿದೆ. ಕೇವಲ ಗೂಡ್ಸ್ ರೈಲುಗಳ ಸಂಚಾರ ಮಾತ್ರ ಇರುತ್ತದೆ.

ಜೂನ್ 21 ರೊಳಗೆ ಟಿಕೆಟ್ ಬುಕಿಂಗ್ ಹಣವನ್ನು ಈಗಾಗಲೇ ಟಿಕೆಟ್ ಬುಕಿಂಗ್ ಮಾಡಿದವರಿಗೆ ವಾಪಸ್ ನೀಡಲಾಗುವುದು. ರೈಲ್ವೆಯಲ್ಲಿ ಕೆಲಸ ಮಾಡುವವರಿಗೆ ರಜೆ ನೀಡಿಲ್ಲ. ಶುಚಿತ್ವ ಕಾಪಾಡುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ.

ಊರಿಗೆ ಹೋಗಲು ವಾಹನ ಸಿಗಲಿಲ್ಲವೆಂದು ಬಸ್ ಅನ್ನೇ ಕದ್ದ ಭೂಪ…!

Posted: 22 Mar 2020 01:44 AM PDT

ತೆಲಂಗಾಣದಲ್ಲಿ ವ್ಯಕ್ತಿಯೊಬ್ಬ ತನ್ನ ಊರಿಗೆ ಹೋಗಲು ಯಾವುದೇ ವಾಹನ ಸಿಗಲಿಲ್ಲವೆಂದು ಬಸ್‌ ಅನ್ನೇ ಕದ್ದಿದ್ದಾನೆ. ಅದರಲ್ಲೂ ಪ್ರಯಾಣಿಕರಿರುವ ಬಸ್‌ ಅನ್ನೇ ಕದ್ದಿದ್ದಾನೆ.

ಕರಂಕೋಟೆ ಹಾಗೂ ಒಗಿಪುರ್ ಹಳ್ಳಿಗಳ ನಡುವೆ ಹೋಗುವ ಬಸ್‌ನಲ್ಲಿ ಈ ಘಟನೆ ನಡೆದಿದೆ. ಚಾಲಕ ಹಾಗೂ ನಿರ್ವಾಹಕ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಹೋಗಿ ಬರುವಷ್ಟರಲ್ಲಿ ಈ ಘಟನೆ ನಡೆದಿದೆ.

ನಂತರ ಪ್ರಯಾಣಿಕರೊಬ್ಬರು ಫೋನ್ ಮಾಡಿ ಬಸ್ ಎಲ್ಲಿದೆಯೆಂದು ಹೇಳಿದಾಗ ಕಳ್ಳತನ ಗೊತ್ತಾಗಿದೆ. ಅಷ್ಟೇ ಅಲ್ಲದೆ ಆ ವ್ಯಕ್ತಿ ಪ್ರಯಾಣಿಕರಿಂದ ಟಿಕೆಟ್ ಹಣ ಕೂಡ ವಸೂಲಿ ಮಾಡಿ ಹೋಗಿದ್ದಾನೆ. ಪೊಲೀಸರು ಆ ವ್ಯಕ್ತಿಯನ್ನು ಗುರುತಿಸಿದ್ದು ಇನ್ನೂ ಬಂಧಿಸಬೇಕಂತೆ.

ಶಾಕಿಂಗ್:‌ ವಿದೇಶಕ್ಕೆ ತೆರಳದ ಮಹಿಳೆಯಲ್ಲೂ ಕರೋನಾ ಸೋಂಕು

Posted: 22 Mar 2020 01:25 AM PDT

ಭಾರತದಲ್ಲಿ ಕಾಣಿಸಿಕೊಂಡಿರುವ ಬಹುತೇಕ ಕರೋನಾ ಪ್ರಕರಣದ ಹಿಂದೆ ಸೋಂಕಿತರು ವಿದೇಶ ಪ್ರವಾಸ ಮಾಡಿರುವ ಇತಿಹಾಸವಿದೆ. ಆದರೀಗ ಪುಣೆಯಲ್ಲಿ ವಿದೇಶಕ್ಕೆ ಹೋಗದಿದ್ದರೂ ಕರೋನಾ ಕಾಣಿಸಿಕೊಂಡಿದೆ.

ಹೌದು, ಪುಣೆಯ 40 ವರ್ಷದ ಮಹಿಳೆಯಲ್ಲಿ ಇದೀಗ ಕರೋನಾ ಕಾಣಿಸಿಕೊಂಡಿದ್ದು,‌ ಸ್ಥಳೀಯ ಭಾರತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಕರೋನಾ ‌ಇರುವುದು ಪತ್ತೆಯಾಗಿದೆ.

ಆದರೆ ಅವರು ಯಾವುದೇ ವಿದೇಶ ಪ್ರಯಾಣ ಕೈಗೊಂಡಿರಲಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ. ಆದರೆ ನವೀ ಮುಂಬೈನಲ್ಲಿ ಮಾ. 3ರಂದು ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ.

ಇದರೊಂದಿಗೆ ಎಚ್‌1ಎನ್1 ಸೋಂಕಿನ ಬಗ್ಗೆ ಪರೀಕ್ಷೆ ನಡೆಸಲು ಇದೀಗ ವಿವಿಧ ಪರೀಕ್ಷೆ ನಡೆಸಲಾಗಿದ್ದು, ರಾಷ್ಟ್ರೀಯ ಲ್ಯಾಬ್‌ಗೆ ರವಾನಿಸಲಾಗಿದ್ದು ಫಲಿತಾಂಶಕ್ಕಾಗಿ ಎದುರು ನೋಡಲಾಗುತ್ತಿದೆ‌.

ಇನ್ನು ವಿದೇಶಕ್ಕೆ ಹೋಗದಿದ್ದರೂ ಕರೋನಾ ಪತ್ತೆಯಾಗಿರುವುದರಿಂದ ಇದೀಗ ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಖೈದಿಯಂತೆ ಇಟ್ಟಿದ್ದಾರೆ: ಕನಿಕಾ ಅಳಲು

Posted: 22 Mar 2020 01:20 AM PDT

ಮುಂಬೈ ವಿಮಾನ ನಿಲ್ದಾಣದಿಂದ ತಪ್ಪಿಸಿಕೊಂಡು ಪಾರ್ಟಿ ಎಲ್ಲ ಮಾಡಿದ್ದಾರೆ ಎಂದು ಗಾಯಕಿ ಕನಿಕಾ ಕಪೂರ್ ಸಕತ್ ಟ್ರೋಲ್ ಆಗುತ್ತಿದ್ದಾರೆ. ಹಲವರು ಅವರ ನಡೆ ಟೀಕಿಸಿದ್ದು, ಅವರ ಮೇಲೆ ಉತ್ತರ ಪ್ರದೇಶ ಹಾಗೂ ಬಿಹಾರಿನಲ್ಲಿ ಎಫ್‌ಐಆರ್ ದಾಖಲಾಗಿವೆ.

ಆದರೆ ಕನಿಕಾ ಮಾತ್ರ ಎಲ್ಲ ಆರೋಪ ಅಲ್ಲಗಳೆದಿದ್ದು ತಾವು ಸರಿಯಾದ ತಪಾಸಣೆ ಹೊಂದಿಯೇ ಬಂದಿರುವುದಾಗಿ ಹೇಳಿದ್ದಾರೆ. ಇದೀಗ ಅವರಲ್ಲಿ ಕೊರೊನಾವೈರಸ್ ಇರುವುದು ಸಾಬೀತಾದಮೇಲೆ ಅವರನ್ನು ಆಸ್ಪತ್ರೆಯಲ್ಲಿ ಇಡಲಾಗಿದೆ.

ಇದೀಗ ಅವರು ಆಸ್ಪತ್ರೆಯಲ್ಲಿರುವ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮಗೆ ಸರಿಯಾದ ಶುಚಿಯಾದ ಆಹಾರ ನೀಡುತ್ತಿಲ್ಲವೆಂದಿದ್ದಾರೆ. ಮನೆಯ ಆಹಾರ ವಾಪಸ್ ಕಳಿಸಿದ್ದು ತಮ್ಮ ಕೊಠಡಿಯನ್ನು ಗಲೀಜಾಗಿ ಇಟ್ಟಿದ್ದಾರೆ ಎಂದಿದ್ದಾರೆ.

ಸೊಳ್ಳೆಯ ಕಾಟವೂ ಅಧಿಕವಂತೆ ಹಾಗೂ ಅವರಿಗೆ ಅಪರಾಧಿಯ ಹಾಗೆ ನೋಡಲಾಗುತ್ತಿದ್ದು ಆಸ್ಪತ್ರೆಯಲ್ಲಿಟ್ಟಿರುವುದು ಅವರಿಗೆ ಜೈಲಿನಲ್ಲಿ ಇಟ್ಟಹಾಗೆ ಆಗಿದೆ ಎಂದು ದೂರಿದ್ದಾರೆ.

ಬಿಗ್ ನ್ಯೂಸ್: ಜನತಾ ಕರ್ಫ್ಯೂ ಬೆನ್ನಲ್ಲೇ ʼಮೋದಿ ಸರ್ಕಾರʼದಿಂದ ಮತ್ತೊಂದು ಮಹತ್ವದ ನಿರ್ಧಾರ

Posted: 22 Mar 2020 12:33 AM PDT

ನವದೆಹಲಿ: ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಮಾರ್ಚ್ 31 ರವರೆಗೆ ರೈಲ್ವೆ ಸಂಚಾರ ಸ್ಥಗಿತಗೊಳಿಸಲು ರೈಲ್ವೆ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ದೇಶಾದ್ಯಂತ ರೈಲು ಸಂಚಾರವೂ ಲಾಕ್ ಡೌನ್ ಆಗುವ ಸಾಧ್ಯತೆ ಇದೆ. ಗೃಹ ಸಚಿವರೊಂದಿಗೆ ರೈಲ್ವೆ ಖಾತೆ ಸಚಿವರು ಸಂಜೆ 5.30 ಕ್ಕೆ ಮಹತ್ವದ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಮಾರ್ಚ್ 31 ರವರೆಗೆ ರೈಲು ಸಂಚಾರವನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಕೊರೋನಾ ತಡೆ ಉದ್ದೇಶದಿಂದ ಭಾನುವಾರ ಜನತಾ ಕರ್ಫ್ಯೂ ಜಾರಿಯಲ್ಲಿದ್ದು, ಸೋಂಕು ತಡೆಯುವ ನಿಟ್ಟಿನಲ್ಲಿ ಇಂದಿನ ಬೆಳವಣಿಗೆ ಗಮನಿಸಿ ರೈಲು ಸಂಚಾರ ಬಂದ್ ಮಾಡುವ ಜೊತೆಗೆ ಮಹಾನಗರಗಳು ಸೇರಿ ದೇಶಾದ್ಯಂತ ಲಾಕ್ ಡೌನ್ ಮಾಡುವ ಬಗ್ಗೆಯೂ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ದೇಶದ ಎಲ್ಲಾ ಗಡಿ ಬಂದ್ ಮಾಡಿ ಸೋಂಕು ತಡೆಗೆ ಕ್ರಮಕೈಗೊಳ್ಳಲಾಗಿದೆ. ಸೋಂಕಿತರ ಮೇಲೆ ನಿಗಾ ವಹಿಸಲಾಗಿದೆ.

ಜನತಾ ಕರ್ಫ್ಯೂ: ಮನೆಯಲ್ಲಿರುವವರಿಗೆ ಮೋದಿ ಸಲಹೆ

Posted: 22 Mar 2020 12:22 AM PDT

ಜನತಾ ಕರ್ಫ್ಯೂ ದಿನ ಕುಟುಂಬದವರಿಗೆ ಸಮಯ ನೀಡಿ. ಮನೆಯಲ್ಲೇ ಇದ್ದು ಟಿವಿ ವೀಕ್ಷಣೆ ಮಾಡಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಒಳ್ಳೆಯ ಊಟ ಸೇವಿಸಿ ಮನೆಯವರ ಜೊತೆ ಸಮಯ ಕಳೆಯಿರಿ ಎಂದು ಟ್ವೀಟ್ ಮೂಲಕ ದೇಶದ ಜನತೆಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಕೊರೋನಾ ವೈರಸ್ ತಡೆ ಉದ್ದೇಶದಿಂದ ಇಂದು ದೇಶಾದ್ಯಂತ ಜನತಾ ಕರ್ಫ್ಯೂಗೆ ಮೋದಿ ಕರೆ ನೀಡಿದ್ದು ದೇಶಾದ್ಯಂತ ಜನ ಮನೆಯಲ್ಲಿ ಉಳಿದುಕೊಂಡಿದ್ದಾರೆ. ದೇಶದ 100 ಕೋಟಿಗೂ ಅಧಿಕ ಜನ ಮನೆಯಲ್ಲೇ ಉಳಿದುಕೊಂಡಿದ್ದು, ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.

ಕಿಟಕಿ ಬಳಿ ನಿಂತು ದಾಂಪತ್ಯಕ್ಕೆ ಕಾಲಿಟ್ಟ ಜೋಡಿ

Posted: 22 Mar 2020 12:21 AM PDT

कोरोना संकट: खिड़की पर खड़े होकर कपल ने रचाई शादी, Video वायरल

ಕರೋನಾ ವೈರಸ್ ಸೋಂಕಿನ ಹಿನ್ನಲೆಯಲ್ಲಿ ಇಡೀ ವಿಶ್ವದಾದ್ಯಂತ ಭಯ ಆವರಿಸಿದೆ. ಅನೇಕ ನಗರಗಳು ಲಾಕ್ ಡೌನ್ ಘೋಷಣೆ ಮಾಡಿವೆ. ಈ ಮಧ್ಯೆ ಅನೇಕ ಮದುವೆಗಳನ್ನು ಮುಂದೂಡಲಾಗಿದೆ. ಕೆಲವರು ಆಪ್ತರ ಮಧ್ಯೆ ಸರಳವಾಗಿ ಮದುವೆಯಾಗ್ತಿದ್ದಾರೆ.

ಸ್ಪೇನ್ ನಲ್ಲಿಯೂ ಕರೋನಾ ಸೋಂಕಿನ ಹಿನ್ನಲೆಯಲ್ಲಿ ಅನೇಕ ಕಡೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಸ್ಪೇನ್‌ನಲ್ಲಿ 25 ಸಾವಿರಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದರೆ, 1300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಮಧ್ಯೆ ಸ್ಪೇನ್‌ನ ಆಲ್ಬಾ ಡೆಜ್ ಮತ್ತು ಡೇನಿಯಲ್ ಕ್ಯಾಮಿನೊ ಸರಳವಾಗಿ ಮದುವೆಯಾಗಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ಅವರು ತಮ್ಮ ಅಪಾರ್ಟ್‌ಮೆಂಟ್‌ನ ಕಿಟಕಿಯಿಂದ ಇಣುಕಿ ನೋಡುವ ಮೂಲಕ ಶನಿವಾರ ವಿವಾಹವಾದರು. ದಂಪತಿ ವಿವಾಹದ ಸಮಯದಲ್ಲಿ ನೆರೆಹೊರೆಯವರು ಸಹ ತಮ್ಮ ಕಿಟಕಿಗಳು ಮತ್ತು ಬಾಲ್ಕನಿಗಳಲ್ಲಿ ನಿಂತಿದ್ದರು. ವಿವಾಹದ ದಿನಾಂಕ ಮೊದಲೇ ನಿಗದಿಯಾಗಿತ್ತು. ಆದ್ರೆ ಲಾಕ್ ಡೌನ್ ಹಿನ್ನಲೆಯಲ್ಲಿ ಮನೆಯಲ್ಲೇ ಮದುವೆಯಾಗಬೇಕಾಯ್ತು.

 

ಶಾಕಿಂಗ್ ನ್ಯೂಸ್: ದುಬೈನಿಂದ ಬಂದ 195 ಕನ್ನಡಿಗರ ಪೈಕಿ 6 ಮಂದಿಯಲ್ಲಿ ಸೋಂಕು ಪತ್ತೆ

Posted: 22 Mar 2020 12:19 AM PDT

ಬೆಂಗಳೂರು: ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈನಿಂದ ಬಂದವರಲ್ಲಿ ಆರು ಜನರಲ್ಲಿ ಕೋರೋನಾ ವೈರಸ್ ಲಕ್ಷಣವಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ಸೋಂಕಿತ ಲಕ್ಷಣವಿರುವ ಆರು ಮಂದಿಯನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಅವರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಇಂದು ದುಬೈನಿಂದ 195 ಕನ್ನಡಿಗರನ್ನು ಕರೆದುಕೊಂಡು ಬರಲಾಗಿದ್ದು, ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ವೇಳೆ 6 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಶ್ರೀರಾಮುಲು ಹೇಳಿದ್ದಾರೆ.

`ನಾನು ಕರೋನಾ ಪಾಸಿಟಿವ್’ ವಿಡಿಯೋ ಮಾಡಿದ ವ್ಯಕ್ತಿ ಅಂದರ್

Posted: 21 Mar 2020 11:50 PM PDT

ಕರೋನಾ ದೇಶಾದ್ಯಂತ ಹಾನಿಯನ್ನುಂಟು ಮಾಡುತ್ತಿದೆ. ಕರೋನಾ ವೈರಸ್ ಬಗ್ಗೆ ಇಡೀ ದೇಶ ಎಚ್ಚರದಲ್ಲಿದೆ. ಜನರಲ್ಲಿ ಭಯ ಮನೆ ಮಾಡಿದೆ. ಈ ಮಧ್ಯೆ ಟಿಕ್ ಟಾಕ್ ನಲ್ಲಿ ನನಗೆ ಕರೋನಾ ಇದೆ ಎಂದಿರುವ ಯುವಕನನ್ನು ಪಂಜಾಬ್  ಸಂಗ್ರೂರ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಯುವಕ ಟಿಕ್ ಟಾಕ್‌ನಲ್ಲಿ ವಿಡಿಯೋ ಮಾಡಿದ್ದ. ಅದರಲ್ಲಿ ನಾನು ಎಂದೂ ಸೋತಿರಲಿಲ್ಲ. ಚೀನೀ ಕಾಯಿಲೆಯಿಂದ ನಾನು ಸೋಲಲ್ಪಟ್ಟಿದ್ದೇನೆ. ಜೀವಂತವಾಗಿದ್ದರೆ  ಮತ್ತೆ ವೀಡಿಯೊ ಮಾಡುತ್ತೇನೆ. ನನ್ನ ಜೀವನದ ಸುರಕ್ಷತೆಗಾಗಿ ಪ್ರಾರ್ಥಿಸಿ ಎಂಬ ವಿಡಿಯೋ ಹಂಚಿಕೊಂಡಿದ್ದಾನೆ.

ಟಿಕ್ ಟಾಕ್ ವಿಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಸೂಕ್ತ ಕ್ರಮಕೈಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿ ವ್ಯಕ್ತಿಯನ್ನು ಬಂಧಿಸಿದ್ದಾರೆ. ಟಿಕ್ ಟಾಕ್ ಮಾಡಿದ ವ್ಯಕ್ತಿಗೆ ಕರೋನಾ ಸೋಂಕು ಕಾಣಿಸಿಕೊಂಡಿಲ್ಲವೆಂದು ಪೊಲೀಸರು ಹೇಳಿದ್ದಾರೆ.

No comments:

Post a Comment

Gameforumer QR Scan

Gameforumer QR Scan
Gameforumer QR Scan