Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Tuesday, February 25, 2020

Kannada News | Karnataka News | India News

Kannada News | Karnataka News | India News


ಯಡಿಯೂರಪ್ಪ ಪ್ರಶ್ನಾತೀತ ನಾಯಕ, ಸೂಪರ್ ಸಿಎಂ ಯಾರೂ ಇಲ್ಲ

Posted: 25 Feb 2020 07:01 AM PST

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಶ್ನಾತೀತ ನಾಯಕ ಎಂದು ವಸತಿ ಇಲಾಖೆ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಇರುವಾಗ ಯಾರು ಸೂಪರ್ ಸಿಎಂ ಇಲ್ಲ. ಉತ್ತರಾಧಿಕಾರಿಯೂ ಇಲ್ಲ, ಉತ್ತಾರಾಧಿಕಾರಿಗಳೂ ಇಲ್ಲ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತದೆ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಮುಂದಿನ ಮೂರು ವರ್ಷಗಳ ಕಾಲ ಅಧಿಕಾರ ಮುಂದುವರೆಸಲಿದ್ದಾರೆ. ಅವರು ಅವರ ಕೆಲಸವನ್ನು ಮಾಡುತ್ತಾರೆ. ಬಿಜೆಪಿ ಮೇಧಾವಿಗಳ ಕೂಟ. ರಾಷ್ಟ್ರೀಯ ಪಕ್ಷವಾಗಿದೆ. ಯಡಿಯೂರಪ್ಪ ಮುಂದಿನ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ. ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿದ್ದಾರೆ. ಯಾರೂ ಸೂಪರ್ ಸಿಎಂ ಇಲ್ಲ ಎಂದು ತಿಳಿಸಿದ್ದಾರೆ.

ಜೆಡಿಎಸ್ ಅಧಿಕಾರಕ್ಕೆ, ಕುಮಾರಸ್ವಾಮಿಗೆ ಚುನಾವಣಾ ಚತುರ ಸಾಥ್

Posted: 25 Feb 2020 07:00 AM PST

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯೋನ್ಮುಖವಾಗಿರುವ ಪಕ್ಷದ ನಾಯಕ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಚುನಾವಣೆ ಚತುರ ಪ್ರಶಾಂತ್ ಕಿಶೋರ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.

2023 ರ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಪ್ರಶಾಂತ್ ಕಿಶೋರ್ ಸಾಥ್ ನೀಡಲಿದ್ದಾರೆ. ಬಿಹಾರ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಮ್ಯಾಜಿಕ್ ಮಾಡಿರುವ ಪ್ರಶಾಂತ್ ಕಿಶೋರ್ ಅವರ ಯಶಸ್ಸಿನ ಕಾರ್ಯತಂತ್ರ ಬಳಸಿಕೊಳ್ಳಲು ಜೆಡಿಎಸ್ ಮುಂದಾಗಿದೆ.

ಕುಮಾರಸ್ವಾಮಿ ಈಗಾಗಲೇ ಪ್ರಾಥಮಿಕ ಹಂತದ ಮಾತುಕತೆ ನಡೆಸಿದ್ದು ಮುಂದಿನ ದಿನಗಳಲ್ಲಿ ಪ್ರಶಾಂತ್ ಕಿಶೋರ್ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಬಿಗ್ ನ್ಯೂಸ್: ಒಂದೇ ದಿನ 1200 ರೂಪಾಯಿ ಕುಸಿದ ಚಿನ್ನದ ದರ

Posted: 25 Feb 2020 06:59 AM PST

ನವದೆಹಲಿ: ಕಳೆದ ವಾರದಿಂದ ಏರುಗತಿಯಲ್ಲಿದ್ದ ಚಿನ್ನದ ಬೆಲೆ ಇಳಿಕೆಯಾಗಿದೆ. ಸೋಮವಾರ ಪ್ರತಿ 10 ಗ್ರಾಂ ಚಿನ್ನದ ದರ 1200 ರೂಪಾಯಿ ಕಡಿಮೆಯಾಗಿದ್ದು, 42,371 ರೂಪಾಯಿಗೆ ಮಾರಾಟವಾಗಿದೆ.

ಕಳೆದ 5 ದಿನಗಳ ಅವಧಿಯಲ್ಲಿ ಇದು ಕಡಿಮೆ ಬೆಲೆಯಾಗಿದೆ. ಸಾರ್ವಕಾಲಿಕ ಗರಿಷ್ಠ ದರ ದಾಖಲಿಸಿದ ಚಿನ್ನದ ಬೆಲೆ 43,788 ರೂಪಾಯಿಗೆ ತಲುಪಿತ್ತು. ಸೋಮವಾರ 10 ಗ್ರಾಂ ಚಿನ್ನದ ದರ 1200 ರೂಪಾಯಿ ಕಡಿಮೆಯಾಗಿದೆ. ಅದೇ ರೀತಿ ಬೆಳ್ಳಿ ಬೆಲೆ ಕೂಡ ಕಡಿಮೆಯಾಗಿದ್ದು ಪ್ರತಿ ಕೆಜಿಗೆ 48,049 ರೂಪಾಯಿಗೆ ಮಾರಾಟವಾಗಿದೆ.

ಅರಣ್ಯ ಸಚಿವ ಆನಂದ್ ಸಿಂಗ್ ಗೆ ಗುಡ್ ನ್ಯೂಸ್

Posted: 25 Feb 2020 06:58 AM PST

ಬೆಂಗಳೂರು: ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ಧದ ಪಿಐಎಲ್ ವಜಾಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.

ಆನಂದ್ ಸಿಂಗ್ ಅವರ ಅರಣ್ಯ ಖಾತೆ ರದ್ದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿದಾರ ವಿಜಯಕುಮಾರ್ ವಿಚಾರಣೆಗೆ ಗೈರು ಹಾಜರಾಗಿದ್ದರು. ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಲು ಅವರು ಕೋರಿದ್ದರು. ಅರ್ಜಿದಾರರ ಕೋರಿಕೆ ಕ್ರಮಬದ್ಧವಲ್ಲದ ಕಾರಣ ಪಿಐಎಲ್ ವಜಾ ಮಾಡಲಾಗಿದೆ ಎಂದು ಹೇಳಲಾಗಿದೆ.

ಇನ್ನು ಆನಂದ್ ಸಿಂಗ್ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ ಕೇಳಿ ಬಂದಿದ್ದು, ಅರಣ್ಯ ಇಲಾಖೆಯಲ್ಲಿ ಅವರ ವಿರುದ್ಧ ಪ್ರಕರಣಗಳಿವೆ ಎಂದು ಆರೋಪಿಸಿದ್ದ ವಿರೋಧ ಪಕ್ಷಗಳಿಂದ ಅವರಿಗೆ ಅರಣ್ಯ ಖಾತೆ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು.

ಬಿಗ್ ನ್ಯೂಸ್: ನಟ ರಕ್ಷಿತ್ ಶೆಟ್ಟಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

Posted: 25 Feb 2020 06:39 AM PST

ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೆ ಹೈಕೋರ್ಟ್ ಆದೇಶಿಸಿದೆ. ಲಹರಿ ರೆಕಾರ್ಡಿಂಗ್ ಕಂಪನಿ ದಾಖಲಿಸಿದ್ದ ಪ್ರಕರಣದಲ್ಲಿ ಜಾಮೀನುರಹಿತ ವಾರೆಂಟ್ ಜಾರಿ ಮಾಡಲಾಗಿದೆ.

ಕಾಪಿರೈಟ್ ಉಲ್ಲಂಘನೆ ಆರೋಪದಡಿ ಬೆಂಗಳೂರಿನ 9ನೇ ಎಸಿಎಂಎಂ ಕೋರ್ಟ್ ನಲ್ಲಿ ಲಹರಿ ಕಂಪನಿಯಿಂದ ಖಾಸಗಿ ದೂರು ದಾಖಲಿಸಲಾಗಿತ್ತು. ರಕ್ಷಿತ್ ಶೆಟ್ಟಿ ವಿರುದ್ಧ ದೂರು ನೀಡಲಾಗಿದ್ದು ಸಮನ್ಸ್ ನೀಡಿದ್ದರೂ ಗೈರು ಹಾಜರಾದ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲಾಗಿದೆ. ಪರಮ್ಯಾ ಸ್ಟುಡಿಯೋ, ರಕ್ಷಿತ್ ಶೆಟ್ಟಿ, ಅಜನೀಶ್ ಅವರಿಗೆ ವಾರೆಂಟ್ ಜಾರಿ ಮಾಡಲಾಗಿದೆ ಎಂದು ಹೇಳಲಾಗಿದೆ.

ಬಸ್ ಪ್ರಯಾಣಿಕರಿಗೆ ಬಿಗ್ ಶಾಕ್: ಮಧ್ಯರಾತ್ರಿಯಿಂದಲೇ ಪ್ರಯಾಣ ದರ ಏರಿಕೆ

Posted: 25 Feb 2020 06:36 AM PST

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಏರಿಕೆ ಮಾಡಲಾಗಿದೆ. ಶೇಕಡ 12 ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ.

ಬಿಎಂಟಿಸಿ ಹೊರತುಪಡಿಸಿ ಈಶಾನ್ಯ ಕರ್ನಾಟಕ, ವಾಯುವ್ಯ ಕರ್ನಾಟಕ, ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಪ್ರಯಾಣ ದರ ಏರಿಕೆ ಮಾಡಲಾಗಿದ್ದು ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಶೇಕಡ 12 ರಷ್ಟು ದರ ಏರಿಕೆಗೆ ಸರ್ಕಾರ ಅನುಮೋದನೆ ನೀಡಿದೆ.

ಸರ್ಕಾರಿ ಕೆಲಸ ಹುಡುಕುತ್ತಿರುವವರಿಗೊಂದು ಮಹತ್ವದ ಸುದ್ದಿ

Posted: 25 Feb 2020 05:28 AM PST

ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಯುವಕರಿಗೆ ಲೈಫ್ ಇನ್ಶುರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಉತ್ತಮ ಅವಕಾಶವನ್ನು ನೀಡಲಿದೆ. ಇತ್ತೀಚೆಗೆ ಎಲ್‌ಐಸಿ ಸಹಾಯಕ ಎಂಜಿನಿಯರ್ (ಎಇ) ಮತ್ತು ಎಎಒ ಹುದ್ದೆಗಳ ನೇಮಕ ಆಹ್ವಾನಿಸಿದೆ.

ಆಸಕ್ತ ಅಭ್ಯರ್ಥಿಗಳು licindia.in ವೆಬ್ಸೈಟ್ ಗೆ ಹೋಗಿ ಇದಕ್ಕೆ ಸಂಬಂಧಿಸಿದ ಅರ್ಜಿ ಭರ್ತಿ ಮಾಡಬೇಕು. ಖಾಲಿ ಇರುವ ಸಹಾಯಕ ಎಂಜಿನಿಯರ್ ಮತ್ತು ಸಹಾಯಕ ಆಡಳಿತಾಧಿಕಾರಿಗಳ 168 ಹುದ್ದೆಗಳಿಗೆ ನೇಮಕ ನಡೆಯಲಿದೆ. ಪರೀಕ್ಷೆ, ಶೈಕ್ಷಣಿಕ ಅರ್ಹತೆ, ಸಂಬಳ, ವಯಸ್ಸಿನ ಮಿತಿ ಸೇರಿದಂತೆ ಎಲ್ಲ ಮಾಹಿತಿ ವೆಬ್ಸೈಟ್ ನಲ್ಲಿ ಲಭ್ಯವಿದೆ.

ಅರ್ಜಿ ಸಲ್ಲಿಸಲು ಮಾರ್ಚ್ 15 ಕೊನೆ ದಿನ. ಪರೀಕ್ಷೆಗೆ ಅಡ್ಮಿಟ್ ಕಾರ್ಡ್ ಗಳನ್ನು ಮಾರ್ಚ್ 27 ರಿಂದ ಏಪ್ರಿಲ್ 4 ರವರೆಗೆ ನೀಡಲಾಗುವುದು. ಪ್ರಾಥಮಿಕ ಪರೀಕ್ಷೆ ಏಪ್ರಿಲ್ 4 ರಂದು ನಡೆಯಲಿದೆ. ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಅಂತಿಮ ಆಯ್ಕೆ ನಡೆಯಲಿದೆ.

 

ಪಾಕ್ ಏಜೆಂಟ್ ಎಂದು ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ನಿಂದಿಸಿದ ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಕಾಂಗ್ರೆಸ್ ಆಕ್ರೋಶ

Posted: 25 Feb 2020 05:24 AM PST

ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಅವರನ್ನು ಪಾಕಿಸ್ತಾನದ ಏಜೆಂಟ್, ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ವಿಜಯಪುರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಟೀಕಿಸಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ನಾಡಿನ ಸಾಕ್ಷಿ ಪ್ರಜ್ಞೆ, ಅಪಾರ ಸಾಮಾಜಿಕ ಕಳಕಳಿಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಬಗ್ಗೆ ಬಸವನಗೌಡ ಪಾಟೀಲ್ ಯತ್ನಾಳ್ ಅತ್ಯಂತ ಕೀಳು ಮಟ್ಟದ ಹೇಳಿಕೆ ನೀಡಿರುವುದು ಖಂಡನೀಯ ಮತ್ತು ಅಕ್ಷಮ್ಯವಾಗಿದೆ. ಕೋಮುವಾದದ ವಿಷ ತಲೆಗೇರಿರುವ ಅವರ ರಾಜೀನಾಮೆಯನ್ನು ಬಿಜೆಪಿ ಪಡೆಯಬೇಕು. ದೊರೆಸ್ವಾಮಿಯವರ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಯತ್ನಾಳ್ ಹೇಳಿಕೆಯನ್ನು ಖಂಡಿಸಿದ್ದು, ಯತ್ನಾಳ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಯವರೇ ದೊರೆಸ್ವಾಮಿ ಅವರನ್ನು ನಿಂದಿಸಿ ಕೀಳಾಗಿ ಮಾತನಾಡಿದ ಯತ್ನಾಳ್ ವಿರುದ್ಧ ಕ್ರಮಕೈಗೊಂಡು ಬಾಯಿ ಮುಚ್ಚಿಸಿ. ಇಲ್ಲವಾದರೆ ಅವರ ಅಭಿಪ್ರಾಯ ನಿಮ್ಮ ಸರ್ಕಾರದ ಅಭಿಪ್ರಾಯ ಎಂದು ಒಪ್ಪಿಕೊಳ್ಳಿ. ಒಬ್ಬರಾದ ಮೇಲೆ ಒಬ್ಬರಂತೆ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ರಾಜ್ಯದ ಬಿಜೆಪಿ ನಾಯಕರ ನಾಲಿಗೆಗೆ ತಕ್ಷಣ ಕಡಿವಾಣ ಹಾಕದಿದ್ದರೆ ಅನಾಹುತ ಕಾದಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮೋದಿ ಜೊತೆ ದೆಹಲಿ ಗಲಭೆ, ಸಿಎಎ ಬಗ್ಗೆ ಚರ್ಚೆ ನಡೆಸಿಲ್ಲ: ಪಾಕ್ ಭಯೋತ್ಪಾದನೆ ಬಗ್ಗೆ ಚರ್ಚೆ

Posted: 25 Feb 2020 04:53 AM PST

ದೆಹಲಿಯಲ್ಲಿ ನಡೆದ ಗಲಭೆ ಭಾರತದ ಆಂತರಿಕ ವಿಚಾರವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ಚರ್ಚೆ ನಡೆಸಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಭಯೋತ್ಪಾದನೆ ಬಗ್ಗೆ ಚರ್ಚೆ ಮಾಡಿದ್ದೇವೆ. ದೆಹಲಿಯಲ್ಲಿ ನಡೆದ ಗಲಭೆ ಭಾರತದ ಆಂತರಿಕ ವಿಚಾರವಾಗಿದೆ. ಭಾರತದ ಆಂತರಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ತಿಳಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಪ್ರಧಾನಿ ಮೋದಿಯವರೊಂದಿಗೆ ಚರ್ಚೆ ನಡೆಸಿಲ್ಲ. ಪಾಕಿಸ್ತಾನದ ಭಯೋತ್ಪಾದನೆ ಬಗ್ಗೆ ಚರ್ಚೆ ಮಾಡಲಾಗಿದೆ. ಕಾಶ್ಮೀರ ವಿಚಾರದಲ್ಲಿ ಅಗತ್ಯವಿದ್ದರೆ ಮಧ್ಯಸ್ಥಿಕೆ ವಹಿಸುತ್ತೇವೆ. ಪ್ರಧಾನಿ ಮೋದಿ ಧಾರ್ಮಿಕ ಸ್ವಾತಂತ್ರ್ಯದ ಪರವಾಗಿದ್ದಾರೆ. ಭಾರತದಲ್ಲಿ 20 ಕೋಟಿ ಮುಸಲ್ಮಾನರು ಇದ್ದಾರೆ. ಮುಸ್ಲಿಮರ ಪರವಾಗಿ ಇದ್ದೇವೆ ಎಂದು ಮೋದಿ ಹೇಳಿದ್ದಾರೆ. ಭಾರತದ ಆಂತರಿಕ ವಿಚಾರಗಳ ಬಗ್ಗೆ ಚರ್ಚೆ ಇಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ಕರ್ನಾಟಕ ಬಂದ್ ಗೆ ಕರೆ ಕೊಟ್ಟವರಿಗೆ ಸಂಕಷ್ಟ

Posted: 25 Feb 2020 04:51 AM PST

ಬೆಂಗಳೂರು: ಕರ್ನಾಟಕ ಬಂದ್ ಗೆ ಕರೆ ಕೊಟ್ಟವರಿಗೆ ಸಂಕಷ್ಟ ಎದುರಾಗಿದೆ. ನಷ್ಟವನ್ನುಂಟು ಮಾಡಿದವರಿಂದ ಪರಿಹಾರ ವಸೂಲಿಗೆ ಹೈಕೋರ್ಟ್ ಆದೇಶಿಸಿದ್ದು, ನಷ್ಟ ಅಂದಾಜಿಗೆ ಕ್ಲೇಮ್ ಕಮಿಷನರ್ ನೇಮಕ ಮಾಡಲಾಗಿದೆ.

ನಷ್ಟ ಅಂದಾಜಿಸಿ ಹೊಣೆಗಾರಿಕೆ ನಿಗದಿಗೆ ಆದೇಶಿಸಲಾಗಿದೆ. ವಾಟಾಳ್ ನಾಗರಾಜ್ 2018 ರಲ್ಲಿ ಬಂದ್ ಗೆ ಕರೆ ನೀಡಿದ್ದರು. ಜನವರಿ 25, ಏಪ್ರಿಲ್ 12, ಫೆಬ್ರವರಿ 14 ರಂದು ನಡೆದಿದ್ದ ಬಂದ್ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವುಂಟಾಗಿತ್ತು. ನಷ್ಟ ಅಂದಾಜಿಸಲು ನಿವೃತ್ತ ನ್ಯಾಯಮೂರ್ತಿ ಮಹಮ್ಮದ್ ಗೌಸ್ ಅವರನ್ನು ನೇಮಕ ಮಾಡಲಾಗಿದೆ.

ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ವೇಳೆಯೂ ಬಂದ್ ಮಾಡಲಾಗಿತ್ತು. ಸೆಪ್ಟೆಂಬರ್ 4 ರಿಂದ 11 ರವರೆಗೆ ಪ್ರತಿಭಟನೆ ನಡೆಸಲಾಗಿತ್ತು. ಬಂದ್, ಪ್ರತಿಭಟನೆ ಬಗ್ಗೆ ನಷ್ಟ ಅಂದಾಜಿಸಲು ನಿವೃತ್ತ ನ್ಯಾಯಾಧೀಶರ ನೇಮಕ ಮಾಡಲಾಗಿದೆ. 6 ವಾರದಲ್ಲಿ ನೇಮಿಸಿ ಮೂಲ ಸೌಕರ್ಯ ನೀಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿಂದ ನಿರ್ದೇಶನ ನೀಡಲಾಗಿದೆ.

ಪಡಿತರ ಚೀಟಿದಾರರಿಗೆ ಮಾಹಿತಿ: ರೇಷನ್ ಕಾರ್ಡ್ ಗೆ ಆಧಾರ್ ಜೋಡಣೆ

Posted: 25 Feb 2020 04:19 AM PST

ಬೆಂಗಳೂರು: ರೇಷನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಸಂಖ್ಯೆ ಜೋಡಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 10,94,160 ಅಂತ್ಯೋದಯ ಪಡಿತರ ಚೀಟಿ,. 1,15,98,234 ಬಿಪಿಎಲ್ ಪಡಿತರ ಚೀಟಿಗಳಿವೆ. ಕಳೆದ ಒಂದು ವರ್ಷದಲ್ಲಿ ಒಂದು ಲಕ್ಷ ಬಿಪಿಎಲ್ ಕಾರ್ಡ್ ಹಲವು ಕಾರಣಗಳಿಂದ ರದ್ದಾಗಿವೆ.

2.17 ಲಕ್ಷ ಬಿಪಿಎಲ್ ಕಾರ್ಡ್ ಗಳು, 1.15 ಲಕ್ಷ ಎಪಿಎಲ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲಾಗಿದೆ. ಎರಡು ತಿಂಗಳಲ್ಲಿ ಪಡಿತರ ಕಾರ್ಡು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಆನಂದ್ ಮಹೀಂದ್ರಾರಿಂದ ಇಂಟರೆಸ್ಟಿಂಗ್ ವಿಡಿಯೋ ಶೇರ್

Posted: 25 Feb 2020 04:19 AM PST

ಟ್ವಿಟರ್‌ನಲ್ಲಿ ಯಾವಾಗಲೂ ಏನಾದರೊಂದು ಇಂಟರೆಸ್ಟಿಂಗ್ ಅಥವಾ ಸ್ಪೂರ್ತಿದಾಯಕ ಪೋಸ್ಟ್‌ಗಳನ್ನು ಹಾಕುತ್ತಲೇ ಇರುವ ಉದ್ಯಮಿ ಆನಂದ್ ಮಹೀಂದ್ರಾ, ಈ ಬಾರಿಯೂ ಒಂದು ಉತ್ತಮ ಸಂದೇಶ ಇರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಉದ್ಯಾನದಲ್ಲಿರುವ ಜನರ ಗುಂಪೊಂದಕ್ಕೆ ಕವಿತೆಯೊಂದನ್ನು ಓದಿ ಹೇಳುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋ ಒಂದನ್ನು ಮಹೀಂದ್ರಾ ಶೇರ್‌ ಮಾಡಿದ್ದಾರೆ.

ಮುದ್ದಿನ ನಾಯಿಯೊಂದಿಗೆ ವಾಕಿಂಗ್‌ಗೆ ಹೋಗಿದ್ದ ಈ ವ್ಯಕ್ತಿ ಉದ್ಯಾನದಲ್ಲಿ ಸಿಕ್ಕಿದ ಮಂದಿಯೊಂದಿಗೆ ಚಿಲ್ ಮಾಡುತ್ತಾ ಅವರಿಗಾಗಿ ಕವಿತೆಯೊಂದನ್ನು ಓದಿ ಹೇಳಿದ್ದಾರೆ.

ಪಂಜಾಬಿ ಭಾಷೆಯಲ್ಲಿ ಮಾತನಾಡುತ್ತಿರುವ ಈ ವ್ಯಕ್ತಿ ಜೀವನದಲ್ಲಿ ಬರುವ ಸುಖ, ದುಃಖಗಳ ಕುರಿತಂತೆ ಮನೋಜ್ಞವಾಗಿ ಮಾತನಾಡಿದ್ದಾರೆ.

ಈ ವಿಡಿಯೋ ಭಾರತದ ಟೇಸ್ಟ್‌ ಏನೆಂದು ತೋರುತ್ತದೆ ಎಂದು ಮಹೀಂದ್ರಾ ಪೋಸ್ಟ್‌ನಲ್ಲಿ ತಿಳಿಸಿದ್ದು, “ನ್ಯೂಯಾರ್ಕ್ ಅಥವಾ ಲಂಡನ್‌ನಲ್ಲಿದ್ದರೂ ಸಹ ಭಾರತದಲ್ಲಿ ಸಿಗುವ ಟೇಸ್ಟ್‌ ನಿಮಗೆ ಮಿಸ್ ಆಗಲಿದೆ” ಎನ್ನುತ್ತಾರೆ.

ಯುವಕರಿಗೆ ಸ್ಪೂರ್ತಿ ಈ ಹೊಸ ಇಂಡಿಯನ್ ಐಡಾಲ್

Posted: 25 Feb 2020 04:17 AM PST

ದೇಶದ ಮೂಲೆ ಮೂಲೆಯಲ್ಲೂ ಅಪ್ರತಿಮ ಪ್ರತಿಭಾವಂತರಿದ್ದು, ಲೈಫ್‌ ಚೇಂಜಿಂಗ್‌ ಕ್ಷಣಕ್ಕಾಗಿ ಒಂದೇ ಒಂದು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.

ರೋನು ಮಂಡಲ್‌, ವೇಟ್ ಲಿಫ್ಟರ್‌ ಮೀರಾಬಾಯಿ ಚಾನು ಸೇರಿದಂತೆ ಅನೇಕ ಮಂದಿ ಈ ವಿಚಾರದಲ್ಲಿ ತಮ್ಮ ಹಿಂದೆ ದೊಡ್ಡ ಸ್ಪೂರ್ತಿದಾಯಕ ಕಥೆಗಳನ್ನೇ ಹೊಂದಿದ್ದಾರೆ.

ಇಂಥದ್ದೇ ಒಂದು ನಿದರ್ಶನದಲ್ಲಿ ಪಂಜಾಬ್‌ನ ಭಟಿಂಡಾದಲ್ಲಿ ಶೂ ಪಾಲಿಶ್ ಮಾಡುತ್ತಿದ್ದ ಯುವಕನೊಬ್ಬ ಸೋನಿ ಟಿವಿಯ ಇಂಡಿಯನ್ ಐಡಾಲ್ ಸೀಸನ್ 11ರ ವಿಜೇತನಾಗಿದ್ದಾನೆ.

ಈ ಜನಪ್ರಿಯ ರಿಯಾಲಿಟಿ ಶೋನಲ್ಲಿ ವಿಜೇತನಾದ ಸನ್ನಿ ಹಿಂದೂಸ್ತಾನಿ, 25 ಲಕ್ಷ ನಗದು ಬಹುಮಾನದೊಂದಿಗೆ ಟಿ-ಸೀರೀಸ್‌ನ ಮುಂಬರುವ ಪ್ರಾಜೆಕ್ಟ್‌ ಒಂದರ ಭಾಗವಾಗುವ ಅವಕಾಶ ಪಡೆದಿದ್ದಾನೆ.

ಆಡಿಶನ್‌ನಿಂದ ಹಿಡಿದು ಇಲ್ಲಿಯ ತನಕ ಆತನ ಪ್ರತಿಯೊಂದು ಶ್ರಮಕ್ಕೂ ನೆಟ್ಟಿಗರಿಂದ ಆನ್ಲೈನ್‌ನಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಾ ಬಂದಿದೆ.

ಶಾರ್ಕ್ ಬಾಯಿಂದ ಜಸ್ಟ್ ಮಿಸ್…!

Posted: 25 Feb 2020 04:15 AM PST

ದೊಡ್ಡ ಬೇಟೆಗಾರ ಜಾತಿಗೆ ಸೇರಿದ ಶಾರ್ಕ್‌ಗಳು ತಮ್ಮ ಬೇಟೆಯನ್ನು ಬರ್ಬರವಾಗಿ ಕೊಲೆ ಮಾಡುವುದಕ್ಕೆ ಹೆಸರಾಗಿವೆ. ಬಹಳ ಸೈಲೆಂಟಾಗಿ ಇದ್ದಕ್ಕಿದ್ದಂತೆ ದಾಳಿ ಮಾಡಬಲ್ಲ ಶಾರ್ಕ್‌ಗಳನ್ನು 'ಸೈಲೆಂಟ್ ಹಂಟರ್ಸ್' ಎಂದು ಕರೆಯಲಾಗುತ್ತದೆ.

ಶಾರ್ಕ್ ಬಾಯಿಗೆ ಸಿಕ್ಕಿಹಾಕಿಕೊಂಡು ಬದುಕಿ ಬರುವುದೆಂದರೆ ಬಹುತೇಕ ಅಸಾಧ್ಯವಾದ ಮಾತೇ. ಆದರೆ, ಕೆಲವು ಲಕ್ಕಿ ಜನರು ಇಂಥ ಸಾಹಸವನ್ನೂ ಮಾಡಿ ಬಂದಿದ್ದಾರೆ.

ಇವರಲ್ಲಿ ಒಬ್ಬರು ಜೆರ್ಮಯಾ ಸುಲ್ಲಿವನ್. ಮಾನವರು ಹಾಗೂ ಶಾರ್ಕ್‌ಗಳ ನಡುವೆ ಸಂಪರ್ಕ ಸಾಧಿಸುವ ಕೆಲವೇ ಕೆಲವು ತಜ್ಞರಲ್ಲಿ ಒಬ್ಬರಾದ ಇವರು, 1970ರಿಂದಲೂ 1000 ಬಾರಿ ಶಾರ್ಕ್‌ಗಳಿಂದ ಕಡಿತಕ್ಕೆ ಒಳಗಾಗಿ ಬದುಕಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಶಾರ್ಕ್‌‌ನೊಂದಿಗೆ ಸೆಣಸಿ ಗೆದ್ದು ಬಂದವರ ಸಾಲಿಗೆ ನ್ಯೂಜಿಲೆಂಡ್‌ ನ ನಿಕ್ ಮಿನೋಗ್ ಎಂಬುವವರು ಸೇರುತ್ತಾರೆ. ಆಕ್ಲೆಂಡ್ ಬಳಿಯ ತೀರದಲ್ಲಿ ಸರ್ಫಿಂಗ್‌ ಮಾಡುತ್ತಿದ್ದ ಮಿನೋಗ್‌ ಮೇಲೆ ದಾಳಿ ಮಾಡಿದ್ದ ಶಾರ್ಕ್ ಅವರ ಸರ್ಫ್ ಬೋರ್ಡ್‌‌ ಅನ್ನು ತನ್ನ ಬಾಯಿಂದ ಹಿಡಿದು ಎಳೆದಿದೆ. ಇದು ತನ್ನ ಜೀವನ್ಮರಣದ ಹೋರಾಟ ಎಂದು ಕೂಡಲೇ ಅರಿತ ಮಿಂಗೋ, ಶಾರ್ಕ್ ಕಣ್ಣಿಗೆ ಮೂರು ಗುದ್ದುಗಳನ್ನು ಕೊಟ್ಟು, ಅದರ ಬಾಯಿಗೆ ತುತ್ತಾಗುವುದಿಂದ ಬಚಾವಾಗಿದ್ದಾರೆ.

ವಿದ್ಯಾರ್ಥಿಗೆ ಅವಮಾನ ಮಾಡಿದ ಶಿಕ್ಷಕನನ್ನು ಮೆದುಳಿಲ್ಲದ ಮಂಗನೆಂದ ನಟ

Posted: 25 Feb 2020 03:03 AM PST

“ಮುಕ್ತವಾಗಿ ಮಾತನಾಡುವ ವೇಳೆ ಮಾತುಗಳು ಬಾರದೇ ಒದ್ದಾಡುತ್ತಿದ್ದ ನಾನು, ಈ ಸಮಸ್ಯೆಯಿಂದ ತೀರಾ 2012ರ ವರೆಗೂ ಬಳಲುತ್ತಿದ್ದೆ. ನಾನು ಸಿನೆಮಾ ಸ್ಟಾರ್‌ ಆದ ಸಾಕಷ್ಟು ದಿನಗಳ ಬಳಿಕವೂ ಈ ಸಮಸ್ಯೆ ಇತ್ತು.

ಪ್ರತಿನಿತ್ಯ ಕನಿಷ್ಠ ಒಂದು ಗಂಟೆಯ ಕಾಲ ಪ್ರಾಕ್ಟೀಸ್ ಮಾಡುವ ಮೂಲಕ ನನ್ನ ಮಾತುಗಾರಿಕೆಯ ಕಲೆಯನ್ನು ಸರಿಪಡಿಸಿಕೊಂಡೆ” ಎಂದು ಬಾಲಿವುಡ್‌ ನಟ ಹೃತಿಕ್ ರೋಶನ್ ಹಿಂದೊಮ್ಮೆ ಹೇಳಿದ್ದರು.

ಇತ್ತೀಚೆಗೆ, ಇಂಥದ್ದೇ ಒಂದು ಸಮಸ್ಯೆ ಇದ್ದ ಕಾಲೇಜು ವಿದ್ಯಾರ್ಥಿಯೊಬ್ಬ ಸಮಾರಂಭವೊಂದರಲ್ಲಿ ಮಾತನಾಡಲು ತಡಬಡಾಯಿಸುತ್ತಿದ್ದ ಕಾರಣಕ್ಕೆ ಆತನ ವಿರುದ್ಧ ಕಠಿಣ ಭಾಷೆಯನ್ನು ಪ್ರಯೋಗ ಮಾಡಿದ ಶಿಕ್ಷಕನನ್ನು ಹೃತಿಕ್ ಚೆನ್ನಾಗಿ ಬಯ್ದಿದ್ದಾರೆ.

“ಮಾತನಾಡಲು ಪರದಾಡುವುದರಿಂದ ಆತ ಮುಂದೆ ಬರುವುದನ್ನು ತಪ್ಪಿಸಲು ಆಗುವುದಿಲ್ಲ. ಅದು ಅವನ ತಪ್ಪಲ್ಲ, ಈ ಬಗ್ಗೆ ಅವನು ನಾಚಿಕೆ ಪಡುವ ಅಗತ್ಯವಿಲ್ಲ. ಆತನಿಗೆ ಅವಮಾನ ಮಾಡುವವರು ಮೆದುಳಿಲ್ಲದ ಮಂಗಗಳು” ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಹೃತಿಕ್.

View this post on Instagram

. Curiosity leads. . #LA #keepexploring

A post shared by Hrithik Roshan (@hrithikroshan) on

ಋತುಸ್ರಾವವಾಗಿದ್ದ ಮಹಿಳೆಯರಿಂದ ಅಡುಗೆ

Posted: 25 Feb 2020 03:01 AM PST

ಸ್ವಾಮಿ ಕೃಷ್ಣಸ್ವರೂಪ್ ಅವರು ಋತುಸ್ರಾವವಾಗುತ್ತಿರುವ ಮಹಿಳೆ ಅಡುಗೆ ಮಾಡಿದರೆ ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟುತ್ತಾರೆ ಎನ್ನುವ ವಿಡಿಯೋ ಬಹಳ ವಿವಾದ ಸೃಷ್ಟಿಸಿತ್ತು.

ಅವರ ಈ ಮೌಢ್ಯವನ್ನು ಮುರಿಯಲು ದೆಹಲಿಯಲ್ಲಿ ವಿಶಿಷ್ಟವಾದ ಕಾರ್ಯಕ್ರಮ ನಡೆಯಿತು.

ಸಚ್ಚಿ ಸಹೇಲಿ ಎನ್ನುವ ಸ್ವಯಂ ಸೇವಾ ಸಂಸ್ಥೆ ನಡೆಸುವ ಡಾ. ಸುರಭಿ ಸಿಂಗ್ ಆಯೋಜಿಸಿದ್ದ ಪೀರಿಯಡ್ ಫೆಸ್ಟ್ ಎನ್ನುವ ಕಾರ್ಯಕ್ರಮದಲ್ಲಿ 28 ಋತುಸ್ರಾವ ಹೊಂದುತ್ತಿರುವ ಮಹಿಳೆಯರು ಅಡುಗೆ ಮಾಡಿ ಬಡಿಸಿದ್ದು ಸುಮಾರು 500ಜನ ಅಲ್ಲಿ ಊಟ ಮಾಡಿದ್ದಾರೆ.

ಋತುಸ್ರಾವ ಒಂದು ನೈಸರ್ಗಿಕ ಕ್ರಿಯೆಯಾಗಿದ್ದು, ಅದರ ಬಗ್ಗೆ ಇರುವ ಮೌಢ್ಯವನ್ನು ಪ್ರತಿಭಟಿಸಲು ಈ ಕಾರ್ಯಕ್ರಮ ಆಯೋಜಿಸಿರುವುದಾಗಿ ಅವರು ಹೇಳಿದ್ದಾರೆ.

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಇದರಲ್ಲಿ ಭಾಗವಹಿಸಿದ್ದರು.

Its inspiring to see such a huge support!

Posted by सच्ची सहेली Sachhi Saheli on Saturday, February 22, 2020

20 ಸಾವಿರ ಬ್ಯಾಂಕ್ ಶಾಖೆಯಲ್ಲಿ ರೈತರಿಗೆ ಸಿಗಲಿದೆ 3 ಕೋಟಿ ಉಡುಗೊರೆ

Posted: 25 Feb 2020 02:58 AM PST

ದೇಶಾದ್ಯಂತದ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲು ಮೋದಿ ಸರ್ಕಾರ ಅಭಿಯಾನ ಶುರು ಮಾಡಿದೆ. ಇದರ ಅಡಿಯಲ್ಲಿ ಫೆಬ್ರವರಿ 29 ರಂದು ಯುಪಿ ಚಿತ್ರಕೂಟದಲ್ಲಿ ಒಂದು ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಪ್ರಧಾನ ಮಂತ್ರಿ ಸ್ವತಃ ಕಿಸಾನ್ ಯೋಜನೆಗಳ ಪ್ರಯೋಜನಗಳನ್ನು ರೈತರಿಗೆ ತಿಳಿಸಲಿದ್ದಾರೆ. ಅದೇ ದಿನ ದೇಶಾದ್ಯಂತ 20 ಸಾವಿರ ಬ್ಯಾಂಕ್ ಶಾಖೆಗಳಲ್ಲಿ ರೈತರಿಗೆ ಕೆಸಿಸಿ ಏಕಕಾಲದಲ್ಲಿ ಸಿಗಲಿದೆ.

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಬೇಕೆಂದು ಪ್ರಧಾನಿ ಮೋದಿ ಬಯಸುತ್ತಾರೆ ಎಂದು ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಇದರಿಂದ ರೈತರು ಸುಲಭವಾಗಿ ಬ್ಯಾಂಕುಗಳಿಂದ ಸಾಲ ಪಡೆಯಬಹುದು. ಮೋಸ ಇದ್ರಿಂದ ತಪ್ಪಲಿದೆ ಎಂದಿದ್ದಾರೆ. ಇದ್ರಡಿ ರೈತರು ಕೃಷಿಗೆ 3 ಲಕ್ಷ ರೂಪಾಯಿವರೆಗೆ ಸಾಲ ತೆಗೆದುಕೊಳ್ಳಬಹುದು. ಈ ಸಾಲವು ಶೇಕಡಾ 4ರ ಬಡ್ಡಿ ದರದಲ್ಲಿ ಲಭ್ಯವಿದೆ.

ಪ್ರಸ್ತುತ ದೇಶದಲ್ಲಿ 6.67 ಕೋಟಿ ಸಕ್ರಿಯ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳಿವೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಸುಮಾರು 3 ಕೋಟಿ ಫಲಾನುಭವಿಗಳು ಕೆಸಿಸಿ ಹೊಂದಿಲ್ಲ. ಬ್ಯಾಂಕುಗಳು ಈಗಾಗಲೇ ಪಿಎಂ ಕಿಸಾನ್ ಫಲಾನುಭವಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೊಂದಿರುವುದರಿಂದ, ರೈತರಿಗೆ ಕೆಸಿಸಿ ನೀಡುವಲ್ಲಿ ಬ್ಯಾಂಕುಗಳಿಗೆ ತೊಂದರೆಯಾಗುವುದಿಲ್ಲ ಎನ್ನಲಾಗಿದೆ.

 

ದೆಹಲಿ ಹಿಂಸಾಚಾರದಲ್ಲಿ ಸಾವನ್ನಪ್ಪಿದ ಹೆಡ್ ಕಾನ್ಸ್ಟೇಬಲ್ ಮಕ್ಕಳ ಪ್ರಶ್ನೆಗೆ ಇಲ್ಲ ಉತ್ತರ

Posted: 25 Feb 2020 02:38 AM PST

ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ  ಹೆಡ್ ಕಾನ್ಸ್ಟೇಬಲ್ ರತನ್ ಲಾಲ್ ಹುತಾತ್ಮರಾಗಿದ್ದಾರೆ. ಅವ್ರ ನಿಧನದ ಸುದ್ದಿ ಕೇಳ್ತಿದ್ದಂತೆ ಪತ್ನಿ ಪೂನಮ್ ಪ್ರಜ್ಞೆ ತಪ್ಪಿದ್ರು. 13 ವರ್ಷದ ಸಿದ್ಧಿ, 10 ವರ್ಷದ ಕನಕ ಮತ್ತು 8 ವರ್ಷದ ರಾಮ್ ನನ್ನು ರತನ್ ಅಗಲಿದ್ದಾರೆ.

ರತನ್ ನಿಧನದ ಸುದ್ದಿ ಕೇಳ್ತಿದ್ದಂತೆ ಮನೆ ಮುಂದೆ ಜನರು ನೆರೆದಿದ್ದರು. ಮಕ್ಕಳ ಕಣ್ಣಿನಲ್ಲಿದ್ದ ಪ್ರಶ್ನೆಗೆ ಯಾರೊಬ್ಬರೂ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಮಕ್ಕಳ ಕಣ್ಣುಗಳು ನಮ್ಮ ತಂದೆಯ ತಪ್ಪೇನು ಎಂಬ ಪ್ರಶ್ನೆ ಮಾಡ್ತಿತ್ತು. ರತನ್ ಪ್ರಾಮಾಣಿಕ ಕಾನ್ಸ್ಟೇಬಲ್ ಆಗಿದ್ದರು. ಯಾರ ಜೊತೆಯೂ ಜಗಳವೂ ಆಗಿರಲಿಲ್ಲ. ಆದ್ರೆ ಸೋಮವಾರ ಜನರ ಗುಂಪು ಅವ್ರನ್ನು ಸುತ್ತುವರೆದು ಹತ್ಯೆಗೈದಿದೆ.

ರಾಜಸ್ಥಾನದ ಸಿಕಾರ್ ಜಿಲ್ಲೆಯ ಫತೇಪುರ್ ತಿಹವಾಲಿ ಗ್ರಾಮದ ನಿವಾಸಿ ರತನ್, 1998 ರಲ್ಲಿ ದೆಹಲಿ ಪೊಲೀಸ್ ಇಲಾಖೆ ಸೇರಿದ್ದರು. 2004 ರಲ್ಲಿ ಜೈಪುರದ ಪೂನಂ ಅವರನ್ನು ವಿವಾಹವಾಗಿದ್ದರು.

 

ವಾವ್: 957 ರೂ.ಗೆ ಮಾಡಿ ವಿಮಾನ ಪ್ರಯಾಣ

Posted: 25 Feb 2020 02:36 AM PST

ಗೋ ಏರ್ ವಿಮಾನ ಪ್ರಯಾಣಿಕರಿಗೆ ವಿಶೇಷ ಕೊಡುಗೆಯನ್ನು ನೀಡ್ತಿದೆ. ಪ್ರಯಾಣಿಕರು ವಿಮಾನ ಪ್ರಯಾಣಕ್ಕೆ ಹೆಚ್ಚಿನ ಹಣ ಖರ್ಚು ಮಾಡ್ಬೇಕಾಗಿಲ್ಲ. ಕಂಪನಿ ‘ಗೋ ಏರ್ ಗೋ ಫ್ಲೈ ಸೇಲ್’ ಶುರು ಮಾಡಿದೆ. ಇದರ ಅಡಿಯಲ್ಲಿ ಕೇವಲ 957 ರೂಪಾಯಿಗಳಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಬಹುದು.

ಈ ಪ್ರಸ್ತಾಪದಡಿಯಲ್ಲಿ ಫೆಬ್ರವರಿ 24 ರಿಂದ ಬುಕಿಂಗ್ ಪ್ರಾರಂಭವಾಗಿದೆ. ಪ್ರಯಾಣಿಕರು ಫೆಬ್ರವರಿ 26, 2020 ರವರೆಗೆ ಟಿಕೆಟ್ ಕಾಯ್ದಿರಿಸಬಹುದು. ಈ ಕೊಡುಗೆ ಅಂತರರಾಷ್ಟ್ರೀಯ ವಿಮಾನಗಳಿಗೂ ಲಭ್ಯವಿದೆ. ಗೋ ಏರ್‌ನ ವೆಬ್‌ಸೈಟ್‌ನ ಪ್ರಕಾರ, ಈ ಸೇಲ್ ನಲ್ಲಿ ಖರೀದಿಸಿದ ಟಿಕೆಟ್‌ಗಳಲ್ಲಿ ಮಾರ್ಚ್ 11 ರಿಂದ ಏಪ್ರಿಲ್ 15 ರವರೆಗೆ ಪ್ರಯಾಣ ಬೆಳೆಸಬಹುದು.

ಕಂಪನಿಯ ವೆಬ್ಸೈಟ್‌ಗೆ  ಭೇಟಿ ನೀಡಿ ಟಿಕೆಟ್ ಕಾಯ್ದಿರಿಸಬಹುದು. ಗೋ ಏರ್‌ನ ಮೊಬೈಲ್ ಆ್ಯಪ್ ಮೂಲಕವೂ  ಟಿಕೆಟ್ ಕಾಯ್ದಿರಿಸಲು ಅವಕಾಶವಿದೆ. ಕೊಚ್ಚಿಯಿಂದ ಬೆಂಗಳೂರಿಗೆ – 1059 ರೂಪಾಯಿ, ಬೆಂಗಳೂರಿನಿಂದ ಕೊಚ್ಚಿಗೆ – 1149 ರೂಪಾಯಿ, ಇಂದೋರ್‌ನಿಂದ ಅಹಮದಾಬಾದ್‌ಗೆ – 1214 ರೂಪಾಯಿ, ಚೆನ್ನೈನಿಂದ ಹೈದರಾಬಾದ್ ಗೆ- 1297 ರೂಪಾಯಿ, ದೆಹಲಿಯಿಂದ ಚಂಡೀಗಢಕ್ಕೆ – 1358 ರೂಪಾಯಿ, ಬೆಂಗಳೂರಿನಿಂದ ಗೋವಾಕ್ಕೆ – 1360 ರೂಪಾಯಿ ಹೀಗೆ ಬೇರೆ ಬೇರೆ ಮಾರ್ಗಕ್ಕೆ ಬೇರೆ ಬೇರೆ ದರ ನಿಗದಿಯಾಗಿದೆ.

 

ಗ್ರಾಹಕರಿಗೆ SBI ಶಾಕ್..! ದುಬಾರಿಯಾಗಲಿದೆ ಈ ಸೇವೆ

Posted: 25 Feb 2020 02:34 AM PST

ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಸುರಕ್ಷಿತ ಠೇವಣಿ ಲಾಕರ್ ಗ್ರಾಹಕರಿಗೆ ಶಾಕ್ ನೀಡಿದೆ. ಸುರಕ್ಷಿತ ಠೇವಣಿ ಲಾಕರ್ ಬಾಡಿಗೆ ಹೆಚ್ಚಿಸಿದೆ. ಹೊಸ ಶುಲ್ಕವು ಮಾರ್ಚ್31 ರಿಂದ ಅನ್ವಯವಾಗಲಿದೆ. ಈ ಹೆಚ್ಚಳದ ನಂತರ ಎಸ್‌ಬಿಐ ಲಾಕರ್‌ನ ವಾರ್ಷಿಕ ಶುಲ್ಕ ಕನಿಷ್ಠ 500 ರೂಪಾಯಿಗಳಷ್ಟು ಹೆಚ್ಚಾಗಲಿದೆ. ಎಸ್‌ಬಿಐನ ಸಣ್ಣ ಲಾಕರ್ ಬಾಡಿಗೆ ಶುಲ್ಕವನ್ನು 500 ರೂಪಾಯಿಗಳಿಂದ 2,000 ರೂಪಾಯಿಗೆ ಹೆಚ್ಚಿಸಲಾಗಿದ್ದರೆ, ದೊಡ್ಡ ಲಾಕರ್ ವಾರ್ಷಿಕ ಬಾಡಿಗೆಯನ್ನು 9,000 ದಿಂದ 12,000 ಕ್ಕೆ ಹೆಚ್ಚಿಸಲಾಗಿದೆ.

ಆರ್‌ಬಿಐ ಅಧಿಸೂಚನೆಯ ಪ್ರಕಾರ, ಯಾವುದೇ ಬ್ಯಾಂಕಿನಲ್ಲಿ ಯಾವುದೇ ಖಾತೆಯಿಲ್ಲದೆ ಒಬ್ಬರು ಲಾಕರ್ ತೆರೆಯಬಹುದು. ಎಸ್‌ಬಿಐನ ಮಧ್ಯಮ ಗಾತ್ರದ ಲಾಕರ್ ಈಗ 1,000-4,000ವರೆಗೆ ದುಬಾರಿಯಾಗಲಿದ್ದು, ದೊಡ್ಡ ಲಾಕರ್‌ನ ಶುಲ್ಕ 2,000 ದಿಂದ 8,000 ರೂಪಾಯಿಗಳವರೆಗೆ ಇರುತ್ತದೆ.

ಈ ಹೊಸ ದರವು ಮೆಟ್ರೋ ನಗರಗಳು ಮತ್ತು ನಗರ ಪ್ರದೇಶಗಳಲ್ಲಿ ಮಾತ್ರ ಅನ್ವಯಿಸುತ್ತದೆ. ಜಿಎಸ್ಟಿ ಒಳಗೊಂಡಿಲ್ಲ. ಎಸ್‌ಬಿಐ ಶಾಖೆಯು ಸಣ್ಣ ಪಟ್ಟಣಗಳು ​​ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೈಗೆಟುಕುವ ಲಾಕರ್ ಸೇವೆಗಳನ್ನು ಒದಗಿಸುತ್ತದೆ. ಅಲ್ಲಿ ಬೆಲೆಗಳು 1,500 ರೂಪಾಯಿಗಳಿಂದ ಪ್ರಾರಂಭವಾಗಿ 9,000 ವರೆಗೆ ಇರುತ್ತದೆ.

 

ಭಾರತೀಯ ಸೇನೆ ಬಳಸಿದ ಕಾರನ್ನು ಖರೀದಿಸಿದ ಧೋನಿ

Posted: 25 Feb 2020 01:24 AM PST

ಭಾರತದ ಹೆಮ್ಮೆಯ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಕಾರ್ ಹಾಗೂ ಬೈಕಿನ ಪ್ರೀತಿಯನ್ನು ನೋಡಿದ್ದೇವೆ. ಅವುಗಳಿಗಿಂತ ಅವರು ಹೆಚ್ಚು ಪ್ರೀತಿಸುವುದು ಭಾರತೀಯ ಸೇನೆಯನ್ನು.

ಆದ ಕಾರಣದಿಂದವೋ ಏನೋ ಧೋನಿ ಅವರು ಒಂದು ಕಾಲದಲ್ಲಿ ಭಾರತೀಯ ಸೇನೆ ಬಳಸುತ್ತಿದ್ದ ನಿಸ್ಸಾನ್ ಜೊಂಗ ಕಾರನ್ನು ಖರೀದಿಸಿದ್ದಾರೆ. 1999ರಲ್ಲಿ ತಯಾರಾಗಿದ್ದ ಈ ಕಾರನ್ನು 20ವರ್ಷದ ಬಳಿಕ ಖರೀದಿಸಿದ್ದಾರೆ.

ನಂತರ ಅದರಲ್ಲಿ ತಮ್ಮ ಊರಾದ ರಾಂಚಿಯಲ್ಲಿ ತಿರುಗಾಡಿದ್ದು ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಅಷ್ಟೇ ಅಲ್ಲದೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ಟೆಸ್ಟ್ ಪಂದ್ಯದ 4ನೇ ದಿನದಂದು ಭಾರತ ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿ ಕಂಡುಬಂದಿದ್ದರು.

ಕರೋನಾ ವೈರಾಣುಗಳಿಂದ ರಕ್ಷಣೆಗೆ ಈ ತಾಯಿ ಮಾಡಿದ್ದೇನು ಗೊತ್ತಾ…?

Posted: 25 Feb 2020 01:23 AM PST

ಕರೋನಾ ವೈರಸ್‌ಗೆ ಬಲಿಯಾದವರ ಸಂಖ್ಯೆ 2,600 ದಾಟಿದ್ದು, ಜಾಗತಿಕ ಮಟ್ಟದಲ್ಲಿ 77,000 ಮಂದಿಗೆ ಸೋಂಕು ತಗುಲಿರುವುದು ಖಾತ್ರಿಯಾಗಿದೆ. ಈ ವೈರಾಣುಗಳ ಆಟಾಟೋಪ ಸದ್ಯಕ್ಕೆ ಕೊನೆಯಾಗುವಂತೆ ಕಾಣುತ್ತಿಲ್ಲ.

ಈ ವೈರಾಣುಗಳು ಜನರಲ್ಲಿ ಸಾಮೂಹಿಕ ಭೀತಿ ಮೂಡಿಸುತ್ತಿದ್ದು, ತಮ್ಮನ್ನು ತಾವು ಕಾಪಾಡಿಕೊಳ್ಳಲು ಏನೆಲ್ಲಾ ಮಾಡುತ್ತಿದ್ದಾರೆ ಎಂದು ಸಾಕಷ್ಟು ವರದಿಗಳನ್ನು ಓದಿದ್ದೇವೆ.

ಚೀನಾದ ಹುಬೇಯ್‌ ಪ್ರಾಂತ್ಯದಲ್ಲಿ, ತನ್ನ 7 ವರ್ಷದ ಮಗಳಿಗೆ ತಾಯಿಯೊಬ್ಬಳು ಕರೋನಾ ವೈರಾಣುಗಳಿಂದ ರಕ್ಷಿಸಲೆಂದು ಆಕೆ ಹೊರಗೆ ಹೋಗುವ ವೇಳೆ ಆಕೆಗೊಂದು ಟೆಂಟ್ ಮಾಡಿಕೊಟ್ಟಿದ್ದಾರೆ.

ಕರೋನಾ ವೈರಾಣುಗಳ ಭೀತಿಯಿಂದ ಶಾಲೆಗಳು ಮುಚ್ಚಿರುವ ಕಾರಣ ಈ ಪುಟ್ಟಿ ಈಗ ಆನ್ಲೈನ್‌ ಮೂಲಕ ಕ್ಲಾಸ್‌ಗಳನ್ನು ಅಟೆಂಡ್ ಮಾಡುತ್ತಿದ್ದಾಳೆ.

ಮೂರು ಮಕ್ಕಳ ತಾಯಿಯಾದ್ರೂ ಫಿಟ್ನೆಸ್ ವಿಷ್ಯದಲ್ಲಿ ಹಿಂದೆ ಬಿದ್ದಿಲ್ಲ ಇವಾಂಕಾ

Posted: 25 Feb 2020 01:21 AM PST

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಅವ್ರ ಮಗಳು ಇವಾಂಕಾ ಕೂಡ ಭಾರತ ಪ್ರವಾಸಕ್ಕೆ ಬಂದಿದ್ದಾರೆ. ಸೋಮವಾರ ವಿಮಾನ ನಿಲ್ದಾಣದಲ್ಲಿ ಇವಾಂಕಾ ನೋಡಿದ ಜನರು ಸಾಮಾಜಿಕ ಜಾಲತಾಣದಲ್ಲಿ ಅವ್ರ ಫಿಟ್ನೆಸ್ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. 37ನೇ ವಯಸ್ಸಿನಲ್ಲೂ ಇವಾಂಕಾ ಫಿಟ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಾರೆ.

ಸಾಮಾನ್ಯವಾಗಿ ಮಕ್ಕಳಾದ್ಮೇಲೆ ಫಿಗರ್ ಹೋಯ್ತು ಎನ್ನುವವರಿದ್ದಾರೆ. ಆದ್ರೆ ಇವಾಂಕಾಗೆ ಮೂರು ಮಕ್ಕಳು. ಆದ್ರೂ ಇವಾಂಕಾ ಫಿಟ್ನೆಸ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಇವಾಂಕಾ ದೊಡ್ಡ ಮಗು ವಯಸ್ಸು 8 ವರ್ಷ. ಆರು ವರ್ಷದ ಹಾಗೂ 3 ವರ್ಷದ ಮಕ್ಕಳಿವೆ. ಹೆರಿಗೆ ನಂತ್ರ ಫಿಟ್ನೆಸ್ ಗೆ ಇವಾಂಕಾ ಸಾಕಷ್ಟು ಶ್ರಮಪಟ್ಟಿದ್ದಾರೆ.

ಗ್ರೀನ್ ಸಲಾಡ್, ಮನೆಯಲ್ಲಿ ತಯಾರಿಸಿದ ತರಕಾರಿ ಸೂಪ್ ಮತ್ತು ನೇರ ಪ್ರೋಟೀನ್ ಆಹಾರಗಳನ್ನು ಇವಾಂಕಾ ಸೇವನೆ ಮಾಡ್ತಾರೆ. ಇವಾಂಕಾ ಸಂಸ್ಕರಿಸಿದ ಆಹಾರ ಮತ್ತು ಕಾರ್ಬೋಹೈಡ್ರೇಟ್‌ ಇರುವ ಆಹಾರ ಸೇವನೆ ಮಾಡುವುದಿಲ್ಲ. ಇದಲ್ಲದೆ  ಧಾನ್ಯಗಳಿಂದ ತಯಾರಿಸಿದ ಆಹಾರವನ್ನು ತಿನ್ನುವುದಿಲ್ಲ.

ಇವಾಂಕಾ ಬೆಳಿಗ್ಗೆ ನಿಂಬೆ ನೀರಿನ ಜೊತೆ ದಿನ ಶುರು ಮಾಡ್ತಾರೆ. ಬ್ಲೂಬೆರ್ರಿ, ರಾಸ್ಪ್ಬೆರಿ ಮತ್ತು ಕಡಿಮೆ ಕೊಬ್ಬಿನ ಚೀಸ್ ತಿನ್ನುತ್ತಾರೆ. ಚರ್ಮದ ಸೌಂದರ್ಯ ಕಾಪಾಡಿಕೊಳ್ಳಲು ಸಾಕಷ್ಟು ನೀರು ಕುಡಿಯುವ ಇವಾಂಕಾ, ನಿಯಮಿತವಾಗಿ ಟೀ ಮತ್ತು ಕಾಫಿ ಕುಡಿಯುತ್ತಾರೆ. ಬೆಳಿಗ್ಗೆ 5.30ಕ್ಕೆ ಏಳುವ ಇವಾಂಕಾ 20 ನಿಮಿಷಗಳ ಕಾಲ ವ್ಯಾಯಾಮ ಮಾಡ್ತಾರೆ.

 

ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ತಟ್ಟಿದ ಎಚ್ 1 ಎನ್ 1 ಸೋಂಕು

Posted: 25 Feb 2020 01:20 AM PST

ಸುಪ್ರೀಂ ಕೋರ್ಟ್ ನಲ್ಲಿ ಎಚ್ 1ಎನ್ 1 ಭಯ ಶುರುವಾಗಿದೆ. 6 ನ್ಯಾಯಾಧೀಶರು ಎಚ್ 1 ಎನ್ 1 ಸೋಂಕಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಕೋರ್ಟ್ ನಲ್ಲಿರುವ ಸಿಬ್ಬಂದಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಮುಖ್ಯ ನ್ಯಾಯಮೂರ್ತಿಗಳು ಸೂಚನೆ ನೀಡಿದ್ದಾರೆ. ಬಾರ್ ಅಸೋಸಿಯೇಶನ್ ಅಧ್ಯಕ್ಷರ ಸಭೆ ನಂತ್ರ ಮುಖ್ಯ ನ್ಯಾಯಾಧೀಶರು ಈ ಸೂಚನೆ ನೀಡಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಈ ಪ್ರಕರಣದ ಬಗ್ಗೆ 1 ಅಥವಾ 2 ದಿನಗಳಲ್ಲಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ. ವ್ಯಾಕ್ಸಿನೇಷನ್ ಗಾಗಿ ಅಧಿಸೂಚನೆ ನೀಡಲಾಗುವುದು ಎಂದಿದ್ದಾರೆ. ಲಸಿಕೆ ಬೆಲೆ 1200 ರೂಪಾಯಿ ಎಂದವರು ಹೇಳಿದ್ದಾರೆ.

ಭಾರತದಲ್ಲಿ ಹಂದಿ ಜ್ವರ ಮತ್ತೊಮ್ಮೆ ಕಾಣಿಸಿಕೊಂಡಿದೆ. ಕಾಶ್ಮೀರ ಮತ್ತು ಬೆಂಗಳೂರು, ಪಂಜಾಬ್ ಮತ್ತು ರಾಜಸ್ಥಾನದ ನಂತ್ರ ದೆಹಲಿಯಲ್ಲೂ ಹಂದಿ ಜ್ವರ ಕಾಣಿಸಿಕೊಂಡಿದೆ. ನ್ಯಾಯಮೂರ್ತಿಗಳು ಮಾಸ್ಕ್ ಧರಿಸಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.

 

ಛಾಯಾಗ್ರಾಹಕನೊಂದಿಗೆ ನಟಿ ಅಂಗರಕ್ಷಕನ ಜಟಾಪಟಿ

Posted: 25 Feb 2020 12:44 AM PST

ಬಾಲಿವುಡ್ ನ ಯಶಸ್ವಿ “ಮಲಾಗ್” ಚಿತ್ರದ ನಾಯಕಿ ದಿಶಾ ಪಟಾಣಿ ಅವರ ಅಂಗರಕ್ಷಕ ಛಾಯಾಗ್ರಾಹಕರೊಬ್ಬರನ್ನು‌ ತಳ್ಳಿ ರಂಪಾಟ ಮಾಡಿಕೊಂಡಿದ್ದಾರೆ.

ಸಿನಿಮಾ ಮಂದಿರದಿಂದ ಹೊರಬರುತ್ತಿದ್ದ ಸಂದರ್ಭದಲ್ಲಿ ಎಲ್ಲರೂ ಫೋಟೋ ಕ್ಲಿಕ್ಕಿಸುವ ತರಾತುರಿಯಲ್ಲಿದ್ದರು. ಈ ವೇಳೆ ನಟಿ ದಿಶಾ ತನ್ನ ಕಾರಿನ ಸಮೀಪ ತೆರಳಿದಾಗ ಛಾಯಾಗ್ರಾಹಕ ನಟಿಯ ಫೋಟೋ ಕ್ಲಿಕ್ಕಿಸಿದ್ದಾನೆ.

ಇದು ಆಕೆಗೂ ಸ್ವಲ್ಪ ಕಿರಿಕಿರಿಯಾಗಿದೆ. ತಕ್ಷಣವೇ ಮಧ್ಯಪ್ರವೇಶಿಸಿದ ಅಂಗರಕ್ಷಕ ಛಾಯಾಗ್ರಾಹಕನನ್ನು ಬಲವಾಗಿ ತಳ್ಳಿದ್ದಾನೆ. ಈ ವೇಳೆ ಇಬ್ಬರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ.

ಘಟನೆ ತಿಳಿದ ನಟಿಯ ವ್ಯವಸ್ಥಾಪಕ ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ತಾಜ್ ಮಹಲ್ ನೋಡಿದ ಬಳಿಕ ಟ್ರಂಪ್ ಹೇಳಿದ್ದೇನು…?

Posted: 25 Feb 2020 12:42 AM PST

ಭಾರತ ಪ್ರವಾಸದಲ್ಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪತ್ನಿ ಮೆಲೆನಿಯಾ ಟ್ರಂಪ್ ತಾಜ್ ಮಹಲ್ ನೋಡಿದ ಬಳಿಕ ಹೇಳಿದ ಮೊದಲ ಶಬ್ದವೇನು ಗೊತ್ತಾ…?

ಈ ಬಗ್ಗೆ ವಿಶ್ವದ ಪವರ್‌ಫುಲ್ ದಂಪತಿಗಳಾಗಿರುವ ಟ್ರಂಪ್ ದಂಪತಿಗೆ ತಾಜ್ ಮಹಲ್ ತೋರಿಸಿದ ಗೈಡ್ ನಿತಿನ್ ಕುಮಾರ್ ಸಿಂಗ್ ಮಾತನಾಡಿದ್ದು, ದಂಪತಿಗಳು ತಾಜ್ ಮಹಲ್ ನೋಡಿದ ಬಳಿಕ “ಅದ್ಭುತ” ಎಂದು ವರ್ಣಿಸಿದರು ಎಂದು ಹೇಳಿದ್ದಾರೆ.

ಇಡೀ ಮಹಲ್ ನೋಡುವ ತನಕ ಪ್ರತಿಯೊಂದು ವಿಷಯವನ್ನು ಸಮಾಧಾನವಾಗಿ ಆಲಿಸಿದ ಇಬ್ಬರು, ಬಳಿಕ ಕೆಲ ಪ್ರಶ್ನೆಗಳನ್ನು ಕೇಳಿದರು.

ಇದಾದ ಬಳಿಕ ಅವರಿಬ್ಬರಿಗೆ ಏಕಾಂತ ಸಮಯ ನೀಡಿದೆ. ಬಳಿಕ ಮತ್ತಷ್ಟು ಮಾಹಿತಿಯನ್ನು ನೀಡಿದೆ. ಇನ್ನೊಮ್ಮೆ ತಾಜ್ ಮಹಲ್ ಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ‌.

ಇನ್ನು ತಾಜ್ ಮಹಲ್ ವೀಕ್ಷಿಸಿದ ಬಳಿಕ, ತಾಜ್ ಮಹಲ್ ಅದ್ಭುತ ಕಲೆ. ನನಗೆ ಸ್ಫೂರ್ತಿ ನೀಡಿದೆ. ಈ ರೀತಿ ವಿವಿಧ ಸಂಸ್ಕೃತಿ ನೀಡಿದ ಭಾರತಕ್ಕೆ ಧನ್ಯವಾದ ಎಂದು ಬರೆದಿದ್ದಾರೆ.

ಗುಡ್‌ ನೂಸ್: ಬಿಹಾರದ ಶಾಲೆಗಳಲ್ಲಿ ಆರಂಭವಾಗಲಿದೆ ಪೋಕ್ಸೋ ಘಟಕ

Posted: 25 Feb 2020 12:17 AM PST

ದೇಶದಲ್ಲಿ ಲೈಂಗಿಕ ಅಪರಾಧಗಳು ಹೆಚ್ಚುತ್ತಿದ್ದು, ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿರುವ ಕಾರಣದಿಂದ ಮಕ್ಕಳಲ್ಲಿ ಈ ಕುರಿತು ಅರಿವು ಮೂಡಿಸಲು ಅನೇಕ ಶಾಲೆಗಳ ಆಡಳಿತ ಮಂಡಳಿಗಳು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ಇದೇ ಹಾದಿಯಲ್ಲಿ ಹೆಜ್ಜೆ ಇಟ್ಟಿರುವ ಬಿಹಾರ ಸರ್ಕಾರ, ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಪೋಕ್ಸೋ ಕಾಯಿದೆಯ ವಿಶೇಷ ಘಟಕಗಳನ್ನು ಹೊಂದಲು ನಿರ್ಧರಿಸಿದೆ.

ಈ ಘಟಕಗಳಲ್ಲಿ ಮಕ್ಕಳು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲದೇ ಮುಕ್ತವಾಗಿ ಮಾತನಾಡಬಹುದಾಗಿದೆ.

ಈ ಪೋಕ್ಸೋ ಘಟಕಗಳನ್ನು ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಮುನ್ನಡೆಸಲಿದ್ದಾರೆ. ಇದರೊಂದಿಗೆ ಮಕ್ಕಳಿಗೆ ಇರುವ ಸಹಾಯವಾಣಿ ಸಂಖ್ಯೆಯನ್ನು ಸಹ ನೋಟೀಸ್ ಬೋರ್ಡ್‌‌ಗಳಲ್ಲಿ ನಮೂದಿಸಲು ಇದೇ ಸಂದರ್ಭ ಸೂಚನೆ ನೀಡಲಾಗಿದೆ.

ಸರಸ ಸಲ್ಲಾಪದಲ್ಲಿ ತೊಡಗಿದ್ದ ಜೋಡಿಯ ಫೋಟೋ ಶೇರ್‌ ಮಾಡಿದ ಐಪಿಎಸ್ ಅಧಿಕಾರಿ

Posted: 25 Feb 2020 12:15 AM PST

ಉದ್ಯಾನಗಳಂಥ ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗವಾಗಿ ಭಾವನೆಗಳನ್ನು ವ್ಯಕ್ತಪಡಿಸಿಕೊಳ್ಳುತ್ತಿರುವ ಪ್ರೇಮಿಗಳ ಚಿತ್ರವೊಂದನ್ನು ಶೇರ್‌ ಮಾಡಿ, ಅವರನ್ನು ಶೇಮ್ ಮಾಡಿರುವ ದೆಹಲಿಯ ಐಪಿಎಸ್ ಅಧಿಕಾರಿಯೊಬ್ಬರು ನೆಟ್ಟಿಗರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.

“ನಮ್ಮ ಮಕ್ಕಳನ್ನು ಪಾರ್ಕಿಗೆ ಕರೆದುಕೊಂಡು ಹೋದಾಗ, ಅವರು ಇವನ್ನೆಲ್ಲಾ ನೋಡಿದರೆ ನಾವು ಹೇಗೆ ಅವರಿಗೆ ವಿವರಿಸುವುದು?” ಎಂದು ಪ್ರಶ್ನಿಸಿರುವ ಅಸ್ಲಂ ಖಾನ್‌, ಗಂಭೀರ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ.

ಐಪಿಎಸ್ ಅಧಿಕಾರಿಯ ವರ್ತನೆಯನ್ನು ಖಂಡಿಸಿರುವ ನೆಟ್ಟಿಗರು, ಕಂಡ ಕಂಡ ಜನರ ಚಿತ್ರಗಳನ್ನೆಲ್ಲಾ ಸೆರೆ ಹಿಡಿದುಕೊಂಡು, ತಮ್ಮ ಪಾಡಿಗೆ ತಾವು ವಿನೋದದ ಕ್ಷಣಗಳನ್ನು ಅನುಭವಿಸುತ್ತಿರುವ ಜೋಡಿಯನ್ನು ಟಾರ್ಗೆಟ್ ಮಾಡಿರುವ ಇವರು ನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

62 ವರ್ಷದ ವೃದ್ದನ ಸಾಧನೆ ನೋಡಿದ್ರೆ ಬೆರಗಾಗ್ತೀರಾ…!

Posted: 25 Feb 2020 12:14 AM PST

60 ವರ್ಷ ದಾಟಿದವರೆಲ್ಲ ಜೀವನದಲ್ಲಿ ಎಲ್ಲದರಿಂದ ನಿವೃತ್ತಿ ಪಡೆಯುತ್ತಾರೆ. ಅವರಿಗೆ ದೈಹಿಕ ವ್ಯಾಯಾಮವೆಂದರೆ ವಾಕಿಂಗ್ ಆಗಿರುತ್ತದೆ. ಆದರೆ ಇಲ್ಲೊಬ್ಬ 62 ವರ್ಷದ ವೃದ್ಧ, ಯುವಕರೂ ನಾಚಿಸುವಂತಹ ಸಾಧನೆ ಮಾಡಿದ್ದಾರೆ.

ಅಮೆರಿಕದ ಇಲಿನಾಯ್ಸ್, ನೇಪರ್‌ವಿಲ್‌ನ ಜಾರ್ಜ್ ಹುಡ್ ಎನ್ನುವವರು ಪ್ಲ್ಯಾಂಕ್ ಎನ್ನುವ ವ್ಯಾಯಾಮವನ್ನು ಅತಿ ದೀರ್ಘ ಕಾಲ ಮಾಡಿದ ಗಿನ್ನಿಸ್ ದಾಖಲೆ ಬರೆದಿದ್ದಾರೆ.

ಅವರು ಸತತ 8ತಾಸು 15ನಿಮಿಷ 15ಸೆಕೆಂಡ್ ಈ ವ್ಯಾಯಾಮ ಮಾಡಿ ದಾಖಲೆ ಮಾಡಿದ್ದಾರೆ. ಪ್ಲ್ಯಾಂಕ್ ಎನ್ನುವುದು ಎರಡು ಮೊಣಕೈ ಹಾಗೂ ಕಾಲ್ಬೆರೆಳುಗಳ ಮೇಲೆ ನಿಲ್ಲುವ ವ್ಯಾಯಾಮವಾಗಿದೆ. ಇಲ್ಲಿ ಹೊಟ್ಟೆ ನೆಲಕ್ಕೆ ತಾಗಬಾರದು. ಎಷ್ಟು ಹೊತ್ತು ಆ ಸ್ಥಿತಿಯಲ್ಲಿರುತ್ತೇವೆಯೋ ಅಷ್ಟು ಅದು ಪರಿಣಾಮಕಾರಿಯಾಗಿರುತ್ತದೆ.

ಕ್ರೆಡಿಟ್ ಕಾರ್ಡ್ ಹಿಡಿದು ಸಿದ್ಧವಾಗಿ..! ಇನ್ಮುಂದೆ ಆನ್ಲೈನ್ ನಲ್ಲಿ ಸಿಗಲಿದೆ ಮದ್ಯ

Posted: 25 Feb 2020 12:11 AM PST

ಮಧ್ಯಪ್ರದೇಶ ಸರ್ಕಾರ ಮದ್ಯ ಪ್ರಿಯರಿಗೆ ಖುಷಿ ಸುದ್ದಿ ನೀಡಿದೆ. ಮದ್ಯಪ್ರಿಯರು ಇನ್ಮುಂದೆ ಆನ್ಲೈನ್ ನಲ್ಲಿ ಮದ್ಯ ಖರೀದಿ ಮಾಡಬಹುದು. ಮಧ್ಯಪ್ರದೇಶ ಸರ್ಕಾರದ ಹೊಸ ಅಬಕಾರಿ ನೀತಿಯಡಿ ಈಗ ಆನ್ಲೈನ್‌ನಲ್ಲಿಯೂ ಮದ್ಯ ಮಾರಾಟವಾಗಲಿದೆ.

ಮನೆಯಲ್ಲೇ ಕುಳಿತು ಆಲ್ಕೋಹಾಲ್ ಖರೀದಿ ಮಾಡಬಹುದು. ಆದಾಯ ಹೆಚ್ಚಿಸಲು ಕಮಲ್ ನಾಥ್ ಸರ್ಕಾರದ ಈ ಹೊಸ ನೀತಿಯಡಿ ಆನ್ಲೈನ್‌ನಲ್ಲಿ ವಿದೇಶಿ ಮದ್ಯ ಸಿಗಲಿದೆ. ರಾಜ್ಯದ ಹೊಸ ಅಬಕಾರಿ ನೀತಿಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಬಾಟಲಿಗೆ ಬಾರ್ ಕೋಡ್‌ ಕಡ್ಡಾಯವಾಗಲಿದೆ.

ಮಧ್ಯಪ್ರದೇಶದಲ್ಲಿ ಯಾವುದೇ ಹೊಸ ಮದ್ಯದಂಗಡಿ ತೆರೆಯಲು ಸರ್ಕಾರ ಒಪ್ಪಿಗೆ ನೀಡುವುದಿಲ್ಲ. ಆದರೆ ದ್ರಾಕ್ಷಿ ಬೆಳೆಗಾರರಿಗಾಗಿ ಸರ್ಕಾರ ವಿಶೇಷ ಯೋಜನೆಯನ್ನು ಸಿದ್ಧಪಡಿಸಿದೆ. ದ್ರಾಕ್ಷಿಯಿಂದ ತಯಾರಿಸಿದ ವೈನ್ ಗೆ ಉತ್ತೇಜನ ನೀಡಲು ಪ್ರವಾಸಿ ತಾಣಗಳಲ್ಲಿ 15 ಹೊಸ ವೈನ್ ಮಳಿಗೆಗಳನ್ನು ತೆರೆಯಲಾಗುವುದು. ಈ ಮಳಿಗೆಗಳ ವಾರ್ಷಿಕ ಶುಲ್ಕ 10,000 ರೂಪಾಯಿ.

 

No comments:

Post a Comment

Gameforumer QR Scan

Gameforumer QR Scan
Gameforumer QR Scan