Translate

Monday, December 2, 2019

Kannada News | Karnataka News | India News

Kannada News | Karnataka News | India News


ಖಾತೆಯಲ್ಲಿದ್ದ ಹಣ ಕೊಡದ ಬ್ಯಾಂಕ್ ಸಿಬ್ಬಂದಿ ಮೇಲೆ ಮಚ್ಚು ಬೀಸಿದ ಗ್ರಾಹಕ

Posted: 02 Dec 2019 07:02 AM PST

ತನ್ನ ಖಾತೆಯಲ್ಲಿದ್ದ ಹಣ ಕೊಡದ ಬ್ಯಾಂಕ್ ಸಿಬ್ಬಂದಿ ಮೇಲೆ ಗ್ರಾಹಕ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ನಡೆದಿದೆ.

ದುರ್ಗೇನಹಳ್ಳಿ ಗ್ರಾಮದ ಕುಮಾರ್ ಎಂಬ ವ್ಯಕ್ತಿಯ ಖಾತೆಯಲ್ಲಿ 268 ರೂಪಾಯಿ ಇದ್ದು ಅದನ್ನು ಕೊಡಲೇಬೇಕೆಂದು ಬ್ಯಾಂಕ್ ಸಿಬ್ಬಂದಿಯನ್ನು ಕೇಳಿದ್ದಾನೆ. ಆದರೆ, ಬ್ಯಾಂಕ್ ನಲ್ಲಿ ಒಂದು ವರ್ಷದಿಂದ ವ್ಯವಹಾರ ನಡೆಸದ ಕಾರಣ ಅಕೌಂಟ್ ಲಾಕ್ ಆಗಿದೆ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದು, ಇದರಿಂದ ಆಕ್ರೋಶಗೊಂಡ ಕುಮಾರ್ ಮಚ್ಚು ಬೀಸಿದ್ದಾನೆ. ಸಿಬ್ಬಂದಿ ಹಿಂದಕ್ಕೆ ಸರಿದು ಪಾರಾಗಿದ್ದಾರೆ.

ಸ್ಥಳದಲ್ಲಿದ್ದ ಗ್ರಾಹಕರು ಆತನನ್ನು ಹಿಡಿದು ಕೈಯಲ್ಲಿದ್ದ ಮಚ್ಚು ಕಸಿದುಕೊಂಡಿದ್ದಾರೆ. ನಂತರ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

ಪ್ರಿಯಾಂಕ ಗಾಂಧಿಗೆ SPG ಭದ್ರತೆ ರದ್ದು ಮಾಡಿದ ನಂತರ ನಡೆದಿದೆ ಆಘಾತಕಾರಿ ಘಟನೆ

Posted: 02 Dec 2019 07:00 AM PST

ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲಾಗಿದ್ದ ಎಸ್ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ರದ್ದು ಮಾಡಿದ್ದು, ಝಡ್ ಪ್ಲಸ್ ಮಾದರಿ ಭದ್ರತೆ ನೀಡಲಾಗಿದೆ.

ಇದೇ ವೇಳೆ ಭದ್ರತಾ ವೈಫಲ್ಯ ಸಂಭವಿಸಿದ್ದು, ಅಪರಿಚಿತರು ಪ್ರಿಯಾಂಕ ಗಾಂಧಿ ನಿವಾಸಕ್ಕೆ ನುಗ್ಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನವದೆಹಲಿಯ ಲೋಧಿ ಎಸ್ಟೇಟ್ ನಲ್ಲಿ ಪ್ರಿಯಾಂಕ ಗಾಂಧಿ ಅವರ ನಿವಾಸಕ್ಕೆ ಐವರು ಅಪರಿಚಿತರು ಇದ್ದ ಕಾರ್ ಯಾವುದೇ ಅನುಮತಿ ಇಲ್ಲದೆ ಪ್ರವೇಶಿಸಿದೆ.

ಪ್ರಿಯಾಂಕ ಗಾಂಧಿ ಭದ್ರತೆ ಬಗ್ಗೆ ಆತಂಕ ಎದುರಾಗಿದೆ. ನವೆಂಬರ್ 25 ರಂದು ಘಟನೆ ನಡೆದಿರುವುದಾಗಿ ಹೇಳಲಾಗಿದೆ. ಭದ್ರತಾ ಸಿಬ್ಬಂದಿಯ ಪರಿಶೀಲನೆ ಮತ್ತು ಅನುಮತಿ ಇಲ್ಲದೆಯೇ ಉತ್ತರಪ್ರದೇಶ ಮೂಲದವರು ಇದ್ದರೆನ್ನಲಾದ ಕಾರ್ ನೇರವಾಗಿ ಪ್ರಿಯಾಂಕಾ ನಿವಾಸ ಪ್ರವೇಶಿಸಿದೆ. ಕಾರ್ ನಲ್ಲಿದ್ದವರು ಪ್ರಿಯಾಂಕಾ ಅವರ ಬಳಿ ಸೆಲ್ಫಿ ತೆಗೆದುಕೊಳ್ಳಲು ಬೇಡಿಕೆ ಇಟ್ಟಿದ್ದಾರೆ.

ಘಟನೆ ಬಗ್ಗೆ ಪ್ರಿಯಾಂಕ ಗಾಂಧಿ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿ ನಿವಾಸದ ಎಲ್ಲಾ ದ್ವಾರ ಬಂದ್ ಮಾಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಪ್ರತಿಕ್ರಿಯೆ ನೀಡಿರುವ ಗೃಹ ಖಾತೆ ರಾಜ್ಯ ಸಚಿವ ಕೃಷ್ಣಾರೆಡ್ಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಮೊಬೈಲ್ ಕರೆ, ಡೇಟಾ ದರ ಏರಿಕೆಯಿಂದ ಕಂಗಾಲಾದ ಗ್ರಾಹಕರಿಗೆ ʼಗುಡ್ ನ್ಯೂಸ್ʼ

Posted: 02 Dec 2019 06:57 AM PST

ಪ್ರಮುಖ ಟೆಲಿಕಾಂ ಸೇವಾ ಕಂಪನಿಗಳಾದ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಕರೆ ಮತ್ತು ಡೇಟಾ ದರಗಳನ್ನು ಪರಿಷ್ಕರಿಸಿವೆ.

ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಕರೆ ದರ ಪರಿಷ್ಕರಿಸಲಾಗಿದ್ದು, ದರ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದು ಭಾರತ ಸಂಚಾರ ನಿಗಮ ಲಿಮಿಟೆಡ್(ಬಿಎಸ್ಎನ್ಎಲ್) ಸದ್ಯಕ್ಕೆ ಯಾವುದೇ ದರ ಏರಿಕೆ ಮಾಡದೆ ಗ್ರಾಹಕರಿಗೆ ನಿರಾಳತೆ ನೀಡಿದೆ.

437 ರೂಪಾಯಿ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಪ್ರತಿದಿನ 1 ಜಿಬಿ ಡೇಟಾ, 250 ನಿಮಿಷ ಕರೆ ಸೌಲಭ್ಯ, 100 ಎಸ್ಎಂಎಸ್ ಸೌಲಭ್ಯ 90 ದಿನಗಳವರೆಗೆ ಪಡೆಯಬಹುದು.

666 ರೂಪಾಯಿ ಪ್ರಿಪೇಯ್ಡ್ ಪ್ಲಾನ್ ನಲ್ಲಿ 122 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿ ದಿನ 2.5 ಜಿಬಿ ಡೇಟಾ, 250 ನಿಮಿಷ ಕರೆ ಸೌಲಭ್ಯ, 100 ಎಸ್ಎಂಎಸ್ ಪಡೆಯಬಹುದು.

997 ರೂಪಾಯಿ ಪ್ರೀಪೇಯ್ಡ್ ಪ್ಲಾನ್ ನಲ್ಲಿ 180 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿ ದಿನ 3 ಜಿಬಿ ಡೇಟಾ, ಇದರೊಂದಿಗೆ 250 ನಿಮಿಷ ಕರೆ ಸೌಲಭ್ಯ, 100 ಎಸ್ಎಂಎಸ್ ಸೌಲಭ್ಯ ಪಡೆಯಬಹುದು.

999 ರೂಪಾಯಿ ಪ್ಲಾನ್ ನಲ್ಲಿ ಡೇಟಾ ಸೌಲಭ್ಯವಿರುವುದಿಲ್ಲ. 250 ನಿಮಿಷ ಕರೆ ಸೌಲಭ್ಯ ಮತ್ತು ದಿನಕ್ಕೆ 100 ಎಸ್ಎಂಎಸ್ ಇದ್ದು  220 ದಿನಗಳ ವ್ಯಾಲಿಡಿಟಿ ಹೊಂದಿದೆ.

1699 ರೂಪಾಯಿ ಪ್ಲಾನ್ ನಲ್ಲಿ 365 ದಿನ ವ್ಯಾಲಿಡಿಟಿಯೊಂದಿಗೆ ಪ್ರತಿ ದಿನ 2ಜಿಬಿ ಡೇಟಾ, 250 ನಿಮಿಷ ಕರೆ, 100 ಎಸ್ಎಂಎಸ್ ಸೌಲಭ್ಯವಿರುತ್ತದೆ.

1999 ರೂಪಾಯಿ ಪ್ಲಾನ್ ನಲ್ಲಿ 365 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 3ಜಿಬಿ ಡೇಟಾ, 250 ನಿಮಿಷ ಕರೆ ದರ, ಮತ್ತು 100 ಎಸ್ಎಂಎಸ್ ಸೌಲಭ್ಯ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.

ಅಸ್ವಸ್ಥಗೊಂಡಿದ್ದ ಹುಲಿಗಳು ಕೊನೆಗೂ ಆಶ್ರಯ ತಾಣಕ್ಕೆ…!

Posted: 02 Dec 2019 06:24 AM PST

ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಇಟಲಿಯಿಂದ ರಷ್ಯಾದ ಡಾಗೆಸ್ತಾನ್ ಗಣರಾಜ್ಯದ ಮೃಗಾಲಯಕ್ಕೆ ಟ್ರಕ್ ಮೂಲಕ ಸಾಗಿಸುತ್ತಿದ್ದಾಗ ಅಸ್ವಸ್ಥಗೊಂಡು ಬದುಕುಳಿದಿದ್ದ 9 ಹುಲಿಗಳಲ್ಲಿ 5 ಹುಲಿಗಳು ಝೂದಲ್ಲಿ ವಾರಗಳ ಕಾಲ ಚೇತರಿಕೆ ನಂತರ ತಮ್ಮ ಹೊಸ ಮನೆ ಸ್ಪ್ಯಾನಿಷ್ ನ ಪ್ರಾಣಿಗಳ ಆಶ್ರಯ ತಾಣಕ್ಕೆ ತೆರಳಿವೆ.

ಸ್ಪ್ಯಾನಿಷ್ ಪಟ್ಟಣದ ಆಗ್ನೇಯ ದಿಕ್ಕಿನಲ್ಲಿರುವ ವಿಲ್ಲೆನಾದಲ್ಲಿರುವ ಪ್ರಿಮಡೋಮಸ್ ವನ್ಯಜೀವಿ ಆಶ್ರಯ ತಾಣದಲ್ಲಿ ಅವು ಉಳಿದುಕೊಳ್ಳಲಿವೆ.

ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ರಷ್ಯಾ ಡಾಗೆಸ್ತಾನ ಗಣರಾಜ್ಯದ ಮೃಗಾಲಯಕ್ಕೆ ಸಾಗಿಸಲಾಗುತ್ತಿದ್ದ ಟ್ರಕ್‌ನಲ್ಲಿ ನಿರ್ಜಲೀಕರಣಗೊಂಡ 10 ಹುಲಿಗಳನ್ನು ಪೋಲಿಷ್ ಗಡಿ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಇದರಲ್ಲಿ ಒಂದು ಹುಲಿ ಮೃತಪಟ್ಟಿತ್ತು.

ಪ್ರಾಣಿಗಳನ್ನು ದೌರ್ಜನ್ಯಯುತವಾಗಿ ಸಾಗಿಸಲಾಗುತ್ತಿತ್ತೆಂದು ಇಬ್ಬರು ಇಟಾಲಿಯನ್ ಟ್ರಕ್ ಚಾಲಕರು ಮತ್ತು ರಷ್ಯಾದ ವ್ಯಕ್ತಿಯೊಬ್ಬರ ವಿರುದ್ಧ ಪೋಲೆಂಡ್‌ನ ಪ್ರಾಸಿಕ್ಯೂಟರ್‌ಗಳು ಆರೋಪ ಹೊರಿಸಿದ್ದರು. ಸರಿಯಾಗಿ ಪರಿಶೀಲನೆ ಮಾಡದ ಪೊಲೀಷ್ ಗಡಿ ಅಧಿಕಾರಿಗಳ ವಿರುದ್ಧವೂ ದೂರು ದಾಖಲಾಗಿದೆ.

‘ಶ್ರೀಲಂಕಾಕ್ಕೆ 3 ಸಾವಿರ ಕೋಟಿ ರೂ. ಕೊಟ್ಟ ಮೋದಿ ರಾಜ್ಯದ ನೆರೆ ಸಂತ್ರಸ್ಥರತ್ತ ಕಣ್ಣೆತ್ತಿಯೂ ನೋಡಲಿಲ್ಲ’

Posted: 02 Dec 2019 06:19 AM PST

ಶ್ರೀಲಂಕಾಕ್ಕೆ 3,000 ಕೋಟಿ ರುಪಾಯಿ ಕೊಡುವ ಪ್ರಧಾನಿ ಮೋದಿ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾಗ ಕಣ್ಣೆತ್ತಿಯೂ ನೋಡಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಉಪ ಚುನಾವಣೆ ಪ್ರಚಾರ ಭಾಷಣ ಮಾಡಿದ ಕುಮಾರಸ್ವಾಮಿ, ರಾಜ್ಯದ ಹಲವು ಜಿಲ್ಲೆಗಳಲ್ಲಿ ನೆರೆ, ಭಾರಿ ಮಳೆ ಹಾನಿಯಿಂದ ಜನ, ರೈತರು ಸಂಕಷ್ಟದಲ್ಲಿದ್ದಾಗ ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ. ಮುಖ್ಯಮಂತ್ರಿ ಭೇಟಿಗೆ ಪ್ರಧಾನಿ ಅವಕಾಶವನ್ನೇ ಕೊಡಲಿಲ್ಲ ಎಂದು ಟೀಕಿಸಿದ್ದಾರೆ.

ರಾಜ್ಯದ ರೈತರಿಗೆ, ನೆರೆ ಸಂತ್ರಸ್ತರಿಗೆ ಹಣ ಕೊಡದ ಮೋದಿ ಶ್ರೀಲಂಕಾಕ್ಕೆ 3 ಸಾವಿರ ಕೋಟಿ ರೂ.ಕೊಟ್ಟಿದ್ದಾರೆ. ಯಡಿಯೂರಪ್ಪ ಇದ್ದರಲ್ಲವೇ ವಿಶ್ವನಾಥ್ ಮಂತ್ರಿಯಾಗುವುದು. ಸುಮ್ಮನೆ ಅವರಿಗೆ ಮತ ಹಾಕಿ ನೀವು ನಿಮ್ಮ ವೋಟು ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ತಾವು ಮುಖ್ಯಮಂತ್ರಿಯಾಗಿದ್ದ ಜಾರಿಗೆ ತಂದ ಹಲವು ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ ಕುಮಾರಸ್ವಾಮಿ ಇದರಿಂದ ಅನುಕೂಲ ಪಡೆದುಕೊಂಡವರು ಬೆಂಬಲಿಸುವುದಾಗಿ ಹೇಳಿದ್ದಾರೆ. 17 ಜನ ಅನರ್ಹ ಶಾಸಕರಿಗೆ ಯಡಿಯೂರಪ್ಪ ಕಾಮಧೇನು ಆಗಿದ್ದಾರೆ ಹೊರತು ರಾಜ್ಯದ ಜನತೆಗೆ ಅಲ್ಲ ಎಂದು ಟೀಕಿಸಿದ್ದಾರೆ.

ಈ ಬಾರಿ ನೀವು ತೆಗೆದುಕೊಳ್ಳುವ ನಿರ್ಧಾರದಿಂದ ಬಿಜೆಪಿಗೆ ಅನುಕೂಲವಾಗಬಹುದು. ಜೆಡಿಎಸ್ ಗೆ ಮತ ಹಾಕಿದರೆ ಬಿಜೆಪಿಗೆ ಅನುಕೂಲವಾಗುತ್ತದೆ ಎಂದು ಕಾಂಗ್ರೆಸ್ ನವರು ಅಪಪ್ರಚಾರ ಮಾಡಿದ್ದಾರೆ. ಹುಣಸೂರಿನಲ್ಲಿ ಒಳ ಒಪ್ಪಂದ ಆಗಿದೆ ಎಂದು ಮತ್ತೆ ಕೆಲವರು ಆರೋಪಿಸಿದ್ದಾರೆ. ಆದರೆ ಕಾಂಗ್ರೆಸ್, ಬಿಜೆಪಿ ಉಪ ಚುನಾವಣೆಯಲ್ಲಿ ಹುಣಸೂರಿನಲ್ಲಿ ಕೊಚ್ಚಿ ಹೋಗಲಿವೆ. ಕ್ಷೇತ್ರದ ಮತದಾರರು ಜೆಡಿಎಸ್ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ʼಅಚ್ಚರಿʼಗೆ ಕಾರಣವಾಗಿದ್ದಾಳೆ ಈ ಪುಟ್ಟ ಬಾಲಕಿ

Posted: 02 Dec 2019 06:17 AM PST

ಹುಟ್ಟಿನಿಂದಲೇ ಮುಖದ ಮೇಲೆ ಬ್ಯಾಟ್‌ ಮ್ಯಾನ್ ಮುಖವಾಡದ ರೀತಿಯ ಮಚ್ಚೆ ಪಡೆದುಕೊಂಡ ಲೂನಾ ಫೆಂಡರ್ ಎನ್ನುವ ಬಾಲಕಿಯನ್ನು ಇದೀಗ ನೆಟ್ಟಿಗರು ಪುಟ್ಟ ಬ್ಯಾಟ್‌ಮ್ಯಾನ್ ಎಂದು ಕರೆದಿದ್ದಾರೆ.

ಕಂಜೇನಿಟಲ್ ಮೆಲನೊಸೈಟಿಕ್ ನೆವ್ಯೂಸ್ ಎನ್ನುವ ಕಂಡೀಷನ್‌ನಿಂದ ಈ ಸಮಸ್ಯೆ ಪಡೆದ ಬಾಲಕಿಗೆ ಅದರಿಂದ ಯಾವುದೇ ದೈಹಿಕ ತೊಂದರೆ ಇಲ್ಲವಂತೆ. ಹಾಗೂ ಹೊಟ್ಟೆಯಲ್ಲಿದ್ದಾಗ ಸ್ಕ್ಯಾನ್ ಮಾಡಿಸಿದಾಗ ಯಾವುದೇ ತೊಂದರೆ ಗೊತ್ತಾಗಿಲ್ಲವೆಂದು ಆಕೆ ತಾಯಿ ಕ್ಯಾರೋಲ್ ಫೆನ್ನರ್ ತಿಳಿಸಿದ್ದಾರೆ.

ಅದರಿಂದ ಬಾಲಕಿಗೆ ಏನೂ ತೊಂದರೆ ಇಲ್ಲವಾದರೂ ಅವಳ ಪಾಲಕರು ಅದನ್ನು ತೆಗೆಸಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಅವರು ರಷ್ಯಾವರೆಗೂ ಹೋಗಿದ್ದು, ಅಲ್ಲಿನ ವೈದ್ಯರೊಬ್ಬರು ಇದನ್ನು ತೆಗೆಯಲು ಒಪ್ಪಿದ್ದಾರಂತೆ.

ಸದ್ಯಕ್ಕೆ ಬಾಲಕಿಗೆ ಏಳು ತಿಂಗಳಾಗಿದ್ದು, ಮುಂದಿನ 18 ತಿಂಗಳಲ್ಲಿ ಹಲವು ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ತೆಗೆಯಲು ಅವರು ಪ್ರಯತ್ನಿಸುತ್ತಾರಂತೆ.

ನಿತ್ಯಾನಂದನನ್ನು ನಂಬಿ ಬೀದಿಗೆ ಬಿದ್ರಾ ಶಿಷ್ಯರು….?

Posted: 02 Dec 2019 06:14 AM PST

ನಿತ್ಯಾನಂದನ ಕಂತೆ ಪುರಾಣ ಎಲ್ಲರಿಗೂ ಗೊತ್ತಿದೆ. ಈ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಅತ್ಯಾಚಾರ ಆರೋಪಿಯಾಗಿದ್ದಾನೆ. ಸದ್ಯ ದೇಶ ಬಿಟ್ಟು ಓಡಿ ಹೋಗಿರುವ ನಿತ್ಯಾನಂದ ಇದೀಗ ಯಾವ ದೇಶದಲ್ಲಿ ಇದ್ದಾನೆಂಬ ಖಚಿತ ಮಾಹಿತಿ ಇಲ್ಲ ಎನ್ನಲಾಗುತ್ತಿದೆ.

ನಿತ್ಯಾನಂದನ ವಿಚಾರವಾಗಿ ಮತ್ತೊಂದು ವಿಚಾರ ಹೊರ ಬಿದ್ದಿದೆ. ಇವನನ್ನು ನಂಬಿ ಹಿಂದೆ ಹೋಗಿದ್ದ ಇವನ ಶಿಷ್ಯರು ಇದೀಗ ಬೀದಿಗೆ ಬೀಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಬಿಟ್ಟು ಗುಜರಾತ್ ಗೆ ಹೋಗಿ ಹೊಸ ಆಶ್ರಮ ಕಟ್ಟಿದ್ದ ನಿತ್ಯಾನಂದ ಸದ್ಯ ಅಲ್ಲಿಂದಲೂ ಪರಾರಿಯಾಗಿದ್ದಾನೆ.

ಅಹ್ಮದಾಬಾದ್ ನಲ್ಲಿ ನೆಲೆಸಿದ್ದ ನಿತ್ಯಾನಂದನ ಶಿಷ್ಯರು ಇದೀಗ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾರಂತೆ. ಹೀಗೊಂದು ಸುದ್ದಿ ಚರ್ಚೆಯಾಗುತ್ತಿದೆ. ಆದರೆ ಬಿಡದಿ ಬಳಿ ಇರುವ ಆಶ್ರಮದಲ್ಲಿ ಅಲ್ಲಿನ ಶಿಷ್ಯರಿಗೆ ಜೀವನ ಸಾಗಿಸಲು ಸಮಸ್ಯೆಯಾಗುತ್ತಿದೆಯಂತೆ. ಹಾಗಾಗಿ ಅಲ್ಲಿನ ಶಿಷ್ಯರು ಇಲ್ಲಿಗೆ ಬಂದರೆ ಮುಂದೇಗೆ ಎಂಬ ಪ್ರಶ್ನೆ ಮೂಡಿದೆ.

ಕ್ಯಾನ್ಸರ್ ಗೆದ್ದ ನಟಿ ಮನಿಶಾರಿಂದ ಭಾವನಾತ್ಮಕ ಪೋಸ್ಟ್‌

Posted: 02 Dec 2019 06:11 AM PST

ಕ್ಯಾನ್ಸರ್ ಎಂಬ ಮಹಾಮಾರಿ ಅನೇಕರ ಜೀವ ತೆಗೆದಿದೆ. ಎಷ್ಟೋ ಮಂದಿ ಈ ಮಹಾಮಾರಿಗೆ ನಲುಗಿ ಹೋಗುತ್ತಿದ್ದಾರೆ. ಆದರೆ ಮನಿಶಾ ಕೊಯಿರಾಲಾ ಮಾತ್ರ ಈ ಮಹಾಮಾರಿಗೆ ಸೆಡ್ಡು ಹೊಡೆದು ಕ್ಯಾನ್ಸರ್ ಗೆದ್ದು ಬಂದಿದ್ದಾರೆ. ಅಷ್ಟೇ ಅಲ್ಲ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು, ಈ ಪೋಸ್ಟ್ ಸಾಕಷ್ಟು ವೈರಲ್ ಆಗುತ್ತಿದೆ.

ಹೌದು, ಮನಿಶಾ ಅವರಿಗೆ ಕ್ಯಾನ್ಸರ್ ಎಂಬ ಮಾಹಾಮಾರಿ ಅಂಟಿಕೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸದ್ಯ ಗುಣಮುಖರಾಗಿರುವ ಇವರು ಇದೀಗ ಹೊಸ ಜೀವನದತ್ತ ಮುಖ ಮಾಡಿದ್ದಾರೆ. ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಮನಿಶಾ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು, ಆಸ್ಪತ್ರೆ ಬೆಡ್ ಮೇಲೆ ಚಿಕಿತ್ಸೆ ಪಡೆಯುತ್ತಿರುವುದು. ಮತ್ತೊಂದು ಹಿಮವುಳ್ಳ ಬೆಟ್ಟದ ಮೇಲೆ ನಿಂತಿರುವುದು. ಈ ಫೋಟೋಗಳ ಜೊತೆಗೆ ಜೀವನದ ಎರಡನೇ ಇನ್ನಿಂಗ್ಸ್ ಆರಂಭವಾಗಿದೆ. ಮತ್ತೆ ಜೀವನವನ್ನು ಆರಂಭ ಮಾಡುವುದಕ್ಕೆ ಅವಕಾಶ ಕೊಟ್ಟ ಎಲ್ಲರಿಗೂ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ.

— Manisha Koirala (@mkoirala) December 1, 2019

ನಟಿ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟ ಕ್ರಿಕೆಟಿಗ

Posted: 02 Dec 2019 06:07 AM PST

ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೃಹಸ್ಥಾಶ್ರಮಕ್ಕೆ ಮನೀಶ್ ಕಾಲಿಟ್ಟಿದ್ದು, ಇಂದು ಇವರ ವಿವಾಹ ಮಹೋತ್ಸವ ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ನಡೆದಿದೆ.

ನಟಿ ಆಶ್ರಿತಾ ಶೆಟ್ಟಿ ಕೈ ಹಿಡಿಯುವ ಮೂಲಕ ಮನೀಶ್ ಪಾಂಡೆ ಜೀವನದ ಮತ್ತೊಂದು ಅತಿ ಮಹತ್ವದ ಘಟ್ಟ ತಲುಪಿದ್ದಾರೆ. ಇಂದು ನಡೆದ ಸರಳ ವಿವಾಹ ಮಹೋತ್ಸವದಲ್ಲಿ ಸಂಬಂಧಿಕರು ಹಾಗೂ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

ವೆಸ್ಟ್ ಇಂಡೀಸ್ ಸರಣಿಯ ಬಳಿಕ ಬೆಂಗಳೂರಿನಲ್ಲಿ ರಿಸೆಪ್ಷನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಯಂತೆ. ಈ ಕಾರ್ಯಕ್ರಮಕ್ಕೆ ಸ್ನೇಹಿತರಿಗೆ, ಕ್ರಿಕೆಟಿಗರಿಗೆ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ.

— SunRisers Hyderabad (@SunRisers) December 2, 2019

ಹಿಂಬಾಗಿಲ ರಾಜಕೀಯ ಮಾಡುವ ಯಡಿಯೂರಪ್ಪನವರಿಗೆಲ್ಲಿದೆ ನೈತಿಕತೆ ಎಂದ ಸಿದ್ದು

Posted: 02 Dec 2019 06:02 AM PST

ಉಪ ಚುನಾವಣೆಯ ಅಬ್ಬರ ಜೋರಾಗಿದೆ. ಈಗಾಗಲೇ ಅಭ್ಯರ್ಥಿಗಳು ಕೂಡ ಕ್ಷೇತ್ರಗಳಲ್ಲಿ ಪ್ರಚಾರದ ಬ್ಯುಸಿಯಲ್ಲಿದ್ದಾರೆ. ಉಪ ಚುನಾವಣೆಗೆ ಸಮಯಾವಕಾಶ ಕಡಿಮೆ ಇದ್ದ ಕಾರಣ ಅಭ್ಯರ್ಥಿಗಳು ಹಾಗೂ ಮುಖಂಡರು ಸಿಕ್ಕ ಸಮಯದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇಂದೂ ಕೂಡ ಸಿದ್ದರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಈ ವೇಳೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ಗೆ ಕೈ ಕೊಟ್ಟು ಬಿಜೆಪಿ ಸೇರ್ಪಡೆಗೊಂಡಿರುವ ಸುಧಾಕರ್ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಸದ್ಯ ಅಬ್ಬರದ ಪ್ರಚಾರ ಕೂಡ ನಡೆಸುತ್ತಿದ್ದಾರೆ. ಇದೀಗ ಕಾಂಗ್ರೆಸ್ ಅಭ್ಯರ್ಥಿ ಪರ ಸಿದ್ದರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಇದೇ ವೇಳೆ ಸಿಎಂ ಯಡಿಯೂರಪ್ಪ ಹಾಗೂ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಮುಂಬಾಗಿಲಿನ ಮೂಲಕ ರಾಜಕೀಯ ಮಾಡಿಲ್ಲ. ಅವರು ನಮಗೆ ಪಾಠ ಹೇಳುವ ಅಗತ್ಯ ಇಲ್ಲ. ನಮ್ಮ ಶಾಸಕರನ್ನು ತಮ್ಮ ಪಕ್ಷಕ್ಕೆ ಎಳೆದು ಕೊಂಡು ಅಧಿಕಾರ ನಡೆಸುತ್ತಿದ್ದಾರೆ. ಇವರಿಗ್ಯಾವ ನೈತಿಕತೆ ಇದೆ ನಮ್ಮ ಬಗ್ಗೆ ಮಾತನಾಡಲು ಎಂದರು. ಇದೇ ವೇಳೆ ಬಿಜೆಪಿ ಅಭ್ಯರ್ಥಿ ಸುಧಾಕರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಕುತೂಹಲಕ್ಕೆ ಕಾರಣವಾಯ್ತು ‌ʼಮಹಾʼ ಬಿಜೆಪಿ ನಾಯಕಿಯ ಪೋಸ್ಟ್

Posted: 02 Dec 2019 05:59 AM PST

ದಿವಂಗತ ಗೋಪಿನಾಥ್ ಮುಂಡೆ ಅವರ ಪುತ್ರಿ, ಬಿಜೆಪಿ ನಾಯಕಿ ಪಂಕಜಾ ಮುಂಡೆ ತಮ್ಮ ಸಾಮಾಜಿಕ ಜಾಲತಾಣಗಳ ಸ್ಟೇಟಸ್ ನಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ತೆಗೆದು ಹಾಕಿದ್ದಾರೆ.

ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಬಿಜೆಪಿ ಬಗ್ಗೆ ಇದ್ದ ತಮ್ಮ ಸ್ವ ವಿವರವನ್ನು ತೆಗೆದಿದ್ದಾರೆ. ಸದ್ಯ ಇದು ಸಾಕಷ್ಟು ಚರ್ಚೆಯಾಗುತ್ತಿದೆ. ಪ್ರಸ್ತುತ ಮಹಾರಾಷ್ಟ್ರ ರಾಜಕೀಯದ ಬಗ್ಗೆ ಯೋಚನೆ ಮಾಡುವ ಅವಶ್ಯಕತೆ ತುಂಬಾ ಇದೆ. ಹಾಗಾಗಿ ಇದು ಅನಿವಾರ್ಯ ಎಂದು ಪೋಸ್ಟ್ ಒಂದನ್ನು ಮಾಡಿದ್ದಾರೆ.

ತಮ್ಮ ಫೇಸ್ ಬುಕ್‌ ನಲ್ಲಿ ಪೋಸ್ಟ್ ಒಂದನ್ನು ಹಾಕಿರುವ ಪಂಕಜಾ, ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸೋಲಿನ ನಂತರ ಬೆಂಬಲಿಗರಿಂದ ಹಲವಾರು ಕರೆಗಳು ಹಾಗೂ ಸಂದೇಶಗಳು ಬಂದಿವೆ. ಆದರೆ ಕೆಲವೊಂದು ಕಾರಣಗಳಿಂದ ಆಗಿರಲಿಲ್ಲ ಎಂದು ಮರಾಠಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನು ನೀವು ಕೆಲವೊಂದು ವಿಚಾರವಾಗಿ ಸಮಯವನ್ನು ಕೇಳುತ್ತಿದ್ದೀರಿ. ನಾನು ನಿಮಗೆ 8 ರಿಂದ 10 ದಿನ ನೀಡುತ್ತೇನೆ. ಮುಂದೇನು ಮಾಡಬೇಕು, ಯಾವ ಕಡೆ ಹೋಗಬೇಕು, ನಾವು ಜನರಿಗೆ ಏನು ಮಾಡಬಹುದು, ಅವರು ನಮ್ಮಿಂದ ಏನನ್ನು ನಿರೀಕ್ಷಿಸುತ್ತಾರೆ ಎಬೆಲ್ಲಾ ವಿಚಾರಗಳನ್ನು ಇಟ್ಟುಕೊಂಡು ಡಿಸೆಂಬರ್ 12 ರಂದು ನಿಮ್ಮ ಮುಂದೆ ಬರುತ್ತೇನೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಯಾದ ಬಳಿಕ ಪ್ರಧಾನಿ ಮೋದಿಗೆ ಉದ್ಧವ್ ಠಾಕ್ರೆ ʼಬಿಗ್ ಶಾಕ್ʼ

Posted: 02 Dec 2019 05:46 AM PST

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಬುಲೆಟ್ ರೈಲು ಯೋಜನೆ ಬಗ್ಗೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪ್ರಸ್ತಾಪಿಸಿದ್ದು, ಮರು ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.

ಬುಲೆಟ್ ರೈಲು ಯೋಜನೆ ಕುರಿತು ಮರುಪರಿಶೀಲನೆ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಮುಂಬೈ ಮತ್ತು ಅಹಮದಾಬಾದ್ ನಡುವೆ ಬುಲೆಟ್ ರೈಲು ಯೋಜನೆ ಅನುಷ್ಠಾನಕ್ಕೆ ಮೋದಿ ಕ್ರಮಕೈಗೊಂಡಿದ್ದು ಪ್ರಗತಿಯಲ್ಲಿರುವ ಯೋಜನೆ ಸೇರಿದಂತೆ ಎಲ್ಲಾ ಪ್ರಮುಖ ಅಭಿವೃದ್ಧಿ ಯೋಜನೆಗಳ ಬಗ್ಗೆ ಮರುಪರಿಶೀಲನೆ ನಡೆಸಲು ಉದ್ಧವ್ ಠಾಕ್ರೆ ಮುಂದಾಗಿದ್ದಾರೆ. ಬುಲೆಟ್ ರೈಲು ಯೋಜನೆ ಸೇರಿದಂತೆ ಹಲವು ಯೋಜನೆಗಳ ಮರು ಪರಿಶೀಲನೆಗೆ ಆದೇಶಿಸಿದ್ದಾರೆ.

ಬುಡಕಟ್ಟು ಜನಾಂಗದವರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರ ಜನಸಾಮಾನ್ಯರ ಪರವಾಗಿದ್ದು, ಬುಲೆಟ್ ರೈಲು ಯೋಜನೆಯ ಬಗ್ಗೆ ಮರು ಪರಿಶೀಲನೆ ನಡೆಸಲಾಗುವುದು. ಅರೆ ಮೆಟ್ರೋ ಶೆಡ್ ಕಾಮಗಾರಿಗೆ ತಡೆ ನೀಡಲಾಗಿದೆ. ಅಂತೆಯೇ ಬುಲೆಟ್ ರೈಲು ಯೋಜನೆಗೆ ತಡೆ ನೀಡಿಲ್ಲ. ಮರು ಪರಿಶೀಲನೆಗೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಒಂದೂ ರನ್ ನೀಡದೆ 6 ವಿಕೆಟ್ ಗಳಿಸಿದ ಬೌಲರ್, 8 ಜನ ಶೂನ್ಯ: 16 ರನ್ ಗೆ ಆಲೌಟ್ -5 ಎಸೆತದಲ್ಲೇ ಚೇಸ್

Posted: 02 Dec 2019 05:29 AM PST

Image result for south-asian-games-cricket-6-wickets-0-runs-nepals-anjali-chand-creates-t20i-history

ನೇಪಾಳದ ಪೊಕಾಹರ್ ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಬೌಲರ್ ಅಂಜಲಿ ಚಾಂದ್ ದಾಖಲೆ ಬರೆದಿದ್ದಾರೆ. ಮಾಲ್ಡಿವ್ಸ್ ಮಹಿಳಾ ಕ್ರಿಕೆಟ್ ತಂಡದ ಎದುರಿನ ಪಂದ್ಯದಲ್ಲಿ ಒಂದೇ ಒಂದು ರನ್ ನೀಡದೆ ನೇಪಾಳದ ಬೌಲರ್ ಅಂಜಲಿ ಚಾಂದ್ 6 ವಿಕೆಟ್ ಪಡೆಯುವ ಮೂಲಕ ಮಹಿಳಾ ಟಿ20 ಕ್ರಿಕೆಟ್ ನಲ್ಲಿ ದಾಖಲೆ ಬರೆದಿದ್ದಾರೆ.

ಸೌತ್ ಏಷ್ಯನ್ ಗೇಮ್ಸ್ ಟೂರ್ನಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಮಾಲ್ಡೀವ್ಸ್ ಮೊದಲು ಬ್ಯಾಟಿಂಗ್ ನಡೆಸಿದ್ದು, 10.1 ಓವರ್ ಗೆ 16 ರನ್ ಗೆ ಆಲ್ ಔಟ್ ಆಗಿದೆ. ಪಂದ್ಯದಲ್ಲಿ 2.1 ಓವರ್ ಬೌಲಿಂಗ್ ಮಾಡಿದ ಅಂಜಲಿ ಚಾಂದ್ 2 ಮೇಡನ್ ಸಹಿತ 6 ವಿಕೆಟ್ ಪಡೆದಿದ್ದಾರೆ. 16 ರನ್ ಗಳಿಗೆ ತಂಡವೇ ಆಲೌಟ್ ಆಗಿದೆ. ಟಾರ್ಗೆಟ್ ಬೆನ್ನಟ್ಟಿದ ನೇಪಾಳ ತಂಡ ಕೇವಲ 5 ಎಸೆತಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಜಯ ಗಳಿಸಿದೆ.

KSRTC ಬಸ್ ನಲ್ಲಿ ನಡೆದಿದೆ ನಡೆಯಬಾರದ ಘಟನೆ

Posted: 02 Dec 2019 05:04 AM PST

ಚಿಲ್ಲರೆ ವಿಷಯಕ್ಕೆ ಪ್ರಯಾಣಿಕ ಮತ್ತು ಬಸ್ ಕಂಡಕ್ಟರ್ ನಡುವೆ ಜಗಳವಾಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ಚಿಕ್ಕಪ್ಪನಹಳ್ಳಿ ಸಮೀಪ ನಡೆದಿದೆ.

ಮಧುಗಿರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಲ್ಲಿ ಮಾರನಾಯಕನಹಳ್ಳಿಗೆ ಹೋಗಲು ಪ್ರಯಾಣಿಕರೊಬ್ಬರು ಬಸ್ ಹತ್ತಿದ್ದಾರೆ. ಒಂದು ರೂಪಾಯಿ ಚಿಲ್ಲರೆ ವಿಷಯಕ್ಕೆ ಪ್ರಯಾಣಿಕ ಮತ್ತು ಬಸ್ ಕಂಡಕ್ಟರ್ ನಡುವೆ ಜಗಳವಾಗಿದೆ.

ಈ ವೇಳೆ ಬಸ್ ಕಂಡಕ್ಟರ್ ಕೈಯಲ್ಲಿದ್ದ ಟಿಕೆಟ್ ಕೊಡುವ ಮಿಷನ್ ನಿಂದ ಪ್ರಯಾಣಿಕನ ತಲೆಗೆ ಬಲವಾಗಿ ಹೊಡೆದಿದ್ದು, ತಲೆಗೆ ಗಾಯವಾಗಿ ರಕ್ತಸ್ರಾವವಾಗಿದ್ದು ಪ್ರಯಾಣಿಕ ಕೂಗಾಡಿದ್ದಾರೆ. ಇದನ್ನು ಕಂಡ ಉಳಿದ ಪ್ರಯಾಣಿಕರು ಚಿಕ್ಕಪ್ಪನಹಳ್ಳಿ ಸಮೀಪ ಬಸ್ ನಿಲ್ಲಿಸಿ ಕಂಡಕ್ಟರ್ ಮತ್ತು ಚಾಲಕರನ್ನು ಥಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಕೆಎಸ್ಆರ್ಟಿಸಿ ಅಧಿಕಾರಿಗಳು, ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಗಾಯಗೊಂಡ  ಪ್ರಯಾಣಿಕನನ್ನು ಕೊರಟಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

ಬೈ ಎಲೆಕ್ಷನ್ ಭವಿಷ್ಯ: ಉಪ ಚುನಾವಣೆಯಲ್ಲಿ ಬಿಜೆಪಿಗೆ ಎಷ್ಟು ಸ್ಥಾನ ಗೊತ್ತಾ…?

Posted: 02 Dec 2019 04:50 AM PST

ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವ ಸಾಧ್ಯತೆ ಇದೆ ಎಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿಯ ಗಣಿತ ತಜ್ಞರಾಗಿರುವ ಪಂಡಿತ ಶ್ರೀಪಾಲ್ ಉಪಾಧ್ಯ ರಾಜಕೀಯ ಭವಿಷ್ಯ ಹೇಳಿದ್ದಾರೆ.

ಅವರು ಹೇಳಿರುವ ರಾಜಕೀಯ ಭವಿಷ್ಯಗಳು ಇದುವರೆಗೂ ಸುಳ್ಳಾಗಿಲ್ಲ. ಸುಮಾರು 24 ತಲೆಮಾರುಗಳಿಂದ ಉಪಾಧ್ಯಾಯರ ಕುಟುಂಬ ನಿಖರವಾದ ಭವಿಷ್ಯ ಹೇಳುತ್ತಿದ್ದು, ಬಹುತೇಕ ಭವಿಷ್ಯಗಳು ನಿಜವಾಗಿವೆ.

ಶ್ರೀಪಾಲ್ ಉಪಾಧ್ಯ ಅವರು ಮೋದಿ ಎರಡು ಸಲ ಪ್ರಧಾನಿಯಾಗುವ ಬಗ್ಗೆ ಮತ್ತು ಕಳೆದ ವರ್ಷ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಬಗ್ಗೆ, ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಗೆಲುವಿನ ಬಗ್ಗೆ ಮೂರು ತಿಂಗಳ ಮೊದಲೇ ಭವಿಷ್ಯ ನುಡಿದಿದ್ದು, ಅದು ನಿಜವಾಗಿದೆ.

ಅದೇ ರೀತಿ ಉಪ ಚುನಾವಣೆ ನಡೆಯುವ 15 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಲಿದೆ ಎಂದು ಅವರು ಹೇಳಿದ್ದು, ಡಿಸೆಂಬರ್ 9 ರಂದು ಕುತೂಹಲಕ್ಕೆ ತೆರೆಬೀಳಲಿದೆ

ಕಾಂಗ್ರೆಸ್ – ಪಕ್ಷೇತರ ಒಳ ಒಪ್ಪಂದ, ನನಗೆ ಪ್ರಬಲ ಸ್ಪರ್ಧಿಯೇ ಇಲ್ಲ: ಎಂಟಿಬಿ ನಾಗರಾಜ್

Posted: 02 Dec 2019 04:30 AM PST

ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಆರೋಪಿಸಿದ್ದಾರೆ.

ಹೊಸಕೋಟೆ ಕ್ಷೇತ್ರದಲ್ಲಿ ನನಗೆ ಪ್ರಬಲ ಅಭ್ಯರ್ಥಿ ಯಾರು ಇಲ್ಲ. ನಾನು ಮೋದಿ ಹೆಸರಿನಲ್ಲಿಯೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಚ್ಚೇಗೌಡ ಮತ್ತು ಶರತ್ ಬಚ್ಚೇಗೌಡ ಬಡವರ ಭೂಮಿ ಕಬಳಿಸಿಲ್ಲ ಎಂದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಎಂಟಿಬಿ ಸವಾಲು ಹಾಕಿದ್ದಾರೆ.

ಬಚ್ಚೇಗೌಡರ ಕುಟುಂಬದವರು 261 ಎಕರೆ ಸರ್ಕಾರಿ ಗೋಮಾಳ ಜಮೀನು ಕಬಳಿಸಿದ್ದಾರೆ. ಶಾಂತನಪುರದಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಭೂಮಿ ಕಬಳಿಸಿದ್ದಾರೆ ಎಂದು ಎಸಿ ಕೋರ್ಟ್ ನಲ್ಲಿ ಆರೋಪ ಸಾಬೀತಾಗಿದೆ. ಕೋರ್ಟ್ ಬಡವರಿಗೆ ಜಮೀನು ನೀಡಿದೆ. ಆದರೆ ಬಿಟ್ಟುಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.

ಇದರ ಸಂಪೂರ್ಣ ದಾಖಲೆಗಳಿವೆ. ಬಚ್ಚೇಗೌಡ ಮತ್ತು ಪುತ್ರ ಶರತ್ ಬಚ್ಚೇಗೌಡ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲ್ ಹಾಕಿದ್ದಾರೆ.

ಕೊನೆ ಕ್ಷಣದಲ್ಲಿ ಕೆಆರ್ ಪೇಟೆ ಪ್ರಚಾರ ರದ್ದು ಮಾಡಿದ ಕುಮಾರಸ್ವಾಮಿ, ಕಾರಣ ಗೊತ್ತಾ…?

Posted: 02 Dec 2019 04:17 AM PST

ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತೆರಳಬೇಕಿದ್ದ ಹೆಲಿಕಾಪ್ಟರ್ ಹವಾಮಾನ ವೈಪರೀತ್ಯದಿಂದ ಟೇಕಾಫ್ ಆಗಿಲ್ಲ. ಇದರಿಂದಾಗಿ ಕೆಆರ್ ಪೇಟೆ ಪ್ರಚಾರಕ್ಕೆ ಅವರು ಹೋಗದಂತಾಗಿದೆ.

ಉಪ ಚುನಾವಣೆ ಹಿನ್ನಲೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದ ಹೆಚ್.ಡಿ. ಕುಮಾರಸ್ವಾಮಿ ಚಿಕ್ಕಬಳ್ಳಾಪುರದ ಹೆಲಿಪ್ಯಾಡ್ ನಿಂದ ಕೆಆರ್ ಪೇಟೆಗೆ ಪ್ರಚಾರಕ್ಕೆ ತೆರಳಬೇಕಿತ್ತು. ಆದರೆ, ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಕೆಆರ್ ಪೇಟೆ ಪ್ರವಾಸ ರದ್ದಾಗಿದೆ.

ಕೂದಲ ಆರೈಕೆಗೆ ಇಲ್ಲಿವೆ ಬೆಸ್ಟ್‌ ‘ಟಿಪ್ಸ್’

Posted: 02 Dec 2019 03:02 AM PST

ತಲೆಕೂದಲಿನ ಆರೈಕೆ ಅಷ್ಟೊಂದು ಸುಲಭದ ಕೆಲಸವಲ್ಲ. ಪುರುಷರದ್ದು ಒಂದು ರೀತಿಯ ಸಮಸ್ಯೆಯಾದರೆ, ಮಹಿಳೆಯರ ಗೋಳೇ ಬೇರೆ.

ನಿತ್ಯವೂ ಧೂಳು, ಕಲುಷಿತ ನೀರಿನ ನಡುವೆ ಕೂದಲಿಗೆ ಆರೈಕೆ ಮಾಡುವುದು ಅಗತ್ಯ, ಪ್ರಮುಖವಾಗಿ ಕೂದಲಿನ ಆರೈಕೆಗೆ ಈ ಹೇರ್‌ ಪ್ಯಾಕ್‌ ಮಾಡಿಕೊಳ್ಳುವುದು ಉತ್ತಮ.

* ಬಾಳೆ ಹಣ್ಣಿನ ಪ್ಯಾಕ್ ಕೂದಲಿಗೆ ಉತ್ತಮ ಪೋಷಣೆ ನೀಡುತ್ತದೆ. ಬಾಳೆಹಣ್ಣು ಹಾಗೂ ಮೊಟ್ಟೆಯ ಮಿಶ್ರಣವನ್ನು ಹಚ್ಚಿಕೊಳ್ಳುವುದರಿಂದ ಕೂದಲಿಗೆ ಹೊಳಪು ಸಿಗುತ್ತದೆ.

2 ಬಾಳೆಹಣ್ಣನ್ನು 2 ಮೊಟ್ಟೆಯಲ್ಲಿ ಮಿಕ್ಸ್‌ ಮಾಡಿ. ನಂತರ ನಿಂಬೆ ರಸ, 2 ವಿಟಮಿನ್‌ ಇ ಕ್ಯಾಪ್ಸುಲ್‌ಗಳನ್ನು ಸೇರಿಸಿ. ಈ ಪೇಸ್ಟ್‌ನನ್ನು ತಲೆ ಕೂದಲಿಗೆ ಹಚ್ಚಿ, ಅರ್ಧ ಗಂಟೆ ಬಿಟ್ಟುಬಿಡಿ. ಕೂದಲಿಗೆ ಕವರ್‌ ಮಾಡಿಕೊಳ್ಳಿ, ಬಳಿಕ ತೊಳೆದುಕೊಳ್ಳಿ.

* ಇನ್ನು ತಲೆ ಹೊಟ್ಟಿನ ಸಮಸ್ಯೆ ಇರುವವರು ಮೆಂತೆ ಕಾಳುಗಳನ್ನು ಒಂದು ರಾತ್ರಿ ನೀರಿನಲ್ಲಿ ನೆನೆಸಿ. ಅದನ್ನು ಅದುಮಿ ಪೇಸ್ಟ್‌ನಂತೆ ಮಾಡಿ. ದಾಸವಾಳದ ಎಲೆ ಹಾಗೂ ಹೂವನ್ನೂ ಪೇಸ್ಟ್‌ನಂತೆ ಮಾಡಿ, 2 ಚಮಚದಷ್ಟು ಈ ಪೇಸ್ಟ್‌ನ್ನು ಮೆಂತೆ ಪೇಸ್ಟ್‌ಗೆ ಸೇರಿಸಿಕೊಳ್ಳಿ. ಈ ಮಿಶ್ರಣಕ್ಕೆ ಓಲಿವ್‌ ಆಯಿಲ್‌ ಸೇರಿಸಿಕೊಳ್ಳಿ. ಕೂದಲಿಗೆ ಹಚ್ಚಿ 20-30 ನಿಮಿಷ ಬಿಟ್ಟುಬಿಡಿ, ಬಳಿಕ ಚೆನ್ನಾಗಿ ಕೂದಲನ್ನು ತೊಳೆಯಿರಿ.

* ಕೂದಲು ಸಾಫ್ಟ್ ಆಗಬೇಕೆಂದರೆ ಒಂದು ಕಪ್‌ ತೆಂಗಿನ ಕಾಯಿಯ ಹಾಲಿಗೆ 2 ಚಮಚ ಕರಿಬೇವನ್ನು ಹುಡಿ ಮಾಡಿ ಸೇರಿಸಿ. ಈ ಮಿಶ್ರಣವನ್ನು ಕೂದಲಿಗೆ ಹಾಕಿ ಒಂದು ಗಂಟೆಗಳ ಕಾಲ ಬಿಟ್ಟುಬಿಡಿ. ಬಳಿಕ ಚೆನ್ನಾಗಿ ತೊಳೆಯಿರಿ.

ಇಷ್ಟು ಮಾತ್ರವಲ್ಲದೆ, 1 ಚಮಚ ಬಾದಾಮಿ ಆಯಿಲ್‌ಗೆ 1 ಮೊಟ್ಟೆ ಮಿಶ್ರ ಮಾಡಿ. ಇದಕ್ಕೆ ನಿಂಬೆ ಹಾಗೂ 1 ಚಮಚ ಶುದ್ಧ ಗ್ಲಿಸರಿನ್‌ ಸೇರಿಸಿಕೊಳ್ಳಿ. ಕೂದಲಿಗೆ ಹಚ್ಚಿ ಸುಮಾರು 1 ಗಂಟೆಗಳ ಕಾಲ ಬಿಟ್ಟುಬಿಡಿ. ಕೂದಲಿಗೆ ಪ್ಲಾಸ್ಟಿಕ್‌ ಕವರ್‌ ಮಾಡಿಕೊಳ್ಳಿ. ಬಳಿಕ ತೊಳೆದುಕೊಂಡರೆ ಮೃದುವಾದ ಕೂದಲು ಪಡೆಯಬಹುದು.

ಶಾಕಿಂಗ್: ಕಣ್ಣಿನ ಆಪರೇಷನ್ ಬಳಿಕ ದೃಷ್ಟಿ ಕಳೆದುಕೊಂಡ ಯುವಕ

Posted: 02 Dec 2019 02:59 AM PST

ಕಣ್ಣಿನ ಆಪರೇಷನ್ ಬಳಿಕ ಯುವಕನೊಬ್ಬ ದೃಷ್ಟಿ ಕಳೆದುಕೊಂಡಿದ್ದು, ಸಂತ್ರಸ್ತನ ಸಂಬಂಧಿಕರು ಆಸ್ಪತ್ರೆ ವಿರುದ್ಧ ನಿರ್ಲಕ್ಷ್ಯತನದ ಆರೋಪ ಮಾಡಿದ್ದಾರೆ.

ಕೋಲ್ಕತದ ಬರುಯಿಪುರದ ನಿವಾಸಿ 24 ವರ್ಷದ ರಾಜಾ ನಸ್ಕರ್ ದೃಷ್ಟಿ ಕಳೆದುಕೊಂಡವರು. ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿರುವಾಗ ಇವರ ಕಣ್ಣಿಗೆ ಗಾಯವಾಗಿತ್ತು.

ಆಗ ಚಿಕಿತ್ಸೆಗಾಗಿ ಇವರು ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಆಪ್ತಾಲ್ಮಲಜಿ(ಆರ್‌ಐಒ) ಕೇಂದ್ರಕ್ಕೆ ಸೇರಿದ್ದರು. ಈ ಸಂದರ್ಭ ನಡೆದ ಶಸ್ತ್ರಚಿಕಿತ್ಸೆ ವೇಳೆ ಅವರು ಬಲಗಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಇದನ್ನು ನಿರ್ಲಕ್ಷ್ಯ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಆದರೆ ಆಸ್ಪತ್ರೆಯವರು ಇದನ್ನು ನಿರಾಕರಿಸಿದ್ದಾರೆ.

ಪೊಲೀಸ್‌ ಗೆ ’PIG’ ಲೇಬಲ್‌ ಇದ್ದ ಕಪ್ ಕೊಟ್ಟು ಕೆಲಸ ಕಳೆದುಕೊಂಡ ಸ್ಟಾರ್‌ ಬಕ್ಸ್‌ ಸಿಬ್ಬಂದಿ

Posted: 02 Dec 2019 02:56 AM PST

ಒಕ್ಲಾಹಾಮಾದ ಪೊಲೀಸ್ ಅಧಿಕಾರಿಯೊಬ್ಬರಿಗೆ ‘PIG’ಎಂದು ಮುದ್ರಿಸಲಾದ ಲೇಬಲ್‌ ಇದ್ದ ಕಾಫಿ ಕೊಟ್ಟ ಸ್ಟಾರ್‌ ಬಕ್ಸ್‌ ಉದ್ಯೋಗಿಯೊಬ್ಬ ತನ್ನ ಕೆಲಸಕ್ಕೆ ಕುತ್ತು ತಂದುಕೊಂಡಿದ್ದಾರೆ.

ಇಲ್ಲಿನ ಗ್ಲೆನ್‌ಪೂಲ್‌ನ ಸ್ಟಾರ್‌ಬಕ್ಸ್‌ ಔಟ್‌ಲೆಟ್‌ಗೆ ಆಗಮಿಸಿದ್ದ ಕೀಫರ್‌ನ ಪೊಲೀಸ್ ಅಧಿಕಾರಿಯೊಬ್ಬರು ಥ್ಯಾಂಕ್ಸ್‌ ಗಿವಿಂಗ್‌ ದಿನಕ್ಕೆಂದು ಐದು ಪಾನೀಯಗಳನ್ನು ಖರೀದಿ ಮಾಡಿದ್ದಾರೆ. ಈ ವೇಳೆ ಅವರಿಗೆ ನೀಡಲಾದ ಕಪ್‌ಗಳ ಮೇಲೆ ಇದ್ದ ಲೇಬಲ್‌ಗಳ ಮೇಲೆ ‘PIG’ ಲೇಬಲ್‌ ಇದ್ದ ಕಾರಣ ಪೊಲೀಸ್ ಅಧಿಕಾರಿ ಜಾನಿ ಒ'ಮರಾಗೆ ಸಿಟ್ಟು ನೆತ್ತಿಗೇರುವಂತಾಗಿದೆ.

ಈ ಕಪ್‌ಗಳ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿಕೊಂಡ ಒ'ಮಾರಾ, ಪೋಸ್ಟ್‌ ಒಂದನ್ನು ಹಾಕಿದ್ದಾರೆ. ಇದು ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಸ್ಟಾರ್‌ಬಕ್ಸ್‌, ತನ್ನ ಪ್ರತಿಷ್ಠೆಗೆ ಧಕ್ಕೆಯಾಗಿಬಿಡುತ್ತದೆ ಎನ್ನುವ ಭೀತಿಯಲ್ಲಿ, ಆ ನೌಕರನನ್ನು ತಕ್ಷಣ ವಜಾಗೊಳಿಸಿದ್ದಲ್ಲದೇ, ಪೊಲೀಸಪ್ಪನಿಗೆ ಬೇಷರತ್‌ ಕ್ಷಮೆಯಾಚಿಸಿದೆ.

ಪೊಲೀಸ್‌ ಠಾಣೆಯಲ್ಲೇ ನೆರವೇರಿದೆ ಪ್ರೇಮ ವಿವಾಹ

Posted: 02 Dec 2019 02:54 AM PST

ಮನೆಯವರ ವಿರೋಧವಿದ್ದ ಪ್ರೇಮಿಗಳಿಗೆ ಪೊಲೀಸರು ಸ್ಟೇಷನ್‌ನಲ್ಲೇ ಮದುವೆ ಮಾಡಿಸಿ ನೆರವಾಗಿದ್ದಾರೆ.

ಉತ್ತರಪ್ರದೇಶದ ದಿಯೊಬಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಪತನ್‌ಪುರ್ ಮೊಹಲ್ಲಾದ ಅಬ್ದುಲ್ ಮಲಿಕ್ ಮತ್ತು ಮಿರ್ಜಾಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಗಂದೇವಾಡ್‌ನ ಖುಷ್‌ನಸೀಬ್ ಪರಸ್ಪರ ಪ್ರೀತಿಸುತ್ತಿದ್ದರು.

ಇದಕ್ಕೆ ಹಿರಿಯರ ವಿರೋಧ ಇದ್ದದ್ದರಿಂದ ಅವರು ದಿಯೊಬಂಡ್ ಪೊಲೀಸರಿಗೆ ಮೊರೆ ಹೋಗಿದ್ದರು. ಪೊಲೀಸರು ಮನವರಿಕೆ ಮಾಡಿದರೂ ಮನೆಯವರು ಒಪ್ಪದಿದ್ದಾಗ ಸ್ಟೇಷನ್‌ನಲ್ಲೇ ಮದುವೆ ಮಾಡಿಸಿದ್ದಾರೆ.

ಹಣಕ್ಕೆ ಪೀಡಿಸಿ ವಾಹನ ಸವಾರರಿಗೆ ಕುಡುಕನ ಕಾಟ

Posted: 02 Dec 2019 02:49 AM PST

ಕುಡಿತದ ಚಟದಿಂದ ಹೊರ ಬಂದು ಒಳ್ಳೆಯವರಾದವರು ಬೆರಳೆಣಿಕೆಯಷ್ಟು ಮಂದಿ. ಈ ಕುಡಿತದಿಂದ ಮನೆ ಮಠ ಕಳೆದುಕೊಂಡವರು ಎಷ್ಟೋ ಮಂದಿ. ಇನ್ನೊಂದಿಷ್ಟು ಜನ ಕುಡಿತಕ್ಕೆ ಹಣ ಸಿಗದೆ ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಕುಡುಕ ಹಣಕ್ಕಾಗಿ ಬೀದಿ ರಂಪಾಟ ಮಾಡಿದ್ದಾನೆ.

ಹೌದು, ನೆಲಮಂಗಲ ಪಟ್ಟಣದ ಕೆಇಬಿ ಆಂಜನೇಯ ದೇವಾಲಯದ ರಸ್ತೆಯಲ್ಲಿ ಈ ಕುಡುಕನ ಕಾಟ ಮಿತಿ ಮೀರಿದೆ. ಕುಡುಕನ ಕಾಟಕ್ಕೆ ಸಾರ್ವಜನಿಕರು, ವಾಹನ ಸವಾರರು ಬೇಸತ್ತು ಹೋಗಿದ್ದಾರೆ.

ಈ ಕುಡುಕ ರಸ್ತೆಯಲ್ಲಿ ಬರುವ ವಾಹನಗಳನ್ನು ಅಡ್ಡಗಟ್ಟುತ್ತಾನೆ. ವಾಹನ ಸವಾರರು ನಿಲ್ಲಿಸಲಿಲ್ಲ ಎಂದರೆ ಕಾರಿಗೆ ಅಡ್ಡಲಾಗಿ ಮಲಗುತ್ತಾನೆ. ಹಣ ಕೊಡುವವರೆಗೂ ಬಿಡುವುದಿಲ್ಲ. ಹೀಗೆ ಹಣ ಪಡೆದು ಕಂಠಪೂರ್ತಿ ಕುಡಿಯೋದ್ರ ಜೊತೆಗೆ ಗಾಂಜಾ ಕೂಡ ಸೇವನೆ ಮಾಡ್ತಾನಂತೆ.

ಪಶ್ಚಿಮ ಬಂಗಾಳ ಅಧಿಕಾರಿಗೆ ಶಕ್ತಿ ಕೊಡುತ್ತಂತೆ ದೀದಿ ಫೋಟೋ…!

Posted: 02 Dec 2019 02:46 AM PST

ದೇವರ ಭಾವಚಿತ್ರದ ಮುಂದೆ ನಿಂತು ಪ್ರಾರ್ಥನೆ ಮಾಡಿದರೆ ಶಕ್ತಿ ಸಿಗುತ್ತದೆ ಎಂಬುದನ್ನು ಕೇಳಿದ್ದೀರಿ. ಆದರೆ ಇಲ್ಲೊಬ್ಬ ಸರ್ಕಾರಿ ಅಧಿಕಾರಿಗೆ ಬಂಗಾಳದ ಸಿಎಂ ಫೋಟೋ ಮುಂದೆ ಎರಡು ನಿಮಿಷಗಳ ಕಾಲ ನಿಂತರೆ ಅದ್ಭುತ ಶಕ್ತಿ ಸಿಗುತ್ತದಂತೆ. ಅಷ್ಟೇ ಅಲ್ಲ ಮೀಡಿಯಾದವರೂ ಪ್ರಯತ್ನಿಸಿ ಎಂದು ಪುಕ್ಕಟೆ ಸಲಹೆ ಕೂಡಾ ಕೊಟ್ಟಿದ್ದಾರೆ.

ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಪರಿಹಾರ ವಿತರಣೆ ವೇಳೆ ಹಸನಾಬಾದ್ ಕ್ಷೇತ್ರಾಭಿವೃದ್ದಿ ಅಧಿಕಾರಿ ಅರಂದಂ ಮುಖರ್ಜಿ ಇಂತಹ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ.

ಸಿಎಂ ಮಮತಾ ಬ್ಯಾನರ್ಜಿಯವರ ಫೋಟೋ ಮುಂದೆ ನಿತ್ಯ ಬೆಳಿಗ್ಗೆ ಎರಡು ನಿಮಿಷ ನಿಂತರೆ ಅದ್ಭುತ ಶಕ್ತಿ ಸಿಗುತ್ತದೆ. ನಾನು ಸ್ವಾಮಿ ವಿವೇಕಾನಂದ ಮತ್ತು ಮಮತಾ ಅವರ ಫೋಟೋ ‌ಮುಂದೆ ನಿತ್ಯ ನಿಲ್ಲುವೆ, ನೀವು ಪ್ರಯತ್ನಿಸಿ ಎಂದು ಜನರಿಗೂ ಅಧಿಕಾರಿ ಕರೆ ಕೊಟ್ಟಿದ್ದಾರೆ.

ಮಾಧ್ಯಮದ ಮುಂದೆಯೂ ಹೇಳಿಕೆ ಸಮರ್ಥಿಸಿಕೊಂಡಿರುವ ಮುಖರ್ಜಿ, ದೀದೀ ಅಪ್ರತಿಮ ಸಾಧಕಿ. ನೀವು ಕೂಡಾ ಅವರ ಫೋಟೋ ಮುಂದೆ ನಿಂತರೆ ಪ್ರೇರಣೆ ಪಡೆಯುವಿರಿ ಎಂದಿದ್ದಾರೆ. ಇದಕ್ಕೆ ಬಸಿರ್ ಹಾತ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಗಣೇಶ್ ಘೋಷ್, ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಅಧಿಕಾರಿಗೆ ಅಷ್ಟು ಕಾಳಜಿ, ಪ್ರೀತಿ ಇದ್ದರೆ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಟಿಎಂಸಿ ಧ್ವಜ ಹಿಡಿದು ಹೊಗಳಲಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಟಿಎಂಸಿ ಮುಖಂಡ ಫಿರೋಝ್ ಕಮಲ್ ಘಜಿ ಈ ಬಗ್ಗೆ ಪ್ರತಿಕ್ರಯಿಸಿ ಇದು ಸತ್ಯ ಸಂಗತಿ. ಪ್ರತಿಯೊಬ್ಬರು ಅವರದ್ದೇ ಆದ ಭಾವನಾತ್ಮಕ ಹೇಳಿಕೆ ಕೊಟ್ಟರೆ ತಪ್ಪೇನು ಎಂದು ಪ್ರಶ್ನಿಸಿದ್ದು, ಇದು ಸಿಎಂ ದೀದಿಗೆ ಅಧಿಕಾರಿ ಕೊಟ್ಟಿರುವ ಗೌರವ ಎಂದಿದ್ದಾರೆ.

ಬೆಲೆ ತಾರತಮ್ಯ ಹೋಗಲಾಡಿಸಲು ನೆಸ್ಲೆ – ಹಲ್ದಿರಾಮ್ ನಿರ್ಧಾರ

Posted: 02 Dec 2019 02:43 AM PST

ಸಾಮಾನ್ಯ ವ್ಯಾಪಾರ ಮತ್ತು ಈಗಿನ ಇ-ವ್ಯಾಪಾರದ ನಡುವೆ ಉದ್ಭವಿಸುತ್ತಿರುವ ತಾರತಮ್ಯದ ಬೆಲೆಯ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ನೆಸ್ಲೆ ಮತ್ತು ಹಲ್ದಿರಾಮ್ ಕಂಪನಿ ವಿತರಕರೊಂದಿಗೆ ಚರ್ಚಿಸಲು ಒಪ್ಪಿವೆ.

ದೇಶದ ಪ್ರಸಿದ್ಧ ಗ್ರಾಹಕ ಸರಕು ಕಂಪನಿಗಳು ಬೆಲೆಯಲ್ಲಿ ತಾರತಮ್ಯ ಎಸಗುತ್ತಿವೆ ಎಂದು ಆರೋಪಿಸಿ ಕಳೆದ ತಿಂಗಳು ಸುಮಾರು 4 ಲಕ್ಷ ವಿತರಕರು ಡಿ.15ರಿಂದ ಸರಕುಗಳನ್ನು ಸಂಗ್ರಹಿಸಿಡುವುದನ್ನು ಸ್ಥಗಿತಗೊಳಿಸುವ ಬೆದರಿಕೆ ಒಡ್ಡಿದ್ದರು.

ನೆಸ್ಲೆ ಮತ್ತು ಹಲ್ದಿರಾಮ್ ಕಂಪನಿಯ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಲಾಗಿದ್ದು, ನೂತನ ಮಾದರಿಯ ಇ-ವ್ಯಾಪಾರಗಳಿಗೆ ನೀಡುವ ರಿಯಾಯಿತಿಯನ್ನು ನಿಧಾನವಾಗಿ ಕಡಿಮೆ ಮಾಡುವುದಾಗಿ ಹೇಳಿದ್ದಾರೆಂದು ಅಖಿಲ ಭಾರತ ಗ್ರಾಹಕ ಉತ್ಪನ್ನಗಳ ವಿತರಕರ ಫೆಡರೇಷನ್ ಅಧ್ಯಕ್ಷ ಧೈರ್ಯಶೀಲ ಪಾಟೀಲ ಹೇಳಿದ್ದಾರೆ.

ಗೊರಕೆ ಸಮಸ್ಯೆಗೆ ಇಲ್ಲಿದೆ ‘ಮನೆ ಮದ್ದು’

Posted: 02 Dec 2019 02:21 AM PST

ಪಕ್ಕದಲ್ಲಿರುವವರ ನಿದ್ದೆ ಹಾಳು ಮಾಡುವ ಸುಲಭ ಉಪಾಯ ಗೊರಕೆ. ನಿದ್ದೆಯಲ್ಲಿ ಗೊರಕೆ ಸಾಮಾನ್ಯ. ಆದ್ರೆ ಪಕ್ಕದಲ್ಲಿ ಮಲಗಿರುವವರಿಗೆ ಈ ಗೊರಕೆ ಕಿರಿಕಿರಿಯನ್ನುಂಟು ಮಾಡುತ್ತೆ.

ಗೊರಕೆ ಜಾಸ್ತಿಯಾದ್ರೆ ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು. ಯಾಕೆಂದ್ರೆ ಹೃದಯ ಸಂಬಂಧಿ ಕಾಯಿಲೆಗೆ ಗೊರಕೆ ಕಾರಣವಾಗಬಹುದು. ಮನೆಯಲ್ಲಿಯೇ ಕೆಲವೊಂದು ಮದ್ದು ಮಾಡಿಕೊಂಡು ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ಪುದೀನ ತೈಲ : ಗಂಟಲಿನ ಊತವನ್ನು ಕಡಿಮೆ ಮಾಡುವ ಗುಣ ಪುದೀನಾದಲ್ಲಿದೆ. ಮಲಗುವ ಮೊದಲು ಪುದೀನಾ ಮೌತ್ ವಾಶ್ ನಿಂದ ಬಾಯಿ ಮುಕ್ಕಳಿಸಿಕೊಂಡು ಮಲಗಿ. ಅನೇಕ ದಿನಗಳ ಕಾಲ ಹೀಗೆ ಮಾಡಿದ್ರೆ ಪರಿಣಾಮ ನಿಮಗೆ ಕಾಣುತ್ತೆ.

ಅರಿಶಿನ : ಅರಿಶಿನದಲ್ಲಿ ಎಂಟಿ ಸೆಪ್ಟಿಕ್ ಹಾಗೂ ಎಂಟಿ ಬಯೋಟಿಕ್ ಗುಣಗಳಿರುತ್ತವೆ. ಇದರ ಬಳಕೆಯಿಂದ ಉಸಿರಾಟ ಸುಲಭವಾಗುತ್ತದೆ. ಪ್ರತಿದಿನ ರಾತ್ರಿ ಹಾಲಿಗೆ ಅರಿಶಿನ ಹಾಕಿ ಕುಡಿಯುವುದು ಒಳ್ಳೆಯದು.

ಬೆಳ್ಳುಳ್ಳಿ : ಸೈನಸ್ ಸಮಸ್ಯೆ ಇರುವವರಿಗೆ ಬೆಳ್ಳುಳ್ಳಿ ಉತ್ತಮ. ಇದು ಉಸಿರಾಟ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಬೆಳ್ಳುಳ್ಳಿ ಉತ್ತಮ ಹಾಗೂ ಚೆನ್ನಾಗಿ ನಿದ್ದೆ ಬರಲು ಸಹಕಾರಿ.

ಆಲಿವ್ ಎಣ್ಣೆ : ಆಲಿವ್ ಆಯಿಲ್ ಕೂಡ ಮನೆ ಮದ್ದುಗಳಲ್ಲಿ ಒಂದು. ಇದರ ಬಳಕೆಯಿಂದ ಉಸಿರಾಟ ಸರಾಗವಾಗುತ್ತದೆ.

ಏಲಕ್ಕಿ : ಏಲಕ್ಕಿ ಕೂಡ ಒಳ್ಳೆಯ ಔಷಧಿ. ರಾತ್ರಿ ಬೆಚ್ಚಗಿನ ನೀರಿಗೆ ಏಲಕ್ಕಿ ಪುಡಿ ಬೆರೆಸಿ, ಅದನ್ನು ಕುಡಿಯುವುದರಿಂದ ಉಸಿರಾಟ ಸಮಸ್ಯೆ ಕಡಿಮೆಯಾಗುತ್ತದೆ.

ಆರೋಗ್ಯಕ್ಕೆ ನಾಡಿಶೋಧನ ಪ್ರಾಣಾಯಾಮ ನಿತ್ಯ ಮಾಡಿ

Posted: 02 Dec 2019 02:18 AM PST

ನಾಡಿಶೋಧನ ಪ್ರಾಣಾಯಾಮಕ್ಕೆ ಐದೇ ನಿಮಿಷ ಮೀಸಲಿಟ್ಟರೆ ಸಾಕು, ದಿನಪೂರ್ತಿ ಸುಸ್ತು ಕಾಡುವುದೇ ಇಲ್ಲ. ಈ ಪ್ರಾಣಾಯಾಮವನ್ನು ಅನುಲೋಮ-ವಿಲೋಮ ಪ್ರಾಣಾಯಾಮ ಎಂದು ಕರೆಯುತ್ತೇವೆ.

ಇದನ್ನು ಮಾಡಲು ಮೊದಲು ಸುಖಾಸನದಲ್ಲಿ ಕುಳಿತುಕೊಳ್ಳಬೇಕು. ನಂತರ ಕಣ್ಣುಗಳನ್ನು ಮುಚ್ಚಿ, ನಿಧಾನಕ್ಕೆ ಉಸಿರು ತೆಗೆದು ಬಿಡಿ. ಎಡ ಕೈಯನ್ನು ಜ್ಞಾನ ಮುದ್ರೆಯಲ್ಲಿ ಹಿಡಿದು, ಬಲಗೈಯ ತೋರು ಬೆರಳು ಹಾಗೂ ಮಧ್ಯದ ಬೆರಳನ್ನು ಮಡಚಿ, ನಂತರ ಮೊದಲು ಬಲ ಮೂಗನ್ನು ಮುಚ್ಚಿ ಎಡ ಮೂಗಿನಿಂದ ಉಸಿರು ಎಳೆದು ಬಲಭಾಗದ ಮೂಗಿನಲ್ಲಿ ನಿಧಾನಕ್ಕೆ ಬಿಡಿ.

ನಂತರ ಬಲ ಭಾಗದ ಮೂಗಿನಿಂದ ಉಸಿರು ತೆಗೆದು ಎಡಭಾಗದ ಮೂಗಿನಲ್ಲಿ ಬಿಡಿ. ಈ ರೀತಿ 9 ಬಾರಿ ಮಾಡಿ, 9ನೇ ಸುತ್ತಿನಲ್ಲಿ ಎಡಭಾಗದಿಂದ ಉಸಿರನ್ನು ನಿಧಾನಕ್ಕೆ ಬಿಟ್ಟು ಹಾಗೇ ಜ್ಞಾನ ಸ್ಥಿತಿಯಲ್ಲಿ ಕೂರಿ, ಕಣ್ಣುಗಳನ್ನು ಕೂಡಲೇ ತೆಗೆಯಬೇಡಿ. ಕೈಗಳನ್ನು ಒಂದಕ್ಕೊಂದು ಉಜ್ಜಿ, ಆ ಬಿಸಿಯನ್ನು ಕಣ್ಣಿನ ಮೇಲೆ ಇಡಿ, ನಂತರ ನಿಧಾನಕ್ಕೆ ಕಣ್ಣು ಬಿಡಿ. ಯಾರು 5 ನಿಮಿಷ ಈ ನಾಡಿಶೋಧನ ಪ್ರಾಣಾಯಾಮ ಮಾಡುತ್ತಾರೋ ಅವರು ಈ ಪ್ರಯೋಜನಗಳನ್ನು ಪಡೆಯಬಹುದು.

* ನಾಡಿಶೋಧನ ಪ್ರಾಣಾಯಾಮದಲ್ಲಿ ಆಮ್ಲಜನಕ ಹೆಚ್ಚಾಗಿ ದೇಹವನ್ನು ಸೇರುವುದರಿಂದ ದೇಹದಲ್ಲಿರುವ ಕಶ್ಮಲಗಳು ಹೊರ ಹೋಗುತ್ತದೆ.

* ದಿನಪೂರ್ತಿ ಲವಲವಿಕೆಯಿಂದ ಇರಲು ಸಹಾಯ ಮಾಡುತ್ತದೆ.

* ಹೃದಯ ಸಂಬಂಧಿ ಕಾಯಿಲೆ ಇರುವವರು ಈ ಪ್ರಾಣಾಯಾಮ ಮಾಡಿದರೆ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

* ಅಲರ್ಜಿ, ಕೆಮ್ಮಿನ ಸಮಸ್ಯೆ ಇರುವವರು ನಾಡಿಶೋಧನ ಪ್ರಾಣಾಯಾಮ ಮಾಡಿದರೆ ಸಮಸ್ಯೆ ಕಡಿಮೆಯಾಗುತ್ತದೆ.

* ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

* ಹಾರ್ಮೋನ್‌ಗಳ ಸಮತೋಲನ ಕಾಪಾಡುತ್ತದೆ.

* ಉಸಿರಾಟದ ಸಮಸ್ಯೆ ಇರುವವರು ಈ ಪ್ರಾಣಾಯಾಮ ಮಾಡಿದರೆ ಸಮಸ್ಯೆ ದೂರವಾಗುತ್ತದೆ

ಮಕ್ಕಳ ಹುಟ್ಟುಹಬ್ಬದ ಸಂಭ್ರಮ ಕೈಬಿಟ್ಟು ರೋಗಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದ ವೈದ್ಯ

Posted: 02 Dec 2019 02:03 AM PST

ಒಡಿಶಾದ ವೈದ್ಯರೊಬ್ಬರು ಅವಳಿ ಮಕ್ಕಳು ಹುಟ್ಟಿದ್ದಕ್ಕೆ ಔತಣಕೂಟ ಏರ್ಪಡಿಸಲು ಇಟ್ಟಿದ್ದ ಹಣವನ್ನು ಎಚ್‌ಐವಿ ಪೀಡಿತ ಬಾಲಕನೊಬ್ಬನ ಕಷ್ಟ ನೋಡಿ ಅವನ ಚಿಕಿತ್ಸೆಗೆ ನೀಡಿರುವ ಘಟನೆ ನಡೆದಿದೆ.

ಬುರ್ಲಾ ನಗರದ ವೀರ್ ಸುರೇಂದರ್ ಸಾಯಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಶಂಕರ್ ರಾಮ್‌ಚಂದಾನಿ ಅವರಿಗೆ ಎರಡು ತಿಂಗಳ ಹಿಂದೆ ಅವಳಿ ಹೆಣ್ಣು ಮಕ್ಕಳು ಹುಟ್ಟಿದ್ದರು. ಅವರು ಹುಟ್ಟಿದ ಸಂಭ್ರಮಕ್ಕೆ ಔತಣಕೂಟ ಏರ್ಪಡಿಸಲು 50,000 ರೂಪಾಯಿ ತೆಗೆದಿಟ್ಟಿದ್ದರಂತೆ.

ಆದರೆ ಹುಟ್ಟಿನಿಂದ ಏಡ್ಸ್‌ನಿಂದ ಬಳಲುತ್ತಿದ್ದ ಬಾಲಕನೊಬ್ಬ 2013ರಲ್ಲಿಯೇ ಈ ಕಾಯಿಲೆಗೆ ತನ್ನ ತಂದೆ-ತಾಯಿಯನ್ನು ಕಳೆದುಕೊಂಡಿದ್ದ. ಇದೀಗ ಅವನಿಗೆ ಚಿಕಿತ್ಸೆಗೆ ತುರ್ತು ಸಹಾಯ ಬೇಕೆಂದು ತಿಳಿದ ರಾಮ್‌ಚಂದಾನಿ ಆ ಹಣವನ್ನು ಅವನಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ವಿಭಿನ್ನ ರೀತಿಯಲ್ಲಿ ಅನರ್ಹ ಶಾಸಕನ ಪರ ಮತ ಯಾಚಿಸಿದ ಹಾಸ್ಯ ನಟ

Posted: 02 Dec 2019 02:00 AM PST

ಈಗಾಗಲೇ ಚುನಾವಣೆ ಕಣ ರಂಗೇರಿದೆ. 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ಕಾವು ಜೋರಾಗಿದ್ದು, ಮಂಗಳವಾರ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಇನ್ನು ಅಭ್ಯರ್ಥಿಗಳ ಪರ ಸಿನಿಮಾ ನಟ-ನಟಿಯರು ಪ್ರಚಾರದಲ್ಲಿ ಭಾಗಿಯಾಗಿ ಮತ ಯಾಚನೆ ಮಾಡುತ್ತಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಧಾಕರ್ ಕೂಡ ತಮ್ಮ ಕ್ಷೇತ್ರದಲ್ಲಿ ಮತಬೇಟೆ ನಡೆಸುತ್ತಿದ್ದಾರೆ. ಈಗಾಗಲೇ ಸುಧಾಕರ್ ಪರ ಅನೇಕ ನಟ – ನಟಿಯರು ಮತಯಾಚನೆ ಮಾಡಿದ್ದು, ಇದೀಗ ತೆಲುಗು ಹಾಸ್ಯ ನಟ ಪ್ರಚಾರ ನಡೆಸಿದ್ದಾರೆ.

ತೆಲುಗಿನ ಸಿನಿಮಾ ರಂಗದಲ್ಲಿ ನಟನೆಯ ಮೂಲಕ ಜನ ಮನ ಗೆದ್ದ ಬ್ರಹ್ಮಾನಂದಂ ಕನ್ನಡದಲ್ಲೂ ಚಿರಪರಿಚಿತರೇ. ಈ ನಟ ಸುಧಾಕರ್ ಪರ ಮತಯಾಚನೆ ಮಾಡಿದ್ದು, ಹಾಸ್ಯದಿಂದಲೇ, ಮರ್ಯಾದೆಯಿಂದ ಸುಧಾಕರ್ ಗೆ ಮತ ಹಾಕಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ. ಈ ಕ್ಷೇತ್ರದ ಹಲವಾರು ಹಳ್ಳಿಗಳಿಗೆ ತೆರಳಿ ಮತಯಾಚನೆ ಮಾಡಿದ್ದಾರೆ.

ಜೀವವನ್ನು ಪಣಕ್ಕೊಡ್ಡಿ ನವಿಲು ರಕ್ಷಿಸಿದ ʼಹೀರೋʼ

Posted: 02 Dec 2019 01:57 AM PST

ನಿಜ ಜೀವನದಲ್ಲಿ ಹೀರೋ ಆಗಬೇಕೆಂದರೆ ಸಿಕ್ಸ್‌ ಪ್ಯಾಕ್ ದೇಹ, ಸ್ಫುರದ್ರೂಪ ಅಥವಾ ಹತ್ತಾರು ಜನಕ್ಕೆ ಗಾಳಿಯಲ್ಲಿ ಹಾರಿಸುವ ಶಕ್ತಿ ಬೇಡ, ಒಳ್ಳೆಯ ಮನಸ್ಸು ಹಾಗೂ ಧೈರ್ಯ ಇದ್ದರೆ ಸಾಕು ಯಾರು ಬೇಕಾದರೂ ಹೀರೋ ಆಗಬಹುದು.

ಇಲ್ಲೊಬ್ಬ ತಮಿಳುನಾಡಿನ ವ್ಯಕ್ತಿ ಕೂಡ ತನ್ನ ಮಾನವೀಯತೆ ಹಾಗೂ ಧೈರ್ಯದಿಂದ ನೆಟ್ಟಿಗರ ಹೀರೋ ಆಗಿದ್ದಾನೆ. ಅವನು ಮಾಡಿದ್ದೇನೆಂದರೆ ಹಾವುಗಳಿರುವ ಬಾವಿಯಲ್ಲಿ ಬಿದ್ದಿದ್ದ ನವಿಲೊಂದನ್ನು ತೆಗೆದಿದ್ದಾನೆ.

ನೀರಿನಲ್ಲಿ ಬಿದ್ದು ಒದ್ದಾಡುತ್ತಿದ್ದ ನವಿಲನ್ನು ನೋಡಿದ ವ್ಯಕ್ತಿ ಅದರಲ್ಲಿ ಹಾವುಗಳಿದ್ದರೂ ಕ್ಯಾರೇ ಎನ್ನದೇ ಹಗ್ಗ ಕಟ್ಟಿಕೊಂಡು ಬಾವಿಯಲ್ಲಿ ಇಳಿದು ನವಿಲನ್ನು ಹೊರಗೆ ತೆಗೆದು ನೆಲದ ಮೇಲೆ ಬಿಟ್ಟಿದ್ದಾನೆ. ಅವನ ಈ ಸಾಹಸದ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಅವನ ಈ ಕೆಲಸವನ್ನು ಶ್ಲಾಘಿಸುತ್ತಿದ್ದಾರೆ. ಅದರ ವಿಡಿಯೋ ನೀವೂ ನೋಡಿ.

ಬೆಂಕಿ ಹೊತ್ತಿಕೊಂಡ ಕಾರಿನಿಂದ ಸ್ವಲ್ಪದರಲ್ಲೇ ಬಚಾವಾದ 5 ಜನ

Posted: 02 Dec 2019 12:50 AM PST

ಕೆಲವೊಂದು ಸಾರಿ ಹಣೆಬರಹ ಹೇಗಿರುತ್ತೆ ಎಂದರೆ ಸಾವಿನ ದವಡೆಯಿಂದ ಜನ ಸ್ವಲ್ಪದರಲ್ಲೇ ಪಾರಾಗುತ್ತಾರೆ. ಅಂತಹದೇ ಒಂದು ಘಟನೆ ಪಂಜಾಬ್‌ನ ಲೂಧಿಯಾನಾದಲ್ಲಿ ನಡೆದಿದೆ.

ರಾಮ್ ಕೃಪಾಲ್ ಎನ್ನುವವರು ಇಂಡಿಗೋ ಕಾರ್ ಹೋಗುತ್ತಿರುವಾಗಲೇ ಬೆಂಕಿ ಹೊತ್ತಿಕೊಂಡಿದೆ. ಅದರಲ್ಲಿ ಒಬ್ಬ ಮಹಿಳೆ ಹಾಗೂ ಇಬ್ಬರು ಮಕ್ಕಳ ಸಮೇತ ಐದು ಜನರಿದ್ದರು. ಅವರು ಬೆಂಕಿ ಹತ್ತಿದ ಕ್ಷಣವೇ ಕಾರಿನಿಂದ ಹೊರಗೆ ಬಂದಿದ್ದಾರೆ.

ನಂತರ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ಅವರು ಬರುವಷ್ಟರಲ್ಲಿಯೇ ಕಾರು ಬೆಂಕಿಗಾಹುತಿಯಾಗಿದೆ. ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.