Translate

Thursday, July 11, 2019

Kannada News | Karnataka News | India News

Kannada News | Karnataka News | India News


ರಾಜ್ಯ ರಾಜಕಾರಣದಲ್ಲಿ ಬಿಗ್‌ ಟ್ವಿಸ್ಟ್:‌ ಬಿಜೆಪಿ ನಾಯಕರ ಜೊತೆ ಜೆಡಿಎಸ್‌ ಸಚಿವರ ಚರ್ಚೆ

Posted: 11 Jul 2019 08:55 AM PDT

ರಾಜ್ಯ ರಾಜಕಾರಣಕ್ಕೆ ಇಂದು ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಬಿಜೆಪಿ ನಾಯಕರ ಜೊತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಆಪ್ತ ಸಚಿವರೊಬ್ಬರು ಮಾತುಕತೆ ನಡೆಸಿರುವುದು ಭಾರಿ ಕುತೂಹಲ ಕೆರಳಿಸಿದೆ.

ಬಿಜೆಪಿ ನಾಯಕರಾದ ಈಶ್ವರಪ್ಪ ಹಾಗೂ ಮುರಳಿಧರ ರಾವ್‌, ಜೆಡಿಎಸ್‌ ಸಚಿವ ಸಾ.ರಾ. ಮಹೇಶ್‌ ಜೊತೆ ಕೆಲ ಕ್ಷಣದ ಮುಂಚೆ ಕೆ.ಕೆ. ಗೆಸ್ಟ್‌ ಹೌಸ್‌ ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಭೇಟಿಯಲ್ಲಿ ಅಂತಹ ವಿಶೇಷವೇನೂ ಇಲ್ಲವೆಂದು ಉಭಯ ನಾಯಕರು ಹೇಳುತ್ತಿದ್ದರೂ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಹಿನ್ನಲೆಯಲ್ಲಿ ಇದು ಕುತೂಹಲಕ್ಕೆ ಕಾರಣವಾಗಿದೆ.

ಆದರೆ ಈ ಭೇಟಿ ಕುರಿತು ಸ್ಪಷ್ಟನೆ ನೀಡಿರುವ ಸಚಿವ ಸಾ.ರಾ. ಮಹೇಶ್‌, ಆಕಸ್ಮಿಕವಾಗಿ ಈ ಭೇಟಿ ನಡೆದಿದೆ. ನಮ್ಮ ಇಲಾಖೆಯಿಂದ ನಡೆಸಲ್ಪಡುವ ಗೆಸ್ಟ್‌ ಹೌಸ್‌ ಗೆ ಅವರು ಬಂದಾಗ ಎದುರುಬದರಾಗಿದ್ದು ಆಗ ಮಾತನಾಡಿದ್ದೇವೆ ಎಂದಿದ್ದಾರೆ.

‘ಫಿಲ್ಮ್’ ನಲ್ಲಿ ಧರಿಸಿದ ಡ್ರೆಸ್ ಹೋಗೋದೆಲ್ಲಿಗೆ ಗೊತ್ತಾ…?

Posted: 11 Jul 2019 08:49 AM PDT

ರಂಗೀನ್ ದುನಿಯಾ ಯಾವಾಗಲೂ ರಂಗು ರಂಗಾಗಿಯೇ ಇರುತ್ತದೆ. ಚಲನಚಿತ್ರಗಳಲ್ಲಿ ನಟ-ನಟಿಯರಿಂದ ಹಿಡಿದು ಹಿಂದೆ ಡಾನ್ಸ್ ಮಾಡುವವರೆಗೆ ಎಲ್ಲರೂ ವೆರೈಟಿ ಡ್ರೆಸ್ ಧರಿಸುತ್ತಾರೆ.

ಅಭಿಮಾನಿಗಳನ್ನು ಆಕರ್ಷಿಸಲು ಹಾಗೂ ಚಿತ್ರ ಅದ್ಧೂರಿಯಾಗಿ ಬರಲು ದುಬಾರಿ ಬೆಲೆಯ ಡ್ರೆಸ್ ಬಳಸ್ತಾರೆ. ಚಿತ್ರ ಮುಗಿದ ನಂತ್ರ ಆ ಬಟ್ಟೆಗಳು ಎಲ್ಲಿಗೆ ಹೋಗುತ್ತವೆ ಎಂಬ ಪ್ರಶ್ನೆ ಸಾಮಾನ್ಯ ಜನರನ್ನು ಕಾಡುವುದು ಸಾಮಾನ್ಯ.

ಚಲನಚಿತ್ರಗಳಲ್ಲಿ ಧರಿಸಲಾಗುವ ಬಟ್ಟೆಗಳನ್ನು ಸುರಕ್ಷಿತವಾಗಿಡುವುದು ಪ್ರೊಡಕ್ಷನ್ ಹೌಸ್ ಜವಾಬ್ದಾರಿ. ಚಿತ್ರದಲ್ಲಿ ಬಳಸಿದ ಪ್ರತಿಯೊಂದು ಬಟ್ಟೆಯನ್ನು ಪ್ಯಾಕ್ ಮಾಡಿ ಅದರ ಮೇಲೆ ಚಿತ್ರದ ಹೆಸರು ಹಾಗೂ ಚಿತ್ರ ತೆರೆಗೆ ಬಂದ ದಿನಾಂಕವನ್ನು ನಮೂದಿಸಿಡಲಾಗುತ್ತದೆ. ಅವಶ್ಯಕತೆ ಬಿದ್ದಾಗ ಸಣ್ಣ ಹಾಗೂ ಕಡಿಮೆ ಬಜೆಟ್ಟಿನ ಚಿತ್ರಗಳಿಗೆ ಈ ಬಟ್ಟೆಗಳನ್ನು ಬಳಸಲಾಗುತ್ತದೆ.

ಬಟ್ಟೆಗಳನ್ನು ನಟ-ನಟಿಯರು ತೆಗೆದುಕೊಂಡು ಹೋಗಬಹುದು. ಆದ್ರೆ ನಿರ್ಮಾಪಕರ ಅನುಮತಿ ಬೇಕು. ಚಿತ್ರ ತೆರೆಗೆ ಬಂದ ನಂತ್ರ ನಟರು ಇಷ್ಟವಾದ್ರೆ ತಾವು ಧರಿಸಿದ್ದ ಬಟ್ಟೆಯನ್ನು ಮನೆಗೆ ಕೊಂಡೊಯ್ಯಬಹುದು. ಕೆಲವೊಮ್ಮೆ ತಮ್ಮ ವೈಯಕ್ತಿಕ ಬಟ್ಟೆಗಳನ್ನೂ ಹಿರೋ, ಹಿರೋಯಿನ್ಸ್ ಚಿತ್ರಕ್ಕೆ ಬಳಸುತ್ತಾರೆ. ಆದ್ರೆ ಚಿತ್ರ ತೆರೆಗೆ ಬರುವವರೆಗೆ ಅದನ್ನು ಸಾರ್ವಜನಿಕ ಸ್ಥಳಗಳಿಗೆ ಹಾಕಿಕೊಂಡು ಹೋಗುವುದಿಲ್ಲ.

ಚಿತ್ರ ತೆರೆಗೆ ಬಂದು ಎರಡು, ಮೂರು ವರ್ಷ ಕಳೆದ ನಂತ್ರ ಅದೇ ಬಟ್ಟೆಯನ್ನು ಮತ್ತೆ ಉಪಯೋಗಿಸಲಾಗುತ್ತದೆ. ಕೆಲವೊಮ್ಮೆ ಅವುಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ರೆ, ಮತ್ತೆ ಕೆಲವೊಮ್ಮೆ ಹಿರೋಯಿನ್ ಧರಿಸಿದ್ದ ಬಟ್ಟೆಯನ್ನು ಸಣ್ಣ ಪುಟ್ಟ ನಟರು ಹಾಕಿಕೊಳ್ಳುತ್ತಾರೆ. ಇಷ್ಟೇ ಅಲ್ಲ ಸಮಾಜ ಸೇವೆ ರೂಪದಲ್ಲಿಯೂ ಇದನ್ನು ಉಪಯೋಗಿಸಲಾಗುತ್ತದೆ. ಆನ್ಲೈನ್ ಮೂಲಕ ಬಟ್ಟೆಗಳನ್ನು ಮಾರಾಟ ಮಾಡಿ, ಬಂದ ಹಣವನ್ನು ಅವಶ್ಯಕತೆ ಇರುವವರಿಗೆ ನೀಡಿದ ಉದಾಹರಣೆಗಳೂ ಇವೆ.

ರಾಜೀನಾಮೆ ನೀಡಿದವರೂ ಸೇರಿ ಜೆಡಿಎಸ್ ಶಾಸಕರಿಗೆ ವಿಪ್ ಜಾರಿ ಮಾಡಿದ ಹೆಚ್.ಡಿ.ಕೆ.

Posted: 11 Jul 2019 07:54 AM PDT

ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಜೆಡಿಎಸ್ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ.

ಜೆಡಿಎಸ್ ಪಕ್ಷದ ಎಲ್ಲಾ 38 ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ. ಶಾಸಕಾಂಗ ಪಕ್ಷದ ನಾಯಕರಾದ ಹೆಚ್.ಡಿ. ಕುಮಾರಸ್ವಾಮಿ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಿದ್ದು, ಸದನಕ್ಕೆ ಗೈರು ಹಾಜರಾದರೆ ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೆಚ್. ವಿಶ್ವನಾಥ್, ಕೆ. ಗೋಪಾಲಯ್ಯ, ನಾರಾಯಣಗೌಡ ಅವರಿಗೂ ವಿಪ್ ಜಾರಿ ಮಾಡಲಾಗಿದೆ. ಈ ಮೂವರು ಶಾಸಕರು ಸ್ಪೀಕರ್ ಕಚೇರಿಗೆ ತೆರಳಿ ಮತ್ತೆ ರಾಜೀನಾಮೆ ಸಲ್ಲಿಸಿ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ.

ಬಿಗ್‌ ನ್ಯೂಸ್: ನಾಳೆಯೇ ನಿರ್ಧಾರವಾಗಲಿದೆಯಾ ಅತೃಪ್ತ ಶಾಸಕರು, ಸಮ್ಮಿಶ್ರ ಸರ್ಕಾರದ ಭವಿಷ್ಯ…?

Posted: 11 Jul 2019 07:34 AM PDT

ಸಮ್ಮಿಶ್ರ ಸರ್ಕಾರ ಮತ್ತು ಅತೃಪ್ತ ಶಾಸಕರ ಭವಿಷ್ಯ ನಾಳೆ ಸುಪ್ರೀಂಕೋರ್ಟ್ ನಲ್ಲಿ ನಿರ್ಧಾರವಾಗಲಿದೆ ಎನ್ನಲಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ್ದು, ನಾಳೆ ಸುಪ್ರೀಂಕೋರ್ಟ್ ನೀಡಲಿರುವ ತೀರ್ಪಿನ ಮೇಲೆ ಸರ್ಕಾರದ ಭವಿಷ್ಯ ನಿಂತಿದೆ ಎಂದು ಹೇಳಲಾಗಿದೆ.

13 ಶಾಸಕರು ಈಗಾಗಲೇ ರಾಜೀನಾಮೆ ನೀಡಿರುವುದರಿಂದ ದೋಸ್ತಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಸ್ಪೀಕರ್ ರಾಜೀನಾಮೆ ಅಂಗೀಕರಿಸುತ್ತಾರೆಯೇ ಇಲ್ಲವೇ ಎಂಬುದು ಸದ್ಯಕ್ಕೆ ತೀರ್ಮಾನವಾಗುತ್ತಿಲ್ಲ. ಸುಪ್ರೀಂಕೋರ್ಟ್ ನಲ್ಲಿ ರಾಜೀನಾಮೆ ಅಂಗೀಕರಿಸುವ ವಿಳಂಬ ನೀತಿ ವಿರೋಧಿಸಿ ರಾಜೀನಾಮೆ ನೀಡಿದ ಶಾಸಕರು ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್ ಸ್ಪೀಕರ್ ಗೆ ಸೂಚನೆ ನೀಡಿದ್ದು, ಅಂತೆಯೇ ಶಾಸಕರು ಸ್ಪೀಕರ್ ಕಚೇರಿಗೆ ತೆರಳಿ ಮತ್ತೆ ರಾಜೀನಾಮೆ ಸಲ್ಲಿಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಚಿತ್ರೀಕರಣ ಮಾಡಲಾಗಿದ್ದು, ಇಂದಿನ ಬೆಳವಣಿಗೆ ಬಗ್ಗೆ ಸ್ಪೀಕರ್ ಸುಪ್ರೀಂಕೋರ್ಟ್ ಗಮನಕ್ಕೆ ತರಲಿದ್ದಾರೆ.

ನಾಳೆ ಸುಪ್ರೀಂಕೋರ್ಟ್ ನಲ್ಲಿ ಶಾಸಕರ ರಾಜೀನಾಮೆ ಅಂಗೀಕಾರ ಕುರಿತು ವಿಚಾರಣೆ ನಡೆಯಲಿದ್ದು ಸಮ್ಮಿಶ್ರ ಸರ್ಕಾರದ ಭವಿಷ್ಯವೂ ನಿರ್ಧಾರವಾಗಲಿದೆ ಎಂದು ಹೇಳಲಾಗಿದೆ.

ಬಿಗಿ ಭದ್ರತೆಯಲ್ಲಿ ರಾಜೀನಾಮೆ ಕೊಟ್ಟು ಮತ್ತೆ ಮುಂಬೈಗೆ ತೆರಳಿದ ಅತೃಪ್ತ ಶಾಸಕರು

Posted: 11 Jul 2019 07:23 AM PDT

ಬೆಂಗಳೂರು: ವಿಧಾನಸಭೆ ಸ್ಪೀಕರ್ ಗೆ ಕ್ರಮಬದ್ಧವಾಗಿ ರಾಜೀನಾಮೆ ಪತ್ರ ಸಲ್ಲಿಸಿ ಸ್ವೀಕೃತಿ ಪಡೆದ ಅತೃಪ್ತ ಶಾಸಕರು ಮತ್ತೆ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ.

ರಾಜೀನಾಮೆ ಕ್ರಮಬದ್ಧವಾಗಿ ಇಲ್ಲದ ಕಾರಣ ಮುಂಬೈನಿಂದ ಬೆಂಗಳೂರಿಗೆ ಆಗಮಿಸಿ ಬಿಗಿಭದ್ರತೆಯಲ್ಲಿ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಪತ್ರ ಸಲ್ಲಿಸಿದ ಶಾಸಕರು ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ.

ಸ್ಪೀಕರ್ ಕಚೇರಿಗೆ ಬಂದ ಶಾಸಕರು ಕೈಬರಹದಲ್ಲಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ವೇಳೆ ಸ್ಪೀಕರ್ ರಾಜೀನಾಮೆ ಸಲ್ಲಿಸಿದ ಶಾಸಕರಿಂದ ವಿವರಣೆ ಪಡೆದುಕೊಂಡು ಸ್ವೀಕೃತಿ ನೀಡಿದ್ದಾರೆ. ವಿಚಾರಣೆ ಬಳಿಕ ಸ್ಪೀಕರ್ ರಾಜೀನಾಮೆ ಅಂಗೀಕರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.

ಸ್ಪೀಕರ್ ಕಚೇರಿಯಿಂದ ಬಿಗಿಭದ್ರತೆಯಲ್ಲಿ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶಾಸಕರು ಮತ್ತೆ ಮುಂಬೈನತ್ತ ಪ್ರಯಾಣ ಬೆಳೆಸಿದ್ದಾರೆ.

ಮರಿ ʼದತ್ತುʼ ಪಡೆಯಲಿವೆ ಸಲಿಂಗಿ ಪೆಂಗ್ವಿನ್ ಜೋಡಿಗಳು

Posted: 11 Jul 2019 07:11 AM PDT

ಲಂಡನ್‌ನ ಸೀ ಲೈಫ್ ಸೆಂಟರ್‌ ಅಕ್ವೇರಿಯಂನಲ್ಲಿ ಸಲಿಂಗಿ ಪೆಂಗ್ವಿನ್‌ ಜೋಡಿಯೊಂದು ತಮ್ಮ ಮೊದಲ ದತ್ತು ಮರಿಯೊಂದನ್ನು ವೆಲ್‌ಕಮ್ ಮಾಡಿಕೊಂಡಿವೆ.

ಮರಾಮಾ ಹಾಗೂ ರಾಕಿ ಹೆಸರಿನ ಈ ಹೆಣ್ಣು ಪೆಂಗ್ವಿನ್‌ಗಳು ಐದು ವರ್ಷಗಳಿಂದ ಜತೆಯಲ್ಲಿವೆ. ಒಳ್ಳೆಯ ಪೋಷಕರಾಗಬಲ್ಲವು ಎಂದು ತೋರಿದ ಬಳಿಕ ಮೊಟ್ಟೆಯೊಂದನ್ನು ಈ ಪೆಂಗ್ವಿನ್‌ ಜೋಡಿಯ ಬಳಿ ಬಿಡಲು ಅಕ್ವೇರಿಯಮ್ ತಂಡ ನಿರ್ಧರಿಸಿದೆ.

ಈ ಮೊಟ್ಟೆಯನ್ನು ಹಾಕಿದ ತಾಯಿಗೆ ಏಕಕಾಲದಲ್ಲಿ ಎರಡು ಮರಿಗಳನ್ನು ಸಾಕುವ ಹೊರೆಯಿಂದ ಮುಕ್ತಿಗೊಳಿಸಲು ಈ ನಿರ್ಧಾಕ್ಕೆ ಅಕ್ವೇರಿಯಮ್ ತಂಡ ನಿರ್ಧಾರಕ್ಕೆ ಬಂದಿದೆ.

— SEA LIFE London (@london_aquarium) July 3, 2019

ಮೋವಾನಾ ಎಂದಿದ್ದನ್ನು ಮರಿಜುವಾನಾ ಎಂದು ಕೇಳಿಸಿಕೊಂಡಿದ್ದ ಬೇಕರಿ ಮಾಡಿದ್ದೇನು ಗೊತ್ತಾ…?

Posted: 11 Jul 2019 07:09 AM PDT

ತನ್ನ ಮಗಳ 25ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲೆಂದು ಮುಂದಾದ ಜಾರ್ಜಿಯಾದ ತಾಯಿಯೊಬ್ಬಳು ಈ ಸಂಬಂಧ ಡಿಸ್ನಿ ಲ್ಯಾಂಡ್‌ನ ವಿಶೇಷ ಪಾತ್ರವಾದ ಮೋವಾನಾ ಕೇಕ್‌ ಒಂದನ್ನು ಆರ್ಡರ್‌ ಮಾಡಿದ್ದರು. ಆದರೆ ಮಾಡಿದ್ದ ಆರ್ಡರ್‌ ಮನೆ ಬಾಗಿಲಿಗೆ ಬಂದ ವೇಳೆ ಬೆಚ್ಚಿ ಬಿದ್ದಿದ್ದರು.

ಮೋವಾನಾ ಎಂಬ ಹೆಸರನ್ನು ಮರಿಜುವಾನಾ ಎಂದು ಕೇಳಿಸಿಕೊಂಡಿದ್ದ ಬೇಕರಿ, ಅದಕ್ಕೆ ತಕ್ಕಂತೆಯೇ ಕೇಕ್‌ ಅನ್ನು ಸಿದ್ಧಪಡಿಸಿತ್ತು…!

ಕೇಕ್‌ ನ ಚಿತ್ರವನ್ನು ಬರ್ತ್‌‌ಡೇ ಗರ್ಲ್ ಕೆನ್ಸಿಲ್‌ ಡೇವಿಸ್‌ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

 

 

I haven't had a chance to tell y'all about our experience this weekend with my birthday cake. So my mama called and…

Posted by Kensli Taylor Davis on Tuesday, July 2, 2019

ಶಾಸಕರಿಂದ ಮತ್ತೆ ರಾಜೀನಾಮೆ: ಈಗಲೇ ಅಂಗೀಕಾರವಿಲ್ಲ ಎಂದ್ರು ಸ್ಪೀಕರ್

Posted: 11 Jul 2019 07:06 AM PDT

ಬೆಂಗಳೂರು: ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಇಂದು ತಮ್ಮ ಕಚೇರಿಯಲ್ಲಿ ರಾಜೀನಾಮೆ ನೀಡಿದ ಶಾಸಕರಿಂದ ವಿವರಣೆ ಪಡೆದುಕೊಂಡಿದ್ದಾರೆ.

ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ರಾಜೀನಾಮೆ ನೀಡಲು ಆಗಮಿಸುವ ಬಗ್ಗೆ ನನಗೆ ಮಾಹಿತಿ ನೀಡಿರಲಿಲ್ಲ. ದೂರವಾಣಿ, ಪತ್ರದ ಮೂಲಕ ನನಗೆ ಮಾಹಿತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ.

ಶಾಸಕರು ರಾಜೀನಾಮೆ ಕೊಟ್ಟಿದ್ದು, ಅದನ್ನು ಈಗಲೇ ಒಪ್ಪಿಕೊಳ್ಳಲ್ಲ. ನನಗೆ ಮನವರಿಕೆ ಆಗಬೇಕು. ಸುಪ್ರೀಂ ಕೋರ್ಟ್ ಗೆ ಹೋಗ್ತಾರೆ, ಬಿಗಿ ಭದ್ರತೆಯಲ್ಲಿ ಬರ್ತಾರೆ, ಮುಂಬೈನಲ್ಲಿ ಪ್ರೆಸ್ ಮೀಟ್ ಮಾಡ್ತಾರೆ. ನಾನು ನಿಯಮಗಳನ್ನು ಬಿಟ್ಟು ಹೋಗಲ್ಲ. ನಾನು ಅವರು ಹೇಳಿದಂತೆ ತಕ್ಷಣಕ್ಕೆ ತೀರ್ಮಾನ ಮಾಡಲ್ಲ. ಸುಪ್ರೀಂ ಕೋರ್ಟ್ ಸೂಚನೆಯಂತೆ ನಾನು ಮಾಹಿತಿ ನೀಡಿದ್ದೇನೆ. ವಿಚಾರಣೆ, ರಾಜೀನಾಮೆ ಬಗ್ಗೆ ವಿಡಿಯೋ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇಲ್ಲಿಗೆ ಬಂದಾಗ ಕೆಲವರು ಭಯ ಉಂಟು ಮಾಡಿದ್ದರಿಂದ ಬಾಂಬೆಗೆ ಹೋಗಿದ್ದಾಗಿ ರಾಜೀನಾಮೆ ಶಾಸಕರು ಹೇಳಿದ್ದಾರೆ. ಅವರು ನನಗೆ ತಿಳಿಸಿದ್ದರೆ ನಾನು ಭದ್ರತೆ ಒದಗಿಸಲು ಕ್ರಮ ಕೈಗೊಳ್ಳುತ್ತಿದ್ದೆ. ಸೋಮವಾರ, ಮಂಗಳವಾರ, ಬುಧವಾರ 3 ದಿನ ಕಾಯಿರಿ. ನಾನು ತೀರ್ಮಾನ ಪ್ರಕಟಿಸುತ್ತೇನೆ. ನಾನು ಪಾರದರ್ಶಕತೆ ಕಾಯ್ದುಕೊಂಡಿದ್ದೇನೆ. ಯಾರು ಯಾವಾಗ ಬಂದು ಏನು ಬೇಕಾದರೂ ಮಾಹಿತಿ ಪಡೆಯಬಹುದು ಎಂದಿದ್ದಾರೆ.

ಯಾವ ಶಕ್ತಿಗೂ ಬಗ್ಗಲ್ಲ, ಯಾರನ್ನೂ ಉಳಿಸುವುದು ನನ್ನ ಕೆಲಸವಲ್ಲ: ಗುಡುಗಿದ ಸ್ಪೀಕರ್

Posted: 11 Jul 2019 07:03 AM PDT

ಬೆಂಗಳೂರು: ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಇಂದು ತಮ್ಮ ಕಚೇರಿಯಲ್ಲಿ ರಾಜೀನಾಮೆ ನೀಡಿದ ಶಾಸಕರಿಂದ ವಿವರಣೆ ಪಡೆದುಕೊಂಡಿದ್ದಾರೆ.

ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಜೀವನದಲ್ಲಿ ಇದು ವಿಶಿಷ್ಟ ಸನ್ನಿವೇಶವಾಗಿದೆ. ಸಾರ್ವಜನಿಕರಿಗೆ ಮಾಹಿತಿ ನೀಡುವುದು ನನ್ನ ಕರ್ತವ್ಯ. ಯಾರನ್ನು ಉಳಿಸುವುದು ಅಥವಾ ಕಳಿಸುವುದು ನನ್ನ ಕೆಲಸವಲ್ಲ. ಕೆಲವು ವರದಿಗಳನ್ನು ನೋಡಿ ನನಗೆ ಬೇಸರವಾಗಿದೆ. ನಾನು ರಾಜೀನಾಮೆ ಅಂಗೀಕರಿಸಲು ತಡ ಮಾಡಿದ್ದಕ್ಕೆ ಶಾಸಕರು ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ ಎಂದು ವರದಿಯಾಗಿದೆ. ನಾನು ವಿಳಂಬ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಶಾಸಕರ ಆಗಮನದ ಬಗ್ಗೆ ನನಗೆ ಮಾಹಿತಿ ನೀಡಿರಲಿಲ್ಲ. ಮಂಗಳವಾರ ಕಚೇರಿಗೆ ಬಂದು ರಾಜೀನಾಮೆ ಪತ್ರಗಳನ್ನು ಪರಿಶೀಲನೆ ನಡೆಸಿದೆ. ರಾಜೀನಾಮೆ ನೀಡಿರುವ ಬಗ್ಗೆ ವಿಚಾರಣೆ ಮಾಡಿ ಅಂಗೀಕರಿಸಬೇಕಾದ ಹೊಣೆ ನನ್ನ ಮೇಲಿದೆ. ಯಾರಿಗೆ ಸಮಯ ಕೊಡಬೇಕಿತ್ತೊ ಅವರಿಗೆ ಬರಲು ಸಮಯ ಕೊಟ್ಟಿದ್ದೇನೆ. ಜುಲೈ 13, 14 ರಜೆ ಇದ್ದು 15 ರಿಂದ ಮತ್ತೆ ವಿಚಾರಣೆ ನಡೆಯಲಿದೆ. ನಾನು ವಿಳಂಬ ಮಾಡಿಲ್ಲ. ಲೈಟ್ನಿಂಗ್ ಸ್ಪೀಡ್ ನಲ್ಲಿ ಇದನ್ನು ಮಾಡಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.

ಯಾರಿಗಾಗಿಯೂ ನಾನು ಕೆಲಸ ಮಾಡಿಲ್ಲ. ಏನು ಮಾಡಬೇಕೋ ಅದನ್ನು ಮಾಡಬೇಕು. ಕೆಲವರು ಹೇಳಿದಂತೆ ನಾವು ಕುಣಿಯಬೇಕಾ? ನಾವು ರಾಜ್ಯದ ಜನರ ಹಂಗಿನಲ್ಲಿ ಬದುಕುತ್ತಿದ್ದೇವೆ. ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತೇವೆ. ಯಾರಿಗೋ ನಿಧಾನಗತಿ ಆಗುತ್ತಿದೆ, ರಾಜೀನಾಮೆ ಅಂಗೀಕರಿಸಿಲ್ಲ ಎಂಬ ಗೊಂದಲವಿದೆ. ನನ್ನ ಭೇಟಿಗೆ ಸುಪ್ರೀಂ ಕೋರ್ಟ್ ಅನುಮತಿ ಬೇಕಾ? ಅವರು ಬಂದು ರಾಜೀನಾಮೆ ಕೊಟ್ಟು ಮುಂಬೈಗೆ, ಸುಪ್ರೀಂ ಕೋರ್ಟ್ ಗೆ ಹೋಗಬೇಕಿತ್ತಾ? ಎಂದು ಪ್ರಶ್ನಿಸಿದ್ದಾರೆ.

ಸ್ವಯಂ ಪ್ರೇರಿತವಾಗಿ ಶಾಸಕರು ರಾಜೀನಾಮೆ ನೀಡಿದ್ದಾರೆಯೇ ಎಂದು ಪರಿಶೀಲನೆ ನಡೆಸಿ ವಿಚಾರಣೆ ಮಾಡಿ ನಾನು ತೀರ್ಮಾನ ಕೈಗೊಳ್ಳಬೇಕಿತ್ತು. ಹೀಗೆ ಮಾಡದಿದ್ದರೆ ನಾನು ತಪ್ಪು ಮಾಡಿದಂತೆ ಆಗುತ್ತದೆ. ಯಾವ ಶಕ್ತಿಗೂ ನಾನು ಬಗ್ಗುವುದಿಲ್ಲ ಎಂದು ಹೇಳಿದ್ದಾರೆ.

ಪದೇ ಪದೇ ಸಾಬೂನು ಬದಲಾವಣೆ ಬೇಡ…! ಯಾಕೆ ಗೊತ್ತಾ…?

Posted: 11 Jul 2019 06:38 AM PDT

ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಹೊಸ ಹೊಸ ಸಾಬೂನು ಉತ್ಪನ್ನಗಳು ಕಂಡು‌ ಬರುತ್ತಿದ್ದು, ಗ್ರಾಹಕರು ಸಹ ಅವುಗಳ ಮೋಹಕತೆಗೆ ಒಳಗಾಗಿ ಪದೇಪದೇ ತಮ್ಮ ನೆಚ್ಚಿನ ಸಾಬೂನನ್ನು ಬದಲಿಸುತ್ತಾ ತಮಗೆ ಅರಿವಿಲ್ಲದಂತೆ ಹಾಳುಮಾಡಿಕೊಳ್ಳುತ್ತಿದ್ದಾರೆ.

ಇಂದು ಸಾಬೂನು ತಯಾರಿಕೆಯಲ್ಲಿ ಅನೇಕ ಅಪಾಯಕಾರಿಯಾದ ರಾಸಾಯನಿಕ ಅಂಶಗಳನ್ನು ಬಳಸುತ್ತಿದ್ದು, ಅವುಗಳು ನಮ್ಮ ತ್ವಚೆಯ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ. ಅತಿಯಾದ ಸಾಬೂನಿನ ಬಳಕೆ ಹಾಗೂ ಪದೇ ಪದೇ ಸಾಬೂನು ಬದಲಿಸುವುದರಿಂದ ಆಗುವ ದುಷ್ಪರಿಣಾಮಗಳು ಈ ರೀತಿ ಇವೆ.

* ಸಾಬೂನು ತಯಾರಿಕೆಯಲ್ಲಿ ಬಳಸುವ ಸೋಡಿಯಂ ಲಾರೆಲ್ ಸಲ್ಫೇಟ್ ತ್ವಚೆಗೆ ಹಾನಿಕಾರಕ ಪರಿಣಾಮವನ್ನುಂಟು ಮಾಡುತ್ತದೆ.

* ಸಾಬೂನಿನಲ್ಲಿ ಕಾಸ್ಟಿಕ್ ಸೋಡಾ ಬಳಸುವುದರಿಂದ ಚರ್ಮದ ಕಾಂತಿಯನ್ನು ಹಾಳು ಮಾಡುವುದಲ್ಲದೆ ತುರಿಕೆಯನ್ನುಂಟು ಮಾಡುತ್ತವೆ.

* ಸಾಬೂನಿನ ಅತಿಬಳಕೆ ತ್ವಚೆಯನ್ನು ಹಾಳು ಮಾಡುವುದರ ಜೊತೆಗೆ ಎಣ್ಣೆಯನ್ನು ಹೀರಿಕೊಂಡು ಒಣ ತ್ವಚೆಯನ್ನಾಗಿಸುತ್ತದೆ.

* ಅತಿಯಾದ ಸಾಬೂನಿನ ಬಳಕೆಯಿಂದ ಚರ್ಮ ಸುಕ್ಕುಗಟ್ಟಿದಂತಾಗಿ ಅವಧಿಗೂ ಮುನ್ನವೇ ವೃದ್ಯಾಪ್ಯ ಬಂದಂತಾಗುತ್ತದೆ.

* ಸಾಬೂನಿನ ಅತಿಬಳಕೆಯು ಚರ್ಮದ ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ.

* ಸಾಬೂನನ್ನು ಪದೇಪದೇ ಬಳಸುವುದರಿಂದ ಅದು ತ್ವಚೆಯಲ್ಲಿರುವ ಕೊಬ್ಬಿನ ಪದರವನ್ನು ನಾಶಮಾಡಿ, ಚರ್ಮವನ್ನು ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳಿಗೆ ತುತ್ತಾಗುವಂತೆ ಮಾಡುತ್ತದೆ.

* ಅತಿಯಾದ ಸಾಬೂನಿನ ಬಳಕೆಯು ತ್ವಚೆಯ ರಂಧ್ರಗಳನ್ನು ಮುಚ್ಚಿ, ತ್ಯಾಜ್ಯವು ವಿಸರ್ಜನೆಯಾಗುವುದನ್ನು ತಡೆಗಟ್ಟಿ, ಮೊಡವೆಗಳನ್ನು ಉಂಟುಮಾಡಬಲ್ಲದು.

* ತ್ವಚೆಯನ್ನು ಎಳೆಬಿಸಿಲಿಗೆ ಒಡ್ಡಿದಾಗ ಉಂಟಾಗುವ ಡಿ ಜೀವಸತ್ವವನ್ನು ಸಾಬೂನಿನಲ್ಲಿ ರಾಸಾಯನಿಕಗಳು ನಾಶಮಾಡುವ ಮೂಲಕ ಚರ್ಮವನ್ನು ಕಾಂತಿಹೀನವನ್ನಾಗಿಸುತ್ತದೆ.

ಗಂಡನಿಲ್ಲದ ವೇಳೆ ಬಂದು ನಿರಂತರ ಅತ್ಯಾಚಾರ: ದೃಶ್ಯ ಸೆರೆಹಿಡಿದು ಬ್ಲಾಕ್ ಮೇಲ್

Posted: 11 Jul 2019 06:37 AM PDT

 ಆಗ್ರಾ: ಆಘಾತಕಾರಿ ಘಟನೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಗಳೇ ವಿವಾಹಿತೆ ಮೇಲೆ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

27 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಆಕೆ 3 ತಿಂಗಳ ಗರ್ಭಿಣಿಯಾಗಿದ್ದಾರೆ. ಉತ್ತರಪ್ರದೇಶದ ಇಟಾದಲ್ಲಿ ಇಬ್ಬರು ಪೊಲೀಸ್ ಇನ್ಸ್ ಪೆಕ್ಟರ್ ಗಳು ಈ ಕೃತ್ಯವೆಸಗಿದ್ದು, ಅವಘಾಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ.

ಹಣಕಾಸಿನ ಸಮಸ್ಯೆ ಹಿನ್ನೆಲೆಯಲ್ಲಿ ಪತಿ ದುಡಿಮೆಗಾಗಿ ದೆಹಲಿಗೆ ತೆರಳಿದ್ದಾರೆ. ಗಂಡನಿಲ್ಲದ ವೇಳೆ ನಿರಂತರವಾಗಿ ಮನೆಗೆ ಬರುತ್ತಿದ್ದ ಇಬ್ಬರು ಪೊಲೀಸ್ ಇನ್ಸ್ಪೆಕ್ಟರ್ ಗಳು ಹಲವಾರು ಬಾರಿ ಅತ್ಯಾಚಾರ ಎಸಗಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ.

ಪತಿ ಮನೆಗೆ ಮರಳಿದ ನಂತರ ಮಹಿಳೆ ಅತ್ಯಾಚಾರದಿಂದ 3 ತಿಂಗಳ ಗರ್ಭಿಣಿಯಾಗಿರುವ ವಿಷಯ ತಿಳಿಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಮಹಿಳೆ ಮೇಲೆ ನಿರಂತರ ಅತ್ಯಾಚಾರ ಎಸಗಿ ದೃಶ್ಯ ಸೆರೆಹಿಡಿದ ಪೊಲೀಸ್ ಇನ್ಸ್ ಪೆಕ್ಟರ್ ಗಳು, ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದರು. ಯಾರಿಗಾದರೂ ತಿಳಿಸಿದಲ್ಲಿ ವಿಡಿಯೋ ಬಹಿರಂಗಪಡಿಸುವುದಾಗಿ ಮತ್ತು ಪತಿ ಹತ್ಯೆ ಮಾಡುವುದಾಗಿ ಬೆದರಿಸಿದ್ದರು ಎಂದು ಅವಘಾಡ್ ಠಾಣೆಯಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರನ್ನು ಪತಿಯೊಂದಿಗೆ ಭೇಟಿ ಮಾಡಿದ ಮಹಿಳೆ ದೂರು ನೀಡಿದ್ದಾರೆ.

ಕೈಬರಹದಲ್ಲೇ ಮತ್ತೊಮ್ಮೆ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಿದ ಅತೃಪ್ತ ಶಾಸಕರು

Posted: 11 Jul 2019 06:06 AM PDT

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಕೆಲವು ಶಾಸಕರು ರಾಜೀನಾಮೆ ಸಲ್ಲಿಸಿದ್ದು, ಅವರಲ್ಲಿ ಕೆಲವರ ರಾಜೀನಾಮೆ ಕ್ರಮಬದ್ಧವಾಗಿ ಇಲ್ಲ ಎಂದು ಸ್ಪೀಕರ್ ಹೇಳಿದ್ದ ಹಿನ್ನೆಲೆಯಲ್ಲಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಲಾಗಿದೆ.

ವಿಧಾನಸೌಧಕ್ಕೆ ಆಗಮಿಸಿದ ಶಾಸಕರು ಸ್ಪೀಕರ್ ಕಚೇರಿಗೆ ತೆರಳಿ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಸ್ಪೀಕರ್ ರಾಜೀನಾಮೆ ಕ್ರಮಬದ್ಧವಾಗಿ ಇಲ್ಲ ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕೈಬರಹದಲ್ಲಿ ಶಾಸಕರು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಮುಂಬೈನಿಂದ ಬಂದಿಳಿದ ಅತೃಪ್ತ ಶಾಸಕರು ಬಿಗಿಭದ್ರತೆಯಲ್ಲಿ ಸ್ಪೀಕರ್ ಕಚೇರಿಗೆ ತೆರಳಿದ್ದಾರೆ. ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರಿಗೆ ಕೈಬರಹದ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಸ್ಪೀಕರ್ ಕಚೇರಿಯಲ್ಲಿ ಶಾಸಕರಿದ್ದು, ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಿದ ಶಾಸಕರಿಂದ ಸ್ಪೀಕರ್ ವಿವರಣೆ ಪಡೆದುಕೊಂಡಿದ್ದಾರೆ. ಸ್ಪೀಕರ್ ಕಚೇರಿ ವಿಧಾನಸೌಧ ವ್ಯಾಪ್ತಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗಿದೆ.

ವಿಧಾನಸೌಧದಲ್ಲಿ ಮಿಂಚಿನಂತೆ ಓಡಿ ಸ್ಪೀಕರ್ ಕಚೇರಿ ತಲುಪಿದ ಬೈರತಿ ಬಸವರಾಜ್

Posted: 11 Jul 2019 05:48 AM PDT

ಬೆಂಗಳೂರು: ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದ ಶಾಸಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಹೆಚ್ಎಎಲ್ ಏರ್ಪೋರ್ಟ್ ಗೆ ಆಗಮಿಸಿದ ಶಾಸಕರನ್ನು ಬಿಗಿಭದ್ರತೆಯಲ್ಲಿ ವಿಧಾನಸೌಧಕ್ಕೆ ಕರೆತರಲಾಗಿದೆ.

6 ಗಂಟೆ ಸಮಯ ದಾಟಿದ ಕಾರಣ ಶಾಸಕರು ಓಡಿಹೋಗಿ ಸ್ಪೀಕರ್ ಕಚೇರಿ ತಲುಪಿದ್ದಾರೆ. ವಿಧಾನಸೌಧದ ಬಳಿ ಬಸ್ ಇಳಿದ ಶಾಸಕ ಬೈರತಿ ಬಸವರಾಜ್ ಮೊದಲಿಗರಾಗಿ ಓಡಿಹೋಗಿ ಸ್ಪೀಕರ್ ಕಚೇರಿ ತಲುಪಿದ್ದಾರೆ.

ಬೈರತಿ ಬಸವರಾಜ್, ಹೆಚ್. ವಿಶ್ವನಾಥ್, ರಮೇಶ್ ಜಾರಕಿಹೊಳಿ, ಮುನಿರತ್ನ, ಎಸ್.ಟಿ. ಸೋಮಶೇಖರ್ ಕೆ, ಗೋಪಾಲಯ್ಯ, ಬಿ.ಸಿ. ಪಾಟೀಲ್ ಸೇರಿದಂತೆ ರಾಜೀನಾಮೆ ನೀಡಿದ ಶಾಸಕರೆಲ್ಲಾ ಸ್ಪೀಕರ್ ಕಚೇರಿ ತಲುಪಿದ್ದಾರೆ.

ಅವರಲ್ಲಿ ಮೊದಲಿಗರಾಗಿ ಬೈರತಿ ಬಸವರಾಜ್ ಪೊಲೀಸ್ ಭದ್ರತೆಯೊಂದಿಗೆ ಓಡಿಹೋಗಿ ಸ್ಪೀಕರ್ ಕಚೇರಿ ಪ್ರವೇಶಿಸಿದ್ದಾರೆ.

ಮುಂಬೈನಿಂದ ಬಂದ ಅತೃಪ್ತ ಶಾಸಕರು: ಬಿಗಿ ಭದ್ರತೆಯಲ್ಲಿ ವಿಧಾನಸೌಧಕ್ಕೆ

Posted: 11 Jul 2019 05:33 AM PDT

ಬೆಂಗಳೂರು: ರಾಜೀನಾಮೆ ನೀಡಿ ಮುಂಬೈನಲ್ಲಿ ತಂಗಿದ್ದ ಅತೃಪ್ತ ಶಾಸಕರು ಇಂದು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಲಿದ್ದಾರೆ.

ಕೆಲವು ಶಾಸಕರ ರಾಜೀನಾಮೆ ಕ್ರಮಬದ್ಧವಾಗಿಲ್ಲ. ಕೆಲವು ಶಾಸಕರು ಸ್ಪೀಕರ್ ಎದುರು ಹಾಜರಾಗಿ ರಾಜೀನಾಮೆ ಬಗ್ಗೆ ಮಾಹಿತಿ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿದ್ದ ಶಾಸಕರೆಲ್ಲ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಮೊದಲೇ ಬಂದಿದ್ದ ಶಾಸಕರಾದ ಎಸ್.ಟಿ. ಸೋಮಶೇಖರ್, ಮುನಿರತ್ನ ವಿಶೇಷ ವಿಮಾನದಲ್ಲಿ ಬಂದ ಶಾಸಕರನ್ನು ಏರ್ಪೋರ್ಟ್ ನಲ್ಲಿ ಬರಮಾಡಿಕೊಂಡಿದ್ದಾರೆ.

ಹೆಚ್.ಎ.ಎಲ್. ಏರ್ಪೋರ್ಟ್ ಗೆ ಆಗಮಿಸಿದ ಶಾಸಕರನ್ನು ಬಿಗಿಭದ್ರತೆಯಲ್ಲಿ ವಿಧಾನಸೌಧಕ್ಕೆ ಕರೆತರಲಾಗಿದೆ. ವಿಧಾನಸೌಧ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಸರ್ಪಗಾವಲು ಹಾಕಲಾಗಿದೆ. ಸ್ಪೀಕರ್ ಸೂಚನೆ ಹಿನ್ನಲೆಯಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗ್ತಿದೆ.

ಮಳೆಗೆ ಹಾಳಾಗಬಹುದು ಈ ಜನಪ್ರಿಯ ಸ್ಮಾರ್ಟ್ಫೋನ್

Posted: 11 Jul 2019 05:27 AM PDT

ಭಾರತದಾದ್ಯಂತ ಮಾನ್ಸೂನ್ ಪ್ರಾರಂಭವಾಗಿದೆ. ಮಳೆಯಲ್ಲಿ ನೆನೆದಾಗ ಕಿಸೆಯಲ್ಲಿರುವ ಸ್ಮಾರ್ಟ್ಫೋನ್ ಒದ್ದೆಯಾಗುವುದು ಸಾಮಾನ್ಯ. ಕೆಲವೊಮ್ಮೆ ಫೋಟೋ ಅಥವಾ ವಿಡಿಯೋ ಮಾಡಲು ಮೊಬೈಲ್ ಹೊರತೆಗೆದಾಗ ನೀರಿನಲ್ಲಿ ಒದ್ದೆಯಾಗಿ ಮೊಬೈಲ್ ಹಾಳಾಗಬಹುದು.

ನಿಮ್ಮಲ್ಲಿರುವ ಮೊಬೈಲ್ ವಾಟರ್ ಪ್ರೂಫ್ ಹೌದಾ? ಅಲ್ವಾ ಎಂಬುದನ್ನು ಮೊದಲು ಪರೀಕ್ಷೆ ಮಾಡಿಕೊಳ್ಳಿ. ದುಬಾರಿ ಬೆಲೆಯ ಅನೇಕ ಮೊಬೈಲ್ ಗಳು ವಾಟರ್ ಪ್ರೂಫ್ ಆಗಿರುವುದಿಲ್ಲ. ಇದನ್ನು ಕಂಪನಿ ಮೊದಲೇ ಹೇಳಿರುತ್ತದೆ. ವಾಟರ್ ಪ್ರೂಫ್ ಅಲ್ಲದ ಕೆಲ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ. ಇದ್ರಲ್ಲಿ ಶಿಯೋಮಿ, ವಿವೊ, ಒಪ್ಪೊ, ಆಸುಸ್, ಹಾನರ್ ಮತ್ತು ಮೊಟೊರೊಲಾ ಮುಂತಾದ ಹೆಸರಾಂತ ಬ್ರಾಂಡ್‌ಗಳು ಸೇರಿವೆ.

ಒಪ್ಪೊ ರೆನೋ 10 ಎಕ್ಸ್ ಜೂಮ್, ವಿವೋ ನೆಕ್ಸ್, ಶಿಯೋಮಿ ರೆಡ್‌ಮಿ ನೋಟ್ 7 ಪ್ರೊ, ರೆಡ್‌ಮಿ ನೋಟ್ 7 ಎಸ್, ಶಿಯೋಮಿ ಪೊಕೊ ಎಫ್ 1, ಗೂಗಲ್ ಪಿಕ್ಸೆಲ್ 3 ಎ ಎಕ್ಸ್‌ಎಲ್, ಗೂಗಲ್ ಪಿಕ್ಸೆಲ್ 3 ಎ, ರಿಯಲ್ ಮಿ 3 ಪ್ರೊ, ವಿವೋ ವಿ 15 ಪ್ರೊ, ಒಪ್ಪೋ ಆರ್ 17 ಪ್ರೊ, ವಿವೊ ಎಕ್ಸ್ 21, ಆಸುಸ್ 6 ಜೆಡ್, ಹಾನರ್ 20, ನೋಕಿಯಾ 8.1, ಮೊಟೊರೊಲಾ ಒನ್ ವಿಷನ್, ಸ್ಯಾಮ್ಸಂಗ್ ಗ್ಯಾಲಕ್ಸಿ ಎ 70, ಸ್ಯಾಮ್ಸಂಗ್ ಗ್ಯಾಲಕ್ಸಿ ಎ 50, ಸ್ಯಾಮ್ಸಂಗ್ ಗ್ಯಾಲಕ್ಸಿ ಎ 40, ಸ್ಯಾಮ್ಸಂಗ್ ಗ್ಯಾಲಕ್ಸಿ ಎ 9, ಸ್ಯಾಮ್ಸಂಗ್ ಗ್ಯಾಲಕ್ಸಿ ಎ 30, ಒನ್ಪ್ಲಸ್ 7 ಪ್ರೊ, ಒನ್‌ಪ್ಲಸ್ 7 ಮತ್ತು ಒನ್‌ಪ್ಲಸ್ 6 ಟಿ ಮೊಬೈಲ್ ವಾಟರ್ ಪ್ರೂಫ್ ಅಲ್ಲ ಎಂಬುದು ನೆನಪಿರಲಿ. ವಿವೋ ಫೋನ್‌ಗಳು ಜಲ ನಿರೋಧಕವಲ್ಲ ಎಂದು ವಿವೊ ವೆಬ್‌ಸೈಟ್ ಸ್ಪಷ್ಟವಾಗಿ ಹೇಳಿದೆ.

ಧೋನಿ ರನ್ ಔಟ್ ವಿಡಿಯೋ ಅಪ್ಲೋಡ್ ಮಾಡಿ ಟ್ರೋಲ್ ಆದ ಐಸಿಸಿ

Posted: 11 Jul 2019 05:22 AM PDT

ಐಸಿಸಿ ವಿಶ್ವಕಪ್ ನಿಂದ ಭಾರತ ಹೊರಬಿದ್ದಿದೆ. ಸೆಮಿಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋಲುಂಡ ಭಾರತ ವಿಶ್ವಕಪ್ ನಿಂದ ಹೊರಬಿದ್ದಿದೆ. ಟೀಂ ಇಂಡಿಯಾದ ಕೊನೆ ಭರವಸೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯಾಗಿತ್ತು. ಧೋನಿ, ಭಾರತದ ಗೆಲುವಿಗೆ ಕಾರಣರಾಗ್ತಾರೆಂಬ ನಿರೀಕ್ಷೆಯಲ್ಲಿದ್ದರು. ಆದ್ರೆ ಧೋನಿ ರನ್ ಔಟ್ ಇಡೀ ಚಿತ್ರಣವನ್ನೇ ಬದಲಿಸಿತು.

ಆದ್ರೆ ಧೋನಿ ರನ್ ಔಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಮೆಂಟ್ ಬಂದಿವೆ. ಧೋನಿ ರನ್ ಔಟ್ ಆಗಿರಲಿಲ್ಲ. ಅಂಪೈರ್ ತಪ್ಪು ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗ್ತಾಯಿತ್ತು. ಈ ಮಧ್ಯೆ ಐಸಿಸಿ ತನ್ನ ಅಧಿಕೃತ ಟ್ವೀಟರ್ ನಲ್ಲಿ ಧೋನಿ ರನ್ ಔಟ್ ವಿಡಿಯೋವನ್ನು ಹಾಕಿ. ಮೊದಲೇ ನಿರಾಸೆಯಲ್ಲಿರುವ ಭಾರತೀಯ ಆಟಗಾರರು, ವಿಡಿಯೋ ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾರೆ.

ವಿಡಿಯೋ ಜೊತೆ ಐಸಿಸಿ ‘Hasta La Vista, Dhoni’ ಈ ಶೀರ್ಷಿಕೆ ಹಾಕಿತ್ತು. ಈ ವಿಡಿಯೋ ನೋಡಿದ ಭಾರತೀಯ ಅಭಿಮಾನಿಗಳು ಐಸಿಸಿ ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ವಿಡಿಯೋ ಡಿಲೀಟ್ ಮಾಡಿ ಎನ್ನುವ ಜೊತೆಗೆ ಭಾರತ ವಿಶ್ವಕಪ್ ನಿಂದ ಹೊರಬಿದ್ದಿರುವುದು ಐಸಿಸಿಗೆ ಖುಷಿ ತಂದಿದೆ ಎನ್ನುವವರೆಗೆ ಕಮೆಂಟ್ ಬರ್ತಿದೆ.

 

ರಾಜೀನಾಮೆ ನೀಡಿದ 3 ಜೆಡಿಎಸ್ ಶಾಸಕರಿಗೆ ಬಿಗ್ ಶಾಕ್..!?

Posted: 11 Jul 2019 05:16 AM PDT

ಬೆಂಗಳೂರು: ಜೆಡಿಎಸ್ ಶಾಸಕರಾದ ಹೆಚ್. ವಿಶ್ವನಾಥ್, ಕೆ. ಗೋಪಾಲಯ್ಯ ಹಾಗೂ ನಾರಾಯಣಗೌಡ ಅವರ ವಿರುದ್ಧ ಜೆಡಿಎಸ್ ನಾಯಕರು ವಿಧಾನಸಭೆ ಸ್ಪೀಕರ್ ಗೆ ದೂರು ನೀಡಿದ್ದಾರೆ.

ಈ ಮೂವರು ಶಾಸಕರನ್ನು ಅನರ್ಹ ಗೊಳಿಸಬೇಕೆಂದು ಜೆಡಿಎಸ್ ನಿಂದ ದೂರು ನೀಡಿದ್ದು, ಇಂದು ಸ್ಪೀಕರ್ ಎದುರು ಶಾಸಕರ ಅನರ್ಹತೆ ಸಂಬಂಧ ವಾದ ಮಂಡನೆ ಮಾಡಲಾಗಿದೆ. ವಿಶ್ವನಾಥ್, ಗೋಪಾಲಯ್ಯ, ನಾರಾಯಣಗೌಡ ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದು, ಅವರನ್ನು ಅನರ್ಹಗೊಳಿಸಬೇಕೆಂದು ಜೆಡಿಎಸ್ ದೂರು ನೀಡಿತ್ತು.

ಈ ಹಿನ್ನೆಲೆಯಲ್ಲಿ ಇಂದು ಸ್ಪೀಕರ್ ಕಚೇರಿಗೆ ಹಾಜರಾಗಿದ್ದ ಜೆಡಿಎಸ್ ಮುಖಂಡರು, ವಕೀಲರು, ಸ್ಪೀಕರ್ ಎದುರು ವಾದ ಮಂಡಿಸಿದ್ದಾರೆ.

ವಿಧಾನಸೌಧದೊಳಗೆ ಬಿಡದ ಪೊಲೀಸರು: ವಾಗ್ವಾದ ನಡೆಸಿದ ಬಿಜೆಪಿ ಶಾಸಕರು

Posted: 11 Jul 2019 05:08 AM PDT

ಬೆಂಗಳೂರು: ರಾಜೀನಾಮೆ ನೀಡಿರುವ ಶಾಸಕರನ್ನು ಇಂದು ಸ್ಪೀಕರ್ ರಮೇಶ್ ಕುಮಾರ್ ಭೇಟಿ ಮಾಡಲಿದ್ದು ವಿಧಾನಸೌಧಕ್ಕೆ ಬಿಗಿ ಪೊಲೀಸ್ ಭದ್ರತೆ ಹಾಕಲಾಗಿದೆ.

ಈ ನಡುವೆ ಸ್ಪೀಕರ್ ಕಚೇರಿಯೊಳಗೆ ಹೋಗಲು ಬಿಜೆಪಿ ಶಾಸಕರು ಪ್ರಯತ್ನ ನಡೆಸಿದ್ದಾರೆ. ಮಾರ್ಗ ಮಧ್ಯದಲ್ಲೇ ಪೊಲೀಸರು ತಡೆದು ಹಿನ್ನೆಲೆಯಲ್ಲಿ ಪೊಲೀಸರ ಜೊತೆ ಬಿಜೆಪಿ ಶಾಸಕರು ವಾಗ್ವಾದ ನಡೆಸಿದ್ದು, ಬಿಜೆಪಿ ಶಾಸಕರು ಮತ್ತು ಪೊಲೀಸರ ಮಾತಿನ ಚಕಮಕಿ ನಡೆದಿದೆ.

ಸ್ಪೀಕರ್ ಕಚೇರಿಯೊಳಗೆ ಜೆಡಿಎಸ್ ಮುಖಂಡರನ್ನು ಬಿಡಲಾಗಿದೆ. ಆದರೆ ನಮಗೆ ಅವಕಾಶ ನೀಡಿಲ್ಲ ಎಂದು ಬಿಜೆಪಿ ಶಾಸಕರು ದೂರಿದ್ದಾರೆ. ಸ್ಪೀಕರ್ ಕಚೇರಿಯೊಳಗೆ ಇರುವ ನಾಯಕರಾದ ವಿ.ಎಸ್. ಉಗ್ರಪ್ಪ ಮತ್ತು ರಮೇಶ್ ಬಾಬು, ಕೋನರೆಡ್ಡಿ ಅವರನ್ನು ಹೊರಗೆ ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ತಮ್ಮನ್ನೂ ಒಳಗೆ ಬಿಡಬೇಕೆಂದು ಪಟ್ಟು ಹಿಡಿದು ಪೊಲೀಸರಿಗೆ ವಾಗ್ವಾದ ನಡೆಸಿದ್ದಾರೆ.

ನೀವೂ ಮಾಡಿ ಟಿಬೆಟ್ ʼವ್ಯಾಯಾಮʼ

Posted: 11 Jul 2019 04:10 AM PDT

ಟಿಬೆಟಿಯನ್ನರು ಧ್ಯಾನವನ್ನು ನಿತ್ಯಜೀವನದ ಭಾಗವೆಂದೇ ಭಾವಿಸುತ್ತಾರೆ. ಅದಕ್ಕಿಂತ ಮೊದಲು ಮಾನಸಿಕವಾಗಿ, ಶಾರೀರಿಕವಾಗಿ ಸಿದ್ಧವಾಗಲು ಕೆಲವು ದೈಹಿಕ ಕಸರತ್ತು ಮಾಡುತ್ತಿರುತ್ತಾರೆ. ಪರಿಣಾಮ ರಕ್ತ ಸರಬರಾಜು ಸರಾಗವಾಗಿ ಜರುಗಿ ಜೀರ್ಣ ಶಕ್ತಿ ಕಾರ್ಯ ವೃದ್ಧಿಯಾಗುತ್ತದೆ.

ದೇಹ ಸದೃಢಗೊಂಡು ಸದಾ ಯೌವನದಂತೆ ಕಂಡು ಬರುತ್ತಾರೆ. ಜನನೇಂದ್ರಿಯದ ಆರೋಗ್ಯವು ಚೆನ್ನಾಗಿರುತ್ತದೆ. ದೇಹದಲ್ಲಿನ ಗ್ರಂಥಿಗಳೆಲ್ಲವೂ ಹೊಸ ಚೈತನ್ಯ ಪಡೆಯುತ್ತವೆ. ಅಂತಹ ವ್ಯಾಯಾಮಗಳ ವಿವರ ಇಲ್ಲಿದೆ.

* ಮೊದಲು ಮೊಣಕಾಲು ಮೇಲೆ ಕುಳಿತು ತಲೆ ಹಿಂದಕ್ಕಿಟ್ಟು ಎರಡು ಕೈಗಳನ್ನು ಹಿಂದಿರಿಸಬೇಕು. ಉಸಿರು ತೆಗೆದುಕೊಳ್ಳುತ್ತಾ – ಬಿಡುತ್ತಾ ಒಂದೆರಡು ನಿಮಿಷ ಮಾಡಬೇಕು.

* ಮೊಣಕಾಲ ಮೇಲೆ ನಿಂತು ಅಂಗೈಯನ್ನು ನೆಲಕ್ಕೆ ಊರಿ ದೇಹವನ್ನು ಬಿಲ್ಲಿನಂತೆ ಹಿಂದಕ್ಕೆ ಬಾಗಿಸಬೇಕು. ಶ್ವಾಸ ತೆಗೆದುಕೊಳ್ಳುತ್ತಾ ನಡು ಮೇಲಕ್ಕೆ ಏಳಿಸಬೇಕು. ಶ್ವಾಸ ಬಿಡುತ್ತಾ ನಡು ಕೆಳಗೆ ಬಿಡಬೇಕು.

* ಮೊದಲು ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು. ಎರಡು ಕೈಗಳು ಮೊದಲು ಮುಂದೆ ಇಟ್ಟು ಶ್ವಾಸ ತೆಗೆದುಕೊಳ್ಳುತ್ತಾ – ಬಿಡುತ್ತಾ ಮಾಡಬೇಕು.

* ಅಂಗಾತ ಮಲಗಿ ಎರಡೂ ಕೈಗಳು ನೆಲಕ್ಕೆ ತಾಗಿಸಿರಬೇಕು. ಈಗ ಉಸಿರು ತೆಗೆದು ಬಿಡುತ್ತಾ ಕಾಲು ಮೇಲಕ್ಕೆ ಎರಿಸುತ್ತ ತಲೆಯನ್ನು ಎದೆಗೆ ತಾಗಿಸಬೇಕು. ಇದನ್ನು 21 ಸಲ ಮಾಡಬೇಕು. ಮೊದಲು ಹತ್ತು ಸಾರಿ ಮಾಡಿ ಅಭ್ಯಾಸವಾದ ನಂತರ ಪೂರ್ಣ ಮಾಡಿ.

ಜ್ಯೂಸ್ ಫ್ರೆಶ್ ಆಗಿರಬೇಕೆಂದರೆ ಏನು ಮಾಡಬೇಕು…?

Posted: 11 Jul 2019 04:05 AM PDT

ಹಣ್ಣು ಅಥವಾ ತರಕಾರಿಗಳ ಜ್ಯೂಸ್‌ಗಳನ್ನು ಮಾಡಿದ ತಕ್ಷಣ ಕುಡಿದರೆ ಉತ್ತಮ. ಆದರೆ ಆಗಾಗ ಇದನ್ನು ಮಾಡಲು ಕಷ್ಟ ಎಂಬ ಕಾರಣಕ್ಕೆ ಕೆಲವರು ತುಂಬಾ ಪ್ರಮಾಣದಲ್ಲಿ ಜ್ಯೂಸ್‌ ಮಾಡಿ ಶೇಖರಿಸಿಡುತ್ತಾರೆ. ಆದರೆ ಕೆಲವು ಜ್ಯೂಸ್‌ಗಳನ್ನು ತುಂಬಾ ಹೊತ್ತು ಇಟ್ಟರೆ ಅವುಗಳ ಫ್ರೆಶ್‌ನೆಸ್‌, ರುಚಿ, ಪೌಷ್ಟಿಕಾಂಶಗಳೆಲ್ಲಾ ಹೋಗುತ್ತವೆ. ಕೆಲವು ಸುಲಭ ವಿಧಾನಗಳ ಮೂಲಕ ಜ್ಯೂಸ್‌ನ ತಾಜಾತನ ಕಾಪಾಡಬಹುದು. ಅದು ಹೇಗೆ ಅಂತ ನೋಡಿ.

* ಜ್ಯೂಸ್‌ಗಳನ್ನು ಅಗಲವಾದ ಗಾಜಿನ ಬಾಟಲಿಗಳಲ್ಲಿ ಶೇಖರಿಸಿ ಇಟ್ಟರೆ ತುಂಬಾ ಹೊತ್ತು ತಾಜಾವಾಗಿರುತ್ತವೆ. ಸ್ಟೈನ್‌ಲೆಸ್‌ ಸ್ಟೀಲ್‌ ಕವಚವಿರುವ ಥರ್ಮೊ ಬಾಟಲಿ ಅಥವಾ ಸ್ಟೈನ್‌ಲೆಸ್‌ ಸ್ಟೀಲ್‌ನ ಬಾಟಲಿಯಲ್ಲಿ ಇಟ್ಟರೂ ಓಕೆ.

* ಹಣ್ಣಿನ ಅಥವಾ ತರಕಾರಿ ಜ್ಯೂಸ್‌ಗಳಿಗೆ ಸ್ವಲ್ಪ ನಿಂಬೆ ರಸವನ್ನು ಹಾಕಿ ಶೇಖರಿಸಿಡಿ. ಈ ರಸದಲ್ಲಿರುವ ಸಿಟ್ರಿಕ್ ಆಮ್ಲ ಜ್ಯೂಸನ್ನು ಬಹು ಸಮಯದವರೆಗೆ ತಾಜಾವಾಗಿಡುತ್ತದೆ.

* ಜ್ಯೂಸ್‌ನ ಬಾಟಲಿಗಳನ್ನು ಫ್ರಿಜ್‌ ಮುಂತಾದ ತಂಪು ಸ್ಥಳಗಳಲ್ಲಿ ಇಡಿ. ಹಣ್ಣಿನ ರಸವನ್ನು ಐಸ್‌ಕ್ಯೂಬ್‌ ಟ್ರೇನಲ್ಲಿಟ್ಟು ಫ್ರೀಜರ್‌ನಲ್ಲಿ ಇಟ್ಟರೆ ಹೆಚ್ಚಿನ ದಿನಗಳವರೆಗೂ ಜ್ಯೂಸ್‌ ಕೆಡುವುದಿಲ್ಲ.

ಧೋನಿ ನಿವೃತ್ತಿ ವಿಚಾರದಲ್ಲಿ ಭಾವುಕರಾದ ಲತಾ ಮಂಗೇಶ್ಕರ್

Posted: 11 Jul 2019 03:47 AM PDT

ವಿಶ್ವಕಪ್ ಪಯಣವನ್ನು ಟೀಂ ಇಂಡಿಯಾ ಮುಗಿಸುತ್ತಿದ್ದಂತೆ ಧೋನಿ ನಿವೃತ್ತಿ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರಶ್ನೆ ಮಾಡಲಾಗ್ತಿದೆ. ಈ ಮಧ್ಯೆ ಗಾಯಕಿ ಲತಾ ಮಂಗೇಶ್ಕರ್ ಟ್ವಿಟ್ ಎಲ್ಲರ ಗಮನ ಸೆಳೆದಿದೆ. ಲತಾ ಮಂಗೇಶ್ಕರ್ ಟ್ವಿಟ್ ಓದಿದ ಮೇಲೆ ಮತ್ತೆ ಅಭಿಮಾನಿಗಳು ಧೋನಿ ಪರ ನಿಲ್ಲೋದ್ರಲ್ಲಿ ಎರಡು ಮಾತಿಲ್ಲ.

ಲತಾಮಂಗೇಶ್ಕರ್, ನಿವೃತ್ತಿ ಘೋಷಣೆ ಮಾಡದಂತೆ ಧೋನಿಗೆ ಮನವಿ ಮಾಡಿದ್ದಾರೆ. ನಿಮ್ಮ ಆಟದ ಅವಶ್ಯಕತೆ ದೇಶಕ್ಕಿದೆ. ನಿಮ್ಮ ನಿವೃತ್ತಿ ಬಗ್ಗೆ ಸುದ್ದಿ ಹರಿದಾಡ್ತಿದೆ. ದಯವಿಟ್ಟು ನಿವೃತ್ತಿ ಘೋಷಣೆ ಮಾಡಬೇಡಿ ಎಂದು ಲತಾ ಮಂಗೇಶ್ಕರ್ ಮನವಿ ಮಾಡಿದ್ದಾರೆ.

ಲತಾ ಮಂಗೇಶ್ಕರ್ ಟ್ವಿಟ್ ಗೆ ಉತ್ತಮ ರೆಸ್ಪಾನ್ಸ್ ಸಿಗ್ತಿದೆ. ಇಡೀ ದೇಶದ ಜನರ ಮಾತನ್ನು ನೀವು ಹೇಳಿದ್ದೀರಿ ಎಂದು ಅಭಿಮಾನಿಗಳು ಪ್ರತಿಕ್ರಿಯೆ ನೀಡ್ತಿದ್ದಾರೆ. ಸದಾ ನೀವು ನಮ್ಮ ನಾಯಕರಾಗಿರುತ್ತೀರಿ, ಲತಾ ಮಂಗೇಶ್ಕರ್ ಮಾತು ಕೇಳಿ. ಹೀಗೆ ಅನೇಕ ಟ್ವಿಟ್ ಗಳು ಬರ್ತಿವೆ.

ಬೆಂಕಿ ತಗುಲಿದ್ದ ಕಾರಿನ ಮೂಲಕ ಪೊಲೀಸ್ ಸಂದೇಶ

Posted: 11 Jul 2019 03:24 AM PDT

ಜೆಂಡರ್ ರಿವೀಲ್ ಪಾರ್ಟಿ ಸ್ಟಂಟ್ ಮಾಡಬೇಡಿ ಎಂಬ ಮುನ್ನೆಚ್ಚರಿಕಾ ಸಂದೇಶವನ್ನು ಬೆಂಕಿ ತಗುಲಿದ್ದ ಕಾರನ್ನು ಬಳಸಿ ಹೇಳುವ ಮೂಲಕ ಪೊಲೀಸರು ಗಮನ ಸೆಳೆದಿದ್ದಾರೆ.

ಆಸ್ಟ್ರೇಲಿಯಾದ ನಾರ್ವೆಲ್‌ನಲ್ಲಿ ಸ್ನೇಹಿತನ ಮಗುವಿನ ಜೆಂಡರ್ ರಿವೀಲ್ ಮಾಡುವ ಸಲುವಾಗಿ ನಡೆಸಿದ ಸ್ಟಂಟ್‌ನಲ್ಲಿ ಕಾರಿಗೆ ಬೆಂಕಿ ತಗುಲಿತ್ತು. ಆದರೆ ತಕ್ಷಣ ಕಾರ್ ಚಾಲಕನನ್ನು ಎಳೆದು ಪಾರು ಮಾಡಲಾಯಿತು.

ಇದು ಕಳೆದ ಏಪ್ರಿಲ್‌ನಲ್ಲಿ ನಡೆದ ಘಟನೆ ಆಗಿದ್ದರೂ ಅದನ್ನು ಈಗ ಬಿಡುಗಡೆ ಮಾಡಿರುವ ಕ್ವೀನ್ಸ್‌ಲ್ಯಾಂಡ್‌ ಪೊಲೀಸರು, ಇತ್ತೀಚೆಗೆ ಜೆಂಡರ್ ರಿವೀಲ್ ಪಾರ್ಟಿ ಅಪಾಯಕಾರಿ ಆಗುತ್ತಿದೆ, ಹೀಗಾಗಿ ಈ ವಿಡಿಯೊ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ ಎಂದಿದ್ದಾರೆ.

ಇನ್ಮುಂದೆ ಆನ್ಲೈನ್ ನಲ್ಲಿ ಸಿಗಲಿದೆ ಜೈಲಿನಲ್ಲಿ ತಯಾರಾದ ಆಹಾರ

Posted: 11 Jul 2019 03:22 AM PDT

ಆನ್ಲೈನ್ ನಲ್ಲಿ ಆಹಾರ ಖರೀದಿ ಈಗ ಸಾಮಾನ್ಯವಾಗಿದೆ. ಅದಕ್ಕೆ ಅನೇಕ ಆಪ್ ಗಳು ಮಾರುಕಟ್ಟೆಯಲ್ಲಿವೆ. ಹೊಟೇಲ್ ನಲ್ಲಿ ತಯಾರಾದ ಆಹಾರವನ್ನು ನೀವು ಮನೆಯಲ್ಲಿ ಕುಳಿತು ತಿನ್ನಬಹುದು. ಶೀಘ್ರವೇ ಜೈಲಿನಲ್ಲಿ ತಯಾರಾದ ಆಹಾರವನ್ನು ನೀವು ಆನ್ಲೈನ್ ನಲ್ಲಿ ಆರ್ಡರ್ ಮಾಡಲು ಅವಕಾಶ ಸಿಗ್ತಿದೆ.

ಕೇರಳದ ವಿಯೂರ್ ಜೈಲಿನಲ್ಲಿ ತಯಾರಾದ ಆಹಾರವನ್ನು ನೀವು ತಿನ್ನಬಹುದು. ಎಂಟು ವರ್ಷಗಳಿಂದ ಕೈದಿಗಳು ಫ್ರೀಡಂ ಫುಟ್ ಫ್ಯಾಕ್ಟರಿ ಹೆಸರಿನಲ್ಲಿ ಆಹಾರ ತಯಾರಿಸುತ್ತಿದ್ದಾರೆ. ಬಿರಿಯಾನಿಯಿಂದ ಹಿಡಿದು ಚಪಾತಿಯವರೆಗೆ ಬೇರೆ ಬೇರೆ ತಿಂಡಿಗಳು ಇಲ್ಲಿ ತಯಾರಾಗುತ್ತವೆ.

ಇಷ್ಟು ದಿನ ಜೈಲಿನ ಹೊರಗೆ ಕೌಂಟರ್ ನಲ್ಲಿ ಕೈದಿಗಳು ತಯಾರಿಸಿದ ಆಹಾರವನ್ನು ನೀಡಲಾಗ್ತಾಯಿತ್ತು. ಇನ್ಮುಂದೆ ಆನ್ಲೈನ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು ಆಹಾರವನ್ನು ಆನ್ಲೈನ್ ಮಾರಾಟಕ್ಕೆ ನಿರ್ಧರಿಸಲಾಗಿದೆ. ಇಲ್ಲಿ  ಬಿರಿಯಾನಿ, ರೊಟ್ಟಿ, ಚಿಕನ್ ಲೆಗ್ ಫ್ರೈ, ಚಿಕನ್ ಕರಿ, ಸಲಾಡ್ ಸೇರಿದಂತೆ ವಿವಿಧ ಬಗೆಯ ಆಹಾರವನ್ನು ತಯಾರಿಸಲಾಗುತ್ತದೆ.

14 ಡಾನ್ಸ್ ಸ್ಟೆಪ್ ಗಳನ್ನು ಕಲಿತ ಕುಕ್ಕಟೂ ಗಿಳಿ

Posted: 11 Jul 2019 03:19 AM PDT

ಸ್ನೋಬಾಲ್ ಹೆಸರಿನ ಕುಕ್ಕಟೂ ಗಿಳಿಯೊಂದು ತನ್ನದೇ ಪರಿಶ್ರಮದಿಂದ 14 ಡಾನ್ಸ್ ಸ್ಟೆಪ್ ಗಳನ್ನು‌ ಕಲಿತು ಸಂಗೀತಕ್ಕೆ ಅನುಗುಣವಾಗಿ ನೃತ್ಯ ಮಾಡಿದೆ.
ಮಾನವರಂತೆಯೇ ಸಂಗೀತಕ್ಕೆ ತಲೆಯಾಡಿಸುವ, ದೇಹ ಕುಣಿಸುವ ಕುಕ್ಕಟೂ ಕುರಿತು ಕರೆಂಟ್ ಬಯಾಲಜಿ ನಿಯತಕಾಲಿಕೆಯಲ್ಲಿ ಸಂಶೋಧಕರು ಪ್ರಕಟಿಸಿದ್ದಾರೆ.

ಯಾವುದೇ ತರಬೇತಿ ಇಲ್ಲದೆ ಮನುಷ್ಯನ ಹೊರತಾಗಿ ಬೇರೆ ಜೀವಿಯೂ ನೃತ್ಯ ಕಲಿಯಬಹುದು ಎಂಬುದು ಸಾಬೀತಾಗಿದೆ ಎಂದು ಸಂಶೋಧಕ ಅನಿರುದ್ಧ ಪಟೇಲ್ ತಿಳಿಸಿದ್ದಾರೆ.

1980ರ ದಶಕದ ಸಂಗೀತವನ್ನು ಕುಕ್ಕಟೂ ಎದುರು‌ 23 ನಿಮಿಷಗಳವರೆಗೆ ನುಡಿಸಲಾಗಿದ್ದು, 14 ಸ್ಟೆಪ್ ಗಳಲ್ಲಿ ನರ್ತಿಸಿದೆ.

— New Scientist (@newscientist) July 8, 2019

ದುಬಾರಿಯಾಯ್ತು ನಿದ್ರೆಯಲ್ಲಿ ನಡೆಯುವ ಖಾಯಿಲೆ

Posted: 11 Jul 2019 02:52 AM PDT

ಗುಜರಾತಿನ ಅಹಮದಾಬಾದ್ ನಲ್ಲಿ ನಾಲ್ಕನೇ ಮಹಡಿಯಿಂದ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. 37 ವರ್ಷದ ಕೋಲ್ಕತ್ತಾ ಮೂಲದ ಪ್ರಭಾತ್ ಮೃತ ವ್ಯಕ್ತಿ. ಆತನಿಗೆ ನಿದ್ರೆಯಲ್ಲಿ ನಡೆಯುವ ಖಾಯಿಲೆಯಿತ್ತಂತೆ. ನಿದ್ರೆಯಲ್ಲಿದ್ದ ಪ್ರಭಾತ್ ಕೆಳಗೆ ಬಿದ್ದಿದ್ದಾನೆ ಎನ್ನಲಾಗ್ತಿದೆ.

ಪ್ರಭಾತ್, ಮೂವರು ಸ್ನೇಹಿತರ ಜೊತೆ ರಾತ್ರಿ ಮಹಡಿ ಮೇಲೆ ಮಲಗಿದ್ದನಂತೆ. ಬೆಳಿಗ್ಗೆ ಸ್ನೇಹಿತ ಶ್ಯಾಮಲ್ ಗೆ ಎಚ್ಚರವಾದಾಗ ಕೆಳಗೆ ಗಲಾಟೆ ಕೇಳಿಸಿದೆ. ಕೆಳಗೆ ಬಂದು ನೋಡಿದ್ರೆ ಪ್ರಭಾಸ್, ರಕ್ತದ ಮಡುವಿನಲ್ಲಿ ಬಿದ್ದಿದ್ದನಂತೆ.

ಶ್ಯಾಮಲ್ ಪ್ರಕಾರ, ಪ್ರಭಾತ್ ಗೆ ಶತ್ರುಗಳಿರಲಿಲ್ಲವಂತೆ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಆತನಲ್ಲ. ನಿದ್ರೆಯಲ್ಲಿ ನಡೆಯುವ ಖಾಯಿಲೆ ಇತ್ತು. ಇದೇ ಸಾವಿಗೆ ಕಾರಣವಾಗಿರಬಹುದೆಂದಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ನಟಿ ಜೊತೆ ಕೆಟ್ಟದಾಗಿ ನಡೆದುಕೊಂಡ ಉಬರ್ ಚಾಲಕ

Posted: 11 Jul 2019 02:49 AM PDT

ಬಂಗಾಳಿ ನಟಿ ಸ್ವಸ್ಥಿಕಾ ದತ್ ಜೊತೆ ಉಬರ್ ಚಾಲಕ ಕೆಟ್ಟದಾಗಿ ನಡೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ನಟಿ ಸ್ವಸ್ಥಿಕಾ ಈ ವಿಷ್ಯವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟರ್ ಪೋಸ್ಟ್ ವೈರಲ್ ಆಗ್ತಿದ್ದಂತೆ ಕೋಲ್ಕತ್ತಾ ಪೊಲೀಸರು ಕ್ರಮಕೈಗೊಳ್ಳಲು ಮುಂದಾಗಿದ್ದಾರೆ.

ಸ್ವಸ್ಥಿಕಾ, ಶೂಟಿಂಗ್ ಗಾಗಿ ಉಬರ್ ಕ್ಯಾಬ್ ಬುಕ್ ಮಾಡಿದ್ದರಂತೆ. ಚಾಲಕ ಅರ್ಧ ದಾರಿಯಲ್ಲಿ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಾನೆ. ಕಾರಿನಿಂದ ಇಳಿಯುವಂತೆ ಧಮಕಿ ಹಾಕಿದ್ದಾನೆ. ಇದಕ್ಕೆ ನಟಿ ವಿರೋಧ ಮಾಡ್ತಿದ್ದಂತೆ ಕಾರನ್ನು ಬೇರೆ ಸ್ಥಳಕ್ಕೆ ತೆಗೆದುಕೊಂಡು ಹೋದ ಚಾಲಕ, ಕಾರ್ ಡೋರ್ ತೆಗೆದು ಧಮಕಿ ಹಾಕಿದ್ದಾನೆ.

ನಾಲ್ಕೈದು ಜನರನ್ನು ಅಲ್ಲಿಗೆ ಕರೆದು, ಏನು ಬೇಕಾದ್ರೂ ಮಾಡು ಎಂದಿದ್ದಾನೆ. ನಟಿ, ಚಾಲಕನ ಫೋಟೋ, ಬುಕ್ಕಿಂಗ್ ಸ್ಕ್ರೀನ್ ಶಾಟ್ ಟ್ವಿಟ್ ಮಾಡಿದ್ದಾರೆ. ನಟಿ ಟ್ವಿಟ್ ನಂತ್ರ ಪೊಲೀಸರು ಕಾರ್ಯಾಚರಣೆಗಿಳಿದಿದ್ದಾರೆ.

ಡ್ರೆಸ್ ಹುಡುಕಲು ನೆರವಾದ ಟ್ವಿಟ್ಟರ್

Posted: 11 Jul 2019 02:18 AM PDT

ಟ್ವಿಟ್ಟರ್ ಯಾರ್ಯಾರಿಗೋ ಹೇಗ್ಹೇಗೋ ನೆರವಾದ ಅನೇಕ ಉದಾಹರಣೆಗಳಿವೆ. ಆ ಸಾಲಿಗೆ ಇದು ಹೊಸ ಸೇರ್ಪಡೆ.

ಡೆಬೊರಾ ಪ್ರೈಸ್ ಎಂಬಾಕೆಯ ಗೆಳತಿಯ ಮಗಳು, ಒಡೆದ ರೇನ್‌ಬೋ ಹಾರ್ಟ್ ಶೇಪ್ ಇರುವ ಉಡುಪು ಫೇವರಿಟ್ ಆದ್ದರಿಂದ ಅದನ್ನೇ ಜಾಸ್ತಿ ಧರಿಸುತ್ತಿದ್ದಳು.

ಅಂಥದ್ದೇ ಉಡುಪನ್ನು ಗೆಳತಿಯ ಮಗಳಿಗೆ ನೀಡಬೇಕೆಂದು ಹುಡುಕುತ್ತಿದ್ದು, ಎಲ್ಲಿಯೂ ಸಿಗುತ್ತಿಲ್ಲ, ಯಾರಾದರೂ ಗೊತ್ತಿದ್ದರೆ ತಿಳಿಸಿ ಎಂಬುದಾಗಿ ಡೆಬೊರಾ ಟ್ವೀಟ್ ಮಾಡಿದ್ದರು.

ಇದಕ್ಕೆ ಸಾಕಷ್ಟು ಜನರು ಪ್ರತಿಕ್ರಿಯಿಸಿದ್ದು, ಅದು ಆ ಉಡುಪನ್ನು ಮಾರಾಟ ಮಾಡಿದ ಕಂಪನಿಗೂ ತಲುಪಿತ್ತು. ಆದರೆ ಅವರಲ್ಲೂ ಸ್ಟಾಕ್ ಖಾಲಿ ಆಗಿದ್ದು, ಪೂರೈಕೆ ಇರಲಿಲ್ಲ.

ಕೊನೆಗೆ ಮಿಲಾ ಎಂಬ 12 ವರ್ಷದ ಹುಡುಗಿ ಆ ಡ್ರೆಸ್ ತನ್ನಲ್ಲಿರುವುದಾಗಿ ಹೇಳಿದ್ದು, ಅದನ್ನು ತಲುಪಿಸುವ ವ್ಯವಸ್ಥೆ ಮಾಡಿದ್ದಾಳೆ.

— Deborah Price (@deborahprice1) July 6, 2019

ಸಂಪ್ರದಾಯಬದ್ದವಾಗಿ ಅದ್ದೂರಿಯಾಗಿ ನೆರವೇರ್ತು ಸಲಿಂಗಿ ವಿವಾಹ

Posted: 11 Jul 2019 02:16 AM PDT

ವರ ಹಾಗೂ ವರ ಈಗ ದಂಪತಿ. ಹೌದು. ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ಸಲಿಂಗ ದಂಪತಿ ಪರಾಗ್ ಮೆಹ್ತಾ ಹಾಗೂ ವೈಭವ್ ಜೈನ್ ಇದೀಗ ಸುದ್ದಿಯಲ್ಲಿದ್ದಾರೆ.

ಎಲ್ಲ ಕಟ್ಟಳೆಗಳನ್ನೂ ಮೀರಿ ಕಳೆದ ಮಾರ್ಚ್ 30ಕ್ಕೆ ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖ ಅದ್ಧೂರಿಯಾಗಿ ಮದುವೆಯಾದರು.

ಮೆಹಂದಿ, ಮೆರವಣಿಗೆ, ನೃತ್ಯ ಸೇರಿ ಎಲ್ಲ ಸಾಂಪ್ರದಾಯಿಕ ಆಚರಣೆಗಳನ್ನೂ‌ ಚಾಚೂತಪ್ಪದೆ ನಡೆಸಲಾಗಿದೆ. ಈ ಕುರಿತ ಚಿತ್ರಗಳು ಈಗ ಎಲ್ಲೆಡೆ ಹರಿದಾಡುತ್ತಿವೆ.

7.5 ಲಕ್ಷ ರೂ.ಗಳಿಗೆ ಮಾರಾಟವಾಯ್ತು ದ್ರಾಕ್ಷಿ ಗೊಂಚಲು…!

Posted: 11 Jul 2019 02:14 AM PDT

ಕೆಂಪು ದ್ರಾಕ್ಷಿಯ ಗೊಂಚಲೊಂದನ್ನು 1.2 ದಶಲಕ್ಷ ಯೆನ್‌ಗಳಿಗೆ (ಅಂದಾಜು 7,55,000 ರುಗಳು) ಹರಾಜಿನಲ್ಲಿ ಮಾರಾಟವಾದ ನಿದರ್ಶನ ಜಪಾನ್‌ನಲ್ಲಿ ಜರುಗಿದೆ.

ರೂಬಿ ರೋನ್‌ ತಳಿಯ ಈ ದ್ರಾಕ್ಷಿಗೆ ಸಾಕಷ್ಟು ಬೇಡಿಕೆಯಿದ್ದು, ಅತಿಹೆಚ್ಚು ಸಕ್ಕರೆ ಅಂಶಕ್ಕೆ ಹೆಸರಾಗಿರುವ ಇದು ಹನ್ನೆರಡು ವರ್ಷಗಳ ಹಿಂದೆ ಮಾರುಕಟ್ಟೆಗೆ ಬಂದಿತ್ತು. ಪ್ರತಿಯೊಂದು ದ್ರಾಕ್ಷಿಯೂ 20 ಗ್ರಾಂ ತೂಗುತ್ತದೆ.

ಇಂಥ 26,000 ಗೊಂಚಲುಗಳನ್ನು ಸೆಪ್ಟೆಂಬರ್‌ ಅಂತ್ಯಕ್ಕೆ ರಫ್ತು ಮಾಡುವ ಅಂದಾಜಿದೆ. ಉಡುಗೊರೆ ಹಾಗೂ ಬ್ಯುಸಿನೆಸ್‌ ಸಂದರ್ಭದಲ್ಲಿ ಪ್ರಮೋಷನ್‌ ಮಾಡುವ ಉದ್ದೇಶಕ್ಕಾಗಿ ಈ ಹಣ್ಣುಗಳನ್ನು ಖರೀದಿ ಮಾಡಲಾಗುತ್ತದೆ.

ಸಾವಿಗೆ ಕಾರಣವಾಯ್ತು ಸೆಮಿಫೈನಲ್ ನಲ್ಲಿನ ಭಾರತದ ಸೋಲು

Posted: 11 Jul 2019 02:10 AM PDT

भारतीय क्रिकेट टीम (फाइल फोटो)

ಭಾರತ ಕ್ರಿಕೆಟ್ ಅಭಿಮಾನಿಗಳಿಗೆ ಬುಧವಾರ ಕರಾಳ ದಿನ. ಟೀಂ ಇಂಡಿಯಾ ಫೈನಲ್ ಪ್ರವೇಶ ಮಾಡುತ್ತೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿತ್ತು. ಭಾರತ ಸೋಲುತ್ತಿದ್ದಂತೆ ಕೆಲ ಅಭಿಮಾನಿಗಳು ಕಣ್ಣೀರಿಟ್ಟಿದ್ದರು. ಸೆಮಿಫೈನಲ್ ನಲ್ಲಿ ಭಾರತದ ಸೋಲು ವ್ಯಕ್ತಿಯೊಬ್ಬನನ್ನು ಬಲಿ ಪಡೆದಿದೆ ಎಂಬ ಸುದ್ದಿ ಬಂದಿದೆ.

ಘಟನೆ ಬಿಹಾರದ ಕಿಶಾನಗಂಜ್ ನ ದುಮ್ಮರಿಯಾ ಮೊಹಲ್ಲಾದಲ್ಲಿ ನಡೆದಿದೆ. ಅಲ್ಲಿನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡ್ತಿದ್ದ ಅಶೋಕ್, ಕೆಲಸ ಮುಗಿಸಿ ಮನೆಗೆ ಬಂದ್ಮೇಲೆ ಕ್ರಿಕೆಟ್ ನೋಡ್ತಿದ್ದನಂತೆ. ಪಂದ್ಯ ಮುಗಿಯುತ್ತಿದ್ದಂತೆ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಹೃದಯಾಘಾತದಿಂದ ಅಶೋಕ್ ಸಾವನ್ನಪ್ಪಿದ್ದಾನೆಂದು ವೈದ್ಯರು ಹೇಳಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧ ಸೆಮಿಫೈನಲ್ ನಲ್ಲಿ ಭಾರತ ಸೋಲ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಬೇಸರಗೊಂಡಿದ್ದರು. ಟೀಂ ಇಂಡಿಯಾ ಆಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈಗ್ಲೂ ಚರ್ಚೆಯಾಗ್ತಿವೆ.