Translate

Thursday, June 13, 2019

Kannada News | Karnataka News | India News

Kannada News | Karnataka News | India News


ಘಟಾನುಘಟಿಗಳನ್ನೇ ನಿಬ್ಬೆರಗಾಗಿಸಿದ 6 ವರ್ಷದ ಬಾಲಕಿ

Posted: 13 Jun 2019 08:16 AM PDT

ಈಗಿನ ಅಂತರ್ಜಾಲ ಕಾಲದಲ್ಲಿ ಪ್ರತಿಭೆ ಎಲ್ಲಿಯೂ ಮುಚ್ಚಿಟ್ಟುಕೊಳ್ಳಲಾಗಲ್ಲ. ದಕ್ಷಿಣ ಆಫ್ರಿಕಾದ ಇವನಾಃ ಕ್ಯಾಂಪ್‌ಬೆಲ್ ಇದಕ್ಕೆ ಉದಾಹರಣೆ.

ಇವಾನಃ ಯಾವ ಸ್ಟಾರ್ ಮಗಳು ಅಲ್ಲ, ಆದರೆ ಅವಳ ಪ್ರತಿಭೆ ಅವಳನ್ನು ಜಗತ್ಪ್ರಸಿದ್ಧ ಮಾಡಿದೆ. ಇವಾನಃ ಕುಣಿತಕ್ಕೆ ಎಲ್ಲರೂ ಮನಸೋತಿದ್ದಾರೆ. ಆಗಾಗ ಅವಳ ಕುಣಿತದ ವಿಡಿಯೋ ಅವಳ ಇನ್ಸ್ಟಾಗ್ರಾಮ್‌ನಲ್ಲಿ ಬರುತ್ತಿದ್ದು, ಅವಳಿಗೀಗ 1.2ಲಕ್ಷಕ್ಕಿಂತಲೂ ಹೆಚ್ಚು ಫಾಲೋವರ್ಸ್ ಇದ್ದಾರೆ.

ಇತ್ತೀಚೆಗೆ ಲಿಜ್ಜೋ ಅವರ ಜ್ಯುಸ್ ಹಾಡಿಗೆ ಅವಳು ಕುಣಿದಿದ್ದು, ಅದು ವೈರಲ್ ಆಗಿದೆ. ಈಗಾಗಲೇ ಅದನ್ನು 4.7 ಮಿಲಿಯನ್ ಜನ ನೋಡಿದ್ದಾರೆ.

ಅಷ್ಟೇ ಅಲ್ಲದೇ ವಿಲ್‌ ಸ್ಮಿತ್, ಕ್ರಿಸ್ ಇವಾನ್ಸ್ ನಂತಹ ಹಾಲಿವುಡ್ ಸ್ಟಾರ್ ನಟರು ಅವಳ ಕುಣಿತಕ್ಕೆ ಮೆಚ್ಚಿದ್ದು, ಸ್ವತಃ ಲಿಜ್ಜೋ ಅವಳ ಜೊತೆ ಕುಣಿಯಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಐಎಂಎ ವಂಚನೆಯಿಂದ ಈ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಸ್ಥಿತಿಯೂ ಅತಂತ್ರ

Posted: 13 Jun 2019 08:11 AM PDT

ಐಎಂಎ ಸಂಸ್ಥೆಯ ವಂಚನೆ ಪ್ರಕರಣ ಬಗೆದಷ್ಟು ಹೊರಗೆ ಬರ್ತಿದೆ. ವಂಚನೆ ಬಯಲಿಗೆ ಬರುತ್ತಿದ್ದಂತೆ ಈ ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ನಾಪತ್ತೆಯಾಗಿದ್ದು, ಆತ ದತ್ತು ಪಡೆದಿದ್ದ ಶಾಲೆಯ 960 ವಿದ್ಯಾರ್ಥಿಗಳು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮನ್ಸೂರ್ ಖಾನ್ ತಾನು ಪ್ರಾಥಮಿಕ ಶಿಕ್ಷಣ ಪಡೆದಿದ್ದ ಶಿವಾಜಿ ನಗರದಲ್ಲಿರುವ ಸರ್ಕಾರಿ ಶಾಲೆಯನ್ನು 2 ವರ್ಷಗಳ ಹಿಂದೆ ದತ್ತು ಪಡೆದಿದ್ದ. ಖಾಸಗಿ ಶಿಕ್ಷಣ ಸಂಸ್ಥೆಗಳೇ ನಾಚುವಂತೆ ಈ ಶಾಲೆಯನ್ನು ಅಭಿವೃದ್ಧಿ ಪಡಿಸಿದ್ದ. ಐಎಂಎ ಸಂಸ್ಥೆಯ ಮೂಲಕವೇ 76 ಶಿಕ್ಷಕರನ್ನು ಈ ಶಾಲೆಗೆ ನೇಮಿಸಿದ್ದ.

ಇನ್ನು ಈ ಶಾಲೆಯನ್ನು ನವೀಕರಣ ಮಾಡಿ ಹೈಟೆಕ್ ಟಚ್ ನೀಡಿ ಜೊತೆಗೆ ಕಂಪ್ಯೂಟರ್ ಗಳನ್ನೂ ಕೂಡಾ ನೀಡಿದ್ದ. ಹೀಗಾಗಿ ಶಾಲೆಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿತ್ತು.

ಈ ವಿಕೆಒ ಪಬ್ಲಿಕ್ ಶಾಲೆಗೆ ಸರ್ಕಾರ ಮೂವರು ಶಿಕ್ಷಕರನ್ನು ನೇಮಿಸಿದ್ದು, ಇನ್ನುಳಿದ 76 ಶಿಕ್ಷಕರನ್ನು ಮನ್ಸೂರ್ ಖಾನ್‍ನ ಐಎಂಎ ಸಂಸ್ಥೆ ನೇಮಿಸಿತ್ತು. ಆದ್ರೆ ಈ ಸಂಸ್ಥೆಯ ವಂಚನೆ ಪ್ರಕರಣ ಬೆಳಕಿಗೆ ಬಂದು, ಮನ್ಸೂರ್ ಖಾನ್‍ ನಾಪತ್ತೆಯಾದ ಬಳಿಕ, ಶಿಕ್ಷಕರು ಶಾಲೆಗೆ ಬರುವುದನ್ನು ನಿಲ್ಲಿಸಿದ್ದಾರೆ. ವೇತನ ಸಮಸ್ಯೆ ಮತ್ತು ಭವಿಷ್ಯದ ಚಿಂತೆಯಿಂದ ಶಿಕ್ಷಕರು ಶಾಲೆಗೆ ಬರುತ್ತಿಲ್ಲ ಅಂತಾ ಶಾಲೆಯ ಪ್ರಿನ್ಸಿಪಾಲ್‍ ನಫೀವುನ್ನೀಸಾ ತಿಳಿಸಿದ್ದಾರೆ. ಹೀಗಾಗಿ ಅನಿವಾರ್ಯತೆಯಿಂದ ಶಾಲೆಗೆ ರಜೆ ಘೋಷಿಸಲಾಗಿದೆ.

ಮೊದಲ ಸಂಭೋಗಕ್ಕೂ ಮುನ್ನ ಹುಡುಗ್ರಿಗೆ ತಿಳಿದಿರಲಿ ಈ ವಿಷ್ಯ

Posted: 13 Jun 2019 07:45 AM PDT

ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸುವ ಮೊದಲು ಹುಡುಗ್ರು ಉತ್ಸಾಹದ ಜೊತೆ ಭಯ ಹೊಂದಿರುತ್ತಾರೆ. ಸೆಕ್ಸ್ ಬಗ್ಗೆ ಎಲ್ಲ ತಿಳಿದಿದ್ದೇನೆ ಎಂದುಕೊಂಡ್ರೂ ಪೂರ್ಣ ತಿಳಿದಿಲ್ಲ ಎಂಬ ಸತ್ಯ ಅವರಿಗೆ ಗೊತ್ತಿರುತ್ತದೆ. ಮೊದಲ ಬಾರಿಯೇ ಕಹಿ ಅನುಭವವಾದ್ರೆ ಎಂಬ ಭಯ ಅವ್ರನ್ನು ಕಾಡುತ್ತದೆ. ಹಾಗಾಗಿ ಮೊದಲ ಸೆಕ್ಸ್ ಮುನ್ನ ಹುಡುಗ್ರು ಕೆಲವೊಂದು ಸಂಗತಿಯನ್ನು ತಿಳಿದಿರಬೇಕು.

ಸಂಗಾತಿ ಭೇಟಿಯಾದ ತಕ್ಷಣ ಕಾರ್ಯ ಶುರು ಮಾಡಬಾರದು. ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಸಂಗಾತಿ ಜೊತೆ ಸಭ್ಯತೆಯಿಂದ ನಡೆದುಕೊಳ್ಳಬೇಕು. ಅವ್ರ ಮೂಡ್ ಹಾಳಾಗದಂತೆ ನೋಡಿಕೊಳ್ಳಬೇಕು.

ತುಂಬಾ ಎತ್ತರವಾಗಿದ್ದೇನೆ, ತುಂಬಾ ದಪ್ಪಗಿದ್ದೇನೆ, ಕಪ್ಪಗಿದ್ದೇನೆ ಈ ಯಾವ ಸಂಗತಿಯ ಬಗ್ಗೆಯೂ ಚಿಂತಿಸಬೇಡಿ. ಆತ್ಮವಿಶ್ವಾಸ ಬಹಳ ಮುಖ್ಯ. ನಿಮ್ಮ ಮೇಲೆ ನಿಮಗೆ ಪ್ರೀತಿಯಿರಬೇಕು. ನಿಮ್ಮ ಬಗ್ಗೆ ಸಂಗಾತಿ ಈಗಾಗಲೇ ತಿಳಿದಿದ್ದಾಳೆಂದ್ರೆ ಆತ್ಮವಿಶ್ವಾಸ ಕಳೆದುಕೊಳ್ಳುವ ಅಗತ್ಯವಿರುವುದಿಲ್ಲ. ಇಂಥ ವಿಷ್ಯಗಳಿಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ.

ಆರಂಭ ಚೆನ್ನಾಗಿರಬೇಕು. ಹಾಗಾಗಿ ಸಂಗಾತಿ ಜೊತೆ ಪ್ರೀತಿಯ ಮಾತನಾಡಬೇಕು. ಸಂಗಾತಿ ಇಷ್ಟ-ಕಷ್ಟಗಳು ನಿಮಗೆ ತಿಳಿದಿದ್ದರೆ ಅವ್ರ ಆಸಕ್ತಿದಾಯಕ ವಿಷ್ಯಗಳ ಬಗ್ಗೆ ಮಾತನಾಡಬೇಕು.

ಸೆಕ್ಸ್ ಮೊದಲು ತಯಾರಿ ಬಹಳ ಮುಖ್ಯ. ಸುರಕ್ಷಿತ ಸೆಕ್ಸ್ ಹಾಗೂ ಕೆಲ ವಿಧಾನಗಳನ್ನು ತಿಳಿದುಕೊಂಡಿರಿ. ಆರಂಭದಲ್ಲಿಯೇ ಮೂಡ್ ಹಾಳು ಮಾಡುವ ಜಾಗವನ್ನು ಸ್ಪರ್ಶಿಸಬೇಡಿ.

ಮದುವೆ ಮುಗಿಸಿ ಬರುವಾಗಲೇ ದುರಂತ: ಅಪಘಾತದಲ್ಲಿ ಅಣ್ಣ – ತಂಗಿ ಸಾವು

Posted: 13 Jun 2019 07:43 AM PDT

ಮಡಿಕೇರಿ: ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಆನೆಕಾಡು ತಿರುವಿನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಅಣ್ಣ –ತಂಗಿ ಮೃತಪಟ್ಟಿದ್ದಾರೆ.

ಎರಡು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಪಿರಿಯಾಪಟ್ಟಣ ತಾಲೂಕು ಮೆಲ್ಲಳ್ಳಿಯ ಸತೀಶ್(38), ಜ್ಯೋತಿ(36) ಮೃತಪಟ್ಟವರೆಂದು ಹೇಳಲಾಗಿದೆ.

ಸಂಬಂಧಿಕರ ಮದುವೆಗೆ ಮಡಿಕೇರಿಗೆ ಬಂದಿದ್ದ ಅಣ್ಣ, ತಂಗಿ ಮದುವೆ ಮುಗಿಸಿ ವಾಪಸ್ ಗ್ರಾಮಕ್ಕೆ ತೆರಳುವಾಗ ಅಪಘಾತ ಸಂಭವಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಕ್ ನಟಿ ವೀಣಾ ಮಲ್ಲಿಕ್‍ಗೆ ಟ್ವಿಟರ್ ನಲ್ಲೇ ಚಳಿ ಬಿಡಿಸಿದ ಭಾರತೀಯರು..!

Posted: 13 Jun 2019 07:42 AM PDT

ಉಂಡ ಮನೆಗೆ ಎರಡು ಬಗೆಯೋದು ಎಂಬ ಮಾತಿಗೆ ಪಾಕ್ ನಟಿ ವೀಣಾ ಮಲ್ಲಿಕ್‍ ಸರಿಯಾಗಿ ಹೊಂದುತ್ತಾಳೆ. ಪಾಕ್‍ನಲ್ಲಿ ಅವಕಾಶಗಳು ಕಡಿಮೆಯಾಗಿ ಮೂಲೆ ಗುಂಪಾದಾಗ, ಕೆಲಸ ಅರಸಿ ಭಾರತಕ್ಕೆ ಬಂದ ಈಕೆಗೆ ಬಾಲಿವುಡ್ ಕೆಲಸ ಕೊಟ್ಟಿತ್ತು. ಚಿತ್ರವೊಂದರ ಐಟಂ ಹಾಡಿನಲ್ಲಿ ಕುಣಿದು ಬಿಟೌನ್‍ಗೆ ಎಂಟ್ರಿ ಕೊಟ್ಟಿದ್ದಳು. ಇದರ ಜೊತೆಗೆ ಬಿಗ್ ಬಾಸ್‍ ಗೂ ಹೋಗಿದ್ದಳು.

ಕೆಲಸವಿಲ್ಲದೆ ಖಾಲಿಯಿದ್ದಾಗ, ಅನ್ನ ಕೊಟ್ಟ ದೇಶದ ವಿರುದ್ಧವೇ ಈಕೆ ವಾಗ್ದಾಳಿ ನಡೆಸುತ್ತಿದ್ದಾಳೆ. ಟ್ವೀಟರ್ ಮೂಲಕ ಈ ನಟಿ ಭಾರತದ ವಿರುದ್ಧ ಕಿಡಿ ಕಾರುತ್ತಲೇ ಇದ್ದಾಳೆ. ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು, ಬಾಲಾಕೋಟ್ ಏರ್ ಸ್ಟ್ರೈಕ್‍ ನಡೆದೇ ಇಲ್ಲ ಎಂದು ಟ್ಟಿಟರ್ ನಲ್ಲಿ ಹೇಳಿದ್ದಳು.

ಅಲ್ಲದೆ ಮೊನ್ನೆ ಸೇನೆಯ ವಿಮಾನ ಅಪಘಾತಕ್ಕೀಡಾದಾಗಲೂ ಭಾರತದ ವಿರುದ್ಧ ಅಪಹಾಸ್ಯ ಮಾಡಿದ್ದಳು. ವೀಣಾ ಮಲ್ಲಿಕ್‍ ಳ ಈ ಟ್ವೀಟ್‍ಗಳು ಭಾರತೀಯರನ್ನು ಕೆರಳಿಸಿದ್ದು, ಟ್ವಿಟರ್ ನಲ್ಲೇ ಆಕೆಗೆ ಚಾಟಿ ಬೀಸಿದ್ದಾರೆ.

ಬೆನ್ನಿಗೆ ಚೂರಿ ಹಾಕೋದು, ತಿಂದ ತಟ್ಟೆಯನ್ನೇ ಒದೆಯೋರನ್ನ ನಂಬಿಕೆ ದ್ರೋಹಿಗಳು ಎನ್ನುತ್ತೇವೆ. ತಿನ್ನೋಕೆ ಅನ್ನವಿಲ್ಲದೆ ಭಿಕ್ಷೆ ಬೇಡೋರಿಗೆ ಕಾಶ್ಮೀರ ಬೇಕಂತೆ ಎಂದು ಹಲವರು ವೀಣಾ ಮಲ್ಲಿಕ್‍ಗೆ ಟ್ವೀಟ್ ಮೂಲಕವೇ ಬಿಸಿ ಮುಟ್ಟಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಹೆಸರಲ್ಲಿ ಭಾರೀ ವಂಚನೆ

Posted: 13 Jun 2019 07:34 AM PDT

ದಾವಣಗೆರೆ:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಬಳಸಿಕೊಂಡು ಯುವಕರಿಂದ 60 ಲಕ್ಷ ರೂ. ಪಡೆದು ವಂಚಿಸಿದ ಆರೋಪ ಕೇಳಿ ಬಂದಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸಂಬಂಧಿಕರಾಗಿದ್ದು, ಸರ್ಕಾರಿ ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿದ್ದ ಮೂವರು ಸಹೋದರರು 10 ಮಂದಿ ಯುವಕರಿಂದ 60 ಲಕ್ಷ ರೂ.ಗೂ ಅಧಿಕ ಹಣ ಪಡೆದುಕೊಂಡು ವಂಚಿಸಿದ್ದು, ದಾವಣಗೆರೆ ಜಿಲ್ಲೆ ಹೊನ್ನಾಳಿ ಠಾಣೆಗೆ ದೂರು ನೀಡಲಾಗಿದೆ ಎನ್ನಲಾಗಿದೆ.

ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ  ಬೆನಕನಹಳ್ಳಿಯ ಮೂವರು ಸಹೋದರರು, ಕೆಲಸ ಕೊಡಿಸುವುದಾಗಿ ಯುವಕರನ್ನು ವಂಚಿಸಿದ್ದಾರೆ ಎಂದು ಹೇಳಲಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರು ಸಿಲ್ಕ್ ಬೋರ್ಡ್ ನಲ್ಲಿ 229 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅದನ್ನೇ ಬಂಡವಾಳ ಮಾಡಿಕೊಂಡ ಈ ಮೂವರು ಸಹೋದರರು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ನವೀನ್, ಪ್ರವೀಣ್, ಮಂಜು, ಶಿವಕುಮಾರ್ ಸೇರಿದಂತೆ 10 ಮಂದಿ ಯುವಕರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹಣ ಪಡೆದುಕೊಂಡಿದ್ದಾರೆ.

ಸಿದ್ದರಾಮಯ್ಯ ನಮ್ಮ ಸಂಬಂಧಿಯಾಗಿದ್ದು, ಅವರ ಪುತ್ರ ಎಲ್ಲ ಕೆಲಸ ಮಾಡಿಕೊಡುತ್ತಾರೆ. ಅವರ ಮೂಲಕ ಕೆಲಸ ಮಾಡಿಸಿಕೊಡುವುದಾಗಿ 60 ಲಕ್ಷಕ್ಕೂ ಅಧಿಕ ಹಣ ಪಡೆದುಕೊಂಡಿದ್ದಾರೆ. ಸರ್ಕಾರಿ ಕೆಲಸ ಸಿಗುವ ನಿರೀಕ್ಷೆಯಿಂದ ಚಿನ್ನಾಭರಣ, ಜಮೀನು ಮಾರಾಟ ಮಾಡಿ, ಸಾಲ ಮಾಡಿ ಸಹೋದರರಿಗೆ ಕೊಟ್ಟಿದ್ದ ಯುವಕರು ಮತ್ತು ಅವರ ಕುಟುಂಬದವರು ಕಂಗಾಲಾಗಿದ್ದು, ಹೊನ್ನಾಳಿ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ವಿಶ್ವಕಪ್: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಭಾರೀ ನಿರಾಸೆ

Posted: 13 Jun 2019 07:19 AM PDT

ನಾಟಿಂಗ್ ಹ್ಯಾಮ್: ಭಾರೀ ಮಳೆಯ ಕಾರಣ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಬೇಕಿದ್ದ ವಿಶ್ವಕಪ್ ಪಂದ್ಯ ರದ್ದುಪಡಿಸಲಾಗಿದೆ.

ನಾಟಿಂಗ್ ಹ್ಯಾಮ್ ನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ಪಂದ್ಯವನ್ನು ರದ್ದುಪಡಿಸಲಾಗಿದ್ದು, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳಿಗೆ ತಲಾ ಒಂದು ಅಂಕ ಹಂಚಿಕೆ ಮಾಡಲಾಗಿದೆ. ಭಾರತ ಆಡಿದ 3 ಪಂದ್ಯಗಳಲ್ಲಿ 2 ಗೆಲುವು ಕಂಡಿದ್ದು, ಒಂದು ಪಂದ್ಯ ರದ್ದಾಗಿದೆ. ನ್ಯೂಜಿಲೆಂಡ್ ಆಡಿದ 4 ಪಂದ್ಯಗಳಲ್ಲಿ 3 ಪಂದ್ಯಗಳಲ್ಲಿ ಗೆಲುವು ಕಂಡಿದೆ. ಒಂದು ಪಂದ್ಯ ರದ್ದಾಗಿದೆ.

ಮೊದಲೆರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳ ವಿರುದ್ಧ ಭರ್ಜರಿ ಜಯ ಗಳಿಸಿದ್ದ ಟೀಂ ಇಂಡಿಯಾ ಇಂದು ನ್ಯೂಜಿಲೆಂಡ್ ತಂಡದ ವಿರುದ್ಧ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ, ಪಂದ್ಯ ರದ್ದಾಗಿದೆ.

ಹಣ ಕೊಡದ ತಂದೆ, ವೇಶ್ಯಾವಾಟಿಕೆಗೆ ಪುತ್ರಿ

Posted: 13 Jun 2019 06:56 AM PDT

ಮೈಸೂರು: ಮೈಸೂರಿನಲ್ಲಿ ವೇಶ್ಯಾವಾಟಿಕೆಯ ಕರಾಳ ದಂಧೆ ಬಯಲಾಗಿದೆ. ಸಾಲದ ಹಣ ವಾಪಸ್ ಕೊಡದ ಕಾರಣಕ್ಕೆ ಬಾಲಕಿಯನ್ನು ವೇಶ್ಯಾವಾಟಿಕೆಗೆ ಬಳಸಿಕೊಂಡ ಆಘಾತಕಾರಿ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಸನ್ನಕುಮಾರ್, ಪದ್ಮಾ ಹಾಗೂ ಮತ್ತೊಬ್ಬನನ್ನು ಬಂಧಿಸಿರುವ ಪೊಲೀಸರು ಉಳಿದ ನಾಲ್ವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಬಾಲಕಿಯ ತಂದೆಗೆ ಮೀಟರ್ ಬಡ್ಡಿಗೆ ಸಾಲ ನೀಡಲಾಗಿತ್ತು. ಆದರೆ, ಸಕಾಲಕ್ಕೆ ಸಾಲದ ಹಣ ವಾಪಸ್ ಕೊಡದ ಕಾರಣಕ್ಕೆ 15 ವರ್ಷದ ಬಾಲಕಿಯನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

ಒಡನಾಡಿ ಸಂಸ್ಥೆ ಸಹಾಯ ಪಡೆದು ಸಂತ್ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಜೂನ್ 6 ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಬಾಲಕಿಯನ್ನು ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದವರನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ಇಂಜೆಕ್ಷನ್ ಕೊಟ್ಟು ಪತ್ನಿ ಕೊಲೆಗೆ ಯತ್ನಿಸಿದ ಸ್ಯಾಂಡಲ್ವುಡ್ ನಟ ಅರೆಸ್ಟ್

Posted: 13 Jun 2019 06:55 AM PDT

ಬೆಂಗಳೂರು: ಮೊದಲ ಪತ್ನಿ ಇದ್ದರೂ ವಿಷಯ ಮುಚ್ಚಿಟ್ಟು, ಎರಡನೇ ಮದುವೆಯಾಗಿದ್ದ ಚಿತ್ರನಟನೊಬ್ಬ ಪತ್ನಿಯನ್ನೇ ಕೊಲೆ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ.

'ಅರುಣ್' ಚಿತ್ರದ ನಟ ಇಂತಹ ಕೃತ್ಯವೆಸಗಿದ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಮದುವೆಯಾಗಿದ್ದ ನಟ ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಕಂಪನಿ ಉದ್ಯೋಗಿಯನ್ನು ಎರಡನೇ ಮದುವೆಯಾಗಿದ್ದಾನೆ.

ಈತ ಮೊದಲೇ ಮದುವೆಯಾಗಿರುವ ವಿಚಾರ ತಿಳಿದ ಎರಡನೇ ಪತ್ನಿ ಆತನಿಂದ ದೂರವಾಗಿದ್ದಾಳೆ. ಕಳೆದ ರಾತ್ರಿ ಕೆಆರ್ ಪುರಂ ಭಟ್ಟರಹಳ್ಳಿಯಲ್ಲಿರುವ ಎರಡನೇ ಪತ್ನಿ ಮನೆಗೆ ತನ್ನ ಸಹಚರರೊಂದಿಗೆ ಬಂದಿದ್ದ ನಟ, ಪತ್ನಿಯ ಕೈಕಾಲು ಕಟ್ಟಿ ಹಾಕಿ ಇಂಜೆಕ್ಷನ್ ನೀಡಿ ಕೊಲೆ ಮಾಡಲು ಯತ್ನಿಸಿದ್ದಾನೆ. ಅದೇ ವೇಳೆಗೆ ಪರಿಚಿತರೊಬ್ಬರು ಮನೆಗೆ ಬಂದ ಕಾರಣ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಕೆಆರ್ ಪುರಂ ಠಾಣೆ ಪೊಲೀಸರಿಗೆ ದೂರು ನೀಡಲಾಗಿದ್ದು, ಕೂಡಲೇ ಕ್ರಮಕೈಗೊಂಡ ಪೊಲೀಸರು ನಟ ಹಾಗೂ ಆತನ ಸಹಚರನೊಬ್ಬನನ್ನು ಬಂಧಿಸಿದ್ದಾರೆ. ಉಳಿದ ನಾಲ್ವರು ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಅಸ್ವಸ್ಥರಾಗಿರುವ ಎರಡನೇ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

ಐಎಂಎ ವಂಚನೆ ಕೇಸ್: 26,000 ದೂರು ದಾಖಲು, ರೋಗಿಗಳಿಗೂ ಬಿಗ್ ಶಾಕ್..!

Posted: 13 Jun 2019 06:03 AM PDT

ಬೆಂಗಳೂರು: ಐಎಂಎ ಸಂಸ್ಥೆಯಿಂದ ಕೋಟ್ಯಂತರ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 26,100 ದೂರು ಸಲ್ಲಿಕೆಯಾಗಿವೆ ಎಂದು ಹೇಳಲಾಗಿದೆ.

ಇಂದು ಬೆಳಿಗ್ಗೆಯಿಂದ 6000 ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದು, 3 ಕೌಂಟರ್ ಗಳಲ್ಲಿ ತಲಾ ಮೂವರು ಪೊಲೀಸರು ದೂರು ಸ್ವೀಕರಿಸಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಹೂಡಿಕೆದಾರರು ದೂರು ನೀಡುತ್ತಿದ್ದಾರೆ. ಇದುವರೆಗೂ 26,100 ಕ್ಕೂ ಹೆಚ್ಚು ದೂರು ಸಲ್ಲಿಕೆಯಾಗಿವೆ ಎನ್ನಲಾಗಿದೆ.

ಇನ್ನು ರೋಗಿಗಳಿಗೂ ಐಎಂಎ ಶಾಕ್ ನೀಡಿದೆ. ಐಎಂಎ ಮಾಲೀಕ ಮನ್ಸೂರ್ ಖಾನ್ ಟ್ರಸ್ಟಿಯಾಗಿರುವ ಶಿವಾಜಿ ನಗರದ ಫ್ರೆಂಟ್ ಲೈನ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿ ತಟ್ಟಿದೆ.

ಕಿಡ್ನಿ ಚಿಕಿತ್ಸೆಗೆ ಹೆಸರಾದ ಫ್ರೆಂಟ್ ಲೈನ್ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯ ಬಡ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಹೀಗೆ ಬಂದ ಹೆಚ್ಚಿನ ಸಂಖ್ಯೆಯ ರೋಗಿಗಳು ಕೂಡ ಐಎಂಎನಲ್ಲಿ ಹೂಡಿಕೆ ಮಾಡಿದ್ದಾರೆ. ಅಲ್ಲದೆ ವೈದ್ಯರು, ಸಿಬ್ಬಂದಿ ಕೂಡ ಲಕ್ಷಾಂತರ ರೂ. ಹೂಡಿಕೆ ಮಾಡಿದ್ದರು ಎನ್ನಲಾಗಿದೆ.

ಈ ಆಸ್ಪತ್ರೆಯಲ್ಲಿ ಹಣವೂ ಇಲ್ಲದೆ ಚಿಕಿತ್ಸೆಯು ಇಲ್ಲದೆ ರೋಗಿಗಳು ಪರದಾಡುವಂತಾಗಿದೆ. ಮೆಡಿಸನ್ ಸ್ಟಾಕ್ ಇಲ್ಲ ಹೊರ ಹೋಗಿ ಎಂದು ರೋಗಿಗಳನ್ನು ಕಳಿಸಲಾಗುತ್ತಿದೆ ಎನ್ನಲಾಗಿದೆ.

30 ಕೋಟಿ ರೂ. ಮೌಲ್ಯದ ಪುರಾತನ ನೆಕ್ಲೇಸ್ ಗಾಗಿ ಹತ್ಯೆ ಮಾಡಿದ್ದವರಿಗೆ ತಕ್ಕ ಶಾಸ್ತಿ

Posted: 13 Jun 2019 05:49 AM PDT

ಬೆಂಗಳೂರು: ಪುರಾತನ ವಜ್ರದ ನೆಕ್ಲೆಸ್ ಗಾಗಿ ಜೋಡಿ ಕೊಲೆಗೆ ಯತ್ನಿಸಿದ್ದ 7 ಅಪರಾಧಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನಿಂದ ಶಿಕ್ಷೆ ಪ್ರಕಟವಾಗಿದೆ. ಶ್ರೀರಂಗ, ಅಭಿಷೇಕ್, ಮಧುಸೂದನ್, ಕಿರಣ್, ದಿಲೀಪ್ ಕುಮಾರ್, ಸತೀಶ್, ಶ್ರೀಧರ್, ಅಮಿತ್ ಕುಮಾರ್ ಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ.

30 ಕೋಟಿ ರೂ. ಬೆಲೆಯ ಪುರಾತನ ಕಾಲದ ವಜ್ರದ ನೆಕ್ಲೇಸ್ ಇದೆ ಎಂಬ ಹಿನ್ನೆಲೆಯಲ್ಲಿ 2014 ರ ಮಾರ್ಚ್ ನಲ್ಲಿ ದಂಪತಿಯ ಹತ್ಯೆಗೆ ಇವರು ಯತ್ನಿಸಿದ್ದರು.

ಉದಯ ರಾಜ್ ಸಿಂಗ್ ದಂಪತಿ ಹತ್ಯೆಗೆ ಯತ್ನಿಸಿದ್ದು, ಈ ವೇಳೆ ಉದಯರಾಜ್ ಸಿಂಗ್ ಮೃತಪಟ್ಟು ಪತ್ನಿ ಬದುಕುಳಿದಿದ್ದರು. ಪತ್ನಿ ಪ್ರಾಣಾಪಾಯದಿಂದ ಪಾರಾಗಿ ಪೊಲೀಸರಿಗೆ ದೂರು ನೀಡಿದ್ದರು. ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

ಮಾನಸಿಕ ಆರೋಗ್ಯಕ್ಕೆ ಈ ಸಲಹೆಗಳನ್ನು ಪಾಲಿಸಿ

Posted: 13 Jun 2019 05:41 AM PDT

ನಿಮ್ಮ ದೈಹಿಕ ಆರೋಗ್ಯದಷ್ಟೇ ಮುಖ್ಯವಾದದ್ದು ಮಾನಸಿಕ ಆರೋಗ್ಯ. ಆದ್ದರಿಂದ ನಿಮ್ಮ ನಿತ್ಯದ ಬದುಕಿನ ಕೆಲವು ಅಭ್ಯಾಸಗಳು ನಿಮ್ಮ ಮಾನಸಿಕ ಸಮತೋಲನವನ್ನು ಕಾಪಾಡಬಹುದು.

ನಿಯಮಿತ ವ್ಯಾಯಾಮ

ಪ್ರತಿನಿತ್ಯ ವ್ಯಾಯಾಮದಿಂದ ನಿಮ್ಮ ದೈಹಿಕ ಆರೋಗ್ಯವನ್ನಷ್ಟೆ ಅಲ್ಲ, ಮಾನಸಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಧ್ಯಾನವು ನಿಮ್ಮೊಳಗಿನ ಒತ್ತಡವನ್ನು ಹೋಗಲಾಡಿಸುತ್ತದೆ. ಮೆದುಳಿನ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ.

ಸಾಮಾಜಿಕವಾಗಿ ಬೆರೆಯಿರಿ

ಸಾಧ್ಯವಾದಷ್ಟು ಸಾಮಾಜಿಕವಾಗಿ ನಿಮ್ಮನ್ನು ತೆರೆದುಕೊಳ್ಳಿ. ಜನರ ಜೊತೆ ಹೆಚ್ಚು ಬೆರೆಯಿರಿ. ಒಂಟಿಯಾಗಿದ್ದಷ್ಟು ನಿಮ್ಮನ್ನು ಏಕಾಂಗಿತನ ಕಾಡುತ್ತದೆ. ಬೇಡದ ನೋವುಗಳು ಕಿರುಕುಳ ಕೊಡುವುದು ಇದೇ ಸಮಯದಲ್ಲಿ ಎಂಬುದು ನೆನಪಿರಲಿ.

ಹೊರಾಂಗಣ ಚಟುವಟಿಕೆಯಲ್ಲಿ ತೊಡಗಿ

ಮನೆಯ ವಾತಾವರಣದಲ್ಲಿ ಹೆಚ್ಚು ಹೊತ್ತು ಸಮಯ ಕಳೆಯುವ ಬದಲು ಹೊರಾಂಗಣದಲ್ಲಿ ಪ್ರಕೃತಿಯೊಂದಿಗೆ ನಿಮ್ಮನ್ನು ತೆರೆದುಕೊಳ್ಳಿ. ವಾಕ್‌ ಮಾಡಿ. ಆಟ ಆಡಿ.

ಇಷ್ಟದ ಚಟುಟವಿಕೆಯಲ್ಲಿ ಪಾಲ್ಗೊಳ್ಳಿ

ನಿಮ್ಮ ಕೆಲಸದ ಒತ್ತಡದ ನಡುವೆಯೂ ನಿಮಗೆ ಖುಷಿ ಕೊಡುವ ಹವ್ಯಾಸದಲ್ಲಿ ತೊಡಗಿ. ಇದು ನಿಮಗೆ ರಿಲ್ಯಾಕ್ಸ್‌ ಫೀಲ್‌ ನೀಡುತ್ತದೆ.
ನಗು ಇರಲಿ.

ಎಷ್ಟೇ ಕಷ್ಟವಿದ್ದರೂ ನಗುವುದನ್ನು ಮರೆಯಬೇಡಿ. ನಗು ಕೂಡ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಚಿಕಿತ್ಸೆಯಾಗಿ ಕೆಲಸ ಮಾಡುತ್ತದೆ.
ಹೊಸತು ಕಲಿಯಿರಿ.

ನೀವು ಏನಾದರೂ ಹೊಸತನ್ನು ಕಲಿತಾಗ ನಿಮಗೆ ಸಿಗುವ ಖುಷಿಯೇ ಬೇರೆ. ಪ್ರತಿ ನಿತ್ಯ ನಿಮ್ಮ ವೈಯಕ್ತಿಕ ಬದುಕು ಅಥವಾ ಕೆಲಸದಲ್ಲಾದರೂ ಸರಿಯೇ ಹೊಸತನ್ನು ಕಲಿತುಕೊಳ್ಳಿ. ಆಗ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.

ನಡುರಸ್ತೆಯಲ್ಲೇ ಸಾಲ ಕೊಟ್ಟವರಿಂದ ಮಹಿಳೆಗೆ ಚಿತ್ರಹಿಂಸೆ

Posted: 13 Jun 2019 05:31 AM PDT

ಬೆಂಗಳೂರು: ಸಾಲದ ಹಣ ಪಾವತಿಸದ ಹಿನ್ನೆಲೆಯಲ್ಲಿ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಲಾಗಿದೆ.

ಬೆಂಗಳೂರಿನ ದಕ್ಷಿಣ ತಾಲ್ಲೂಕಿನ ಕೊಡಿಗೆಹಳ್ಳಿಯಲ್ಲಿ ಘಟನೆ ನಡೆದಿದ್ದು, ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕೊಡಿಗೆಹಳ್ಳಿಯಲ್ಲಿ ಹೋಟೆಲ್ ನಡೆಸುತ್ತಿದ್ದ ಮಹಿಳೆ 11 ಲಕ್ಷ ರೂ. ಸಾಲ ಪಡೆದುಕೊಂಡಿದ್ದು, ನಾಪತ್ತೆಯಾಗಿದ್ದರು.

ಹೋಟೆಲ್ ಗೆ ಬಂದು ಸಾಲಗಾರರು ಕಾಟ ಕೊಡುತ್ತಿದ್ದರಿಂದ ಅವರು ಕಳೆದ ತಿಂಗಳು ಊರು ಬಿಟ್ಟಿದ್ದರೆನ್ನಲಾಗಿದೆ. ಧರ್ಮಸ್ಥಳದಲ್ಲಿದ್ದ ಆಕೆಯನ್ನು ನಿನ್ನೆ ಕರೆದುಕೊಂಡು ಬಂದು ಕಂಬಕ್ಕೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಲಾಗಿದೆ. ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ಜೂನ್ 30 ರೊಳಗೆ ಕಬ್ಬು ಬಾಕಿ ಪಾವತಿ, ಕಾರ್ಖಾನೆಗಳ ಸಕ್ಕರೆ ಜಪ್ತಿಗೆ ಸಿಎಂ ಖಡಕ್ ಸೂಚನೆ

Posted: 13 Jun 2019 05:23 AM PDT

ಬೆಂಗಳೂರು: ಜೂನ್ 30 ರೊಳಗೆ ಕಬ್ಬು ಬೆಳೆಗಾರರ ಬಾಕಿ ಪಾವತಿಗೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಕಬ್ಬು ಬೆಳೆಗಾರರ ಬಾಕಿ ಕುರಿತು ಚರ್ಚೆ ನಡೆಸಿದ ಸಿಎಂ, ಬೆಳೆಗಾರರಿಗೆ ಬಾಕಿ ಪಾವತಿಸದ ಸಕ್ಕರೆ ಮುಟ್ಟುಗೋಲು ಹಾಕಿಕೊಂಡು ಸಕ್ಕರೆ ಮಾರಿ ಬಂದ ಹಣವನ್ನು ರೈತರಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಪೂರೈಕೆ ಮಾಡಿದ ರೈತರಿಗೆ ಬಾಕಿ ಕೊಡಿಸುವ ಸಂಪೂರ್ಣ ಜವಾಬ್ದಾರಿಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ಹೊರಿಸಲಾಗಿದೆ. ಒಂದು ವೇಳೆ ಹಣ ಕೊಡಿಸಲು ವಿಫಲವಾದರೆ ಜಿಲ್ಲಾಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. ಈ ವರ್ಷದ ಕಬ್ಬಿನ ಬಾಕಿ ಹಣ ಕೊಡಿಸಿ ಎಂದು ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ದಿಢೀರ್ ತಯಾರಿಸಿ ‘ಚಾವಲ್ ಕಿ ಖೀರ್’

Posted: 13 Jun 2019 05:21 AM PDT

ಇದೊಂದು ಸಿಹಿ ಖಾದ್ಯ. ಹೆಸರೇ ಹೇಳುವಂತೆ ಇದು ಅಕ್ಕಿಯ ಪಾಯಸ. ಈ ಪಾಕವಿಧಾನ ಬಹಳ ಸರಳ ಹಾಗೂ ಸುಲಭ. ಹಬ್ಬಗಳ ಗಡಿಬಿಡಿ ಸಮಯದಲ್ಲಿ ಹಾಗೂ ಅಚಾನಕ್ ಬಂಧುಗಳು ಬಂದರೆ ಬಹುಬೇಗ ಈ ಪಾಯಸವನ್ನು ತಯಾರಿಸಬಹುದು. ಎಲ್ಲರೂ ಇಷ್ಟ ಪಡುವ ಈ ಸ್ವೀಟ್ ತಯಾರಿ ಹೇಗೆ ಅಂತ ನೋಡೋಣ.

ಬೇಕಾಗುವ ಸಾಮಾಗ್ರಿಗಳು

ಕೆನೆ ಭರಿತ ಗಟ್ಟಿ ಹಾಲು – 1 ಲೀಟರ್
ನೆನೆಸಿಕೊಂಡ ಬಾಸುಮತಿ ಅಕ್ಕಿ -1/4 ಕಪ್
ಸಕ್ಕರೆ -7 ಚಮಚ
ಏಲಕ್ಕಿ ಪುಡಿ – 1 ಚಮಚ
ಹೆಚ್ಚಿಕೊಂಡ ಬಾದಾಮಿ -2 ಚಮಚ
ಗುಲಾಬಿ ನೀರಿನಲ್ಲಿ ನೆನೆಸಿಕೊಂಡ ಕೇಸರಿ – 5 ರಿಂದ 6

ಮಾಡುವ ವಿಧಾನ

ಮೊದಲು ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಕುದಿಯಲು ಇಡಬೇಕು. ಹಾಲು ಕುದಿಯಲು ಆರಂಭಿಸಿದ ಮೇಲೆ, ನೆನೆಸಿಕೊಂಡ ಅಕ್ಕಿಯನ್ನು ಸೇರಿಸಿ ಚೆನ್ನಾಗಿ ಕಲಕುತ್ತಿರಿ. ಬೇಯುತ್ತಾ ಬಂದಂತೆ ಉರಿಯನ್ನು ಸ್ವಲ್ಪ ಕಡಿಮೆ ಮಾಡುವುದರಿಂದ ಅಕ್ಕಿ ತಳ ಹಿಡಿಯುವುದನ್ನು ತಡೆಯಬಹುದು.

ಹಾಲಿನ ಪ್ರಮಾಣ ಕಡಿಮೆಯಾಗುತ್ತ ಬಂದ ನಂತರ ಸಕ್ಕರೆಯನ್ನು ಸೇರಿಸಿ ಹಾಗೇ ಎರಡು ನಿಮಿಷ ಕುದಿಯಲು ಬಿಡಿ. ಈಗ ಏಲಕ್ಕಿ ಪುಡಿ, ಹೆಚ್ಚಿಕೊಂಡ ಬಾದಾಮಿ ಮತ್ತು ನೆನೆಸಿಕೊಂಡ ಕೇಸರಿ ಎಳೆಗಳನ್ನು ಸೇರಿಸಿ.

ಅಕ್ಕಿ ಸಂಪೂರ್ಣವಾಗಿ ಬೆಂದಿದೆ ಅಥವಾ ಪಾಯಸ ತಯಾರಾಗಿದೆ ಎಂದ ತಕ್ಷಣ ಪಾತ್ರೆಯನ್ನು ಉರಿಯಿಂದ ಕೆಳಗಿಳಿಸಿ. ಸರ್ವಿಂಗ್ ಬೌಲ್ ಗೆ ಹಾಕಿ ಅಕ್ಕಿ ಪಾಯಸ ಸವಿಯಲು ನೀಡಿ.

ಪತಿ ಬೈದಿದ್ದಕ್ಕೆ ಟಿಕ್‍ ಟಾಕ್ ಮಾಡುತ್ತಲೇ ಆತ್ಮಹತ್ಯೆಗೆ ಶರಣಾದ ಪತ್ನಿ..!

Posted: 13 Jun 2019 05:00 AM PDT

ಇತ್ತೀಚೆಗಂತೂ ಟಿಕ್‍ಟಾಕ್ ಹಾವಳಿ ಜೋರಾಗಿ. ಹದಿ ಹರೆಯದ ಯುವಕ-ಯುವತಿಯರ ಜೊತೆಗೆ ಗೃಹಿಣಿಯರು ಟಿಕ್‍ಟಾಕ್‍ ಮಾಡೋದ್ರಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.

ಅಂತೆಯೇ ಮಹಿಳೆಯೊಬ್ಬಳಿಗೆ ಟಿಕ್‍ಟಾಕ್ ಮಾಡೋದನ್ನು ಬಿಟ್ಟು, ಮಕ್ಕಳನ್ನು ಚೆನ್ನಾಗಿ ನೋಡಿಕೊ ಅಂತಾ ಪತಿ ಬೈದಿದ್ದಕ್ಕೆ, ಆಕೆ ಟಿಕ್‍ಟಾಕ್ ಮಾಡುತ್ತಲೇ ಕೀಟನಾಶಕ ಕುಡಿದು ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

24 ವರ್ಷದ ಅನಿತಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ತಮಿಳುನಾಡಿನ ಅರಿಯಲೂರು ಗ್ರಾಮದ ಈಕೆ ಪಝನಿವೆಲ್‍ ಎಂಬಾತನ ಜೊತೆ ಮದುವೆಯಾಗಿದ್ಲು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಪತಿ ಸಿಂಗಾಪುರದಲ್ಲಿ ಕೆಲಸ ಮಾಡುತ್ತಿದ್ದ. ಟಿಕ್‍ಟಾಕ್‍ ಆಪ್‍ ಹೆಚ್ಚಾಗಿ ಬಳಸುತ್ತಿದ್ದ ಈಕೆ ತನ್ನ ಮಕ್ಕಳ ಬಗ್ಗೆ ಗಮನ ಕೊಡದೆ ಮೊಬೈಲ್‍ನಲ್ಲಿ ಟಿಕ್‍ಟಾಕ್‍ ವಿಡಿಯೋ ಮಾಡಿ ಶೇರ್ ಮಾಡೋದ್ರಲ್ಲೆ ಬ್ಯುಸಿಯಾಗಿದ್ಲು.

ಅನಿತಾಳ ಈ ಟಿಕ್‍ಟಾಕ್ ಹುಚ್ಚಿನ ಬಗ್ಗೆ ನೆರೆಹೊರೆಯವರು ಸಿಂಗಪುರದಲ್ಲಿರುವ ಆಕೆಯ ಪತಿಗೆ ತಿಳಿಸಿದ್ರು. ಪತಿ ಪಝನಿವೆಲ್‍ ದೂರವಾಣಿ ಕರೆ ಮಾಡಿ ಪತಿಗೆ ಬೈದಿದ್ದಾನೆ. ಮೊದಲು ಮಕ್ಕಳನ್ನು ಸರಿಯಾಗಿ ನೋಡಿಕೋ ಅಂತಾ ಬುದ್ದಿವಾದ ಹೇಳಿದ್ದಾನೆ. ಇದ್ರಿಂದ ಸಿಟ್ಟಿಗೆದ್ದ ಅನಿತಾ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ತಾಜ್‍ ಮಹಲ್ ನೋಡಲು ಸಮಯಾವಕಾಶ ನಿಗದಿ

Posted: 13 Jun 2019 04:40 AM PDT

ಆಗ್ರಾದಲ್ಲಿರುವ ಪ್ರೇಮ ಸೌಧದ ವೀಕ್ಷಣೆಗೆ ಸಮಯಾವಕಾಶ ನಿಗದಿಪಡಿಸಲಾಗಿದೆ. ಹೌದು, ದೇಶ-ವಿದೇಶಗಳಿಂದ ಬರುವ ಪ್ರವಾಸಿಗರು ಇನ್ಮುಂದೆ ಆಗ್ರಾದ ತಾಜ್ ಮಹಲ್‍ನ್ನು ನೋಡಲು ಕೇವಲ ಮೂರು ಗಂಟೆ ಸಮಯ ನೀಡಲಾಗಿದೆ.

ಕೆಲ ಪ್ರವಾಸಿಗರು ಮುಂಜಾನೆಯಿಂದ ಸಂಜೆಯವರೆಗೂ ತಾಜ್ ಮಹಲ್‍ ನ ಆವರಣದಲ್ಲೇ ಕಾಲ ಕಳೆಯುತ್ತಿದ್ದರು. ಇದಕ್ಕೆ ಬ್ರೇಕ್ ಹಾಕಲು ಆಡಳಿತ ಮಂಡಳಿ ಮೂರು ಗಂಟೆ ಸಮಯವನ್ನು ನಿಗದಿಪಡಿಸಿದೆ. ಒಂದು ವೇಳೆ ನಿಗದಿಪಡಿಸಿರುವ ಸಮಯವನ್ನೂ ಮೀರಿ ಪ್ರವಾಸಿಗರು ಹೆಚ್ಚು ಸಮಯ ಅಲ್ಲಿ ಕಾಲ ಕಳೆದರೆ, ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

ಒಟ್ಟು 7 ಪ್ರವೇಶ ದ್ವಾರಗಳು ಹಾಗು 5 ನಿರ್ಗಮನದ ದ್ವಾರಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ವಿದೇಶಿ ಪ್ರವಾಸಿಗರಿಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನದ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರಿಗೆ ಪ್ರವೇಶ ದ್ವಾರದಲ್ಲಿ ಕೇವಲ 3 ಗಂಟೆಯವರೆಗೂ ಸೀಮಿತವಿರುವ ಟೋಕನ್‍ ನೀಡಲಾಗುತ್ತೆ.

ಒಂದು ವೇಳೆ ಪ್ರವಾಸಿಗರು ಇಲ್ಲಿ ಹೆಚ್ಚಿನ ಸಮಯ ಕಳೆಯಬೇಕೆಂದರೆ, ನಿರ್ಗಮನ ದ್ವಾರದಲ್ಲಿ ಹೆಚ್ಚಿನ ಹಣ ನೀಡಿ ಟೋಕನ್ ರೀಚಾರ್ಜ್ ಮಾಡಿಕೊಳ್ಳಬೇಕು ಎಂದು ಪುರಾತತ್ವ ಇಲಾಖೆ ಅಧೀಕ್ಷಕ ತಿಳಿಸಿದ್ದಾರೆ.

ಅಡುಗೆ ಮನೆಯಿಂದ ಮೀನಿನ ವಾಸನೆ ನಿವಾರಿಸಲು ಟಿಪ್ಸ್

Posted: 13 Jun 2019 03:55 AM PDT

ಮನೆಯಲ್ಲಿಯೇ ತಯಾರಿಸಿದ ಮೀನಿನ ಖಾದ್ಯಗಳು ರುಚಿಯಾಗಿರುತ್ತವೆ. ಆದರೆ ಮೀನಿನ ವಾಸನೆ ಮನೆಯೆಲ್ಲಾ ತುಂಬಿ ಮುಜುಗರ ಉಂಟು ಮಾಡುತ್ತವೆ.

ಹೀಗಾಗಿ ಕೆಲವರು ಮೀನಿನ ಖಾದ್ಯಗಳನ್ನು ಮನೆಯಲ್ಲಿ ತಯಾರಿಸಲು ಹಿಂಜರಿಯುತ್ತಾರೆ. ಆದರೆ ಮೀನಿನ ವಾಸನೆ ನಿವಾರಣೆಗೆ ಕೆಲವು ಸುಲಭ ವಿಧಾನಗಳಿವೆ.

* ಮೀನಿನ ವಾಸನೆ ನಿವಾರಣೆಗೆ ಬಿಳಿ ವಿನಿಗರ್‌ ಬೆಸ್ಟ್‌. ಮೀನನ್ನು ಬೇಯಿಸುವಾಗ ಸ್ಟವ್‌ ಪಕ್ಕ ಸಣ್ಣ ಬೌಲ್‌ನಲ್ಲಿ ಬಿಳಿ ವಿನಿಗರ್‌ ಇಡಿ. ವಿನಿಗರ್‌ ಮೀನಿನ ವಾಸನೆಯನ್ನು ಹೀರಿ ತಾಜಾ ಪರಿಮಳ ಬೀರುತ್ತದೆ.

* ನಿಂಬೆ ಹಣ್ಣಿನ ರಸ ಕೂಡಾ ಮೀನಿನ ವಾಸನೆ ನಿವಾರಿಸುತ್ತದೆ. ಒಂದು ಕಪ್‌ ನೀರಿಗೆ ಸ್ವಲ್ಪ ನಿಂಬೆ ರಸ ಹಾಕಿ ಅರ್ಧ ಗಂಟೆ ಕುದಿಸಿ. ಇದರ ಪರಿಮಳ ಮೀನಿನ ವಾಸನೆಯನ್ನು ಹೋಗಲಾಡಿಸುತ್ತದೆ.

* ಸೇಬು ಹಣ್ಣನ್ನು ಕೂಡಾ ಮೀನಿನ ವಾಸನೆ ನಿವಾರಣೆಗೆ ಬಳಸಲಾಗುತ್ತದೆ. ಮೀನು ಫ್ರೈ ಮಾಡುವ ಮೊದಲು ಸೇಬಿನ ತೆಳ್ಳನೆಯ ಸ್ಲೈಸ್‌ಗಳಿಂದ ಫ್ರೈಯಿಂಗ್‌ ಪ್ಯಾನನ್ನು ಮೃದುವಾಗಿ ಉಜ್ಜಿ. ಇದರಿಂದ ಮೀನಿನ ವಾಸನೆ ಕಡಿಮೆಯಾಗುತ್ತದೆ.

* ಮೀನಿನ ಖಾದ್ಯ ಮಾಡಿದ ಮೇಲೆ ಕಿತ್ತಳೆ ಸಿಪ್ಪೆ ಅಥವಾ ನಿಂಬೆ ಹಣ್ಣಿನ ಸಿಪ್ಪೆಯನ್ನು ನೀರಿಗೆ ಹಾಕಿ ಕುದಿಸಿದರೂ ದುರ್ನಾತ ದೂರವಾಗುತ್ತದೆ.

* ಅಡುಗೆ ಮನೆಯಲ್ಲಿ ಮೀನಿನ ವಾಸನೆ ಬರುತ್ತಿದ್ದರೆ ಒಂದು ಬೌಲ್‌ ಕುದಿಯುವ ನೀರಿಗೆ ಒಂದು ತುಂಡು ಚಕ್ಕೆ ಹಾಕಿ. ಇದರಿಂದ ಉತ್ತಮ ಪರಿಮಳ ಹೊರ ಹೊಮ್ಮುತ್ತದೆ.

* ಸಾಧ್ಯವಾದಷ್ಟು ತಾಜಾ ಮೀನುಗಳನ್ನೇ ತನ್ನಿ. ಮೀನು ಫ್ರೆಶ್‌ ಆಗಿದ್ದಷ್ಟು ವಾಸನೆ ಕಡಿಮೆಯಿರುತ್ತದೆ.

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭೀಕರ ಅಪಘಾತದ ದೃಶ್ಯ

Posted: 13 Jun 2019 03:48 AM PDT

ಮೈಸೂರಿನ ನಂಜನಗೂಡಿನಲ್ಲಿ ಫಿಲ್ಮೀ ಸ್ಟೈಲ್‍ನಲ್ಲಿ ಅಪಘಾತ ನಡೆದಿದ್ದು, ಘಟನೆಯಲ್ಲಿ ಫೋಟೋ ಜರ್ನಲಿಸ್ಟ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ನಂಜನಗೂಡು ಪಟ್ಟಣದ ಪೊಲೀಸ್ ವಸತಿ ಗೃಹದ ಹತ್ತಿರ ಈ ಘಟನೆ ನಡೆದಿದೆ. ಅತಿ ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ, ಬಲಭಾಗದಲ್ಲಿ ಬರುತ್ತಿದ್ದ ಬೈಕ್ ಹಾಗೂ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಪತ್ರಿಕಾ ಛಾಯಾಗ್ರಾಹಕ ಅನಂತಕೃಷ್ಣ ಸೇರಿ ಮೂರ್ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಇನ್ನು ಈ ಕಾರು ಮತ್ತು ಕಾರನ್ನು ಚಲಾಯಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗೇಮ್‌ ನೋಡ್ತಿದ್ದವನು ಮಾಡಿದ್ದೇನು ಗೊತ್ತಾ…?

Posted: 13 Jun 2019 03:43 AM PDT

ವರ್ಚುಯಲ್ ರಿಯಾಲಿಟಿ ಗೇಮ್ ನೋಡುತ್ತಿದ್ದ ಯುವಕನೊಬ್ಬ ಇದ್ದಕ್ಕಿದ್ದಂತೆ ಕಿರುಚಿ ಕುರ್ಚಿ ಬಿಟ್ಟು ಓಡಿ ನಗೆಪಾಟಲಿಗೀಡಾದ ಪ್ರಸಂಗ ನಡೆದಿದೆ.

ಒಂದಷ್ಟು ಜನ ಹೆಡ್‌ಸೆಟ್ ಹಾಕಿಕೊಂಡು ಕ್ಯಾಮರಾದೊಳಗೆ ದೃಷ್ಟಿ ನೆಟ್ಟು ವರ್ಚುಯಲ್ ಗೇಮ್ ನೋಡುತ್ತಿದ್ದರು. ಆಗ ಅದರಲ್ಲಿದ್ದ ಒಬ್ಬ ಕಿರುಚಿ, ನೆಗೆದು ಕುರ್ಚಿ ಬಿಟ್ಟು ಓಡಿದ್ದಾನೆ.

ಅಲ್ಲೇ ಇದ್ದ ಜನರು ಅವನನ್ನು ಹಿಡಿದು ಸಂತೈಸಿದರೂ ಅವನು ಭಾರಿ ಆಘಾತಗೊಂಡ ಸ್ಥಿತಿಯಲ್ಲೇ ಇದ್ದ. ಈ ದೃಶ್ಯ ಟ್ವಿಟರ್‌ನಲ್ಲಿ ಹಂಚಿಕೆಯಾಗಿದ್ದು ಭಾರಿ ಪ್ರತಿಕ್ರಿಯೆ ಪಡೆದಿದೆ.

ಕೂಡಿಟ್ಟ ಕಾಸಿನಲ್ಲಿ ಸಹಪಾಠಿಗಳ ಸಾಲ ತೀರಿಸಿದ 9 ವರ್ಷದ ಬಾಲಕ

Posted: 13 Jun 2019 03:40 AM PDT

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ವೆಸ್ಟ್ ಪಾರ್ಕ್ ಎಲಿಮೆಂಟರಿ ಶಾಲೆಯ ಮೂರನೇ ತರಗತಿಯ ರೆಯನ್ ಕಿರ್ಕ್ ಪ್ಯಾಟ್ರಿಕ್ ಎಂಬ ಒಂಬತ್ತು ವರ್ಷದ ಬಾಲಕ ತನ್ನ ತಾಯಿಯೊಂದಿಗೆ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾನೆ. ಆಟದ ಸಾಮಾಗ್ರಿಗಳ ಖರೀದಿಗಾಗಿ ಕೂಡಿಟ್ಟಿದ್ದ ಹಣವನ್ನ ತನ್ನ ಶಾಲೆಯ ಸಹಪಾಠಿಗಳ ಮಧ್ಯಾಹ್ನದ ಊಟದ ಬಾಬ್ತನ್ನ ತೀರಿಸಲು ಬಳಸಿಕೊಂಡಿದ್ದಾನೆ.

ತಾಯಿ ಬಳಿ ತನ್ನ ಶಾಲೆಯ ಸಹಪಾಠಿಗಳ ಮಧ್ಯಾಹ್ನದ ಊಟದ ಬಾಬ್ತು ತೀರಿಸಬೇಕಿದೆ ಎಂದು ಪ್ರಸ್ತಾಪಿಸಿದಾಗ ಆತನ ತಾಯಿ ತನ್ನ ಮಗನ ತಲೆಯಲ್ಲಿ ಏನು ಓಡುತ್ತಿದೆ ಎಂದು ಅರಿಯುವಲ್ಲಿ ಆಕೆಗೆ ಸಾಧ್ಯವಾಗಲಿಲ್ಲ. ಆಟದ ಸಾಮಾಗ್ರಿಗಳ ಖರೀದಿಗಾಗಿ ಕೂಡಿಟ್ಟ ಹಣ ಕೇವಲ 74.50 (5,170 ರೂ.) ಡಾಲರ್ ಇದೆ ಎಂದು ಹೇಳಿದ್ದಾಳೆ.

ಈ ಹಣವನ್ನ ಪ್ಯಾಟ್ರಿಕ್ ತನ್ನ ಶಾಲೆಯ ಸಹಪಾಠಿಗಳ ಮಧ್ಯಾಹ್ನದ ಊಟದ ಬಾಬ್ತು ತೀರಿಸುತ್ತೇನೆ ಎಂದು ನಿರ್ಧರಿಸಿದ್ದಾನೆ. ಶಾಲೆಯಲ್ಲಿ 30 ಸೆಂಟ್ಸ್ ನಿಂದ 3.25 ಡಾಲರ್ ನವರೆಗೂ ಶಾಲೆಯಲ್ಲಿ ಮಧ್ಯಾಹ್ನದ ಊಟ ನೀಡಲಾಗುತ್ತಿದೆ. ಇದು ಶಾಲೆ ಮಕ್ಕಳ ಪೋಷಕರ ಆದಾಯದ ಆಧಾರದ ಮೇಲೆ ಹಂಚುವ ಪರಿಪಾಠವಿದೆ. ಸಾಲ ಉಳಿಸಿಕೊಂಡ ವಿದ್ಯರ್ಥಿಗಳಿಗೆ ಇನ್ನೂ ಮಧ್ಯಾಹ್ನದ ಬಿಸಿ ಊಟ ನೀಡುತ್ತಿರುವುದಾಗಿ ಶಾಲೆ ಆಡಳಿತ ತಿಳಿಸಿದೆ.

ಆದರೆ ಇಂತಹ ಕಾರ್ಯ ಬಾಲಕ ನ ಸಾಧನೆಯೂ ಮೆಚ್ಚುವಂತಹದ್ದೆ. ಈ ಕುರಿತು ಮಾತನಾಡಿರುವ ಬಾಲಕ ರೆಯನ್, ಮಕ್ಕಳ ಸಮಸ್ಯೆಯ ಬಗ್ಗೆ ಜನ ಮಾತನಾಡುವುದನ್ನ ಬಿಟ್ಟು ಕಾರ್ಯೋನ್ಮುಖರಾಗಲಿ ಎಂಬ ಆಸೆಯಿಂದ ಈ ಕೆಲಸಕ್ಕೆ ಕೈ ಹಾಕಿರುವುದಾಗಿ ತಿಳಿಸಿದ್ದಾನೆ.

ಬಟರ್ ಫ್ರೂಟ್ ನ್ನು ಗ್ರೆನೇಡ್ ಎಂದು ತೋರಿಸಿ ಬ್ಯಾಂಕ್‌ ದರೋಡೆ

Posted: 13 Jun 2019 03:40 AM PDT

ಬಟರ್ ಫ್ರೂಟ್ ನ್ನು ಗ್ರೇನೇಡ್ ಎಂದು ತೋರಿಸಿ ಬೆದರಿಸಿದ ಖದೀಮನೊಬ್ಬ ಎರಡು ಬ್ಯಾಂಕ್‌ಗಳಲ್ಲಿ ಲಕ್ಷಾಂತರ ರೂಪಾಯಿ ದರೋಡೆ ಮಾಡಿದ್ದಾನೆ.

ದಕ್ಷಿಣ ಇಸ್ರೇಲ್‌ನ ಜೆರುಸಲೇಮ್‌ನ ಬಿಗ್ ಬೀರ್ಶೆಬಾ ಶಾಪಿಂಗ್ ಮಾಲ್‌ನ ಪೋಸ್ಟಲ್ ಬ್ಯಾಂಕ್‌ಗೆ ತೆರಳಿದ್ದ ಖದೀಮ, ಕಪ್ಪು ಬಣ್ಣ ಬಳಿದಿದ್ದ ಬಟರ್ ಫ್ರೂಟ್ ನ್ನು ಅಲ್ಲಿನ ಕ್ಯಾಶಿಯರ್‌ಗೆ ತೋರಿ, ಅಷ್ಟೂ ಹಣ ಬ್ಯಾಗ್‌ಗೆ ಹಾಕಿ ಕೊಡದಿದ್ದರೆ ಈ ಗ್ರೆನೇಡ್ ಎಸೆದು ಸ್ಫೋಟಿಸುತ್ತೇನೆ ಎಂದು ಬೆದರಿಸಿ, 3.09 ಲಕ್ಷ ರೂ.ನೊಂದಿಗೆ ಪರಾರಿಯಾಗಿದ್ದ.

ಐದು ದಿನಗಳ ಬಳಿಕ ಒರೇನ್ ಸೆಂಟರ್ ಶಾಪಿಂಗ್ ಏರಿಯಾದ ಅದೇ ಬ್ಯಾಂಕ್‌ನ ಶಾಖೆಯಲ್ಲಿ ಅದೇ ಶೈಲಿಯಲ್ಲಿ 2.32 ಲಕ್ಷ ರೂ.‌ ದರೋಡೆ ಮಾಡಿದ್ದ. ಸಿಸಿ ಟಿವಿ ಕ್ಲಿಪ್ಪಿಂಗ್ ಆಧರಿಸಿ ಪೊಲೀಸರು ಆತನನ್ನು ಈಗ ಬಂಧಿಸಿದ್ದಾರೆ.

ಪತಿ ಕೆಲಸಕ್ಕೆ ಹೋಗ್ತಿದ್ದಂತೆ ಮನೆಗೆ ಬರ್ತಿದ್ದ ಬಾಯ್ ಫ್ರೆಂಡ್

Posted: 13 Jun 2019 03:23 AM PDT

ಡೆಹ್ರಾಡೂನ್ ನಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ರೂಪೇಶ್ ಎಂಬಾತನ ಸಾವು ಆತ್ಮಹತ್ಯೆಯಲ್ಲ ಕೊಲೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆರೋಪಿ ಪತ್ನಿ, ಆಕೆ ಬಾಯ್ ಫ್ರೆಂಡ್ ಹಾಗೂ ಇನ್ನೊಬ್ಬನನ್ನು ಬಂಧಿಸಿದ್ದಾರೆ.

ರೂಪೇಶ್, ಶಾಲೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡ್ತಿದ್ದ. ರೂಪೇಶ್ ಪತ್ನಿ ವ್ಯಕ್ತಿಯೊಬ್ಬನಿಂದ ಸಾಲ ಪಡೆದಿದ್ದಳಂತೆ. ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿದೆ. ಇಬ್ಬರೂ ಶಾರೀರಿಕ ಸಂಬಂಧ ಬೆಳೆಸುವಷ್ಟು ಹತ್ತಿರವಾಗಿದ್ದಾರೆ. ಪತಿ ಶಾಲೆಗೆ ಹೋಗ್ತಿದ್ದಂತೆ ಬಾಯ್ ಫ್ರೆಂಡ್ ಮನೆಗೆ ಬರ್ತಿದ್ದನಂತೆ.

ರೂಪೇಶ್ ಗೆ ಈ ಬಗ್ಗೆ ಅನುಮಾನ ಬಂದಿದೆ. ಪ್ರೀತಿಗೆ ಅಡ್ಡಿ ಬರ್ತಿರುವ ಪತಿಯನ್ನು ಮುಗಿಸುವ ಪ್ಲಾನ್ ಮಾಡಿದ್ದಾಳೆ ಪತ್ನಿ. ಬಾಯ್ ಫ್ರೆಂಡ್ ಜೊತೆ ಸೇರಿ ಪತಿ ಹತ್ಯೆ ಮಾಡಿ ನೇಣು ಬಿಗಿದಿದ್ದಾಳೆ. ನೇಣು ಬಿಗಿದ ಜಾಗದಲ್ಲಿ ರಕ್ತದ ಕಲೆಯಿದ್ದ ಕಾರಣ ತನಿಖೆ ಕೈಗೊಂಡ ಪೊಲೀಸ್ ಮುಂದೆ ಪತ್ನಿ ಬಾಯ್ಬಿಟ್ಟಿದ್ದಾಳೆ.

 

ಇಂಟರ್ನೆಟ್‌ ಬಳಕೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ

Posted: 13 Jun 2019 03:17 AM PDT

ಇತ್ತೀಚೆಗಂತೂ ಮಕ್ಕಳಿಂದ ಹಿಡಿದೂ ವೃದ್ಧರವರೆಗೂ ಯಾರ್ ಕೈಯಲ್ಲಿ ನೋಡಿದ್ರು ಮೊಬೈಲ್ ಇರುತ್ತೆ. ಹೀಗಾಗಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಕೂಡಾ ಹೆಚ್ಚಾಗ್ತಿದೆ. ಅಂತೆಯೇ ಜಾಗತಿಕ ಇಂಟರ್ನೆಟ್ ಬಳಕೆದಾರರ ಸಂಖ್ಯೆಯಲ್ಲಿ ಚೀನಾ ನಂಬರ್ 1 ಸ್ಥಾನದಲ್ಲಿದ್ರೆ, ಭಾರತ ಎರಡನೇ ಸ್ಥಾನದಲ್ಲಿದೆ. ಇನ್ನು ಅಮೆರಿಕಾ ಮೂರನೆ ಸ್ಥಾನ ಪಡೆದಿದೆ.

ಇಂಟರ್ನೆಟ್ ಟ್ರೆಂಡ್ಸ್ ಕುರಿತು ಮೇರಿ ಮೀಕರ್ ಎಂಬ ಸಂಸ್ಥೆ ಈ ವರ್ಷದ ಸಮೀಕ್ಷೆ ನಡೆಸಿದೆ. ಅದರಲ್ಲಿ ಜಗತ್ತಿನ ಇಂಟರ್ನೆಟ್ ಬಳಕೆದಾರರ ಸಂಖ್ಯೆಯಲ್ಲಿ ಶೇಕಡಾ 12 ರಷ್ಟು ಪಾಲು ಹೊಂದುವ ಮೂಲಕ ಭಾರತ 2ನೇ ಅತಿದೊಡ್ಡ ರಾಷ್ಟ್ರವಾಗಿದೆ. ಇದಕ್ಕೆ ರಿಲಯನ್ಸ್ ಜಿಯೋ ಇಂಟರ್ನೆಟ್ ವ್ಯವಸ್ಥೆಯೇ ಕಾರಣ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

3800 ಕೋಟಿ ಮಂದಿ ಅಂದ್ರೆ ಜಗತ್ತಿನ ಅರ್ಧಕ್ಕಿಂತ ಹೆಚ್ಚು ಮಂದಿ ಇಂಟರ್ನೆಟ್ ಬಳಕೆ ಮಾಡುತ್ತಿದ್ದಾರೆ. ಜಾಗತಿಕ ಇಂಟರ್ನೆಟ್ ಬಳಕೆದಾರರಲ್ಲಿ ಶೇಕಡಾ 21 ರಷ್ಟು ಮಂದಿ ಚೀನಾದಲ್ಲಿದ್ದರೆ, ಶೇ.8 ರಷ್ಟು ಮಂದಿ ಅಮೆರಿಕಾದಲ್ಲಿದ್ದಾರೆ. ಭಾರತದಲ್ಲಿ ಜಿಯೋದ ಉಚಿತ ಕರೆ ಮತ್ತು ಅಗ್ಗದ ಡೇಟಾ ದರಗಳು ಇಂಟರ್ನೆಟ್ ಬಳಕೆ ಪ್ರಮಾಣವನ್ನು ಹೆಚ್ಚಿಸಿವೆ ಅಂತಾ ತಿಳಿದು ಬಂದಿದೆ.

ತೆಲಂಗಾಣದಲ್ಲಿ ಓರ್ವ ಯುವತಿ ಹಾಗೂ ಇಬ್ಬರು ಅಪ್ರಾಪ್ತೆಯರು ನಾಪತ್ತೆ

Posted: 13 Jun 2019 03:12 AM PDT

ತೆಲಂಗಾಣದಲ್ಲಿ ಇಬ್ಬರು ಅಪ್ರಾಪ್ತೆಯರು ಮತ್ತು ಒಬ್ಬಳು ಯುವತಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಸಂಗಾರೆಡ್ಡಿ ಜಿಲ್ಲೆಯ ಪಟಂಚೇರು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇವರಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

ಕಾಣೆಯಾದವರಲ್ಲಿ ಅಕುಲ ಮತ್ತು ಶ್ರಾವಂತಿ 17 ವರ್ಷದವರಾಗಿದ್ರೆ, ಶಿವಾನಿ 24 ವರ್ಷದ ಯುವತಿಯಾಗಿದ್ದಾಳೆ. ಅಕುಲ ಮತ್ತು ಶ್ರಾವಂತಿ ಇಬ್ಬರು ಗೆಳತಿಯರಾಗಿದ್ದು, ಪಟಂಚೇರಿನ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದರು. ಬುಧವಾರ ಎಂದಿನಂತೆ 10 ಗಂಟೆಗೆ ಕಾಲೇಜಿಗೆ ಹೋದವರು ಮನೆಗೆ ವಾಪಸ್‍ ಬಂದಿಲ್ಲ. ಹೀಗಾಗಿ ಆತಂಕಕ್ಕೊಳಗಾದ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಇನ್ನೊಂದೆಡೆ ಸಾಫ್ಟ್ ವೇರ್ ಉದ್ಯೋಗಿ ಶಿವಾನಿ ಕೂಡಾ ಬುಧವಾರ ರಂಗಾರೆಡ್ಡಿ ಪ್ರದೇಶದಿಂದ, ಕಚೇರಿಗೆ ತೆರಳಿದವಳು, ಮನೆಗೆ ವಾಪಸ್ ಬರದ ಹಿನ್ನೆಲೆಯಲ್ಲಿ ಈಕೆಯ ಪೋಷಕರು ಕೂಡಾ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಎರಡು ಪ್ರತ್ಯೇಕ ಪ್ರಕರಣಗಳಾಗಿದ್ದು, ಕಾಣೆಯಾದ ಈ ಮೂವರಿಗೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

ಮರಿಗೆ ರಸ್ತೆ ದಾಟಲು ತಿಳಿಸಿಕೊಟ್ಟ ಕಡವೆ – ವಿಡಿಯೋ ವೈರಲ್

Posted: 13 Jun 2019 03:00 AM PDT

ಅಮೆರಿಕಾದ ಕಡವೆಯೊಂದು ತನ್ನ ಮರಿಗೆ ರಸ್ತೆ ದಾಟಲು ಹೇಳಿಕೊಟ್ಟ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿ, ವೈರಲ್ ಆಗಿದೆ.

ಸ್ಟೀವ್ ಮ್ಯೂಸ್ ಎನ್ನುವವರು ಇದನ್ನು ಫೇಸ್‌ ಬುಕ್‌ ನಲ್ಲಿ ಹಂಚಿಕೊಂಡಿದ್ದು, ಇದನ್ನು 20 ಲಕ್ಷ ಮಂದಿ ನೋಡಿ 50 ಸಾವಿರ ಜನ ಶೇರ್ ಮಾಡಿದ್ದಾರೆ.

ರಸ್ತೆ ಅಂಚಿನವರಿಗೆ ಬಂದು ನಿಂತ ಕಡವೆ, ಮರಿಗೆ ಮುಂದೆ ಬರಲು ಹೇಳಿ ಮುಂದಕ್ಕೆ ಸಾಗುತ್ತದೆ. ಹೀಗೆ ರಸ್ತೆ ದಾಟುವುದರೊಳಗೆ ಎರಡು ಸಲ ಹಿಂದಕ್ಕೆ ಬಂದು ನೋಡುವ ತಾಯಿ, ಮರಿಯನ್ನು ಯಶಸ್ವಿಯಾಗಿ ರಸ್ತೆ ದಾಟಿಸುತ್ತದೆ. ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

One of the most amazing things I've seen. Only a few hours old.(For licensing or usage, contact licensing@viralhog.com)

Posted by Steve Muise on Thursday, May 23, 2019

ಇಲ್ಲಿ ಕೈದಿಗಳೇ ಆರ್‌ಜೆಗಳು – ಜೈಲೊಳಗೊಂದು ‘ಅಂತರ್ವಾಣಿ’

Posted: 13 Jun 2019 02:50 AM PDT

ಇಲ್ಲಿ ಕೈದಿಗಳೇ ರೇಡಿಯೊ ಜಾಕಿಗಳು. ವಿಶೇಷವೆಂದರೆ ಇಲ್ಲಿ ಜೈಲೊಳಗೇ ಒಂದು ರೇಡಿಯೊ ಸ್ಟೇಷನ್ ಇದೆ. ಇದರ ಹೆಸರು ‘ಅಂತರ್ವಾಣಿ’.

ಹೀಗೆ ಜೈಲೊಳಗೆ ರೇಡಿಯೊ ಸ್ಟೇಷನ್ ಆರಂಭಿಸಿರುವುದು ತೆಲಂಗಾಣದಲ್ಲಿ. ಇಲ್ಲಿನ ಕಾರಾಗೃಹ ಇಲಾಖೆ ಇಂಥದ್ದೊಂದು ಕ್ರಮಕೈಗೊಂಡಿದೆ. ಕೈದಿಗಳಿಗೆ ಮನೋರಂಜನೆ ನೀಡುವ ಜೊತೆಗೆ ಅವರು ಖಿನ್ನತೆಗೆ ಒಳಗಾಗದಂತೆ ನೋಡಿಕೊಳ್ಳಲು ಈ ಕ್ರಮಕೈಗೊಳ್ಳಲಾಗಿದೆ.

ಈ ಮೂಲಕ ಕೈದಿಗಳಲ್ಲಿ ಸುಧಾರಣೆ ತರುವುದು ಮುಖ್ಯ ಗುರಿ. ಮುಖ್ಯವಾಹಿನಿಗೆ ಹೋದ ಮೇಲೆ ಅವರು ಸಂಭಾವಿತರಾಗಿ ಜೀವನ ನಡೆಸುವಂತಾಗಬೇಕು ಎಂಬುದು ಇದರ ಉದ್ದೇಶ ಎನ್ನುತ್ತಾರೆ ಡಿಜಿ(ಕಾರಾಗೃಹ) ವಿ.ಕೆ. ಸಿಂಗ್.

ರಾಜ್ಯದ ಎಲ್ಲ ಜೈಲುಗಳಲ್ಲೂ ‘ಅಂತರ್ವಾಣಿ’ ಅನುರಣಿಸಲಿದ್ದು, ಪ್ರಪ್ರಥಮವಾಗಿ ಸಂಗರೆಡ್ಡಿ ಜೈಲಿನಲ್ಲಿ ಇದು ಆರಂಭವಾಗಿದೆ. ಸದ್ಯ ಬೆಳಗ್ಗೆ 6ರಿಂದ ಸಂಜೆ 6ರವರೆಗೆ 5 ಕೈದಿಗಳು ಇದನ್ನು ನಿರ್ವಹಿಸುತ್ತಿದ್ದಾರೆ.

ಮದ್ಯಪಾನಕ್ಕೆ ಸಾಥ್‌ ನೀಡಿದ್ದ ಟ್ಯಾಕ್ಸಿ ಚಾಲಕನಿಗೆ ಭರ್ಜರಿ ಗಿಫ್ಟ್

Posted: 13 Jun 2019 02:49 AM PDT

ದಿನಾ ಕುಡಿಯಲು ಕರೆದೊಯ್ಯುತ್ತಿದ್ದ ಎಂಬುದೊಂದೇ ಕಾರಣಕ್ಕೆ ಕೋಟ್ಯಾಂತರ ರೂಪಾಯಿ ಮೌಲ್ಯದ ಮನೆಯನ್ನೇ ಉದ್ಯಮಿಯೊಬ್ಬ ಟ್ಯಾಕ್ಸಿ ಡ್ರೈವರ್‌ಗೆ ಬರೆದುಕೊಟ್ಟಿದ್ದಾನೆ.

ದಢೂತಿಯಾಗಿದ್ದ ಲಂಡನ್‌ನ ಗ್ಯಾರಿ ಮೆಂಡೇಜ್ ಎಂಬಾತನನ್ನು ಕರೆದೊಯ್ಯಲು ಬೇರೆ ಎಲ್ಲ ಟ್ಯಾಕ್ಸಿ ಡ್ರೈವರ್‌ ಗಳು ನಿರಾಕರಿಸಿದ್ದಾಗ ಡೀನ್ ಹ್ಯೂಸ್ ಎಂಬ ಡ್ರೈವರ್ ರೆಗ್ಯುಲರ್ ಆಗಿ ಕರೆದೊಯ್ಯುತ್ತಿದ್ದ. ಇದೇ ಖುಷಿಗೆ ಆತ ತನ್ನ 1.4 ಕೋಟಿ ರೂ. ಮೌಲ್ಯದ ಮನೆಯನ್ನು ಡೀನ್‌ಗೆ ವಿಲ್ ಮಾಡಿದ್ದ.

ಆದರೆ ಗ್ಯಾರಿಯ ಪಾರ್ಟನರ್ ಹರ್ಮಸ್ ರಾಡ್ರಿಗಸ್, ಗ್ಯಾರಿ ತನ್ನದೆಲ್ಲವನ್ನೂ ಸಾಯುವ 3 ವರ್ಷಗಳ ಹಿಂದೆ ನನಗೇ ವಿಲ್ ಮಾಡಿದ್ದ ಎಂದು ಕೋರ್ಟ್‌ಗೆ ಹೋಗಿದ್ದರಿಂದ ಈ ಮನೆ ಟ್ಯಾಕ್ಸಿ ಡ್ರೈವರ್ ಪಾಲಾಗುವುದು ತಪ್ಪಿದೆ.

ಒತ್ತಡದ ತಲೆನೋವು ದೂರ ಮಾಡುತ್ತೆ ಈ ಸುಲಭ ಟಿಪ್ಸ್

Posted: 13 Jun 2019 02:31 AM PDT

ದಿನಪೂರ್ತಿ ಇರುವ ಕೆಲಸದ ಮಧ್ಯೆ ತಲೆ ನೋವು ಶುರುವಾದ್ರೆ ಕಥೆ ಮುಗಿದಂತೆ. ಇಡೀ ದಿನವನ್ನು ಈ ತಲೆ ನೋವು ಹಾಳು ಮಾಡುತ್ತದೆ. ಕೆಲವರಿಗೆ ತಲೆನೋವಿನ ಹೆಸರು ಕೇಳಿದ್ರೆ ಭಯವಾಗುತ್ತದೆ. ತಲೆ ಒಡೆದು ಹೋದಂತ ಅನುಭವವನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ ಎನ್ನುವವರಿದ್ದಾರೆ. ಈ ಭಯಾನಕ ತಲೆನೋವು ಬಹುತೇಕರಿಗೆ ಒತ್ತಡದಿಂದ ಬರುತ್ತದೆ.

ಎಲ್ಲ ಚಿಂತೆಗೂ ಧ್ಯಾನ ಉತ್ತಮ ಪರಿಹಾರ. ದಿನದಲ್ಲಿ ಐದು ನಿಮಿಷಗಳ ಕಾಲ ಧ್ಯಾನ ಮಾಡಿದ್ರೂ ಸಾಕಾಗುತ್ತದೆ. ಕಣ್ಣು ಮುಚ್ಚಿ ಮಾಡುವ ಧ್ಯಾನ ನಿಮ್ಮ ಒತ್ತಡವನ್ನು ಕಡಿಮೆ ಮಾಡಿ ಮನಸ್ಸನ್ನು ರಿಲ್ಯಾಕ್ಸ್ ಮಾಡುತ್ತದೆ. ಇದು ತಲೆನೋವು ದೂರ ಹೋಗುವಂತೆ ಮಾಡುತ್ತದೆ.

ಕೆಲಸದ ಒತ್ತಡದಲ್ಲಿ ನಗು ಮಾಸಿ ಹೋಗಿದೆ. ದೊಡ್ಡದಾಗಿ ಮನಸ್ಸು ಬಿಚ್ಚಿ ನಗುವವರ ಸಂಖ್ಯೆ ಕಡಿಮೆಯಾಗಿದೆ. ಈ ನಗು ಸರ್ವ ರೋಗಕ್ಕೂ ಮದ್ದು. ಮನಸ್ಸು ಬಿಚ್ಚಿ ನಕ್ಕಾಗ ಒತ್ತಡ ಕಡಿಮೆಯಾಗುವ ಜೊತೆಗೆ ನಿಮ್ಮ ಮೂಡ್ ಸರಿಯಾಗುತ್ತದೆ.

ಒತ್ತಡ ಕಡಿಮೆ ಮಾಡಲು ಡಾನ್ಸ್ ಕೂಡ ಉತ್ತಮ ಮಾರ್ಗ. ಚಿಂತೆ, ಒತ್ತಡ ನಿಮ್ಮನ್ನು ಕಾಡುತ್ತಿರುವ ವೇಳೆ ನಿಮಗಿಷ್ಟವಾಗುವ ಹಾಡಿಗೆ ಡಾನ್ಸ್ ಮಾಡಿ. ಡಾನ್ಸ್ ಮಾಡಿದ್ರೆ ದೇಹಕ್ಕೆ ಶಕ್ತಿ ಬರುತ್ತದೆ. ಒತ್ತಡ ಕಡಿಮೆಯಾಗುತ್ತದೆ. ದೇಹದಲ್ಲಿರುವ ರಕ್ತ ಸಂಚಾರ ಸುಲಭವಾಗುತ್ತದೆ.

ಒತ್ತಡ ಕಾಡುತ್ತಿದ್ದಂತೆ ಸ್ವಲ್ಪ ದೂರ ನಡೆಯಿರಿ. ಇಲ್ಲವೆ ಓಡಿರಿ. ಇದು ಮೆದುಳಿನಲ್ಲಿ ಉತ್ತಮ ರಾಸಾಯನಿಕವನ್ನು ಬಿಡುಗಡೆ ಮಾಡುವುದ್ರಿಂದ ಒತ್ತಡ ಕಡಿಮೆಯಾಗುತ್ತದೆ.

ನವಜಾತ ಶಿಶುಗಳಿಗೆ ‘ಆಧಾರ್’ ಕಾರ್ಡ್ ಮಾಡಿಸೋದು ಹೇಗೆ ಗೊತ್ತಾ…?

Posted: 13 Jun 2019 02:30 AM PDT

ಆಧಾರ್ ಕಾರ್ಡ್ ಭಾರತೀಯನಿಗೆ ಪ್ರಮುಖ ದಾಖಲೆಯಾಗಿದೆ. ಆಧಾರ್ ದಾಖಲೆ ಮಾತ್ರವಲ್ಲ ಅದು ಗುರುತಿನ ಚೀಟಿ. ಸರ್ಕಾರದ ಪ್ರತಿಯೊಂದು ಯೋಜನೆ ಲಾಭ ಪಡೆಯಲು ಆಧಾರ್ ಅಗತ್ಯ. ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನವಜಾತ ಶಿಶುಗಳಿಗೂ ಆಧಾರ್ ಸೌಲಭ್ಯ ನೀಡ್ತಿದೆ.

ನೀವು ಐದು ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳಿಗೆ ಆಧಾರ್ ಮಾಡಿಸಲು ನಿರ್ಧರಿಸಿದ್ದರೆ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಐದು ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳಿಗೆ ಬಯೋಮೆಟ್ರಿಕ್ ಬಳಕೆ ಮಾಡಲಾಗುವುದಿಲ್ಲ. ಮಕ್ಕಳ ಆಧಾರ್ ಕಾರ್ಡ್ ಮಾಡಿಸುವ ಮೊದಲು ಪಾಲಕರು ಆಧಾರ್ ಕಾರ್ಡ್ ಮಾಡಿಸಬೇಕು. ಮಕ್ಕಳಿಗೆ ಐದು ವರ್ಷವಾದ್ಮೇಲೆ ಅವ್ರ ಬೆರಳಚ್ಚನ್ನು ನೀಡಬೇಕು. ಮಕ್ಕಳು 15 ವರ್ಷಕ್ಕೆ ಬರ್ತಿದ್ದಂತೆ ಮತ್ತೊಮ್ಮೆ ಬಯೋಮೆಟ್ರಿಕ್ ಮಾಡಬೇಕು.

ಬಯೋಮೆಟ್ರಿಕ್ ಜೊತೆ ಮಕ್ಕಳ ಫೋಟೋವನ್ನು ಪಡೆಯಲಾಗುತ್ತದೆ. 5 ವರ್ಷದಿಂದ 15 ವರ್ಷದ ಮಕ್ಕಳಿಗೆ ದೊಡ್ಡವರು ಮಾಡಿಸಿದ ವಿಧಾನದಲ್ಲಿಯೇ ಆಧಾರ್ ಮಾಡಿಸಬೇಕು. ನವಜಾತ ಶಿಶುವಿಗೆ ಆಧಾರ್ ಮಾಡಿಸುವವರು ಜನನ ದಾಖಲೆ ನೀಡಬೇಕು. ಕೆಲ ಆಸ್ಪತ್ರೆಯಲ್ಲಿಯೇ ಆಧಾರ್ ಕಾರ್ಡ್ ನೀಡಲಾಗುತ್ತದೆ. ಜನನ ದಾಖಲೆ ಜೊತೆ ಅವ್ರು ಆಧಾರ್ ಕಾರ್ಡ್ ನೀಡುತ್ತಾರೆ.