Translate

Thursday, May 9, 2019

Kannada News | Karnataka News | India News

Kannada News | Karnataka News | India News


ವಿಶ್ವಕಪ್: ಭಾರತ – ಪಾಕ್ ಪಂದ್ಯಾವಳಿ ವೇಳೆ ಜೊತೆಗಿರಲ್ಲ ಆಟಗಾರರ ಪತ್ನಿಯರು

Posted: 09 May 2019 08:25 AM PDT

ವಿಶ್ವಕಪ್ ಹತ್ತಿರ ಬರ್ತಿದೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಭಾರತೀಯ ಆಟಗಾರರು ಇಂಗ್ಲೆಂಡ್ ಗೆ ತೆರಳಲಿದ್ದಾರೆ. ಆಟಗಾರರ ಪತ್ನಿ ಅಥವಾ ಗರ್ಲ್ ಫ್ರೆಂಡ್ ಎಷ್ಟು ಸಮಯ ಆಟಗಾರರ ಜೊತೆ ಇರಬಹುದು ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಿದೆ. ಆಟಗಾರರ ಪತ್ನಿ ಅಥವಾ ಗರ್ಲ್ ಫ್ರೆಂಡ್ 15 ದಿನಗಳ ಕಾಲ ಮಾತ್ರ ಆಟಗಾರರ ಜೊತೆ ಇರಬಹುದು ಎಂದು ಬಿಸಿಸಿಐ ಹೇಳಿದೆ.

ಆರಂಭದಲ್ಲಿ 21 ದಿನಗಳ ಕಾಲ ಪತ್ನಿ ಅಥವಾ ಗರ್ಲ್ ಫ್ರೆಂಡ್ ಆಟಗಾರರ ಜೊತೆ ಇರುವಂತಿಲ್ಲ. 21 ದಿನಗಳ ನಂತ್ರ ಆಟಗಾರರ ಜೊತೆ ಇರಬಹುದು. ಆದ್ರೆ ಒಟ್ಟಿಗಿರುವ ಸಮಯ ಕೇವಲ 15 ದಿನಗಳು ಮಾತ್ರವೆಂದು ಬಿಸಿಸಿಐ ಹೇಳಿದೆ. ವಿಶ್ವಕಪ್ ಮೇ 30 ರಿಂದ ಶುರುವಾಗಲಿದ್ದು, ಜುಲೈ 15ರವರೆಗೆ ನಡೆಯಲಿದೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವಿಶ್ವಕಪ್ ವೇಳೆ ಕುಟುಂಬಸ್ಥರ ಜೊತೆಗಿರಲು ಅನುಮತಿ ಕೇಳಿದ್ದರು. ಬಿಸಿಸಿಐ ಈಗ ನಿಯಮದಲ್ಲಿ ಬದಲಾವಣೆ ಮಾಡಿದೆ. ಕೊಹ್ಲಿ ಜೊತೆ ಸಮಾಲೋಚನೆ ನಡೆಸದೆ ಬಿಸಿಸಿಐ ಈ ತೀರ್ಮಾನ ಕೈಗೊಂಡಿದೆ. ಕಳೆದ ಕೆಲ ಪ್ರವಾಸಗಳಲ್ಲಿ ಆಟಗಾರರು ಹಾಗೂ ಅವರ ಕುಟುಂಬಸ್ಥರನ್ನು ನೋಡಿಕೊಳ್ಳುವುದು ಬಿಸಿಸಿಐಗೆ ಕಷ್ಟವಾಗಿತ್ತು. ಆಸ್ಟ್ರೇಲಿಯಾ ಪ್ರವಾಸದ ವೇಳೆ ತಂಡದ ಸಂಖ್ಯೆ 37 ಆಗಿದ್ದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯ್ತು.

ಬಿಸಿಸಿಐ ಈ ನಿರ್ಧಾರದಿಂದ 21 ದಿನಗಳ ಕಾಲ ಆಟಗಾರರು ಕುಟುಂಬಸ್ಥರ ಜೊತೆ ಇರುವಂತಿಲ್ಲ. ಅಂದ್ರೆ ಭಾರತ – ಪಾಕ್ ಪಂದ್ಯದಲ್ಲಿ ಆಟಗಾರರ ಪತ್ನಿಯರು ಜೊತೆಗಿರುವುದಿಲ್ಲ.

ಪ್ರಾಣಿ ಸಂಗ್ರಹಾಲಯಕ್ಕೆ ಮರಳಿ ಬಂತು ಧೈರ್ಯಶಾಲಿ ಗಿಳಿ

Posted: 09 May 2019 08:22 AM PDT

ಮಾತನಾಡುವ ಗಿಳಿಯನ್ನ ನಾವು ನೋಡಿದ್ದೇವೆ. ಆದರೆ ಧೈರ್ಯಶಾಲಿಯಾದ ಗಿಳಿಯನ್ನ ನೋಡಿದ್ದೀರಾ? ಇಲ್ಲಿದೆ ಅದರ ರೋಚಕ ಕಥೆ….!

ಬ್ರೆಜಿಲ್ ನ ಕ್ಯಾಸ್ಕಾವೆಲ್ ಪ್ರಾಣಿ ಸಂಗ್ರಹಾಲಯದಲ್ಲಿ ಫ್ರೆಡ್ಡಿ ಕ್ರೂಗೆರ್ ಎಂಬ ಗಿಳಿ ಎರಡು ಗಂಡಾಂತರದಿಂದ ಪಾರಾಗಿದೆ. ಆದರೆ ಇತ್ತೀಚೆಗೆ ನಡೆದ ಮೂರನೇ ಗಂಡಾಂತರದಲ್ಲಿ ಸಿಲುಕಿ ಸಾವು – ಬದುಕಿನ‌ ನಡುವೆ ಹೋರಾಡುತ್ತಿದೆ. ಈ ಗಿಳಿ ನೆಟ್ಟಿಗರ ಅಚ್ಚುಮೆಚ್ಚಿನ ಪಾತ್ರಕ್ಕೆ ಕಾರಣವಾಗಿದೆ.

ಒಂದು ತಿಂಗಳ ಹಿಂದೆ ಜೂ ಕಳ್ಳರ ಹಾಗೂ ಪೋಲೀಸರ ನಡುವೆ ನಡೆದ ಕಾಳಗದಲ್ಲಿ ಫ್ರೆಡ್ಡಿಗೆ ಬಂದೂಕಿನ ಗುಂಡು ಹೊಡೆತ ಬಿದ್ದಿತ್ತು. ಕೊಕ್ಕು ಮತ್ತು ಕಣ್ಣಿನ‌ ಭಾಗಕ್ಕೆ ಬಿದ್ದ ಗುಂಡಿನ‌ ಹೊಡೆತದಿಂದ ಫ್ರೆಡ್ಡಿ ಚೇತರಿಸಿಕೊಂಡಿತ್ತು.

ಎರಡನೇ ಬಾರಿ ಹಾವೊಂದು ಈ ಗಿಳಿಯ ಮೇಲೆ ದಾಳಿ ನಡೆಸಿದಾಗಲೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿತ್ತು. ಮೂರನೇ ಬಾರಿ ಇತ್ತೀಚೆಗೆ ನಡೆದ ಕಳ್ಳತನದಲ್ಲಿ ಎರಡು ಗಿಳಿ ಹಾಗೂ ಜೂನಲ್ಲಿದ್ದ ಗ್ಯಾಸ್ ಸಿಲಿಂಡರ್ ವೊಂದು ಕಳುವಾಗಿತ್ತು. ಇದರಲ್ಲಿ ಫ್ರೆಡ್ಡಿ ಸಹ ಕಳುವಾಗಿತ್ತು.

ಆದರೆ ಅದೃಷ್ಟದ ರೀತಿಯಲ್ಲಿ ಅದು ವಾಪಾಸಾಗಿದೆ. ಪೈನ್ ಮರದ ಕೆಳಗೆ ಜೂ ಸಿಬ್ಬಂದಿಗೆ ದೊರೆತಿದೆ. ಆದರೆ ಅದರ ಆರೋಗ್ಯದ ಪರಿಸ್ಥಿತಿ ಬಹಳ ಹದಗೆಟ್ಟಿದೆ ಎಂದು ತಿಳಿದು ಬಂದಿದೆ. ಇದು ವಾಪಾಸ್ಸಾಗಿರುವುದಕ್ಕೆ ಬಲವಾದ ಕಾರಣಗಳು ಕೇಳಿಬಂದಿವೆ. ಏಕೆಂದರೆ ಗಿಳಿಗೆ ಬ್ರೆಜಿಲ್ ನಲ್ಲಿ ಮಾರುಕಟ್ಟೆ ಇಲ್ಲ, ಹಾಗಾಗಿ ಅದು ವಾಪಾಸ್ಸಾಗಿದೆ ಎನ್ನಲಾಗುತ್ತಿದೆ.

ಕುಂಬ್ಳೆ ಐಪಿಎಲ್ ಕನಸಿನ ತಂಡದಲ್ಲಿಲ್ಲ ವಿರಾಟ್ ಕೊಹ್ಲಿ

Posted: 09 May 2019 08:08 AM PDT

ಐಪಿಎಲ್ 12ನೇ ಆವೃತ್ತಿ ಕೊನೆ ಹಂತ ತಲುಪಿದೆ. ಫೈನಲ್ ಗೆ ಇನ್ನೆರಡು ಪಂದ್ಯಗಳು ಮಾತ್ರ ಬಾಕಿ ಇವೆ. ಶುಕ್ರವಾರ ದೆಹಲಿ ತಂಡದ ಜೊತೆ ಚೆನ್ನೈ ಸೆಣೆಸಾಡಲಿದೆ. ಈ ಮಧ್ಯೆ ಟೀಂ ಇಂಡಿಯಾದ ಮಾಜಿ ಕೋಚ್ ಅನಿಲ್ ಕುಂಬ್ಳೆ ತಮ್ಮ ಕನಸಿನ ಐಪಿಎಲ್ ತಂಡವನ್ನು ಸಿದ್ಧಪಡಿಸಿದ್ದಾರೆ.

ಆಶ್ಚರ್ಯಕರ ವಿಷ್ಯವೆಂದ್ರೆ ಅನಿಲ್ ಕುಂಬ್ಳೆ ಸಿದ್ಧಪಡಿಸಿದ ತಂಡದಲ್ಲಿ ಭಾರತದ ದಿಗ್ಗಜ ಆಟಗಾರರ ಹೆಸರಿಲ್ಲ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ತಂಡದಲ್ಲಿ ಸ್ಥಾನ ಪಡೆದಿಲ್ಲ. ಕುಂಬ್ಳೆ ತಮ್ಮ ತಂಡದಲ್ಲಿ ನಾಲ್ಕು ವಿದೇಶಿ ಆಟಗಾರರಿಗೆ ಸ್ಥಾನ ನೀಡಿದ್ದಾರೆ. 7 ಭಾರತೀಯರ ಹೆಸರು ತಂಡದಲ್ಲಿದೆ. ವಿಶ್ವಕಪ್ ನಲ್ಲಿ ಸ್ಥಾನ ಪಡೆದ ನಾಲ್ವರು ಆಟಗಾರರು ಮಾತ್ರ ಕುಂಬ್ಳೆ ತಂಡದಲ್ಲಿದ್ದಾರೆ.

ವಿರಾಟ್ ಕೊಹ್ಲಿ ಜೊತೆ ಶಿಖರ್ ಧವನ್, ರೋಹಿತ್ ಶರ್ಮಾ ಹೆಸರೂ ತಂಡದಲ್ಲಿಲ್ಲ. ಡೇವಿಡ್ ವಾರ್ನರ್ ಹಾಗೂ ಕೆ.ಎಲ್ ರಾಹುಲ್ ಆರಂಭಿಕರಾಗಿ ಆಯ್ಕೆಯಾಗಿದ್ದಾರೆ. ಕುಂಬ್ಳೆ ತಂಡದಲ್ಲಿ ಡೆವಿಡ್ ವಾರ್ನರ್, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್ ರಿಶಭ್ ಪಂತ್, ಎಂಎಸ್ ಧೋನಿ (ನಾಯಕ ಮತ್ತು ವಿಕೆಟ್ ಕೀಪರ್), ಆಂಡ್ರೆ ರಸ್ಸೆಲ್, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಗೋಪಾಲ್, ಇಮ್ರಾನ್ ತಾಹಿರ್, ಕೈಗಿಸೊ ರಬಾಡಾ, ಜಸ್ಪ್ರಿತ್ ಬೂಮ್ರಾ ತಂಡದಲ್ಲಿದ್ದಾರೆ.

ಜೂಜು ಅಡ್ಡೆ ಮೇಲೆ ದಾಳಿ ವೇಳೆ ಆಗಿದ್ದೇನು ಗೊತ್ತಾ…?

Posted: 09 May 2019 07:48 AM PDT

ಚಿಕ್ಕಬಳ್ಳಾಪುರ: ಜೂಜು ಅಡ್ಡೆ ಮೇಲೆ ದಾಳಿ ಮಾಡಿದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಅಂಗರೇಕನಹಳ್ಳಿಯಲ್ಲಿ ನಡೆದಿದೆ.

ಪೊಲೀಸರಾದ ಸೋಮಶೇಖರ್, ಮುತ್ತಪ್ಪ ನಗರಿಗೆ ಗಾಯಗಳಾಗಿದ್ದು, ಇಬ್ಬರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಂಗರೇಕನಹಳ್ಳಿಯಲ್ಲಿ ಜೂಜಾಡುತ್ತಿದ್ದ 7 ಮಂದಿಯನ್ನು ಬಂಧಿಸಲಾಗಿದ್ದು, ನಗದು ವಶಕ್ಕೆ ಪಡೆಯಲಾಗಿದೆ.

ಗ್ರಾಮದಲ್ಲಿ ಜೂಜಾಟವಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ದಾಳಿಯ ವೇಳೆ ಜೂಜುಕೋರರು ಹಲ್ಲೆ ಮಾಡಿದ್ದಾರೆ. ಕಾರ್ಯಾಚರಣೆ ನಡೆಸಿ, ಜೂಜುಕೋರರನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನಗಿಂತ ಕಿರಿಯನ ಮಗುವಿಗೆ ತಾಯಿಯಾದ ಬಾಲಕಿ

Posted: 09 May 2019 07:45 AM PDT

ಕಾಠ್ಮಂಡು: ನೇಪಾಳದಲ್ಲಿ 14 ವರ್ಷದ ಬಾಲಕಿ ಮತ್ತು 13 ವರ್ಷದ ಬಾಲಕನ ನಡುವೆ ದೈಹಿಕ ಸಂಬಂಧವಾಗಿ ಗಂಡು ಮಗು ಜನಿಸಿದೆ.

ಈ ಬಾಲಕ – ಬಾಲಕಿಯ ಮದುವೆಯನ್ನು ನೊಂದಾಯಿಸಲು ಮತ್ತು ಶಿಶುವಿಗೆ ಜನನ ಪ್ರಮಾಣ ಪತ್ರ ನೀಡಲು ಅಧಿಕಾರಿಗಳಿಗೆ ಕಾನೂನು ತೊಡಕು ಎದುರಾಗಿದೆ.

ನೇಪಾಳದಲ್ಲಿ ಯುವಕ ಮತ್ತು ಯುವತಿಯರಿಗೆ ಮದುವೆ ವಯಸ್ಸನ್ನು 20 ವರ್ಷಕ್ಕೆ ನಿಗದಿಪಡಿಸಲಾಗಿದೆ. ಆದರೆ ತಮಾಂಗ್ ಸಮುದಾಯದ ರೂಬೇ ಕಣಿವೆಯ ನಿವಾಸಿಗಳಾಗಿರುವ 14 ವರ್ಷದ ಬಾಲಕಿ ಮತ್ತು 13 ವರ್ಷದ ಬಾಲಕ ಜೊತೆಯಾಗಿ ಬಾಳ್ವೆ ನಡೆಸಿದ್ದಾರೆ. ಸಮುದಾಯದಲ್ಲಿ ಅದಕ್ಕೆ ಅವಕಾಶವಿದೆ. ಆದರೆ, ಕಿರಿಯ ವಯಸ್ಸಿನಲ್ಲೇ ಅವರು ಮದುವೆಯಾಗಿರುವುದರಿಂದ ಕಾನೂನು ತೊಡಕು ಎದುರಾಗಿದೆ.

5 ನೇ ತರಗತಿ ಓದುತ್ತಿರುವ ಬಾಲಕ 6 ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಪ್ರೀತಿಸಿದ್ದಾರೆ. ಆದರೆ, ಇತ್ತೀಚೆಗೆ ಬಾಲಕಿ ಶಾಲೆಯನ್ನು ಬಿಟ್ಟಿದ್ದು 2 ತಿಂಗಳ ಹಿಂದೆ ಮಗು ಜನಿಸಿದೆ. ಇವರ ಮಗುವಿಗೆ ಜನನ ಪ್ರಮಾಣ ಪತ್ರ ನೀಡಲು ಕಾನೂನು ಪ್ರಕಾರ ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಮಗುವಿಗೆ ಎರಡೂ ಕೈಗಳಲ್ಲಿ ಮಧ್ಯದ ಬೆರಳು ಇಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಧದಿಂಗ್ ಜಿಲ್ಲಾ ಆರೋಗ್ಯಾಧಿಕಾರಿ ಅಪೌಷ್ಟಿಕತೆ ಕಾರಣದಿಂದ ಹೀಗಾಗಿದೆ ಎಂದು ಹೇಳಿದ್ದಾರೆ.

ಅತಿಥಿಯನ್ನು ಅವಮಾನಿಸಿದ್ರೆ ಏನಾಗುತ್ತೆ ಗೊತ್ತಾ…?

Posted: 09 May 2019 07:15 AM PDT

”ಅತಿಥಿ ದೇವೋಭವ'' ಸಂಸ್ಕೃತದ ಈ ಮಾತು ನಮ್ಮ ಸಮಾಜದ ಸಂಸ್ಕೃತಿ. ಆದ್ರೆ ಇತ್ತೀಚಿನ ದಿನಗಳಲ್ಲಿ ಇದನ್ನು ಜನರು ಹೊರೆ ಎಂದುಕೊಳ್ಳುತ್ತಿದ್ದಾರೆ. ಆಧುನಿಕತೆ ಹೆಸರಿನಲ್ಲಿ ಅತಿಥಿ ಸತ್ಕಾರವನ್ನು ಮರೆಯುತ್ತಿದ್ದಾರೆ. ಆದ್ರೆ ಅತಿಥಿ ಸತ್ಕಾರದಿಂದ ಸಾಕಷ್ಟು ಲಾಭವಿದೆ. ಮನೆಗೆ ಬರುವ ಅತಿಥಿ ಪಾಪವನ್ನು ತೆಗೆದುಕೊಂಡು ಹೋಗ್ತಾನೆ. ಪುಣ್ಯವನ್ನು ಮನೆಯವರಿಗೆ ನೀಡಿ ಹೋಗ್ತಾನೆ ಎಂಬ ನಂಬಿಕೆ ಇದೆ.

ಮೊದಲು ಮನೆಗೆ ಬರುವ ಅತಿಥಿಯನ್ನು ಗೌರವಿಸಿ. ಇದರಲ್ಲಿ ನಮ್ಮ ಸಂಸ್ಕಾರ ಹಾಗೂ ಸತ್ಯ ಕೂಡ ಇದೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಮನೆಗೆ ಬರುವ ಅತಿಥಿಗಳನ್ನು ದೇವರಂತೆ ಸತ್ಕರಿಸಿ ಕಳುಹಿಸುವ ಪದ್ಧತಿ ಇದೆ. ಮನೆಗೆ ಬರುವ ಅತಿಥಿಗೆ ಊಟ ಬಡಿಸುವುದು ಪದ್ಧತಿಯ ಒಂದು ಭಾಗ. ಅತಿಥಿಯ ಗೌರವ, ಸತ್ಕಾರಕ್ಕೆ ಸಂಬಂಧಿಸಿದಂತೆ ಶಿವಪುರಾಣದಲ್ಲಿ ಕೆಲವೊಂದು ಮಹತ್ವದ ವಿಷಯಗಳನ್ನು ಹೇಳಲಾಗಿದೆ.

ಮನೆಗೆ ಬರುವ ಅತಿಥಿಯನ್ನು ಖುಷಿಯಿಂದ, ನಗು ಮುಖದಿಂದ ಸ್ವಾಗತಿಸಿ. ಕುಳಿತುಕೊಳ್ಳಲು ಸೂಕ್ತವಾದ ಸ್ಥಳ ನೀಡಿ. ಅವರಿಗೆ ನೀರು-ಪಾನೀಯ ನೀಡುವ ವೇಳೆ ಮನಸ್ಸಿನಲ್ಲಿ ಕೋಪ, ದ್ವೇಷ, ಅಸೂಯೆ ಇರಬಾರದು.

ಮನೆಗೆ ಬರುವ ಅತಿಥಿ ಖುಷಿಯಾಗುವಂತೆ ಮನೆಯನ್ನು ಸ್ವಚ್ಛವಾಗಿಡಿ. ನಿಮ್ಮ ಕೋಪವನ್ನು ಹಿಡಿದಿಟ್ಟುಕೊಳ್ಳಿ. ಅತಿಥಿಗಳ ಮುಂದೆ ನಿಮ್ಮ ಜಗಳ-ಕೋಪವನ್ನು ತೋರಿಸಬೇಡಿ.

ಮಧುರವಾದ ಭಾಷೆಯಲ್ಲಿ ಅವರ ಜೊತೆ ಮಾತನಾಡಿ. ಅವರಿಗೆ ಅಪಮಾನವಾಗುವಂತೆ ಮಾತನಾಡಬೇಡಿ. ಕೆಟ್ಟ ಶಬ್ಧಗಳಿಂದ ನಿಂದನೆ ಮಾಡಬೇಡಿ. ಅವರಿಗೆ ಬೇಸರವಾಗುವಂತೆ ನಡೆದುಕೊಳ್ಳಬೇಡಿ. ಶುದ್ಧ ತನು-ಮನದಲ್ಲಿ ಅತಿಥಿಗಳ ಸೇವೆ ಮಾಡಿ. ಮನೆಗೆ ಬಂದ ಅತಿಥಿ ವಾಪಸ್ ಹೋಗುವ ವೇಳೆ ಅವರಿಗೆ ಸಣ್ಣದಿರಲಿ, ಚಿಕ್ಕದಿರಲಿ ಉಡುಗೊರೆಯನ್ನು ನೀಡಿ.

 

‘ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಶಿಸ್ತು ಕ್ರಮ’

Posted: 09 May 2019 07:14 AM PDT

ಬೆಂಗಳೂರು: ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಪ್ರಚಾರದ ವೇಳೆ ಸಚಿವ ಡಿ.ಕೆ. ಶಿವಕುಮಾರ್ ಕಣ್ಣೀರು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.

ಸಿ.ಎಸ್. ಶಿವಳ್ಳಿಯವರು ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು. ಶಿವಳ್ಳಿ ಮತ್ತು ಡಿ.ಕೆ. ಶಿವಕುಮಾರ್ ಆತ್ಮೀಯರಾಗಿದ್ದರು. ಹಾಗಾಗಿ ಭಾವೋದ್ವೇಗಕ್ಕೆ ಒಳಗಾಗಿ ಡಿ.ಕೆ.ಶಿವಕುಮಾರ್ ಕಣ್ಣೀರು ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಈಗಾಗಲೇ ಸಾಕಷ್ಟು ಹೇಳಲಾಗಿದೆ. ಎಲ್ಲದಕ್ಕೂ ಮೇ 23ರ ಫಲಿತಾಂಶವೇ ಉತ್ತರ ನೀಡಲಿದೆ. ಫಲಿತಾಂಶ ಬರುವವರೆಗೂ ಏನೂ ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಫಲಿತಾಂಶದ ಬಳಿಕ ಯಾರು ಎಲ್ಲಿ ತಪ್ಪು ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ. ತಪ್ಪು ಮಾಡಿದವರ ಬಗ್ಗೆ ಫಲಿತಾಂಶದ ನಂತರ ನಿರ್ಧಾರ ಕೈಗೊಳ್ಳಲಾಗುವುದು. ಯಾರ ಮೇಲೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ತೀರ್ಮಾನಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಮೇ 23 ರಂದು ಬೆಂಗಳೂರಿನಲ್ಲಿ ‘ನಿಷೇಧಾಜ್ಞೆ’ ಜಾರಿ

Posted: 09 May 2019 07:05 AM PDT

ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಮೇ 23 ರಂದು ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಲೋಕಸಭೆ ಚುನಾವಣೆ ಮತ ಎಣಿಕೆ ಮೇ 23 ರಂದು ಪ್ರಕಟವಾಗಲಿದ್ದು, ಅಂದು ಬೆಳಿಗ್ಗೆ 6 ರಿಂದ ರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

ಚುನಾವಣೆ ಫಲಿತಾಂಶದ ದಿನ ಯಾವುದೇ ಸಭೆ – ಸಮಾರಂಭ, ಮೆರವಣಿಗೆ ನಡೆಸುವಂತಿಲ್ಲ. ಪಟಾಕಿ ಸಿಡಿಸುವುದಿಲ್ಲ. ಅಲ್ಲದೇ, ಭಿತ್ತಿಪತ್ರವನ್ನು ಪ್ರದರ್ಶಿಸುವಂತಿಲ್ಲ ಎಂದು ಹೇಳಲಾಗಿದ್ದು, ಮುಂಜಾಗ್ರತೆ ಕ್ರಮವಾಗಿ ನಿಷೇದಾಜ್ಞೆ ಜಾರಿ ಮಾಡಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ರಾತ್ರಿ ಸ್ನಾನ ಮಾಡೋದ್ರಿಂದ ಏನು ಲಾಭ ಗೊತ್ತಾ?

Posted: 09 May 2019 06:56 AM PDT

ಜೀವನ ಶೈಲಿ ಸಂಪೂರ್ಣ ಬದಲಾಗಿದೆ. ಬೆಳಗಿನಿಂದ ರಾತ್ರಿಯವರೆಗೆ ಎಲ್ಲರೂ ಬ್ಯುಸಿ. ಒತ್ತಡದಲ್ಲಿ ಕೆಲಸ ಮಾಡುವ ಜನರ ಮೇಲೆ ಕಲುಷಿತ ವಾತಾವರಣ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಸುಸ್ತಾಗಿ ಮನೆಗೆ ಬರುವ ಅನೇಕರು ರಾತ್ರಿ ಸ್ನಾನ ಮಾಡ್ತಾರೆ. ರಾತ್ರಿ ಮಾಡುವ ಸ್ನಾನದಿಂದ ಬಹಳಷ್ಟು ಲಾಭಗಳಿವೆ.

ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದರಿಂದ ಮನಸ್ಸಿಗೆ ಹಿತವೆನಿಸುತ್ತದೆ. ಇದರಿಂದ ದೇಹದ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ.

ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ರಕ್ತ ಸಂಚಾರ ಸುಲಭವಾಗುತ್ತದೆ. ಸ್ನಾನ ಮಾಡುವುದರಿಂದ ನಿಮ್ಮ ಒತ್ತಡ ಕಡಿಮೆಯಾಗುತ್ತದೆ. ಒಳ್ಳೆಯ ನಿದ್ರೆ ಬರುತ್ತೆ.

ತಣ್ಣನೆಯ ಅಥವಾ ಬಿಸಿಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಕ್ಯಾಲೋರಿ ಬರ್ನ್ ಆಗುತ್ತದೆ. ಇದರಿಂದ ಬೊಜ್ಜು ಕರಗುತ್ತದೆ.

ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮ ಹೊಳಪು ಪಡೆಯುತ್ತದೆ. ಮೊಡವೆ ಸಮಸ್ಯೆ ನಿಮ್ಮನ್ನು ಕಾಡ್ತಾ ಇದ್ದರೆ, ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಿ.

ಪ್ರತಿದಿನ ರಾತ್ರಿ ಸ್ನಾನ ಮಾಡುವುದರಿಂದ ಪ್ರತಿರಕ್ಷಣಾ ಶಕ್ತಿ ಹೆಚ್ಚಾಗುತ್ತದೆ.

ನಿಮಗೆ ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದರೆ ರಾತ್ರಿ ಸ್ನಾನ ಮಾಡುವುದು ಒಳ್ಳೆಯದು. ಇದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ಬಯಲಾಯ್ತು ಕಿಡ್ನಿ ಮಾರಾಟ ದಂಧೆ: ಇಬ್ಬರು ವೈದ್ಯರ ಅರೆಸ್ಟ್

Posted: 09 May 2019 06:34 AM PDT

ವಿಶಾಖಪಟ್ಟಣ: ಆಂಧ್ರಪ್ರದೇಶದಲ್ಲಿ ಬೃಹತ್ ಕಿಡ್ನಿ ಮಾರಾಟ ಜಾಲ ಬಯಲಾಗಿದೆ. ಬೆಂಗಳೂರಿನ ಏಜೆಂಟ್ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಕಿಡ್ನಿ ಮಾರಾಟ ದಂಧೆ ನಡೆಯುತ್ತಿರುವ ಮಾಹಿತಿ ಕಲೆ ಹಾಕಿದ ಪೊಲೀಸರು  ಬೆಂಗಳೂರಿನ ಏಜೆಂಟ್ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಿಡ್ನಿ ಮಾರಾಟ ದಂಧೆಯಲ್ಲಿ ಭಾಗಿಯಾಗಿದ್ದ ಬೆಂಗಳೂರಿನ ಡಾ. ಮಂಜುನಾಥ, ವಿಶಾಖಪಟ್ಟಣಂ ಆಸ್ಪತ್ರೆಯ ಡಾ. ಪ್ರಭಾಕರ್ ಅವರನ್ನು ಬಂಧಿಸಲಾಗಿದೆ. ಹೈದರಾಬಾದ್ ನ ಪಾರ್ಥಸಾರಥಿ ಎಂಬುವವರಿಂದ ಕಿಡ್ನಿ ಪಡೆಯಲು ಒಪ್ಪಂದ ಮಾಡಿಕೊಂಡಿದ್ದರು.

12 ಲಕ್ಷ ರೂ.ಗೆ ಕಿಡ್ನಿ ಪಡೆಯಲು ಒಪ್ಪಂದ ಮಾಡಿಕೊಂಡಿದ್ದು, ಪಾರ್ಥಸಾರಥಿಗೆ 5 ಲಕ್ಷ ರೂ. ಮುಂಗಡ ನೀಡಿದ್ದರು. ಬೆಂಗಳೂರಿನ ಪ್ರಭಾಕರ್ ಎಂಬುವವರಿಗೆ ವಿಶಾಖಪಟ್ಟಣದ ಶ್ರದ್ಧಾ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಲಾಗಿತ್ತು. ಆಧಾರ್ ಕಾರ್ಡ್ ನಲ್ಲಿ ಹೆಸರು ಬದಲಿಸಿ ಅಕ್ರಮ ದಂಧೆ ನಡೆಸಲಾಗಿತ್ತು ಎನ್ನಲಾಗಿದೆ. ಕೃತ್ಯಕ್ಕೆ ಸಹಕರಿಸಿದ ವಿಶಾಖಪಟ್ಟಣದ ಶ್ರದ್ಧಾ ಆಸ್ಪತ್ರೆಯಲ್ಲಿ 23 ಲಕ್ಷ ರೂ. ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.

ಈ ಅಕ್ರಮ ದಂಧೆ ಕಂಡು ದಾಳಿ ಮಾಡಿದವರೇ ದಂಗಾದ್ರು

Posted: 09 May 2019 06:19 AM PDT

ಬೆಂಗಳೂರು: ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ ಕೇಂದ್ರದ ಮೇಲೆ ಯಲಹಂಕ ತಹಶೀಲ್ದಾರ್ ನೇತೃತ್ವದಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಳತಮ್ಮನಹಳ್ಳಿಯಲ್ಲಿ ನಾರಾಯಣಪ್ಪ ಎಂಬಾತ 6 ಬೃಹತ್ ಹೊಂಡಗಳನ್ನು ನಿರ್ಮಿಸಿ ನಿಷೇಧಿತ ಕ್ಯಾಟ್ ಫಿಶ್ ಗಳನ್ನು ಭಾರೀ ಸಾಕಾಣಿಕೆ ಮಾಡುತ್ತಿರುವುದು ಗೊತ್ತಾಗಿದೆ.

ಕೊಳೆತ ಮಾಂಸವನ್ನು ಮೀನುಗಳಿಗೆ ಹಾಕಿ, ವಿಷಪೂರಿತ ಮೀನುಗಳನ್ನು ಸಾಕಲಾಗುತ್ತಿತ್ತು. ವಾಹನಗಳು ಹೋಗದ ಸ್ಥಳದಲ್ಲಿ ಅಕ್ರಮವಾಗಿ ನಿಷೇಧಿತ ಕ್ಯಾಟ್ ಫಿಶ್ ಗಳನ್ನು ಸಾಕಾಣಿಕೆ ಮಾಡಿ ಹೊರ ರಾಜ್ಯಗಳಿಗೆ ರಫ್ತು ಮಾಡಲಾಗುತ್ತಿತ್ತು ಎನ್ನಲಾಗಿದೆ.

ಹೀಗೆ ನಿಷೇಧಿತ ಕ್ಯಾಟ್ ಫಿಶ್ ಗಳನ್ನು ಬೃಹತ್ ಪ್ರಮಾಣದಲ್ಲಿ ಸಾಕಾಣಿಕೆ ಮಾಡುತ್ತಿರುವ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಜೆಸಿಬಿ ಬಳಸಿ ಮೀನುಗಾರಿಕೆ ಹೊಂಡಗಳನ್ನು ನಾಶಪಡಿಸಲಾಗಿದೆ. ಆರೋಪಿ ನಾರಾಯಣಪ್ಪನನ್ನು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಭಾವುಕರಾಗಿ ಕಣ್ಣೀರಿಟ್ಟ ಡಿಕೆಶಿ, ಸತೀಶ್ ಜಾರಕಿಹೊಳಿ ಹೇಳಿದ್ದೇನು ಗೊತ್ತಾ…?

Posted: 09 May 2019 05:58 AM PDT

ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಗೆಳೆಯ ಸಿ.ಎಸ್. ಶಿವಳ್ಳಿ ಅವರನ್ನು ನೆನೆದು ಸಚಿವ ಡಿ.ಕೆ. ಶಿವಕುಮಾರ್ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಪ್ರಚಾರದ ವೇಳೆ ಡಿ.ಕೆ. ಶಿವಕುಮಾರ್ ಕಣ್ಣೀರು ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಶಿವಳ್ಳಿ ಮತ್ತು ಡಿ.ಕೆ. ಶಿವಕುಮಾರ್ ಆತ್ಮೀಯರಾಗಿದ್ದರು. ಅದನ್ನು ಶಿವಕುಮಾರ್ ಕೂಡ ಸಾಕಷ್ಟು ಬಾರಿ ಹೇಳಿಕೊಂಡಿದ್ದರು. ಆತ್ಮೀಯತೆಯಿಂದ ಅವರು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ ಎಂದು ಸತೀಶ್ ಹೇಳಿದ್ದಾರೆ.

ಬಲ್ಕ್ ಆಗಿ ಪಕ್ಷ ತೊರೆಯುವ ನಿರೀಕ್ಷೆಯಲ್ಲಿದ್ದ ರಮೇಶ್ ಜಾರಕಿಹೊಳಿಗೆ ಶಾಕ್ ..!?

Posted: 09 May 2019 05:47 AM PDT

ಕಾಂಗ್ರೆಸ್ ಪಕ್ಷದಿಂದ ದೂರವಾಗುತ್ತಿರುವ ಶಾಸಕ ರಮೇಶ್ ಜಾರಕಿಹೊಳಿ ಅವರೊಂದಿಗೆ ಗುರುತಿಸಿಕೊಂಡಿದ್ದ ಶಾಸಕ ಮಹೇಶ್ ಕುಮಟಳ್ಳಿ ಕೈಕೊಟ್ಟಿದ್ದಾರೆ.

ರಮೇಶ್ ಜೊತೆಗೆ ಮಹೇಶ್ ಕೂಡ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರಿಂದ ಅಂತರ ಕಾಯ್ದುಕೊಳ್ಳುತ್ತಿರುವ ಮಹೇಶ್, ಸಚಿವ ಡಿ.ಕೆ. ಶಿವಕುಮಾರ್ ಜೊತೆ ಕಾಣಿಸಿಕೊಂಡಿದ್ದಾರೆ. ಕುಂದಗೋಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಡಿಕೆಶಿ ಅವರೊಂದಿಗೆ ಮಹೇಶ್ ಕುಮಟಳ್ಳಿ ಪ್ರಚಾರ ನಡೆಸಿದ್ದಾರೆ.

ಕುಂದಗೋಳ ವಿಧಾನಸಭಾ ಕ್ಷೇತ್ರದ ಕಮಡೊಳ್ಳಿ ಗ್ರಾಮದಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಪರವಾಗಿ ಪ್ರಚಾರ ನಡೆಸಿದ್ದಾರೆ. ನಾನು ಪಕ್ಷವನ್ನು ತೊರೆಯುವ ಮಾತೇ ಇಲ್ಲ. ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಸಹಜ. ಪಕ್ಷಕ್ಕಾಗಿ ನಾನು ದುಡಿಯುತ್ತೇನೆ ಎಂದು ಅವರು ತಿಳಿಸಿದ್ದಾರೆ.

ರಮೇಶ್ ಜಾರಕಿಹೊಳಿ ಜೊತೆಗೆ ಗುರುತಿಸಿಕೊಂಡಿದ್ದ ಮಹೇಶ್ ಕುಮಟಳ್ಳಿ ಡಿಕೆಶಿ ಸೂಚನೆ ಮೇರೆಗೆ ಕುಂದಗೋಳದಲ್ಲಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅವರು ರಮೇಶ್ ಜಾರಕಿಹೊಳಿ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಮಹೇಶ್ ಕುಮಟಳ್ಳಿ ರೀತಿಯಲ್ಲೇ ಅತೃಪ್ತ ಶಾಸಕರು ರಮೇಶ್ ಅವರಿಂದ ದೂರವಾಗುತ್ತಿದ್ದಾರೆ. ಶಾಸಕರನ್ನು ಕಲೆಹಾಕುವ ರಮೇಶ್ ಜಾರಕಿಹೊಳಿ ಪ್ರಯತ್ನಕ್ಕೆ ಹಿನ್ನಡೆಯಾಗಿದೆ ಎಂದು ಹೇಳಲಾಗಿದೆ.

ಪ್ರಧಾನಿ ಮೋದಿಗೆ ನೀವು ಮಾಡಿದ್ದು ಸರೀನಾ ಎಂದು ಪ್ರಶ್ನಿಸಿದ ರಮ್ಯಾ

Posted: 09 May 2019 05:20 AM PDT

ನೆಹರೂ -ಗಾಂಧಿ ಕುಟುಂಬದವರು ಭಾರತೀಯ ನೌಕಾಪಡೆಯ ಯುದ್ಧ ನೌಕೆಯನ್ನು ವೈಯಕ್ತಿಕ ವಾಹನವಾಗಿ ಬಳಸಿಕೊಂಡಿದ್ದರು. ರಾಜೀವ್ ಗಾಂಧಿ ಅಧಿಕಾರದ ಅವಧಿಯಲ್ಲಿ ಐ.ಎಸ್.ಎಸ್. ವಿರಾಟ್ ನೌಕೆಯನ್ನು ಸ್ವಂತ ವಾಹನದಂತೆ ಬಳಸಿಕೊಳ್ಳಲಾಗಿತ್ತು ಎಂದು ಪ್ರಧಾನಿ ಮೋದಿ ಮಾಡಿದ್ದ ಆರೋಪಕ್ಕೆ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ತಿರುಗೇಟು ನೀಡಿದ್ದಾರೆ.

ಭಾರತೀಯ ಯುದ್ಧ ನೌಕೆ ಐಎನ್ಎಸ್ ಸುಮಿತ್ರಾದಲ್ಲಿ ಕೆನಡಾದ ಪ್ರಜೆ, ನಟ ಅಕ್ಷಯ್ ಕುಮಾರ್ ಕುಟುಂಬ ಸಮೇತ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅಕ್ಷಯ್ ಕುಟುಂಬ ನೌಕಾಪಡೆಯ ಐಎನ್ಎಸ್ ಸುಮಿತ್ರಾ ನೌಕೆಯಲ್ಲಿ ಇರುವ ಫೋಟೋ ಪೋಸ್ಟ್ ಮಾಡಿದ್ದಾರೆ.

ಕೆನಡಾ ಪ್ರಜೆ ಅಕ್ಷಯ್ ಅವರನ್ನು ಯುದ್ಧನೌಕೆಗೆ ಕರೆದುಕೊಂಡು ಹೋಗಿದ್ದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಐ.ಎನ್.ಎಸ್. ವಿರಾಟ್ ನಲ್ಲಿ ರಾಜೀವ್ ಗಾಂಧಿ ಕುಟುಂಬದ ಮೋಜು-ಮಸ್ತಿ ಬಗ್ಗೆ ಪ್ರಶ್ನಿಸಿದ್ದ ಪ್ರಧಾನಿ ಮೋದಿ ಅವರನ್ನು ರಮ್ಯಾ ಪ್ರಶ್ನಿಸಿದ್ದಾರೆ. ಯುದ್ಧ ನೌಕೆಯಲ್ಲಿ ನಟ ಅಕ್ಷಯ್ ಕುಮಾರ್, ಪತ್ನಿ ಟ್ವಿಂಕಲ್ ಖನ್ನಾ ಮತ್ತು ಪುತ್ರನನ್ನು ಕರೆದುಕೊಂಡು ಹೋಗಲಾಗಿದೆ. ನೀವು ಮಾಡಿದ್ದು ಸರೀನಾ ಎಂದು ಪ್ರಶ್ನಿಸಿದ್ದಾರೆ.

 

 

 

— Divya Spandana/Ramya (@divyaspandana) May 9, 2019

ನಾಯಿ ಆಹಾರವನ್ನ ಕದ್ದು ತಿಂದ ಆಮೆ….!

Posted: 09 May 2019 05:00 AM PDT

ಕಿರಾಣಿ ಅಂಗಡಿಯಲ್ಲಿ ಮಾರಾಟಕ್ಕಿದ್ದ ನಾಯಿಗೆ ಹಾಕುವ ಆಹಾರದ ಪೊಟ್ಟಣವನ್ನ ಆಮೆಯೊಂದು ಒಡೆದು ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಿರಾಣಿ ಅಂಗಡಿಯಲ್ಲಿ ಆಮೆಯೊಂದು ಕೆಳಸ್ಥರದಲ್ಲಿರಿಸಲಾಗಿದ್ದ ನಾಯಿಗೆ ಹಾಕುವ ಆಹಾರ ಪೊಟ್ಟಣವನ್ನ ಒಡೆದು ತಿಂದಿದೆ. ಇದನ್ನ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ.

ಪೌಲ್ ಬ್ರಾಂಕ್ಸ್@ಸ್ಲೆಂಡರ್ ಎಂಬವರು ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು “ನಡುರಸ್ತೆಯಲ್ಲಿ ಅಂಗಡಿ ಕಳ್ಳತನ ಮಾಡಲಾಗುತ್ತಿದೆ. ಅವಸರ ಮಾಡುವ ಅವಶ್ಯಕತೆಯಿಲ್ಲ. ನಿಧಾನವಾಗಿ ಸೇವಿಸಬಹುದು” ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಡಿಯೋ 1.8 ಲಕ್ಷ ಜನ ವೀಕ್ಷಿಸಿದ್ದು 48 ಸಾವಿರ ಜನ ರೀಟ್ವೀಟ್ ಮಾಡಿದ್ದಾರೆ. ಅಂಗಡಿ ಕಳ್ಳತನ ನಡೆಯುತ್ತಿದೆ ಎಂದು ಬರೆದಿರುವುದಕ್ಕೆ ನೆಟ್ಟಿಗರು ಪರ ಮತ್ತು ವಿರೋಧವಾದ ಪ್ರತಿಕ್ರಿಯೆ ನೀಡಿದ್ದಾರೆ.

ಇದು ಅಂಗಡಿ ಕಳ್ಳತನವೆಂದು ಹೇಳಲು ಸಾಧ್ಯವಿಲ್ಲ ಏಕೆಂದರೆ ಅಂಗಡಿ ಕಳ್ಳತನವಾಗಿದ್ದರೆ ಆಮೆ ಓಡಲು ಪ್ರಯತ್ನಿಸಬೇಕಿತ್ತು. ಅದು ಹಾಗೆ ಮಾಡಿಲ್ಲ ಹಾಗಾಗಿ ಇದನ್ನ ಅಂಗಡಿ ಕಳ್ಳತನವೆಂದು ಕರೆಯಲು ಸಾಧ್ಯವಿಲ್ಲವೆಂದು ಕೆಲವರು ಅಭಿಪ್ರಾಯಪಟ್ಟರೆ, ಇನ್ನು ಕೆಲವರು ಆರಾಮವಾಗಿ ತಿನ್ನಲಿ ಬಿಡಿ, ಅಂಗಡಿಯ ವಿಳಾಸ ತಿಳಿಸಿ ಆಮೆ ತಿಂದ ಪದಾರ್ಥದ ಹಣವನ್ನ ನಾನು ಭರಿಸಲು ಸಿದ್ದವೆಂದು ಪ್ರತಿಕ್ರಿಯಿಸಿದ್ದಾರೆ.

ಈ ವಿಡಿಯೋ ನೋಡಿ ಖುಷಿ ಆಯಿತು. ಇದನ್ನ 20 ಬಾರಿ ನೋಡಿದ್ದೇನೆ. ನಾಯಿ ಆಹಾರದ ಪೊಟ್ಟಣದ ಒಳಗೆ ಒಳಗೆ ಬಾಯಿ ಹಾಕಿ ತಿನ್ನುವ ದೃಶ್ಯವನ್ನ ಜೂಮ್ ಇಟ್ಟು ತೋರಿಸಿದ್ದರೆ ತುಂಬ ಚೆನ್ನಾಗಿ ಕಾಣುತ್ತಿತ್ತು ಎಂದು ಇನ್ನು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಡಿ.ಕೆ. ಶಿವಕುಮಾರ್ ಗೆ ಜಗದೀಶ್‍ ಶೆಟ್ಟರ್ ವಾರ್ನಿಂಗ್

Posted: 09 May 2019 04:55 AM PDT

ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭೆ ಫಲಿತಾಂಶದವರೆಗೆ ಮಾತ್ರ ಮೈತ್ರಿ ಅಂತಾ ಕಾಂಗ್ರೆಸ್ – ಜೆಡಿಎಸ್‍ ನಡುವೆ ಮೈತ್ರಿಯಾಗಿದೆ. ಲೋಕಸಭೆ ಫಲಿತಾಂಶದ ಬಳಿಕ ದೋಸ್ತಿ ಸರ್ಕಾರ ಇರುವುದಿಲ್ಲ ಅಂತಾ ಹೇಳಿದ್ದಾರೆ.

ಈ ಮಧ್ಯೆಯೇ ಸಿದ್ದರಾಮಯ್ಯ ಅವರನ್ನು ಸಿಎಂ ಎಂದು ಬಿಂಬಿಸಲಾಗ್ತಿದೆ. ಆದ್ರೆ ದಲಿತರನ್ನು ಸಿಎಂ ಮಾಡ್ತೀನಿ ಅಂತಾ ಸಿದ್ದರಾಮಯ್ಯ ಹೇಳ್ತಿದ್ರು. ಅವರ ಮಾತಿಗೂ ಕೃತಿಗೂ ಯಾವುದೇ ಸಂಬಂಧವಿಲ್ಲ. ಸಿದ್ದರಾಮಯ್ಯ ಮಹಾ ಸುಳ್ಳುಗಾರ ಅಂತಾ ಹರಿಹಾಯ್ದರು.

ಇದೇ ವೇಳೆ ಸಿಎಂಗೆ ಜನರ ಕಷ್ಟ ತಿಳಿಯಲು ಸಮಯ ಇಲ್ಲ. ಇನ್ನೊಂದ್ಕಡೆ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರಿಗೆ ಧಮ್ ಇಲ್ಲ. ಹೀಗಾಗಿ ಡಿಕೆಶಿ ಕುಂದಗೋಳಕ್ಕೆ ಬಂದಿದ್ದಾರೆ. ಇಲ್ಲಿ ಅವರ ಕಾರ್ಯಕರ್ತರಿಲ್ಲದ ಕಾರಣ ಬಿಜೆಪಿ ಕಾರ್ಯಕರ್ತರನ್ನು ಸೆಳೆಯುವ ಪ್ರಯತ್ನ ಮಾಡ್ತಿದ್ದಾರೆ. ಹಾಗಂತ ನಮ್ಮ ಕಾರ್ಯಕರ್ತರು ಮಾರಾಟದ ಸರಕಲ್ಲ. ಒಂದು ವೇಳೆ ಅವರನ್ನು ಕೆಣಕಲು ಪ್ರಯತ್ನಿಸಿದ್ರೆ ಪರಿಣಾಮ ನೆಟ್ಟಗಿರಲ್ಲ ಅಂತಾ ಶೆಟ್ಟರ್ ಎಚ್ಚರಿಸಿದ್ದಾರೆ. ಇದೇ ವೇಳೆ ರಾಮನಗರ, ಕನಕಪುರದಂತೆ ಇಲ್ಲಿ ಗೂಂಡಾಗಿರಿ ನಡೆಯಲ್ಲ ಅಂತಾ ಡಿಕೆಶಿಗೆ ಖಡಕ್‍ ವಾರ್ನಿಂಗ್ ಕೊಟ್ಟಿದ್ದಾರೆ.

ಶಾಕಿಂಗ್: ಸಾಂಸ್ಕೃತಿಕ ನಗರಿಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

Posted: 09 May 2019 04:48 AM PDT

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯುವತಿ ಮೇಲೆ ಆರು ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ. ಮೈಸೂರಿನ ಹೊರವಲಯದ ಲಿಂಗಾಂಬುಧಿ ಪಾಳ್ಯದ ನಿರ್ಜನ ಪ್ರದೇಶದಲ್ಲಿ, ಪ್ರಿಯಕರನ ಎದುರೇ ಕಾಮುಕರು ಅತ್ಯಾಚಾರ ಎಸಗಿದ್ದಾರೆ.

ಪ್ರೇಮಿಗಳಿಬ್ಬರು ಮೈಸೂರಿನ ಲಾಡ್ಜ್ ವೊಂದರಲ್ಲಿ ಕೆಲಸ ಮಾಡ್ತಿದ್ರು. ಬುಧವಾರ ಕೆಲಸ ಮುಗಿಸಿಕೊಂಡು ಬೈಕ್‍ ನಲ್ಲಿ ಇಬ್ಬರು ಲಿಂಗಾಂಬುಧಿ ಪಾಳ್ಯದ ನಿರ್ಜನ ಪ್ರದೇಶಕ್ಕೆ ಹೋಗಿ, ಅಲ್ಲಿಯೇ ಕುಳಿತು ಮಾತನಾಡುತ್ತಿದ್ರು. ಆದ್ರೆ ಅಲ್ಲೇ ಕಾರೊಂದರಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದ ದುಷ್ಕರ್ಮಿಗಳು, ಪ್ರೇಮಿಗಳನ್ನು ನೋಡಿ ಏಕಾಏಕಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ಯುವಕನ ಮೇಲೆ ಹಲ್ಲೆ ನಡೆಸಿ, ಆತನ ಮುಂದೆಯೇ ಆರು ಮಂದಿ ಸಾಮೂಹಿಕವಾಗಿ ಯುವತಿ ಮೇಲೆ ಅತ್ಯಾಚಾರ ಎಸುಗಿದ್ದಾರೆ. ನಂತರ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಸಧ್ಯ ಗಂಭೀರವಾಗಿ ಗಾಯಗೊಂಡಿರುವ ಯುವಕ, ಯುವತಿಯನ್ನು ಮೈಸೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಕುವೆಂಪು ನಗರ ಪೊಲೀಸರು ಪರಿಶೀಲನೆ ನಡೆಸಿದ್ರು.

ಸಿಎಂ ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ಟಾಂಗ್

Posted: 09 May 2019 04:46 AM PDT

ಸಿಎಂ ಹೆಚ್‍.ಡಿ.ಕೆ. ಮತ್ತು ಮಾಜಿ ಸಂಸದ ಚಲುವರಾಯಸ್ವಾಮಿ ನಡುವಿನ ಟಾಕ್ ವಾರ್ ಮುಂದುವರೆದಿದೆ. ಸಿಎಂ ಕುಮಾರಸ್ವಾಮಿಯವರು ತಮ್ಮ ವರ್ತನೆಯಲ್ಲಿ ಮೊದಲು ಬದಲಾವಣೆ ಮಾಡಿಕೊಳ್ಳಲಿ, ಆನಂತರ ಕಾಂಗ್ರೆಸ್ ನಾಯಕರು ಯಾವ ರೀತಿ ಇರಬೇಕು ಅಂತಾ ಉಪದೇಶ ನೀಡಲಿ ಎಂದು ಚಲುವರಾಯಸ್ವಾಮಿ ಟಾಂಗ್ ನೀಡಿದ್ದಾರೆ.

ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ಕೂಗು ಕಾಂಗ್ರೆಸ್ ನಾಯಕರಿಂದ ಕೇಳಿ ಬರ್ತಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಶಾಸಕರು ಇಂತಹ ಹೇಳಿಕೆ ನೀಡದಂತೆ ಕಾಂಗ್ರೆಸ್ ಪಕ್ಷಕ್ಕೆ ತಾಕೀತು ಮಾಡಿದ್ರು.

ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಚಲುವರಾಯಸ್ವಾಮಿ 37 ಸ್ಥಾನ ಗೆದ್ದು ಸಿಎಂ ಪಟ್ಟಕೇರಿದವರು 80 ಸ್ಥಾನ ಗೆದ್ದವರಿಗೆ ಸೂಚನೆ ನೀಡ್ತಾರೆ. ಅಲ್ಲದೆ ಕಾಂಗ್ರೆಸ್ ನಾಯಕರು ಹೀಗಿರಬೇಕು, ಹಾಗಿರಬೇಕು ಅಂತಾ ಹೇಳ್ತಾರೆ. ಯಾವುದೇ ಸರ್ಕಾರದಲ್ಲಿ ಈ ರೀತಿಯ ನಡುವಳಿಕೆ ನೋಡಿಲ್ಲ ಅಂತಾ ಹರಿಹಾಯ್ದರು. ಇದೇ ವೇಳೆ ಜೆಡಿಎಸ್ ಜೊತೆ ಕಾಂಗ್ರೆಸ್ ಮಂಡ್ಯದಲ್ಲಿ ಮಾತ್ರವಲ್ಲ, ರಾಜ್ಯದಲ್ಲೂ ಒಂದಾಗಲು ಸಾಧ್ಯವಿಲ್ಲ ಅಂತಾ ಕಿಡಿಕಾರಿದ್ದಾರೆ.

ಏರ್ಟೆಲ್ ಹಾಟ್ಸ್ಪಾಟ್ ಖರೀದಿದಾರರಿಗೊಂದು ‘ಖುಷಿ ಸುದ್ದಿ’

Posted: 09 May 2019 04:01 AM PDT

ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ ಏರ್ಟೆಲ್ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿರುತ್ತದೆ. ಈಗ ಮತ್ತೆ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ. ಏರ್ಟೆಲ್ ಒಂದು ಪ್ಲಾನ್ ನಲ್ಲಿ ಮಾತ್ರವಲ್ಲ, ಅನೇಕ ಯೋಜನೆ ಜೊತೆ ಹಾಟ್ಸ್ಪಾಟ್ ಖರೀದಿ ಯೋಜನೆಯಲ್ಲೂ ಬದಲಾವಣೆ ಮಾಡಿದೆ.

ರಿಲಾಯನ್ಸ್ ಜಿಯೋ ಹಾಗೂ ಏರ್ಟೆಲ್ ಹಾಟ್ಸ್ಪಾಟ್ ಮಾರುಕಟ್ಟೆ ಮಧ್ಯೆ ಸ್ಪರ್ಧೆಯಿದೆ. Reliance JioFi ಮತ್ತು Airtel 4G hotspot  ಮಾರುಕಟ್ಟೆಯಲ್ಲಿ ಕೆಲ ದಿನಗಳ ಹಿಂದೆ 999 ರೂಪಾಯಿಗೆ ಗ್ರಾಹಕರಿಗೆ ಸಿಗ್ತಾಯಿತ್ತು. ಆದ್ರೆ ಈಗ ಏರ್ಟೆಲ್ ತನ್ನ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ. ಏರ್ಟೆಲ್ 4ಜಿ ಹಾಟ್ಸ್ಪಾಟ್ ಇನ್ಮುಂದೆ 399 ರೂಪಾಯಿಗೆ ಸಿಗಲಿದೆ.

ಏರ್ಟೆಲ್ ವೆಬ್ ಸೈಟ್ ನಲ್ಲಿ ಸಿಂಗಲ್ ಪ್ಲಾನ್ ಲಭ್ಯವಿದೆ. ಅದನ್ನು ಗ್ರಾಹಕರು 399 ರೂಪಾಯಿಗೆ ಖರೀದಿ ಮಾಡಬಹುದಾಗಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ತಿಂಗಳು 50ಜಿಬಿ ಡೇಟಾ ಪ್ರತಿ ತಿಂಗಳು ಸಿಗಲಿದೆ. ಡೇಟಾ ಮುಗಿದ ಮೇಲೆ ಇಂಟರ್ನೆಟ್ ವೇಗ 80Kbps ಆಗಲಿದೆ.

 

ʼಲೈಂಗಿಕಾಸಕ್ತಿʼ ಕಡಿಮೆಯಾಗಲು ಕಾರಣ ಈ ಹವ್ಯಾಸಗಳು

Posted: 09 May 2019 03:43 AM PDT

ನಮ್ಮ ಬದುಕು ಈಗ ಯಾಂತ್ರಿಕವಾಗಿಬಿಟ್ಟಿದೆ. ದಿನವಿಡೀ ಕೆಲಸ, ಪ್ರಯಾಣ, ಮನೆಯಲ್ಲೂ ಕಾಡುವ ಕಚೇರಿ ಕೆಲಸದ ಜವಾಬ್ಧಾರಿ ಹೀಗೆ ವೈಯಕ್ತಿಕ ಬದುಕಿಗೆ ಸಮಯವೇ ಇಲ್ಲದಂತಾಗಿದೆ. ಆರೋಗ್ಯ ಮತ್ತು ವೈಯಕ್ತಿಕ ಬದುಕಿನ ಆದ್ಯತೆಗಳನ್ನು ನಾವೆಲ್ಲ ಮರೆತೇಬಿಟ್ಟಿದ್ದೇವೆ.

ಇದರ ಜೊತೆಜೊತೆಗೆ ದೈಹಿಕ ಸಂಬಂಧದಲ್ಲೂ ಆಸಕ್ತಿ ಕಳೆದುಕೊಳ್ಳುವಂತಾಗಿದೆ. ಸಂಗಾತಿ ಜೊತೆಗೆ ರೊಮ್ಯಾನ್ಸ್, ತುಂಟಾಟಗಳು ಇವೆಲ್ಲವೂ ಮರೆಯಾಗಿವೆ. ಇದಕ್ಕೆ ಕೇವಲ ಬ್ಯುಸಿ ಲೈಫ್ ಮಾತ್ರ ಕಾರಣವಲ್ಲ. ಲೈಂಗಿಕ ಆಸಕ್ತಿ ಕಡಿಮೆಯಾಗಲು ಕಾರಣ ನಮ್ಮ ಕೆಲವೊಂದು ಹವ್ಯಾಸಗಳು.

ಮದ್ಯಪಾನ : ಊಟಕ್ಕೂ ಮುನ್ನ ಒಂದು ಪಿಂಟ್ ಬಿಯರ್ ಅಥವಾ ಒಂದು ಗ್ಲಾಸ್ ರೆಡ್ ವೈನ್ ಮಾತ್ರ ಕುಡಿದ್ರೆ ಓಕೆ. ಅದನ್ನು ಬಿಟ್ಟು ಕಂಠಪೂರ್ತಿ ಮದ್ಯಪಾನ ಮಾಡಿದ್ರೆ ಅದು ನಿಮ್ಮ ದೈಹಿಕ ಸಂಬಂಧಕ್ಕೆ ಕುತ್ತು ತರುತ್ತದೆ. ಸೆಕ್ಸ್ ಮಾಡುವ ಸಮಯದಲ್ಲಿ ನಿಮ್ಮ ಮೆದುಳು ಸರಿಯಾಗಿ ಕೆಲಸ ಮಾಡುವುದಿಲ್ಲ.

ಅಸಮರ್ಪಕ ವ್ಯಾಯಾಮ : ನಿಯಮಿತವಾದ ವ್ಯಾಯಾಮ ಆರೋಗ್ಯದ ಗುಟ್ಟು. ಉತ್ತಮ ಲೈಂಗಿಕ ಸಂಬಂಧಕ್ಕೂ ಇದು ಪೂರಕವಾಗಿದೆ. ಇಡೀ ದಿನ ಕುಳಿತಲ್ಲೇ ಕೆಲಸ ಮಾಡ್ತಾ ಇದ್ರೆ ರಾತ್ರಿ ಕೂಡ ಆಲಸ್ಯ ಆವರಿಸುತ್ತದೆ. ಹೆಚ್ಚು ಹೊತ್ತು ಕುಳಿತೇ ಇರುವುದರಿಂದ ನಿಮ್ಮ ಖಾಸಗಿ ಅಂಗಗಳಲ್ಲಿ ಸರಿಯಾಗಿ ರಕ್ತ ಸಂಚಾರವಾಗುವುದಿಲ್ಲ.

ನಿದ್ರೆಯ ಕೊರತೆ : ತುಂಬಾ ಆಯಾಸ ಮತ್ತು ಒತ್ತಡವಿದ್ದಾಗ ಬೇಗ ನಿದ್ದೆ ಬರುವುದಿಲ್ಲ. ನಿದ್ರಾಹೀನತೆಯಿಂದ ಕೊರ್ಟಿಸೊಲ್ ಎಂಬ ಹಾರ್ಮೋನ್ ಹೆಚ್ಚು ಉತ್ಪತ್ತಿಯಾಗುತ್ತದೆ. ಇದರಿಂದ ಪುರುಷರ ದೇಹದಲ್ಲಿ ಟೆಸ್ಟೋಸ್ಟೆರಾನ್ ಕಡಿಮೆಯಾಗುತ್ತದೆ. ನಿದ್ದೆಯ ಕೊರತೆ ಇದ್ರೆ ಮಹಿಳೆಯರು ಕೂಡ ದೈಹಿಕ ಸಂಪರ್ಕದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ.

ಮಲಗುವ ಮುನ್ನ ನ್ಯೂಸ್ ವೀಕ್ಷಣೆ : ಮಲಗುವ ಮುನ್ನ ಅಪ್ಪಿತಪ್ಪಿಯೂ ನ್ಯೂಸ್ ನೋಡಬೇಡಿ. ಕೊಲೆ, ಅತ್ಯಾಚಾರದಂತಹ ಅಪರಾಧಗಳು, ರಾಜಕೀಯ ಚರ್ಚೆ, ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಸುದ್ದಿ ಇವೆಲ್ಲ ನಿಮ್ಮ ಇಡೀ ದಿನದ ಒತ್ತಡವನ್ನು ಕಡಿಮೆ ಮಾಡುವುದಿಲ್ಲ. ನಿಮ್ಮ ಮನಸ್ಸಿಗೆ ಮುದ ನೀಡುವಂತಹ ಕಾರ್ಯಕ್ರಮಗಳನ್ನು ವೀಕ್ಷಿಸಿ.

ಸ್ಮಾರ್ಟ್ ಫೋನ್ ಹುಚ್ಚು : ಹಾಸಿಗೆಯಲ್ಲಿ ಮಲಗಿ ಸ್ಮಾರ್ಟ್ ಫೋನ್ ಬ್ರೌಸ್ ಮಾಡೋದು ಅತ್ಯಂತ ಕೆಟ್ಟ ಚಾಳಿ. ನ್ಯೂಸ್, ಸೋಶಿಯಲ್ ಮೀಡಿಯಾ ಪೇಜ್, ಆನ್ ಲೈನ್ ಶೋ ಇವನ್ನೆಲ್ಲ ಮಲಗುವ ಮುನ್ನ ನೋಡಿದ್ರೆ ಸಂಗಾತಿ ಹಾಗೂ ನಿಮ್ಮ ಮಧ್ಯೆ ಅಂತರ ಸೃಷ್ಟಿಯಾಗುತ್ತದೆ. ಇದರಿಂದ ಟೆನ್ಷನ್ ಜಾಸ್ತಿಯಾಗಿ ಸೆಕ್ಸ್ ಮೇಲೆ ಆಸಕ್ತಿ ಕಳೆದುಕೊಳ್ಳುತ್ತೀರಾ.

ತಡರಾತ್ರಿ ಊಟ : ನೀವು ಏನನ್ನು ತಿನ್ನುತ್ತೀರಾ ಅನ್ನೋದಕ್ಕಿಂತ ಯಾವಾಗ ತಿನ್ನುತ್ತೀರಾ ಅನ್ನೋದು ಬಹಳ ಮುಖ್ಯ. ರಾತ್ರಿ ತುಂಬಾ ತಡವಾಗಿ ಊಟ ಮಾಡಿದ್ರೆ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಒಂದು ರೀತಿಯ ಜಡತ್ವ ಆವರಿಸುತ್ತದೆ. 8 ರಿಂದ 9 ಗಂಟೆಯೊಳಗೆ ಊಟ ಮಾಡಿದ್ರೆ ನಿಮ್ಮ ಖಾಸಗಿ ಬದುಕು ಉತ್ತಮವಾಗಿರುತ್ತದೆ.

ಅತಿಯಾಗಿ ತಿನ್ನುವುದು : ಅತಿಯಾಗಿ ತಿನ್ನುವ ಹವ್ಯಾಸ ನಿಮ್ಮ ಲೈಂಗಿಕ ಸಂಬಂಧಕ್ಕೆ ಕುಂದು ತರಬಲ್ಲದು. ಕೆಲವು ಫುಡ್ ಐಟಂಗಳು ಸೆಕ್ಸ್ ಗೆ ಬೆಸ್ಟ್ ಎನಿಸಿದ್ರೂ, ಅವನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ. ರಾತ್ರಿ ಭೂರಿ ಭೋಜನ ಮಾಡಿದ್ರೆ ಆಲಸ್ಯ ಹಾಗೂ ಜಡತ್ವ ಉಂಟಾಗುತ್ತದೆ.

ಅಪ್ಪನಾಗುವ ತಯಾರಿಯಲ್ಲಿ ಸಲ್ಮಾನ್ ಖಾನ್

Posted: 09 May 2019 03:34 AM PDT

ಸಲ್ಮಾನ್ ಖಾನ್ ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. 53 ವರ್ಷದ ದಬಂಗ್ ಖಾನ್ ಯಾವಾಗ ಮದುವೆಯಾಗ್ತಾರೆ ಎಂಬುದು ಗೊತ್ತಿಲ್ಲ. ಸಲ್ಮಾನ್ ಮದುವೆ ಸುದ್ದಿ ತೆಗೆದಾಗ ಎಂದೂ ಸರಿಯಾದ ಉತ್ತರ ನೀಡಿಲ್ಲ. ಮದುವೆ ನಿರ್ಧಾರ ತೆಗೆದುಕೊಳ್ಳಲು ಸಲ್ಮಾನ್ ಹಿಂದೆ ಬಿದ್ದಿರಬಹುದು ಆದ್ರೆ ಅಪ್ಪನಾಗುವ ಬಗ್ಗೆ ಆಲೋಚನೆ ಮಾಡಿದ್ದಾರೆ.

ಮೂಲಗಳ ಪ್ರಕಾರ, ಸಲ್ಮಾನ್ ಖಾನ್ ಬಾಡಿಗೆ ತಾಯಿ ಮೂಲಕ ತಂದೆಯಾಗುವ ಪ್ಲಾನ್ ಮಾಡುತ್ತಿದ್ದಾರಂತೆ. ಸಲ್ಮಾನ್ ಗೆ ಮಕ್ಕಳೆಂದ್ರೆ ಪ್ರಾಣ. ಮಕ್ಕಳ ಮೇಲೆ ಅವ್ರು ತೋರಿಸುವ ಪ್ರೀತಿ ಆಗಾಗ ಸಾರ್ವಜನಿಗೊಳ್ಳುತ್ತಿರುತ್ತದೆ.

ಅರ್ಪಿತಾ ಖಾನ್ ಮಗನ ಜೊತೆ ಸಲ್ಮಾನ್ ಬಾಂಡಿಂಗ್ ಹೆಚ್ಚಾಗಿದೆ. ಇಬ್ಬರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿರುತ್ತವೆ.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಲ್ಮಾನ್ ಖಾನ್, ನಾನೊಬ್ಬ ಒಳ್ಳೆ ಮಗ. ಒಳ್ಳೆ ಅಪ್ಪ ಕೂಡ ಆಗಬಲ್ಲೆ. ಆದ್ರೆ ಒಳ್ಳೆ ಪತಿಯಾಗಲು ಸಾಧ್ಯವಿಲ್ಲವೇನೋ ಎಂದಿದ್ದರು.

 

ಚಿಕಿತ್ಸೆ ಪೂರ್ಣಗೊಳಿಸಲು ಮತ್ತೆ ಉಡುಪಿಗೆ ಆಗಮಿಸಿದ ದೇವೇಗೌಡರು

Posted: 09 May 2019 03:07 AM PDT

ಕಳೆದ ವಾರವಷ್ಟೇ ಉಡುಪಿಯ ಕಾಪುವಿನಲ್ಲಿ ಪ್ರಕೃತಿ ಚಿಕಿತ್ಸೆ ಪಡೆದು ತೆರಳಿದ್ದ ಮಾಜಿ ಪ್ರಧಾನಿ ದೇವೇಗೌಡರು ಪ್ರಕೃತಿ ಚಿಕಿತ್ಸೆಗೆಂದು ಪತ್ನಿ ಚನ್ನಮ್ಮ ಅವರ ಜೊತೆ ಮತ್ತೊಮ್ಮೆ ಉಡುಪಿಗೆ ಆಗಮಿಸಿದ್ದಾರೆ.

ಬೆಂಗಳೂರಿನಿಂದ-ಮಂಗಳೂರಿಗೆ ವಿಮಾನದ ಮೂಲಕ ಆಗಮಿಸಿದ ದಂಪತಿ ಅಲ್ಲಿಂದ ಉಡುಪಿಗೆ ಬಂದಿದ್ದಾರೆ. ಕಾಪು ಬಳಿಯ ಮೂಳೂರಿನ ಖಾಸಗಿ ರೆಸಾರ್ಟ್ ನಲ್ಲಿ ದೇವೇಗೌಡರು ಮತ್ತು ಅವರ ಪತ್ನಿ ಚನ್ನಮ್ಮ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ವಾರ ಚಿಕಿತ್ಸೆ ಪಡೆಯುವಾಗ ದೇವೇಗೌಡ ಅವರಿಗೆ ಪುತ್ರ ಕುಮಾರಸ್ವಾಮಿ ಸಾಥ್ ನೀಡಿದ್ದರು. ಈಗ ಅವರು ಕೋರ್ಸ್ ಪೂರ್ಣಗೊಳಿಸಲು ತಮ್ಮ ಪತ್ನಿ ಜೊತೆ ಆಗಮಿಸಿದ್ದಾರೆ.

ವಿದ್ಯಾರ್ಥಿನಿ ಜೊತೆ ಪ್ರಿನ್ಸಿಪಾಲ್‍ ಏನ್‍ ಮಾಡ್ದಾ ಗೊತ್ತಾ..?

Posted: 09 May 2019 03:01 AM PDT

ಶಿಕ್ಷಕರು ಅಂದ್ರೆ ಮಕ್ಕಳಿಗೆ ತಿದ್ದಿ ಬುದ್ದಿ ಹೇಳಬೇಕಾದ ಗುರುಗಳು. ಆದ್ರೆ ಅವರೇ ತಪ್ಪು ಮಾಡಿದ್ರೆ ಹೇಗೆ….? ಇಂತಹ ಒಂದು ಘಟನೆ ಹಾಸನದಲ್ಲಿ ನಡೆದಿದೆ. ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಪ್ರಿನ್ಸಿಪಾಲ್‍ ತನ್ನ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.

ಚನ್ನರಾಯಪಟ್ಟಣದ ಕ್ರೈಸ್ಟ್ ಪಿಯು ಕಾಲೇಜ್‍ ಪ್ರಿನ್ಸಿಪಾಲ್ ಆಂಟೋನಿ ಅಸಭ್ಯವಾಗಿ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರತಿವರ್ಷ ಕಾಲೇಜಿನಿಂದ ಪ್ರವಾಸಕ್ಕೆ ಹೋಗುವಂತೆ, ಈ ವರ್ಷವೂ ಕಾಲೇಜು ವಿದ್ಯಾರ್ಥಿಗಳ ಜೊತೆ ಆಂಟೋನಿ ಗೋವಾ ಪ್ರವಾಸಕ್ಕೆ ಹೋಗಿದ್ರು. ಅಲ್ಲಿ ವಿದ್ಯಾರ್ಥಿಗಳ ಜೊತೆ ಡಾನ್ಸ್ ಮಾಡಿ ಅಸಭ್ಯವಾಗಿ ವರ್ತಿಸಿದ್ದಾರೆ.

ಅಷ್ಟೇ ಅಲ್ಲದೆ ವಿದ್ಯಾರ್ಥಿನಿಯೊಬ್ಬಳ ತೊಡೆ ಮೇಲೆ ಮಲಗಿರುವ ಫೋಟೋ ಹಾಗೂ ವಿಡಿಯೋ ಮೂರು ತಿಂಗಳ ನಂತರ ವೈರಲ್‍ ಆಗಿವೆ. ಈ ವಿಡಿಯೋ ನೋಡಿದ ಪೋಷಕರು ಪ್ರಿನ್ಸಿಪಾಲ್ ವಿರುದ್ಧ ಕಿಡಿಕಾರಿದ್ದಾರೆ.

ಒಮ್ಮೆ ಹಣ ಹೂಡಿ, ತಿಂಗಳಿಗೆ ಲಕ್ಷಾಂತರ ರೂ. ಗಳಿಸಿ

Posted: 09 May 2019 02:50 AM PDT

ಜನರ ಜೀವನ ಶೈಲಿ ಬದಲಾಗ್ತಿದೆ. ಹಾಗಾಗಿ ಅನಾರೋಗ್ಯ ಸಮಸ್ಯೆ ಹೆಚ್ಚಾಗಿದೆ. ಆರೋಗ್ಯ ರಕ್ಷಣೆಗಾಗಿ ಜನರು ಜಿಮ್ ಗಳ ಮೊರೆ ಹೋಗ್ತಿದ್ದಾರೆ. ಜಿಮ್ ಗಳಿಕೆಗೆ ಉತ್ತಮ ಆಯ್ಕೆಯಲ್ಲಿ ಒಂದು. ಒಮ್ಮೆ ಹಣ ಹೂಡಿದ್ರೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸಬಹುದು.

ಭಾರತದಲ್ಲಿ ಜಿಮ್ ಲೈಸೆನ್ಸ್ ಪಡೆಯಲು ಪೊಲೀಸ್ ಎನ್ ಒ ಸಿ ಅಗತ್ಯವಿದೆ. ಆನ್ಲೈನ್ ಹಾಗೂ ಆಫ್ಲೈನ್ ಎರಡರ ಮೂಲಕವೂ ನೀವು ಅಪ್ಲೈ ಮಾಡಬಹುದು. ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ನೀವು ಹೆಚ್ಚಿನ ಮಾಹಿತಿ ಸಂಗ್ರಹಿಸಬಹುದು. ಜಿಮ್ ಗಾಗಿ ನೀವು ಅತ್ಯುತ್ತಮ ಜಾಗವನ್ನು ಆಯ್ಕೆ ಮಾಡಿಕೊಳ್ಳಿ.

ಭಾರತ ಸರ್ಕಾರ ಜಿಮ್ ನೋಂದಣಿ ಲಿಮಿಟೆಡ್ ಅಥವಾ ಜಿಮ್ ಪ್ರೈವೇಟ್ ಲಿಮಿಟೆಡ್ ರೂಪದಲ್ಲಿ ಪರವಾನಿಗೆ ನೀಡುತ್ತದೆ. ವರ್ಗಾವಣೆ ಆಯ್ಕೆ ನಿಮಗಿದ್ದರೆ ಜಿಮ್ ಮುಂದುವರಿಸಲು ಸಾಧ್ಯವಿಲ್ಲ ಎನ್ನುವವರು ಜಿಮ್ ಮಾರಾಟ ಮಾಡಬಹುದು. ಎರಡು ರೀತಿಯ ಜಿಮ್ ಭಾರತದಲ್ಲಿದೆ. ಯಾವ ಜಿಮ್ ನೀವು ಶುರು ಮಾಡ್ತಿರಿ ಎಂಬುದನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು. ತಜ್ಞರ ಜೊತೆ ಮಾತನಾಡಿ ಮಾಹಿತಿ ಸಂಗ್ರಹಿಸಿ.

ದೊಡ್ಡ ಮಟ್ಟದಲ್ಲಿ ಜಿಮ್ ಶುರು ಮಾಡುವ ಪ್ಲಾನ್ ಇದ್ರೆ 3000 ರಿಂದ 3500 ಚದುರ ಅಡಿ ಜಾಗ ಬೇಕಾಗುತ್ತದೆ. ಎಲ್ಲ ಸೇರಿ ಸುಮಾರು 80-90 ಲಕ್ಷ ಖರ್ಚಾಗುತ್ತದೆ. ಮಧ್ಯಮ ಗಾತ್ರದ ಜಿಮ್ ಗೆ 2500 ರಿಂದ 3000 ಚದರ ಅಡಿ ಜಾಗ ಬೇಕು. ಖರ್ಚು 50-80 ಲಕ್ಷ. ನೀವು ಜಿಮ್ ಪ್ರಾರಂಭಿಸಿರುವ ಸ್ಥಳ ಹಾಗೂ ಶುಲ್ಕ ಲಾಭವನ್ನು ಆಧರಿಸಿರುತ್ತದೆ. ನಮ್ಮ ಪ್ರಕಾರ 50-80 ಲಕ್ಷ ಹೂಡಿಕೆ ಮಾಡಿದ್ರೆ ವರ್ಷಕ್ಕೆ 10-20 ಲಕ್ಷ ಗಳಿಸಬಹುದು.

ತೇಜ್ ಬಹದ್ದೂರ್ ಯಾದವ್ ಕೊನೆ ಪ್ರಯತ್ನವೂ ವಿಫಲ

Posted: 09 May 2019 02:23 AM PDT

ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸಬೇಕಿದ್ದ ತೇಜ್ ಬಹದ್ದೂರ್ ಯಾದವ್ ಕೊನೆ ಪ್ರಯತ್ನವೂ ವಿಫಲವಾಗಿದೆ. ಸುಪ್ರೀಂ ಕೋರ್ಟ್ ಗೆ ತೇಜ್ ಪ್ರತಾಪ್ ಯಾದವ್ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಗುರುವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅರ್ಜಿ ವಜಾ ಮಾಡಿದೆ.

ಬುಧವಾರ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗಕ್ಕೆ ಉತ್ತರ ನೀಡುವಂತೆ ಇಂದಿನವರೆಗೆ ಅವಕಾಶ ನೀಡಿತ್ತು. ಎರಡೂ ಪಕ್ಷಗಳ ವಾದ-ವಿವಾದ ಆಲಿಸಿದ ಸುಪ್ರೀಂ ಕೋರ್ಟ್ ಅರ್ಜಿ ವಜಾ ಮಾಡಿದೆ. ಬಿಎಸ್ಎಫ್ ನಿಂದ ಅಮಾನತುಗೊಂಡಿರುವ ತೇಜ್ ಬಹದ್ದೂರ್ ಯಾದವ್ ಮೊದಲು ವಾರಣಾಸಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ನಂತ್ರ ಸಮಾಜವಾದಿ ಪಕ್ಷದ ಪರ ನಾಮಪತ್ರ ಸಲ್ಲಿಕೆ ಮಾಡಿದ್ದರು.

ಮೊದಲ ನಾಮಪತ್ರದಲ್ಲಿ ಅಮಾನತು ಸಂಗತಿಯನ್ನು ತಿಳಿಸಿದ್ದರು. ಆದ್ರೆ ಎರಡನೇ ನಾಮಪತ್ರದಲ್ಲಿ ಇದ್ರ ಉಲ್ಲೇಖವಿರಲಿಲ್ಲ. ಹಾಗಾಗಿ ಚುನಾವಣಾ ಆಯೋಗ ನಾಮಪತ್ರವನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ತೇಜ್ ಬಹದ್ದೂರ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ಈ ತೀರ್ಮಾನ, ನರೇಂದ್ರ ಮೋದಿಗೆ ಟಕ್ಕರ್ ನೀಡಲು ಮುಂದಾಗಿದ್ದ ಮೈತ್ರಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಪ್ರಸಿದ್ಧಿಗಾಗಿ ಆಕ್ಟೋಪಸ್ ತಿನ್ನ ಹೋದವಳ ಕಥೆ ಹೀಗಾಯ್ತು…!

Posted: 09 May 2019 02:06 AM PDT

ಚೀನಾದ ಮಹಿಳೆಯೊಬ್ಬಳು ನೇರ ಪ್ರಸಾರದಲ್ಲಿ ಜೀವಂತ ಆಕ್ಟೋಪಸ್ ತಿನ್ನುವ ಪ್ರಯತ್ನ ನಡೆಸ್ತಾಳೆ. ಆದ್ರೆ ಅದೇ ಆಕೆಗೆ ದುಬಾರಿಯಾಗಿ ಪರಿಣಮಿಸುತ್ತದೆ. ಮಹಿಳೆಯನ್ನೇ ಆಕ್ಟೋಪಸ್ ತಿನ್ನಲು ಶುರು ಮಾಡುತ್ತದೆ.

ಚೀನಾ ಬ್ಲಾಗರ್ ಒಬ್ಬಳು ಲೈವ್ ಸ್ಟ್ರೀಮಿಂಗ್ ನಲ್ಲಿ ಆಕ್ಟೋಪಸ್ ತಿನ್ನಲು ಶುರು ಮಾಡ್ತಾಳೆ. ಆದ್ರೆ ಆಕ್ಟೋಪಸ್ ಆಕೆ ಮುಖವನ್ನು ಕಚ್ಚಲು ಶುರು ಮಾಡುತ್ತದೆ. ಆಕ್ಟೋಪಸ್ ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಮಹಿಳೆ ಕಿರುಚಿಕೊಳ್ತಾಳೆ. ಆಕ್ಟೋಪಸ್ ನಿಂದ ಕಷ್ಟಪಟ್ಟು ಬಿಡಿಸಿಕೊಳ್ಳುವ ಮಹಿಳೆ ಮುಖಕ್ಕೆ ಗಾಯವಾಗಿದೆ. ಆಕ್ಟೋಪಸ್ ತನ್ನನ್ನೇ ತಿನ್ನಲು ಶುರು ಮಾಡ್ತು. ಮುಖವನ್ನು ಹಾಳು ಮಾಡ್ತಿದೆ ಎಂದು ನೇರ ಪ್ರಸಾರದಲ್ಲಿಯೇ ಮಹಿಳೆ ಕೂಗಿಕೊಳ್ತಾಳೆ.

ಚೀನಾ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಮೊದಲು ಅಪ್ಲೋಡ್ ಆಗಿದೆ. ನಂತ್ರ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಕೂಡ ಬಂದಿದೆ.

ಪರಿಚಯ ಮುಚ್ಚಿಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಪ್ರಧಾನಿ ಮೋದಿ ಚಿಕ್ಕಪ್ಪ

Posted: 09 May 2019 02:05 AM PDT

ಸೂರತ್ ನ ಸಿವಿಲ್ ಆಸ್ಪತ್ರೆಯಲ್ಲಿ ಬುಧವಾರ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಆಸ್ಪತ್ರೆಗೆ ದಾಖಲಾಗಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಿಕ್ಕಪ್ಪ ಕಾಂತಿಲಾಲ್ ಮೋದಿ ಎಂಬುದು ಗೊತ್ತಾಗ್ತಿದ್ದಂತೆ ಸ್ವಲ್ಪ ಗೊಂದಲ ನಿರ್ಮಾಣವಾಗಿತ್ತು. ಪ್ರಧಾನಿ ಸಂಬಂಧಿ ಎಂದ್ರೆ ಉಳಿದವರಿಗಿಂತ ಹೆಚ್ಚು ಆದ್ಯತೆ ಸಿಗುತ್ತದೆ ಎನ್ನುವ ಕಾರಣಕ್ಕೆ ಕಾಂತಿಲಾಲ್ ತಮ್ಮ ಪರಿಚಯ ಮುಚ್ಚಿಟ್ಟಿದ್ದರಂತೆ.

ಬುಧವಾರ ಕಾಂತಿಲಾಲ್ ಮೂತ್ರದ ಸೋಂಕಿನಿಂದ ಬಳಲುತ್ತಿದ್ದರಂತೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದಾರೆ. ಮೋದಿ ಸಂಬಂಧಿ ಎಂಬುದು ಗೊತ್ತಾದ್ರೆ ಸಾಮಾನ್ಯ ರೋಗಿಯಂತೆ ತನ್ನನ್ನು ನೋಡುವುದಿಲ್ಲ ಎನ್ನುವ ಕಾರಣಕ್ಕೆ ಪರಿಚಯ ಮುಚ್ಚಿಟ್ಟಿದ್ದರಂತೆ. ಆದ್ರೆ ದಾಖಲೆ ನೀಡುವಾಗ ವಿಷ್ಯ ಗೊತ್ತಾಗಿದೆ.

ಮೋದಿ ಕುಟುಂಬಸ್ಥರು ಸಾಮಾನ್ಯರಂತೆ ಜೀವನ ನಡೆಸ್ತಾರೆ. ಕಾಂತಿಲಾಲ್ ಮೋದಿ ಕೂಡ ಅವ್ರಲ್ಲಿ ಒಬ್ಬರು. ಮೋದಿ ಮುಖ್ಯಮಂತ್ರಿಯಾಗಿದ್ದಾಗ ಇಬ್ಬರು ಅನೇಕ ಬಾರಿ ಭೇಟಿಯಾಗಿದ್ದರಂತೆ. ಆದ್ರೆ ಪ್ರಧಾನಿಯಾದ್ಮೇಲೆ ಭೇಟಿಯಾಗಿಲ್ಲವಂತೆ. ಸೂರತ್ ನಲ್ಲಿ ವಾಸವಾಗಿರುವ ಅವ್ರು, ಮೋದಿ ಸಂಬಂಧಿ ಎಂಬುದು ಗೊತ್ತಾಗ್ತಿದ್ದಂತೆ ಹಿರಿಯ ವೈದ್ಯರು ಹೆಚ್ಚಿನ ಕಾಳಜಿ ವಹಿಸಿದ್ರು ಎಂದು ಕಾಂತಿಲಾಲ್ ಹೇಳಿದ್ದಾರೆ.

 

 

ಈ ಚಾಲೆಂಜ್‌ ನಲ್ಲಿ ಹುಡುಗಿಯರೂ ಬಿದ್ದಿಲ್ಲ ಹಿಂದೆ….!

Posted: 09 May 2019 01:48 AM PDT

ನ್ಯೂಯಾರ್ಕ್: ಹೊಸ ಹೊಸ ಚಾಲೆಂಜ್ ಗಳಿಗೆ ತಮ್ಮನ್ನು ಒಗ್ಗಿಕೊಳ್ಳುವ ಉತ್ಸಾಹ ಹೊಂದಿರುವವರಿಗೆ ಇಂಟರ್ನೆಟ್ ಗಿಂತ ಬೇರೆ ಜಾಗ ಮತ್ತೊಂದಿಲ್ಲ.

ಐಸ್ ಬಕೆಟ್, ಸ್ಟಾರ್ಸ್ ಫಾಲಿಂಗ್ ನಂತಹ ಅನೇಕ ಸೃಜನಾತ್ಮಕ ಸ್ಪರ್ಧೆಗಳನ್ನು ಹರಿಯಬಿಟ್ಟಿದ್ದ ಸಾಮಾಜಿಕ ಜಾಲತಾಣಿಗರು ಇದೀಗ ಕಾಕ್ರೋಚ್ ಚಾಲೆಂಜ್ ಆರಂಭಿಸಿದ್ದಾರೆ.

ತಮ್ಮ ಮುಖದ ಮೇಲೆ ಜಿರಲೆಯೊಂದನ್ನು ಹರಿಯಬಿಟ್ಟು ಅದರ ಸೆಲ್ಫಿಯನ್ನು ಅಪ್ಲೋಡ್ ಮಾಡುವುದೇ ಈ ಚಾಲೆಂಜ್.

ಅಲೆಕ್ಸ್ ಆಂಗ್ ಎಂಬ ಫೇಸ್ಬುಕ್ ಬಳಕೆದಾರ ಆರಂಭಿಸಿದ ಈ ಚಾಲೆಂಜ್ ಮಲೇಷ್ಯಾ, ಫಿಲಿಪಿನ್ಸ್ ಸೇರಿದಂತೆ ಅನೇಕ ದೇಶಗಳಲ್ಲಿ ಹಬ್ಬುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟ ಕೆಲವರು, ಮುಖದ ಮೇಲೇಕೆ ಬಾಯಿಯೊಳಗೇ ಜಿರಲೆಯನ್ನು ಇಟ್ಟುಕೊಂಡು ಸೆಲ್ಫಿಗಳನ್ನು ಕಳಿಸುತ್ತಿದ್ದಾರೆ.

 

 

ದಂಗಾಗಿಸುತ್ತೆ ಕಡಿದಾದ ಜಾಗದಲ್ಲಿನ ಈ ʼರೋಬೋಟ್‌ʼ ನಡಿಗೆ

Posted: 09 May 2019 01:46 AM PDT

ಕಡಿದಾದ ಜಾಗದಲ್ಲಿ ನಡೆಯುವಾಗ ಮನುಷ್ಯರು ಬ್ಯಾಲೆನ್ಸ್ ತಪ್ಪುತ್ತಾರೆ. ಆದರೆ ಇಲ್ಲೊಂದು ರೋಬೋಟ್ ಅಂಥ ಜಾಗದಲ್ಲೂ ಬ್ಯಾಲೆನ್ಸ್ ತಪ್ಪದೆ ನಡೆಯಬಲ್ಲದು. ಫ್ಲೋರಿಡಾದ ಪೆನ್ಸಕೋಲದ ದ ಇನ್‍ಸ್ಟಿಟ್ಯೂಟ್ ಫಾರ್ ಹ್ಯೂಮನ್ ಆ್ಯಂಡ್ ಮಷಿನ್ ಕಾಗ್ನಿಷನ್ ಇಂಥದ್ದೊಂದು ಹ್ಯೂಮನಾಯ್ಡ್ ರೋಬೋಟ್ ಅಭಿವೃದ್ಧಿಪಡಿಸಿದೆ.

165 ಪೌಂಡ್ ತೂಕದ ಈ ರೋಬೋಟ್ ಸಿಲಿಂಡರ್ ಬ್ಲಾಕ್‍ ಗಳನ್ನು ಅಡ್ಡಾದಿಡ್ಡಿಯಾಗಿ ಜೋಡಿಸಿ ರೂಪಿಸಿದ ಕಡಿದಾದ ಅಂಚಿನ ಮೇಲೂ ಬ್ಯಾಲೆನ್ಸ್ ತಪ್ಪದೆ ನಡೆಯಬಲ್ಲದು ಎಂಬುದನ್ನು ಇತ್ತೀಚಿನ ಪರೀಕ್ಷೆಯಲ್ಲಿ ಸಾಬೀತು ಪಡಿಸಿದೆ.

ಈ ಹ್ಯೂಮನಾಯ್ಡ್ ರೋಬೋಟ್‍ನ ಬ್ಯಾಲೆನ್ಸಿಂಗ್ ನಡಿಗೆಯ 3 ನಿಮಿಷದ ವಿಡಿಯೋ ಕೂಡ ಬಹಿರಂಗಗೊಂಡಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ. ಈ ರೋಬೋಟ್‍ ಅನ್ನು ಬಾಂಬ್ ಸ್ಕ್ವಾಡ್, ಅಗ್ನಿ ಆಕಸ್ಮಿಕ ಸಂದರ್ಭ, ಕುಸಿದ ಕಟ್ಟಡ ಮುಂತಾದ ದುರಂತ ಸಂದರ್ಭಗಳಲ್ಲಿನ ಕಾರ್ಯಾಚರಣೆ ವೇಳೆ ಬಳಸಬಹುದು ಎಂದು ಐಎಚ್‍ಎಂಸಿ ರೋಬೋಟಿಕ್ಸ್ ನ ಸೀನಿಯರ್ ರಿಸರ್ಚ್ ಸೈಂಟಿಸ್ಟ್ ಜೆರ್ರಿ ಅಭಿಪ್ರಾಯಪಟ್ಟಿದ್ದಾರೆ.

ಈ ವೃದ್ದೆಯಂತೆ ಬದುಕಲು ಮಾಡಿರಬೇಕು ʼಪುಣ್ಯʼ

Posted: 09 May 2019 01:41 AM PDT

ಈ ಬೇಸಿಗೆಯಲ್ಲಿ ಒಂದೈದು ನಿಮಿಷ ಕರೆಂಟ್ ಹೋದರೂ ಚಡಪಡಿಸುವವರಿಗೆ ಈ ಸುದ್ದಿ ಅಚ್ಚರಿ ಮೂಡಿಸಬಹುದು. ಏಕೆಂದರೆ ಇಲ್ಲೊಬ್ಬರು ವೃದ್ಧೆ ಜೀವನಪೂರ್ತಿ ಕರೆಂಟ್ ಇಲ್ಲದೆ ಬದುಕುತ್ತಿದ್ದಾರೆ.

79 ವರ್ಷದ ನಿವೃತ್ತ ಪ್ರೊಫೆಸರ್ ಡಾ. ಹೇಮಾ ಸಾನೆ ಎಂಬುವವರು ಪುಣೆಯ ಬುಧ್ವಾರ್ ಪೇಟ್‍ ನಲ್ಲಿ ವಿದ್ಯುತ್ ನೆರವಿಲ್ಲದೆ ಬದುಕುತ್ತಿದ್ದಾರೆ. ಪ್ರಕೃತಿ ಮೇಲಿನ ಪ್ರೇಮದಿಂದಾಗಿ ಅವರು ಹೀಗೆ ಬದುಕುತ್ತಿದ್ದಾರೆ.

ಆಹಾರ, ಆಶ್ರಯ ಹಾಗೂ ಬಟ್ಟೆ ಮೂಲಭೂತ ಅಗತ್ಯಗಳು. ಒಂದು ಕಾಲದಲ್ಲಿ ಕರೆಂಟ್ ಇರಲಿಲ್ಲ, ಆಮೇಲೆ ಬಂತು. ಈಗಲೂ ಕರೆಂಟ್ ಇಲ್ಲದೆ ನಾನು ಅವೆಲ್ಲವನ್ನೂ ನಿಭಾಯಿಸಬಲ್ಲೆ ಎನ್ನುತ್ತಾರೆ ಅವರು.

ಇನ್ನು ಆಸ್ತಿ ಯಾವುದೂ ಅವರದ್ದಲ್ಲ ಎನ್ನುವ ಅವರು ಅದನ್ನು ಅವರ ಸಾಕುನಾಯಿ, ಬೆಕ್ಕು, ಮುಂಗುಸಿ ಹಾಗೂ ಹಕ್ಕಿಗಳದ್ದು ಎನ್ನುತ್ತಿದ್ದಾರೆ. ನಾನು ಅವುಗಳನ್ನು ನೋಡುವುದಕ್ಕಷ್ಟೇ ಇಲ್ಲಿದ್ದೇನೆ. ಜನ ನನ್ನನ್ನು ಮೂರ್ಖಳು ಎನ್ನಬಹುದು. ಆದರೆ ನಾನು ನನಗೆ ಬೇಕಾದಂತೆ ಬದುಕುತ್ತಿದ್ದೇನೆ ಎನ್ನುತ್ತಾರೆ.