Translate

Sunday, April 21, 2019

Kannada News | Karnataka News | India News

Kannada News | Karnataka News | India News


ಕಾಲೇಜು ಕಟ್ಟಡದಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ..!

Posted: 21 Apr 2019 09:25 AM PDT

ಮೊನ್ನೆಯಷ್ಟೇ ರಾಯಚೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಅನುಮಾನಾಸ್ಪದ ಸಾವಿನ ಪ್ರಕರಣ ಮಾಸಿಲ್ಲ. ಅಷ್ಟರಲ್ಲಾಗಲೇ ಭೂಪಾಲ್‍ ನಲ್ಲೂ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ಕಾಲೇಜಿನ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಕಿಶ್‍ಗಂಜ್‍ ಬಂಸಲ್‍ ಇಂಜಿನಿಯರಿಂಗ್‍ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಆಯುಷಿ ಮಿಶ್ರಾ ಮೃತ ವಿದ್ಯಾರ್ಥಿನಿಯಾಗಿದ್ದಾಳೆ.

ಆಯುಷಿಗೆ ಕಳೆದ ಕೆಲವು ದಿನಗಳಿಂದ ಯುವಕನೊಬ್ಬ ಕಿರುಕುಳ ನೀಡುತ್ತಿದ್ದ. ಇದ್ರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾಳೆ ಅಂತಾ ಹೇಳಲಾಗ್ತಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್‍ ಸಿಂಹ ಕಿಡಿ

Posted: 21 Apr 2019 09:21 AM PDT

ಮಂಡ್ಯ, ಮೈಸೂರು ಭಾಗದಲ್ಲಿ ಮತದಾನ ಮುಗಿದಿದ್ರೂ, ರಾಜಕಾರಣಿಗಳ ಮಾತಿನ ಕೆಸರೆರಚಾಟ ಮಾತ್ರ ನಿಂತಿಲ್ಲ. ಇವತ್ತೂ ಕೂಡಾ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸೋಲಿನ ಭಯ ಉಂಟಾಗಿದ್ದು, ಅಧಿಕಾರಕ್ಕಾಗಿ ಯಾರ ಕಾಲು ಬೇಕಾದ್ರೂ ಹಿಡೀತಾರೆ ಅಂತಾ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಪ್ರತಾಪ್‍ ಸಿಂಹ, ಸೋಲಿನ ಭಯದಿಂದ ಸಿದ್ದರಾಮಯ್ಯ ಅವರು ಮಾತನಾಡುತ್ತಿದ್ದಾರೆ. ಈ ಹಿಂದೆ ವಿಧಾನಸಭಾ ಚುನಾವಣೆಗೂ ಮುನ್ನ ಅಪ್ಪನ ಆಣೆಗೂ ಹೆಚ್‍.ಡಿ.ಕೆ. ಸಿಎಂ ಆಗಲ್ಲ ಅಂತಿದ್ದ ಅವರೇ ಕುಮಾರಸ್ವಾಮಿ, ದೇವೇಗೌಡರ ಕಾಲಿಗೆ ಬಿದ್ದರು. ಈಗ ಅದೇ ಸೋಲು ಅವರನ್ನು ಕಾಡ್ತಿದೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡಿಕೊಳ್ತಿದ್ದಾರೆ ಅಂತಾ ಹರಿಹಾಯ್ದರು.

ವಿಧಾನಸಭಾ ಚುನಾವಣೆಯಂತೆ ಈ ಬಾರಿಯೂ ಸೋಲಿನ ಭಯದಿಂದ ಜಿಟಿಡಿ ಬೆನ್ನಹಿಂದೆ ಬಿದ್ದು, ಅವರ ಮನೆಗೆ ಹೋಗಿದ್ರು ಅಂತಾ ಸಿದ್ದರಾಮಯ್ಯ ವಿರುದ್ಧ ಪ್ರತಾಪ್‍ ಸಿಂಹ ವಾಗ್ದಾಳಿ ನಡೆಸಿದ್ರು.

ಮುಟ್ಟಿನ ಬಗ್ಗೆ ಹುಡುಗರ ತಲೆಯಲ್ಲಿರುತ್ತೆ ಇಂತ ಪ್ರಶ್ನೆಗಳು

Posted: 21 Apr 2019 09:13 AM PDT

ಹುಡುಗಿಯರ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಪ್ರಶ್ನೆಗಳು ಹುಡುಗರಲ್ಲಿ ಮನೆ ಮಾಡಿರುತ್ತವೆ. ವಿಶೇಷವಾಗಿ ಪಿರಿಯಡ್ಸ್ ವಿಚಾರ. ಇದ್ರ ಬಗ್ಗೆ ಅವರಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿರುತ್ತವೆ. ಆದ್ರೆ ಪ್ರೇಯಸಿ ಮುಂದೆ ಈ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲು ಹೆಣಗಾಡ್ತಾರೆ. ಸುತ್ತಿಬಳಸಿ ಕೆಲ ಪ್ರಶ್ನೆಗಳಿಗೆ ಉತ್ತರ ಕಂಡಕೊಳ್ಳುವವರು ಕೆಲವರಾದ್ರೆ ಮತ್ತೆ ಕೆಲವರ ಪ್ರಶ್ನೆ ಪ್ರಶ್ನೆಯಾಗೆ ಇರುತ್ತದೆ.

ಸಾಮಾನ್ಯವಾಗಿ ಹುಡುಗರ ಮನಸ್ಸಿನಲ್ಲಿ ಮನೆ ಮಾಡುವ ಪ್ರಶ್ನೆಗಳು ಇಲ್ಲಿವೆ:

ಈ ದಿನಗಳಲ್ಲಿ ಹಾಸಿಗೆಯಿಂದ ನೀನು ಹೇಗೆ ಏಳ್ತೀಯಾ? ಇವಳ ಶರೀರದಿಂದ ಇಷ್ಟಲ್ಲ ಬ್ಲಡ್ ಬರಲು ಹೇಗೆ ಸಾಧ್ಯ?

ಹುಡುಗಿಯರು ಸ್ನಾನ ಮಾಡುವ ವೇಳೆ ಮತ್ತಷ್ಟು ಬ್ಲಡ್ ಹೋಗಬಹುದು ಎಂದೂ ಯೋಚಿಸುವವರಿದ್ದಾರೆ.

ಮುಟ್ಟಿನ ವೇಳೆ ಕೆಲ ಹುಡುಗಿಯರು ಚಾಕಲೇಟ್ ತಿನ್ನಲು ಇಷ್ಟಪಡ್ತಾರೆ. ಈ ಸಮಯದಲ್ಲಿ ಚಾಕಲೇಟ್ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಾ ಎಂದು ಕೆಲ ಹುಡುಗರು ಯೋಚನೆ ಮಾಡ್ತಾರೆ.

ಪಿರಿಯಡ್ಸ್ ಆಗಿದೆ ಅಂತಾ ಹೇಗೆ ಗೊತ್ತಾಗುತ್ತೆ? ಬಹುಷ: ಹುಡುಗಿಯರು ಈ ಬಗ್ಗೆ ಯಾವಾಗ್ಲೂ ಹುಡುಗಿಯರು ಯೋಚನೆ ಮಾಡ್ತಾನೆ ಇರಬಹುದು ಎಂದು ತಲೆಕೆಡಿಸಿಕೊಳ್ಳುತ್ತಾರೆ ಹುಡುಗರು.

ಈ ದಿನಗಳಲ್ಲಿ ಅವರು ಹೇಗೆ ಕೆಲಸ ಮಾಡ್ತಾರೆ? ಸಂಬಂಧ ಹೇಗೆ ಬೆಳೆಸ್ತಾರೆ? ರಾತ್ರಿ ಅಷ್ಟು ಸಮಯ ಹೇಗೆ ಮಲಗಿರ್ತಾರೆ ಎಂಬ ಪ್ರಶ್ನೆ ಹುಡುಗರನ್ನು ಕಾಡುತ್ತದೆ.

ಗರ್ಭಿಣಿಯಾಗಿದ್ದಾರಾ ಸೋನಂ ಕಪೂರ್…..!

Posted: 21 Apr 2019 08:40 AM PDT

ಬಾಲಿವುಡ್‍ ನ ಮೋಸ್ಟ್ ಸ್ಟೈಲಿಶ್‍ ಗರ್ಲ್ ಸೋನಂ ಕಪೂರ್ ಕಳೆದ ವರ್ಷ ಉದ್ಯಮಿ ಆನಂದ್ ಅಹುಜಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಫೋಟೋವೊಂದು ಸೋನಂ ಗರ್ಭಿಣಿಯಾಗಿದ್ದಾರಾ ಎಂಬ ಅನುಮಾನ ಮೂಡಿಸಿದ್ದು, ಅಭಿಮಾನಿಗಳು ಕೂಡಾ ಈ ಬಗ್ಗೆ ಮಾತನಾಡಿಕೊಳ್ತಿದ್ದಾರೆ.

ಇದಕ್ಕೆ ಕಾರಣ ಸೋನಂ ಕಪೂರ್, ತಮ್ಮ ಪತಿ ಜೊತೆ ಲಾಂಚಿಂಗ್ ಇವೆಂಟ್‍ನಲ್ಲಿ ಕಾಣಿಸಿಕೊಂಡಿದ್ರು. ಈ ಕಾರ್ಯಕ್ರಮಕ್ಕೆ ಹಳದಿ ಬಣ್ಣದ ಉಡುಪು ಹಾಕಿ ಅದಕ್ಕೆ ಮ್ಯಾಚಿಂಗ್‍ ಶೂ ಹಾಕಿಕೊಂಡಿದ್ದರು. ಈ ವೇಳೆ ಸೋನಂ ಅವರ ಶೂ ಲೇಸ್ ಓಪನ್ ಆಗಿದೆ. ಆಗ ಸೋನಂ ಪತಿ ಆನಂದ್ ಕೆಳಗೆ ಕುಳಿತುಕೊಂಡು ಶೂ ಲೇಸ್ ಕಟ್ಟಿದ್ದಾರೆ.

ಸೋನಂ ಅವರು ಬಗ್ಗಿ ಶೂ ಲೇಸ್‍ ಕಟ್ಟಿಕೊಳ್ಳದ ಕಾರಣ ಅವರು ಪ್ರಗ್ನೆಂಟ್ ಆಗಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಸೋನಂ ಪ್ರಗ್ನೆಂಟಾ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಸೋನಂಗೆ ಬೇಬಿ ಬಂಪ್ ಕಾಣ್ತಿದೆ ಅಂತಾ ಕಮೆಂಟ್ ಮಾಡಿದ್ದಾರೆ.

ಫೀಲ್ಡಿಗಿಳಿದು ಕ್ರಿಕೆಟ್ ಆಡಿದ ತ್ರಿಷಿಕಾ ಕುಮಾರಿ…!

Posted: 21 Apr 2019 08:29 AM PDT

ಮೈಸೂರಿನ ರಾಜವಂಶದ ಸೊಸೆ ಫೀಲ್ಡಿಗಿಳಿದು ಕ್ರಿಕೆಟ್ ಆಡಿದ್ದಾರೆ. ಹೌದು, ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನೆನಪಿನಾರ್ಥ ಅರಸು ಮಂಡಳಿ ವತಿಯಿಂದ ಮೈಸೂರಿನಲ್ಲಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿತ್ತು. ಈ ಪಂದ್ಯಾವಳಿಗೆ ಮಹಾರಾಜ ಯದುವೀರ್ ಅವರ ಪತ್ನಿ ತ್ರಿಷಿಕಾ ಬ್ಯಾಟ್ ಬೀಸಿ ಚಾಲನೆ ನೀಡಿದ್ರು.

ಕ್ರಿಕೆಟ್ ಪಿಚ್‍ ನಲ್ಲಿ ಬ್ಯಾಟ್‍ ಬೀಸಿ ಕಾರ್ಯಕ್ರಮ ಉದ್ಘಾಟಿಸಿದ ತ್ರಿಷಿಕಾ, ನಂತರ ಎಲ್ಲಾ ಕ್ರಿಕೆಟ್ ತಂಡಕ್ಕೂ ಶುಭ ಹಾರೈಸಿದ್ರು. ಇನ್ನು ತ್ರಿಷಿಕಾ ಅವರ ಪ್ರೋತ್ಸಾಹಕ್ಕೆ ಆಟಗಾರರೂ ಕೂಡಾ ಫುಲ್‍ ಖುಷ್‍ ಆದ್ರು.

ಕೊನೆಗೂ ಮನದ ಆಸೆ ಬಿಚ್ಚಿಟ್ಟ ಪ್ರಿಯಾಂಕಾ ಗಾಂಧಿ

Posted: 21 Apr 2019 08:27 AM PDT

ಇತ್ತೀಚೆಗಷ್ಟೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಗಾಂಧಿ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮೇಲೆ ಕೈ ಪಾಳಯದಲ್ಲಿ ಹೊಸ ಸಂಚಲನ ಉಂಟಾಗಿದೆ.

ಈ ಮಧ್ಯೆ ಪ್ರಿಯಾಂಕಾ ಗಾಂಧಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಎಂಬ ಕುತೂಹಲ ಕೂಡಾ ಇನ್ನೂ ಮುಂದುವರೆದಿರುವಾಗಲೇ, ಪ್ರಿಯಾಂಕಾ ಗಾಂಧಿಯವರ ಹೇಳಿಕೆ ಭಾರಿ ಸದ್ದು ಮಾಡ್ತಿದೆ.

ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಬಯಸಿದರೆ ತಾವು ಚುನಾವಣೆಗೆ ಸ್ಪರ್ಧಿಸುವುದಾಗಿ ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ. ಸಧ್ಯ ಕೇರಳದ ವಯನಾಡಿನಲ್ಲಿ ಸಹೋದರ ರಾಹುಲ್‍ ಗಾಂಧಿ ಪರ ಪ್ರಿಯಾಂಕ ಅಬ್ಬರದ ಪ್ರಚಾರ ನಡೆಸಿದ್ದಾರೆ.

ಈ ವೇಳೆ ಮಾಧ್ಯಮದವರು ಮೋದಿ ಎದುರಾಳಿಯಾಗಿ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸುತ್ತೀರಾ ಅಂತಾ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರು ಒಪ್ಪಿದ್ರೆ, ಖುಷಿಯಾಗಿ ಸ್ಪರ್ಧೆಗಿಳಿಯುವುದಾಗಿ ತಿಳಿಸಿದ್ದಾರೆ. ಈ ಮೂಲಕ ಪ್ರಿಯಾಂಕಾ ಗಾಂಧಿ ಚುನಾವಣಾ ಅಖಾಡಕ್ಕಿಳಿಯಲು ರೆಡಿಯಾಗಿದ್ದಾರೆ.

ಭದ್ರಾ ಹಿನ್ನೀರಿನಲ್ಲಿ ಮುಳುಗಿದ್ದ ಇಬ್ಬರು ಯುವಕರ ಶವ ಪತ್ತೆ

Posted: 21 Apr 2019 08:25 AM PDT

ಭದ್ರಾ ಹಿನ್ನೀರಿನಲ್ಲಿ ಮುಳುಗಿದ್ದ ಇಬ್ಬರು ಯುವಕರ ಶವ ಇಂದು ಪತ್ತೆಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್‍.ಆರ್.ಪುರ ತಾಲೂಕಿನ ಮೂರು ಕಣ್ಣಿನ ಸೇತುವೆ ಬಳಿ ನಡೆದಿದೆ.

ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಇಂದು ಮೃತದೇಹಗಳು ಸಿಕ್ಕಿವೆ. ಸಂತೋಷ್‍ ಮತ್ತು ದಮ್ಮೂರು ಮೃತ ದುರ್ದೈವಿಗಳಾಗಿದ್ದಾರೆ. ಅದ್ರಲ್ಲಿ ಸಂತೋಷ್‍ ಮೂಲತಃ ನೇಪಾಳದವನಾಗಿದ್ದು, ಎನ್‍ .ಆರ್. ಪುರದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡ್ತಿದ್ದ. ದಮ್ಮೂರ್ ಕೂಡಾ ಸಂತೋಷ್‍ ಸಂಬಂಧಿಯಾಗಿದ್ದು, ನೇಪಾಳದಿಂದ ಇಲ್ಲಿಗೆ ಬಂದಿದ್ದ.

ಇವರಿಬ್ಬರು ನಿನ್ನೆ ಭದ್ರಾ ಹಿನ್ನೀರಿನಲ್ಲಿ ದಾಟುವಾಗ ಕೊಚ್ಚಿಕೊಂಡು ಹೋಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಹುಡುಕಾಟ ನಡೆಸಿದ್ರು. ಆದ್ರೆ ಕತ್ತಲಾಗಿದ್ರಿಂದ ಮೃತದೇಹಗಳ ಶೋಧ ಕಾರ್ಯ ಸಾಧ್ಯವಾಗಿರಲಿಲ್ಲ. ಇಂದು ಬೆಳಗ್ಗೆ ಹುಡುಕಾಟ ನಡೆಸಿದಾಗ ಮೃತದೇಹಗಳು ಪತ್ತೆಯಾಗಿವೆ. ಈ ಸಂಬಂಧ ಎನ್.ಆರ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಶಾರೀರಿಕ ಸಂಬಂಧ’ ಬೆಳೆಸಿದ ನಂತ್ರ ಈ ಬಗ್ಗೆ ಭಯಗೊಳ್ತಾರೆ ಹುಡುಗಿಯರು

Posted: 21 Apr 2019 07:05 AM PDT

ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ವಿಶ್ವಾಸ ಬಹಳ ಮುಖ್ಯ.ಶಾರೀರಿಕ ಸಂಬಂಧ ಬೆಳೆಸುವುದರಿಂದ ದಾಂಪತ್ಯ ಮತ್ತಷ್ಟು ಗಟ್ಟಿಯಾಗುತ್ತದೆ. ಮದುವೆ, ಸಂಸಾರ, ಹೊಸ ಜೀವನವೆಂದ್ರೆ ಹುಡುಗಿಯರಿಗೆ ವಿಶೇಷ ನಿಜ. ಆದ್ರೆ ಅನೇಕ ಹುಡುಗಿಯರು ಮದುವೆ ನಂತ್ರ ಶಾರೀರಿಕ ಸಂಬಂಧ ಬೆಳೆಸಲು ಭಯಪಡ್ತಾರೆ. ಅವರಲ್ಲಿರುವ ಭಯ ಹಾಗೂ ಕೆಲ ಪ್ರಶ್ನೆಗಳನ್ನು ಪತಿ ಜೊತೆಯೂ ಹಂಚಿಕೊಳ್ಳುವುದಿಲ್ಲ.

ಕೆಲವರು ಹಗಲಿನಲ್ಲಿ ಸಂಬಂಧ ಬೆಳೆಸಲು ಇಚ್ಛಿಸಿದ್ರೆ ಮತ್ತೆ ಕೆಲವರು ರಾತ್ರಿ ಇಷ್ಟಪಡುತ್ತಾರೆ. ಸಂಗಾತಿಯ ಆಸಕ್ತಿಗಳು ಬೇರೆ ಬೇರೆಯಾಗಿದ್ದಾಗ ಈ ಬಗ್ಗೆ ಪರಸ್ಪರ ಮಾತನಾಡಿಕೊಳ್ಳಬೇಕು. ಬಹುತೇಕ ಹುಡುಗಿಯರು ಈ ವಿಷಯವನ್ನು ಹೇಳಿಕೊಳ್ಳೋದೇ ಇಲ್ಲ.

ಫೋನ್ ನಲ್ಲಿ ಹಾಗೂ ಬೆಡ್ ರೂಂನಲ್ಲಿ ಸಂಬಂಧದ ವಿಷಯ ಮಾತನಾಡಲು ಅನೇಕ ಹುಡುಗಿಯರಿಗೆ ಇಷ್ಟವಾಗುವುದಿಲ್ಲ. ಈ ವಿಷಯವನ್ನು ಸಂಗಾತಿ ಜೊತೆ ಹೇಳಿಕೊಂಡ್ರೆ ಕಿರಿಕಿರಿ ಅನುಭವಿಸುವುದು ತಪ್ಪುತ್ತದೆ.

ಸಂಬಂಧ ಬೆಳೆಸುವ ವೇಳೆ ಕೆಲ ಹುಡುಗಿಯರಿಗೆ ನೋವಾಗುತ್ತದೆ. ಹಾಗಾಗಿ ಮತ್ತೊಮ್ಮೆ ಸಂಬಂಧ ಬೆಳೆಸಲು ಹುಡುಗಿಯರು ಇಷ್ಟಪಡುವುದಿಲ್ಲ. ಆಗ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಅದ್ರ ಬದಲು ಈ ಬಗ್ಗೆ ಸಂಗಾತಿ ಜೊತೆ ಹೇಳಿಕೊಂಡು ಸಮಸ್ಯೆ ಎಲ್ಲಿದೆ ಎಂಬುದನ್ನು ತಿಳಿದು ಪರಿಹಾರ ಕಂಡುಕೊಳ್ಳುವುದು ಒಳ್ಳೆಯದು.

ಗರ್ಭ ಧರಿಸಿದ್ರೆ ಎನ್ನುವ ಭಯದಿಂದಲೂ ಕೆಲ ಹುಡುಗಿಯರು ಸಂಬಂಧ ಬೆಳೆಸಲು ಇಚ್ಛಿಸುವುದಿಲ್ಲ. ಈ ಬಗ್ಗೆ ಸರಿಯಾಗಿ ತಿಳಿದುಕೊಂಡಲ್ಲಿ ಭಯ ಮಾಯವಾಗಿ ದಾಂಪತ್ಯ ಗಟ್ಟಿಯಾಗುತ್ತದೆ.

 

ಬಿಜೆಪಿ ಪರ ಕಾಂಗ್ರೆಸ್ ಶಾಸಕ ಬ್ಯಾಟಿಂಗ್

Posted: 21 Apr 2019 06:25 AM PDT

ಬೆಳಗಾವಿ: ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಪಕ್ಷದಿಂದ ದೂರವಾಗಿದ್ದು, ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ ಎನ್ನಲಾಗಿದೆ.

ಗೋಕಾಕ್ ಶಾಸಕ ನಮ್ಮ ಪಕ್ಷದ ಜೊತೆಗೆ ಇಲ್ಲ. ಹಾಗಾಗಿ ನಾವು ಅನಿವಾರ್ಯವಾಗಿ ಪ್ರಚಾರ ನಡೆಸಿದ್ದೇವೆ. ಶಾಸಕರು ಬಿಜೆಪಿ ಬೆಂಬಲಿಸುವಂತೆ ಅವರ ಬೆಂಬಲಿಗರಿಗೆ ತಿಳಿಸಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಬೇರೆ ಬೇರೆ ಸ್ಥಳದಲ್ಲಿ ಬಿಜೆಪಿ ಪರವಾಗಿ ಬ್ಯಾಟಿಂಗ್ ನಡೆಸಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಅವರು ಇನ್ನು ಕತ್ತಲಲ್ಲಿಯೇ ಕುಳಿತು ಕಲ್ಲೆಸೆಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅನ್ಯಾಯವಾಗಿದೆ ಎಂದು ಅವರು ಕಾರ್ಯಕರ್ತರೊಂದಿಗೆ ಹೇಳಿಕೊಂಡಿದ್ದು, ಅವರ ವಿರುದ್ಧ ಕ್ರಮ ಕೈಗೊಂಡರೂ ಅಷ್ಟೆ. ಬಿಟ್ಟರೂ ಅಷ್ಟೆ. ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪೀಕರ್ ಗೆ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಗೋಕಾಕ್ ಕ್ಷೇತ್ರದಲ್ಲಿ ಕೆಲ ಸಮಯ ಗೊಂದಲವಾಗುತ್ತದೆ. 20 ವರ್ಷಗಳಿಂದ ಈ ಕ್ಷೇತ್ರ ಅವರ ಹಿಡಿತದಲ್ಲಿತ್ತು. ಒಂದೇ ವಾರದಲ್ಲಿ ಎಲ್ಲವನ್ನು ಬದಲಿಸಲು ಸಾಧ್ಯವಾಗುವುದಿಲ್ಲ ಎಂಬುದು ಗೊತ್ತಿದೆ. ನಾನಾಗಲಿ ಅವರಾಗಲಿ ವ್ಯಕ್ತಿಗಿಂತ ಪಕ್ಷ ಮುಖ್ಯವಾಗುತ್ತದೆ. ದಶಕಗಳಿಂದ ಕಾಂಗ್ರೆಸ್ ಗೆ ಮತ ಹಾಕಿದವರು ಬಹಳಷ್ಟು ಮಂದಿ ಇದ್ದಾರೆ ಎಂದು ಹೇಳಿದ್ದಾರೆ.

ಬಹಿರಂಗ ಪ್ರಚಾರಕ್ಕೆ ತೆರೆ, ಕೊನೆ ಕ್ಷಣದಲ್ಲಿ ಮತಬೇಟೆ

Posted: 21 Apr 2019 06:16 AM PDT

ರಾಜ್ಯದಲ್ಲಿ 2 ನೇ ಹಂತದಲ್ಲಿ ಏ.23 ರಂದು 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.

ಮನೆ ಮನೆಗೆ ತೆರಳಿ ಮತ ಯಾಚಿಸಲಿರುವ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮತದಾರರ ಮನವೊಲಿಸಲು ಕೊನೆ ಪ್ರಯತ್ನ ನಡೆಸಿದ್ದಾರೆ. 14 ಲೋಕಸಭೆ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಮತದಾರರಲ್ಲದ ನಾಯಕರು ಕ್ಷೇತ್ರಗಳನ್ನು ಬಿಟ್ಟು ತೆರಳಿದ್ದಾರೆ.

ಧಾರವಾಡ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ, ಚಿಕ್ಕೋಡಿ, ಬೀದರ್, ಕಲಬುರಗಿ, ವಿಜಯಪುರ, ರಾಯಚೂರು, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ ಕ್ಷೇತ್ರಗಳಲ್ಲಿ ಏಪ್ರಿಲ್ 23 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.

ಚುನಾವಣೆ ಘೋಷಣೆಗೂ ಮೊದಲೇ ಪ್ರಚಾರ ಆರಂಭವಾಗಿ, ನಂತರದಲ್ಲಿ ಪ್ರಚಾರದ ಭರಾಟೆ ಮುಗಿಲು ಮುಟ್ಟಿದ್ದು, ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದಾರೆ. ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಕೊನೆ ಕ್ಷಣದ ಆಟ ಶುರುವಾಗಲಿದೆ.

ಮತದಾರರ ಓಲೈಸಲು ಅಭ್ಯರ್ಥಿಗಳು ಮತ್ತು ಬೆಂಬಲಿಗರು ಕೊನೆ ಕ್ಷಣದಲ್ಲಿ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ಬಳಿಕ ಅಭ್ಯರ್ಥಿಗಳು ಅವರ ಬೆಂಬಲಿಗರು ಮನೆ ಮನೆ ಪ್ರಚಾರ ಕೈಗೊಂಡಿದ್ದಾರೆ. ಮತದಾರರ ಓಲೈಕೆಗೆ ತೆರೆಮರೆ ಕಸರತ್ತು ನಡೆದಿದೆ.

ಶ್ರೀಲಂಕಾ ಸ್ಪೋಟ: ಪಾರಾದ ನಟಿ ಸಂಜನಾ ಸಹೋದರ

Posted: 21 Apr 2019 05:44 AM PDT

ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಚರ್ಚ್ ಮತ್ತು ಸ್ಟಾರ್ ಹೋಟೆಲ್ ಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಸ್ಫೋಟಿಸಲಾಗಿದೆ.

ಅವಘಡದಲ್ಲಿ 180 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. 500 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈಸ್ಟರ್ ಹಬ್ಬದ ಸಂಭ್ರಮದಲ್ಲಿ ಜನ ಸೇರಿದ್ದ ವೇಳೆಯೇ ಬಾಂಬ್ ಸ್ಫೋಟಿಸಲಾಗಿದೆ. ಮಂಗಳೂರು ಮೂಲದ ಮಹಿಳೆ ರಝೀನಾ ಮೃತಪಟ್ಟಿದ್ದಾರೆ.

ನಟಿ ಸಂಜನಾ ಅವರ ಸಹೋದರ ರಾಹುಲ್ ಶೆಟ್ಟಿ ಕೂಡ ಕೊಲಂಬೋದಲ್ಲಿದ್ದು, ಅವರು ಪಾರಾಗಿದ್ದಾರೆ. ಘಟನೆಯಿಂದ ಆತಂಕದಲ್ಲಿದ್ದಾರೆ. ತಾವು ಸುರಕ್ಷಿತವಾಗಿರುವ ಬಗ್ಗೆ ಅವರು ಸೆಲ್ಫಿ ವಿಡಿಯೋ ಮಾಡಿ ಕುಟುಂಬದವರಿಗೆ ಕಳುಹಿಸಿದ್ದಾರೆ.

ಕೊಲಂಬೋದಲ್ಲಿ ತಾವು ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಸ್ಪೋಟವಾಗಿದ್ದು, ಅಲ್ಲದೇ, ಸ್ನೇಹಿತರು ತಂಗಿದ್ದ ಹೋಟೆಲ್ ನಲ್ಲಿಯೂ ದಾಳಿ ನಡೆದಿದೆ. ಇದು ಆತ್ಮಾಹುತಿ ದಾಳಿ ಎಂದು ಹೇಳಲಾಗಿದೆ. ಆದರೆ, ಸ್ಪಷ್ಟನೆ ಇಲ್ಲ. ಬಾಂಬ್ ಸ್ಫೋಟದಿಂದಾಗಿ ಇಲ್ಲಿನ ರಸ್ತೆಗಳಲ್ಲಿ ರಕ್ತದ ಹೊಳೆಯೇ ಹರಿಯುತ್ತಿದೆ. ಎಲ್ಲರೂ ಆತಂಕದಲ್ಲಿ ಓಡಾಡುತ್ತಿದ್ದು, ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರೆದಿವೆ. ಭಾರತಕ್ಕೆ ಬರಲು ತುರ್ತು ವಿಮಾನ ಟಿಕೆಟ್ ಬುಕ್ ಮಾಡಲು ಪ್ರಯತ್ನ ನಡೆಸಿದ್ದರೂ, ಸಾಧ್ಯವಾಗುತ್ತಿಲ್ಲ. ರಸ್ತೆಯಲ್ಲಿ ಯಾವುದೇ ವಾಹನ ಸಂಚಾರವಿಲ್ಲ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ಶ್ರೀಲಂಕಾ ಸ್ಫೋಟದಲ್ಲಿ ಮಂಗಳೂರು ಮಹಿಳೆ ಸಾವು

Posted: 21 Apr 2019 05:26 AM PDT

ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಮಂಗಳೂರಿನ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ರಝೀನಾ ಮೃತಪಟ್ಟ ಮಹಿಳೆ ಎಂದು ಹೇಳಲಾಗಿದೆ. ಪತಿಯೊಂದಿಗೆ ಲಂಕಾ ಪ್ರವಾಸಕ್ಕೆ ತೆರಳಿದ್ದ ಅವರು ಹೋಟೆಲ್ ನಲ್ಲಿ ತಂಗಿದ್ದರು. ಈಸ್ಟರ್ ಹಬ್ಬದ ದಿನವೇ ಚರ್ಚ್ ಮತ್ತು ಹೋಟೆಲ್ ಗುರಿಯಾಗಿಸಿಕೊಂಡು 8 ಕಡೆಗಳಲ್ಲಿ ಸರಣಿ ಸ್ಪೋಟ ನಡೆಸಲಾಗಿದ್ದು, ಈ ವೇಳೆ ರಝೀನಾ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಸರಣಿ ಬಾಂಬ್ ಸ್ಪೋಟದಲ್ಲಿ 180 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 500 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಚುನಾವಣೆ ಹೊತ್ತಲ್ಲೇ ಮತ್ತೆ ಕೇಳಿ ಬಂದ ಮಾತು – ನಾನೂ ಸಿಎಂ ಆಗ್ತೀನಿ

Posted: 21 Apr 2019 05:12 AM PDT

ರಾಜ್ಯದಲ್ಲಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಹೆಚ್.ಡಿ. ಕುಮಾರಸ್ವಾಮಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲೋಕಸಭೆ ಚುನಾವಣೆಯ ವೇಳೆಯಲ್ಲೇ ಸಿಎಂ ಹುದ್ದೆಗೆ ಹಲವರ ಹೆಸರು ಕೇಳಿ ಬಂದಿವೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಲೋಕಸಭೆ ಚುನಾವಣೆ ಬಳಿಕ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿಯ ಹಲವು ನಾಯಕರು ಹಿಂದಿನಿಂದಲೂ ಹೇಳುತ್ತಿದ್ದಾರೆ. ಚುನಾವಣೆ ಪ್ರಚಾರ ಸಭೆಯಲ್ಲಿಯೂ ಹೇಳಿದ್ದಾರೆ.

ಮಾಜಿ ಸಿಎಂ ಸಿದ್ಧರಾಮಯ್ಯ ಅವರೂ ಚುನಾವಣೆ ಪ್ರಚಾರದ ವೇಳೆ ಹಲವು ಬಾರಿ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಜಲ ಸಂಪನ್ಮೂಲ ಖಾತೆ ಸಚಿವ ಡಿ.ಕೆ. ಶಿವಕುಮಾರ್ ಕೂಡ ಸಿಎಂ ಆಗುವ ಮಾತುಗಳನ್ನಾಡಿದ್ದಾರೆ.

ಇದೀಗ ಮತ್ತೊಬ್ಬ ಸಚಿವರು ಸಿಎಂ ಆಗುವ ಆಸೆ ಇದೆ ಎಂದು ತಿಳಿಸಿದ್ದಾರೆ. ಬಬಲೇಶ್ವರ ಪಟ್ಟಣದಲ್ಲಿ ಮಾತನಾಡಿದ ಗೃಹ ಸಚಿವ ಎಂ.ಬಿ. ಪಾಟೀಲ್, ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ. ಆದರೆ, ದುರಾಸೆ ಇಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯನವರ ನಂತರ ನನ್ನ ಸರದಿ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಜನ ಪರ ಕೆಲಸ ಮಾಡಿದ್ದಾರೆ. ಆದರೆ, ಬಹುಮತ ಬರಲಿಲ್ಲ. ಜನರ ತೀರ್ಪನ್ನ ಒಪ್ಪಿಕೊಂಡಿದ್ದೇವೆ. ಸಿದ್ದರಾಮಯ್ಯ ನನಗಿಂತ ಹಿರಿಯರು. ಅವರು ಮತ್ತೊಮ್ಮೆ ಸಿಎಂ ಆದ ಮೇಲೆ ನನ್ನ ಸರದಿ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಏಪ್ರಿಲ್ 23 ರಂದು ಮತದಾನ, 14 ಕ್ಷೇತ್ರಗಳಲ್ಲಿ ‘ಸರ್ಕಾರಿ ರಜೆ’ ಘೋಷಣೆ

Posted: 21 Apr 2019 05:04 AM PDT

ಬೆಂಗಳೂರು: ರಾಜ್ಯದಲ್ಲಿ 2 ನೇ ಹಂತದ ಲೋಕಸಭೆ ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ಮತದಾನ ನಡೆಯಲಿದ್ದು, ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಈ ಕುರಿತು ಮಾಹಿತಿ ನೀಡಿದ್ದು, ಏಪ್ರಿಲ್ 23 ರಂದು 14 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದ್ದು, ಖಾಸಗಿ ಸಂಸ್ಥೆಗಳು ಕೂಡ ಕಡ್ಡಾಯವಾಗಿ ರಜೆ ನೀಡಬೇಕಿದೆ ಎಂದು ತಿಳಿಸಿದ್ದಾರೆ.

ಏಪ್ರಿಲ್ 23 ರಂದು ಬೆಳಿಗ್ಗೆ 7 ರಿಂದ 6 ಗಂಟೆಯವರೆಗೆ ಮತದಾನ ನಡೆಯಲಿದೆ. 2 ನೇ ಹಂತದ ಚುನಾವಣೆಯಲ್ಲಿ 31 ಕೋಟಿ ರೂ. ಸೀಜ್ ಮಾಡಲಾಗಿದೆ. ಶಿವಮೊಗ್ಗದಲ್ಲಿ 8.70 ಕೋಟಿ ರೂ. ನಗದು ಜಪ್ತಿ ಮಾಡಲಾಗಿದೆ. 37 ಕೋಟಿ ರೂ. ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದೆ. ಮತದಾನಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ನಿಖಿಲ್ ಸೋತ್ರೆ ರಾಜಕೀಯ ನಿವೃತ್ತಿ

Posted: 21 Apr 2019 04:52 AM PDT

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋತರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸಚಿವ ಪುಟ್ಟರಾಜು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ತಿರುಗಾಡಿ ಬಂದಿದ್ದು, ಯಾವುದೇ ಭಯವಿಲ್ಲ ಅವರು ಗೆಲ್ಲಲಿದ್ದಾರೆ ಎಂದು ಪುಟ್ಟರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನಿಷ್ಠ 2.5 ಲಕ್ಷ ಲೀಡ್ ನಲ್ಲಿ ಅವರು ಜಯಗಳಿಸಲಿದ್ದಾರೆ. ಒಂದು ವೇಳೆ ಅವರು ಗೆಲ್ಲದಿದ್ದರೆ, ರಾಜಕೀಯ ನಿವೃತ್ತಿ ಪಡೆಯುವುದಾಗಿ ತಿಳಿಸಿದ್ದು, ಇದಕ್ಕೆ ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್, ಆ ದಿನಕ್ಕಾಗಿ ಕಾಯುತ್ತೇವೆ ಎಂದು ಹೇಳಿದ್ದಾರೆ.

ಎಚ್ಚರ…! ‘ಬಡತನ’ಕ್ಕೆ ಕಾರಣವಾಗಬಹುದು ಮನೆಯಲ್ಲಿನ ನಲ್ಲಿ

Posted: 21 Apr 2019 03:56 AM PDT

ಆರ್ಥಿಕ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ನೀವು ಬಯಸಿದ್ದರೆ ನಿಮ್ಮ ಮನೆಯ ಟ್ಯಾಪ್ ಬಗ್ಗೆ ಗಮನ ನೀಡಿ. ನಿಮ್ಮ ಮನೆಯ ಯಾವುದಾದ್ರೂ ಟ್ಯಾಪ್ ನಲ್ಲಿ ಬಂದ್ ಮಾಡಿದ ನಂತ್ರವೂ ನೀರು ಬರ್ತಿದ್ದರೆ ಅಥವಾ ಟ್ಯಾಪ್ ಸರಿಯಾಗಿ ಬಂದ್ ಆಗುತ್ತಿಲ್ಲವೆಂದಾದ್ರೆ ಮುಂದೆ ದೊಡ್ಡ ಸಮಸ್ಯೆ ಕಾದಿದೆ ಎಂದೇ ಅರ್ಥ.

ಅಡುಗೆ ಮನೆ, ಬಾತ್ ರೂಂ ಅಥವಾ ಮನೆಯ ಯಾವುದೇ ಜಾಗದಲ್ಲಿರುವ ಟ್ಯಾಪ್ ನಲ್ಲಿ ನೀರು ಜಿನುಗುತ್ತಿದೆ ಎಂದಾದಲ್ಲಿ ವಾಸ್ತು ಪ್ರಕಾರ ಅದು ಅಶುಭ. ವಾಸ್ತು ಹಾಗೂ ಫೆಂಗ್ ಶೂಯಿ ಪ್ರಕಾರ ಮನೆಯ ಯಾವುದೇ ಟ್ಯಾಪ್ನಲ್ಲಿ ವ್ಯರ್ಥವಾಗಿ ನೀರು ಬರುತ್ತಿದ್ದರೆ ಅದ್ರಿಂದ ಖರ್ಚು ಹೆಚ್ಚಾಗಲಿದೆ ಎಂದೇ ಅರ್ಥ.

ಅದ್ರಲ್ಲೂ ಅಡುಗೆ ಮನೆಯ ಟ್ಯಾಪ್ ನಲ್ಲಿ ನೀರು ತೊಟ್ಟಿಕ್ಕುತ್ತಿದ್ದರೆ ಇದನ್ನು ಅಶುಭವೆಂದು ಪರಿಗಣಿಸಲಾಗಿದೆ. ಇದು ನಿಮ್ಮನ್ನು ಬಡತನಕ್ಕೆ ನೂಕಲಿದೆ. ಅಡುಗೆ ಮನೆಯಲ್ಲಿ ಅಗ್ನಿ ವಾಸವಾಗಿರುತ್ತಾನೆ. ಬೆಂಕಿ ಹಾಗೂ ನೀರು ಒಟ್ಟಿಗೆ ಇದ್ದರೆ ರೋಗ, ಸಮಸ್ಯೆ ಹಾಗೂ ವ್ಯರ್ಥ ಖರ್ಚು ಹೆಚ್ಚಾಗಲಿದೆ ಎಂದೇ ಅರ್ಥ.

ವರುಣ ದೇವನ ದೋಷವೂ ಅಂಟಿಕೊಳ್ಳುತ್ತದೆ. ಶಾಸ್ತ್ರಗಳಲ್ಲಿಯೂ ನೀರಿಗೆ ದೇವರ ಸ್ಥಾನ ನೀಡಲಾಗಿದೆ. ಇದಿಲ್ಲದೆ ಯಾವುದೇ ಪ್ರಾಣಿ ಬದುಕಲು ಸಾಧ್ಯವಿಲ್ಲ. ನೀರನ್ನು ಅವಮಾನಿಸಿದ್ರೆ ಯಾವುದೇ ದೇವರ ಅನುಗ್ರಹ ಪಡೆಯಲು ಸಾಧ್ಯವಿಲ್ಲ. ವಾಸ್ತು ಪ್ರಕಾರ, ಟ್ಯಾಪ್ ನಲ್ಲಿ ಹರಿಯುವ ವ್ಯರ್ಥ ನೀರು ಮನೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮನೆಯ ಟ್ಯಾಪ್ ನಲ್ಲಿ ಯಾವ ರೀತಿ ನೀರು ಹರಿಯುತ್ತದೆಯೋ ಅದೇ ರೀತಿ ಮನೆಯಲ್ಲಿರುವ ಹಣ ಹರಿದು ಹೋಗುತ್ತದೆ. ಒಂದು ವೇಳೆ ಮನೆಯ ಟ್ಯಾಪ್ ನಲ್ಲಿ ನೀರು ತೊಟ್ಟಿಕ್ಕಲು ಶುರುವಾಗಿದ್ದರೆ ತಕ್ಷಣ ಹೊಸ ನಲ್ಲಿ ತಂದು ಜೋಡಿಸಿ.

ಗರ್ಭಿಣಿ ಬಳಿ ಸೆಕ್ಸ್ ಗೆ ಕಾಮುಕನ ಬೇಡಿಕೆ, ಆಮೇಲೇನಾಯ್ತು ಗೊತ್ತಾ…?

Posted: 21 Apr 2019 02:58 AM PDT

ಅಹಮದಾಬಾದ್: ಜುಹಾಪುರ ಪ್ರದೇಶದಲ್ಲಿ ಮನೆಗೆ ನುಗ್ಗಿದ 40 ವರ್ಷದ ವ್ಯಕ್ತಿಯೊಬ್ಬ ಲೈಂಗಿಕ ಕ್ರಿಯೆ ನಡೆಸುವಂತೆ 24 ವರ್ಷದ ಮಹಿಳೆಗೆ ಬಲವಂತ ಮಾಡಿದ್ದಾನೆ.

ಸೆಕ್ಸ್ ಮಾಡದಿದ್ದರೆ ಕಾಯಿಲೆಗೆ ತುತ್ತಾಗುವುದಾಗಿ ವೈದ್ಯರು ಹೇಳಿದ್ದಾರೆ. ನನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸು ಎಂದು ಆತ ಮನೆಯಲ್ಲಿದ್ದ ಮಹಿಳೆಗೆ ಬಲವಂತ ಮಾಡಿದ್ದಾನೆ ಎನ್ನಲಾಗಿದೆ.

ಪತಿ ಕೆಲಸಕ್ಕೆ ತೆರಳಿದ ಬಳಿಕ ಮಹಿಳೆ ಮನೆಯಲ್ಲಿ ಇದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಮನೆಯೊಳಗೆ ಪ್ರವೇಶಿಸಿದ್ದು, ನೀನು ಸುಂದರವಾಗಿದ್ದೀಯಾ, ನಿನ್ನಂತಹ ಹುಡುಗಿ ಮದುವೆಯಾಗಲು ಬಯಸುತ್ತೇನೆ ಎಂದು ಹೇಳಿದ್ದಾನೆ. ಅಲ್ಲದೆ, ನನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸು ಎಂದು ಬಲವಂತ ಮಾಡಿದ್ದಾನೆ. ಲೈಂಗಿಕ ಕ್ರಿಯೆ ನಡೆಸದಿದ್ದರೆ ಅನಾರೋಗ್ಯಕ್ಕೆ ತುತ್ತಾಗುವುದಾಗಿ ವೈದ್ಯರು ಹೇಳಿರುವ ಕಾರಣ ಲೈಂಗಿಕ ಕ್ರಿಯೆ ನಡೆಸಬೇಕೆಂದು ಒತ್ತಾಯಪಡಿಸಿದ್ದಾನೆ.

ಆದರೆ, ಇದಕ್ಕೆ ಮಹಿಳೆ ಒಪ್ಪದೆ, ನಾನು ಗರ್ಭಿಣಿಯಾಗಿದ್ದು, ದಯವಿಟ್ಟು ನನ್ನನ್ನು ಬಿಟ್ಟು ಬಿಡಿ. ನನಗೂ ನಿಮಗೂ ವಯಸ್ಸಿನ ಅಂತರವಿದೆ ಎಂದು ಕೇಳಿಕೊಂಡು ಕಾಮುಕನಿಂದ ಬಚಾವಾಗಿದ್ದಾರೆ. ಬಳಿಕ ಆಕ್ರೋಶದಿಂದ ಬೈದಾಡಿದ ಬಳಿಕ ಆತ ಮನೆಯಿಂದ ತೆರಳಿದ್ದಾನೆ ಎನ್ನಲಾಗಿದೆ. ಮಹಿಳೆ ವೇಜಲ್ ಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಮನೆ ಮಾಡಿನ ಮೇಲೇರಿದ ಹೆಬ್ಬಾವು ನೋಡಲು ಜನಜಂಗುಳಿ

Posted: 21 Apr 2019 02:56 AM PDT

ಹೆಬ್ಬಾವೊಂದು ಮನೆ ಮಾಡಿನ ಮೇಲೇರಿದ್ದು, ಆ ಮನೆಯ ಮುಂದೆ ಜನ ಜಮಾಯಿಸಿದ ಪ್ರಸಂಗವೊಂದು ವರದಿಯಾಗಿದೆ. ಡೆಟ್ರಾಯಿಟ್‍ನ ಈಸ್ಟ್ ಸೆವೆನ್ ಮೈಲ್ ಎಂಬಲ್ಲಿ ಗುರುವಾರ ಈ ದೃಶ್ಯ ಕಾಣಸಿಕ್ಕಿದೆ.

ನಾಯಿ ಕೂಗಾಡಿದ್ದರಿಂದ ವಿಚಲಿತಗೊಂಡ ಈ 18 ಅಡಿ ಉದ್ದದ ಹೆಬ್ಬಾವು ಮನೆಯ ಮಾಡಿನ ಮೇಲೇರಿತ್ತು. ನಾಯಿಯ ಕೂಗು ಹಾಗೂ ಮಾಡಿನ ಮೇಲಿನ ಹೆಬ್ಬಾವು ಜನರ ಗಮನವನ್ನು ಸೆಳೆದಿದ್ದರಿಂದ ಮನೆ ಮುಂದೆ ಜನಜಂಗುಳಿ ಏರ್ಪಟ್ಟಿತ್ತು.

ವಿಷಯ ತಿಳಿದ ಮಾಲೀಕ ಡೆವಿನ್ ಜೋನ್ಸ್ ವೈಟ್ ತಕ್ಷಣ ಮನೆಗೆ ಬಂದು ಹಾವನ್ನು ಪಂಜರದೊಳಕ್ಕೆ ಹೋಗುವಂತೆ ಮಾಡಿದರು. ಇಲಿಗಳನ್ನಷ್ಟೇ ತಿಂದು ಬದುಕುವ ವಿಶೇಷವಾದ ಈ ಹೆಬ್ಬಾವನ್ನು ಐದು ವರ್ಷಗಳ ಹಿಂದೆ ಡೆವಿನ್ ಬೇರೊಬ್ಬರಿಂದ ಪಡೆದು ತಂದು ಮನೆಯಲ್ಲಿ ಸಾಕಿಕೊಂಡಿದ್ದಾರೆ.

 

A python snake on top of the garage

Posted by Latonda Harvey on Thursday, April 18, 2019

ಸಾಧ್ವಿ ಪ್ರಜ್ಞಾ ಸಿಂಗ್‍ ಗೆ ಚುನಾವಣಾ ಆಯೋಗದ ನೊಟೀಸ್‍

Posted: 21 Apr 2019 02:35 AM PDT

ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿರುವ ಬಿಜೆಪಿಯ ಭೂಪಾಲ್‍ ಲೋಕಸಭಾ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‍ ಠಾಕೂರ್ ಗೆ ಚುನಾವಣಾ ಆಯೋಗ ಇದೀಗ ಮತ್ತೊಂದು ನೊಟೀಸ್ ನೀಡಿದೆ.

1992 ರ ಬಾಬ್ರಿ ಮಸೀದಿ ಧ್ವಂಸ ಮಾಡಿದ್ದರ ಬಗ್ಗೆ ಹೆಮ್ಮೆಯಿದೆ ಅಂತಾ ಹೇಳಿ ಸಾಧ್ವಿ ಪ್ರಜ್ಞಾ ಸಿಂಗ್‍ ಮತ್ತೊಂದು ವಿವಾದ ಎಬ್ಬಿಸಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಸಾದ್ವಿ ಬಾಬ್ರಿ ಮಸೀದಿ ನಾಶಗೊಳಿಸಿದ್ದಕ್ಕೆ ಯಾಕೆ ಬೇಸರ ಪಡಬೇಕು..? ಅಷ್ಟಕ್ಕೂ ಅದ್ರಲ್ಲಿ ತಪ್ಪೇನಿದೆ..? ಬಾಬ್ರಿ ಮಸೀದಿ ಧ್ವಂಸಗೊಂಡಿದ್ದರಿಂದ ನಮ್ಮ ದೇಶದಕ್ಕೆ ಅಂಟಿದ್ದ ದೋಷ ತೊಳೆದು ಹೋಗಿದೆ. ಇದು ಹೆಮ್ಮೆ ಪಡುವ ವಿಚಾರ. ಅಲ್ಲಿ ರಾಮಮಂದಿರ ನಿರ್ಮಿಸುತ್ತೇವೆ ಎಂದಿದ್ದಾರೆ.

ಸಾಧ್ವಿ ಪ್ರಜ್ಞಾ ಸಿಂಗ್ ಅವರ ಹೇಳಿಕೆಗೆ ಚುನಾವಣಾ ಆಯೋಗ ಆಕ್ರೋಶ ವ್ಯಕ್ತಪಡಿಸಿದ್ದು, ಅವರಿಗೆ ನೊಟೀಸ್ ಜಾರಿ ಮಾಡಿದೆ.

ಹಿಂದೆ ಕೆಲಸ ಮಾಡಿದ್ದ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿ ಗೌಪ್ಯ ಪ್ರಚಾರ

Posted: 21 Apr 2019 02:34 AM PDT

ಕಲಬುರಗಿ: ಕಲಬುರಗಿಗೆ ಆಗಮಿಸಿರುವ ಬೆಂಗಳೂರಿನ ಪೊಲೀಸ್ ಅಧಿಕಾರಿಯೊಬ್ಬರು ಕಾಂಗ್ರೆಸ್ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಬೆಂಗಳೂರಿನ ಡಿಸಿಪಿಯೊಬ್ಬರು ಕಲಬುರಗಿಯಲ್ಲಿ ಗೌಪ್ಯವಾಗಿ ಕಾಂಗ್ರೆಸ್ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಅವರು, ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಈ ಹಿಂದೆ ಕಲಬುರ್ಗಿಯಲ್ಲಿ ಪೊಲೀಸ್ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಅವರು ಪ್ರಸ್ತುತ ಬೆಂಗಳೂರಿನಲ್ಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅವರು ಇಲ್ಲಿಗೆ ಆಗಮಿಸಿ, ಕಾಂಗ್ರೆಸ್ ಪರವಾಗಿ ಮತ ಹಾಕುವಂತೆ ಪರಿಚಯಸ್ಥರಿಗೆ ಹೇಳುತ್ತಿದ್ದಾರೆ. ಕಾಂಗ್ರೆಸ್ ಪರವಾಗಿ ಗೌಪ್ಯವಾಗಿ ಪ್ರಚಾರ ನಡೆಸುತ್ತಿದ್ದಾರೆ ಎಂದು ದೂರು ನೀಡಲಾಗಿದೆ.

ಮತ್ತೊಂದು ಬಾಂಬ್ ಸ್ಪೋಟ, ಏರುತ್ತಲೇ ಇದೆ ಸಾವಿನ ಸಂಖ್ಯೆ

Posted: 21 Apr 2019 02:33 AM PDT

ಶ್ರೀಲಂಕಾದ ಕೊಲೊಂಬೊದಲ್ಲಿ ಮತ್ತೊಂದು ಬಾಂಬ್ ಸ್ಫೋಟವಾಗಿದ್ದು, ಉಗ್ರರ ಅಟ್ಟಹಾಸಕ್ಕೆ ಇಬ್ಬರು ಬಲಿಯಾಗಿದ್ದಾರೆ.

25 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಿವಾಲದಲ್ಲಿರುವ ಹೋಟೆಲ್ ನಲ್ಲಿ ಉಗ್ರರು ಬಾಂಬ್ ಸ್ಫೋಟಿಸಿದ್ದು, ಲಂಕಾದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇದುವರೆಗೆ 7 ಕಡೆ ನಡೆದ ಸರಣಿ ಸ್ಫೋಟಗಳಲ್ಲಿ 160 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. 400 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಭಾನುವಾರ ಬೆಳಿಗ್ಗೆ ಶ್ರೀಲಂಕಾದಲ್ಲಿ ಚರ್ಚ್ ಹಾಗೂ ಹೋಟೆಲ್ ಗಳನ್ನು ಗುರಿಯಾಗಿಸಿಕೊಂಡು ಸರಣಿ ಬಾಂಬ್ ಸ್ಫೋಟಿಸಲಾಗಿದೆ. ಈಸ್ಟರ್ ಹಬ್ಬದ ವೇಳೆ ಹೆಚ್ಚಿನ ಜನ ಸೇರಿದ ಸಂದರ್ಭದಲ್ಲಿ ಬಾಂಬ್ ಸ್ಫೋಟಿಸಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಅದೇ ರೀತಿ ವಿವಿಧೆಡೆ ಅಡಗಿಸಿಡಲಾದ ಬಾಂಬ್ ಗಳು ಸ್ಪೋಟಿಸುತ್ತಿದ್ದು, ಅಂತಹ ಬಾಂಬ್ ನಿಷ್ಕ್ರಿಯಗೊಳಿಸಲು ಕಾರ್ಯಾಚರಣೆ ನಡೆಸಲಾಗಿದೆ.

‘ಕಾಮಸೂತ್ರ’ದ ನಟಿ ಸೈರಾ ಖಾನ್ ಇನ್ನಿಲ್ಲ

Posted: 21 Apr 2019 02:11 AM PDT

‘ಕಾಮಸೂತ್ರ 3ಡಿ’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ನಟಿ ಸೈರಾ ಖಾನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ವಿಚಾರವನ್ನು ಚಿತ್ರದ ನಿರ್ದೇಶಕ ರೂಪೇಶ್ ಪೌಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ ಹೃದಯಾಘಾತಕ್ಕೊಳಗಾದ ಸೈರಾ ಖಾನ್ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಅವರು ನಿಧನರಾಗಿದ್ದರೆಂದು ಹೇಳಲಾಗಿದೆ.

ಸೈರಾ ಖಾನ್ ನಿಧನಕ್ಕೆ ಚಿತ್ರರಂಗದ ಮಂದಿ ಪ್ರತಿಕ್ರಿಯೆ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರೂಪೇಶ್ ಪೌಲ್, ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

2013 ರಲ್ಲಿ ಬಿಡುಗಡೆಯಾದ ‘ಕಾಮಸೂತ್ರ 3 ಡಿ’ ಚಿತ್ರದಲ್ಲಿ ನಟಿ ಶರ್ಲಿನ್ ಚೋಪ್ರಾ ಅಭಿನಯಿಸಬೇಕಾಗಿತ್ತಾದರೂ ಬಳಿಕ ಅವರ ಸ್ಥಾನಕ್ಕೆ ಸೈರಾ ಖಾನ್ ಅವರನ್ನು ಕರೆ ತರಲಾಗಿತ್ತು.

‘ನಾವು ಒಂದಾಗಿದ್ದಕ್ಕೆ ಬಿಜೆಪಿಗೆ ಭಯವಾಗಿದೆ’

Posted: 21 Apr 2019 01:56 AM PDT

ಶಿವಮೊಗ್ಗ: ಮಾಜಿ ಶಾಸಕ ಅಪ್ಪಾಜಿ ಗೌಡ, ನಾನು ಒಂದಾಗಿದ್ದಕ್ಕೆ ಬಿಜೆಪಿಗೆ ಭಯ ಶುರುವಾಗಿದೆ ಎಂದು ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಹೇಳಿದ್ದಾರೆ.

ಬಿಜೆಪಿಗೆ ಭಯವಾಗಿರುವುದರಿಂದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ನಡೆಸಿದ್ದಾರೆ. ಯಡಿಯೂರಪ್ಪ ವೀರಶೈವ ಮುಖಂಡರ ಸಭೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಭದ್ರಾವತಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಹೆಚ್ಚಿನ ಮತ ಪಡೆಯುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಮಾತ್ರ ಎಲ್ಲಾ ಅಭ್ಯರ್ಥಿಗಳಿಗಿಂತ ಬಿಜೆಪಿ ಅಭ್ಯರ್ಥಿಗಳಿಗೆ ಹೆಚ್ಚಿನ ಮತ ಬರುತ್ತದೆ. ಶಾಸಕ ಬಿ.ಕೆ. ಸಂಗಮೇಶ್ ಮತ್ತು ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಗೌಡ ಅವರನ್ನು ಒಂದಾಗಿಸಿದ ಸಚಿವ ಡಿ.ಕೆ. ಶಿವಕುಮಾರ್ ಭಿನ್ನಾಭಿಪ್ರಾಯ ಬದಿಗಿಟ್ಟು ಒಟ್ಟಿಗೆ ಕೆಲಸ ಮಾಡುವಂತೆ ತಾಕೀತು ಮಾಡಿದ್ದರು. ಅಂತೆಯೇ ಸಂಗಮೇಶ್ ಮತ್ತು ಅಪ್ಪಾಜಿ ಜಂಟಿ ಪ್ರಚಾರ ನಡೆಸಿದ್ದು, ಈ ಬಾರಿ ಮೈತ್ರಿಕೂಟದ ಅಭ್ಯರ್ಥಿಗೆ ಹೆಚ್ಚಿನ ಮತ ತಂದುಕೊಡುವ ವಿಶ್ವಾಸದಲ್ಲಿದ್ದಾರೆ.

ಮೋದಿ ಇತಿಹಾಸ ತಿಳಿದುಕೊಂಡು ಮಾತನಾಡಲಿ ಎಂದು ಹೇಳಿದ ಸಿದ್ದು

Posted: 21 Apr 2019 01:45 AM PDT

ಬಾಗಲಕೋಟೆ: ನಾನು ಸಿಎಂ ಆಗಿದ್ದಾಗ 160 ಭರವಸೆ ಈಡೇರಿಸಿದ್ದೇನೆ. ಪ್ರಧಾನಿ ಮೋದಿಗೆ ಧಮ್ ಇದ್ದರೆ ಯಾವ ಭರವಸೆ ಈಡೇರಿಸಿದ್ದಾರೆ ಎಂಬುದನ್ನು ಹೇಳಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಬಾಗಲಕೋಟೆ ಜಿಲ್ಲೆ ಹುನಗುಂದ ಪಟ್ಟಣದಲ್ಲಿ ದೋಸ್ತಿ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಪ್ರಚಾರ ನಡೆಸಿದ ಅವರು, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆಗೆ ಬಂದಾಗ ಬಡವರ ಬಗ್ಗೆ ಮೋದಿ ಮಾತನಾಡಲಿಲ್ಲ. ಬಾಗಲಕೋಟ್ ಬಾಲಾಕೋಟ್ ಎಂದು ಹೇಳಿ ಹೋದರು. ಅವರು 5 ವರ್ಷದಲ್ಲಿ ಏನು ಕೆಲಸ ಮಾಡಿದ್ದಾರೆ ಎಂಬುದನ್ನು ಹೇಳಲಿಲ್ಲ ಎಂದು ಟೀಕಿಸಿದ್ದಾರೆ.

ಬಾಗಲಕೋಟೆಗೆ ಬಂದು ರೈತರ ಬಗ್ಗೆ, ಬರಗಾಲದ ಬಗ್ಗೆ, ರೈತರ ಸಾಲಮನ್ನಾ, ಮಹಿಳೆಯರು, ಬಡತನದ ಬಗ್ಗೆ ಮಾತನಾಡಲಿಲ್ಲ. ಸ್ವಾತಂತ್ರ್ಯ ಹೋರಾಟದ ವೇಳೆ ನರೇಂದ್ರ ಮೋದಿ ಹುಟ್ಟಿರಲಿಲ್ಲ. ದೇಶಭಕ್ತಿ ಬಗ್ಗೆ ಮಾತನಾಡುತ್ತಾರೆ. ದೇಶಕ್ಕಾಗಿ ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಪ್ರಾಣ ತೆತ್ತಿದ್ದಾರೆ ಎಂದು ಹೇಳಿದ್ದಾರೆ.

ಪುಲ್ವಾಮಾ ದಾಳಿಯ ಬಳಿಕ ಏರ್ ಸ್ಟ್ರೈಕ್ ಮಾಡಿದೆ ಎಂದು ಮೋದಿ ಹೇಳುತ್ತಾರೆ. ಅದು ಭಾರತೀಯ ಸೇನೆ ಮಾಡಿದ್ದು. ಆದರೆ, ಇವರೇ ಗನ್ ತೆಗೆದುಕೊಂಡು ಯುದ್ಧ ಮಾಡಲು ಹೋಗಿದ್ದರೆನ್ನುವಂತೆ ಹೇಳುತ್ತಾರೆ. ಭಾರತೀಯ ಸೈನಿಕರಿಗೆ ಸೆಲ್ಯೂಟ್ ಹೊಡೆಯುತ್ತೇವೆ. ವಾಜಪೇಯಿ ಲೋಕಸಭೆಯಲ್ಲಿ ಇಂದಿರಾಗಾಂಧಿಯವರನ್ನು ದುರ್ಗಾ ಎಂದು ಹೊಗಳಿದ್ದರು. ಮೋದಿ ಇತಿಹಾಸ ತಿಳಿದುಕೊಂಡು ಬಾ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಮೌನ ವಹಿಸಿರುವ ಬೆಂಗಳೂರಿಗರ ಮೇಲೆ ಕಿಡಿಕಾರಿದ ಯೋಗರಾಜ್‍ ಭಟ್‍….!

Posted: 21 Apr 2019 01:42 AM PDT

ರಾಯಚೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಕನ್ನಡ ಚಿತ್ರರಂಗವೇ ಸ್ಪಂದಿಸುತ್ತಿದೆ. ಆದ್ರೆ ನಟ ನಿರ್ದೇಶಕ ಯೋಗರಾಜ್‍ ಭಟ್‍ ಬೆಂಗಳೂರಿಗರ ಮೇಲೆ ಸ್ವಲ್ಪ ಖಾರವಾಗಿಯೇ ಟ್ವಿಟ್‍ ಮಾಡಿದ್ದಾರೆ.

ವಿದ್ಯಾರ್ಥಿನಿ ಮಧು ಸಾವನ್ನು ಖಂಡಿಸಿರುವ ಯೋಗರಾಜ್‍ ಭಟ್‍, ಮೃತಳ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ದೆಹಲಿಯಲ್ಲಿ ನಿರ್ಭಯ ಪ್ರಕರಣವಾದಾಗ ಇಡೀ ದೇಶವೇ ಎದ್ದು ನಿಂತಿತ್ತು. ಆದ್ರೆ ಮಧು ಪ್ರಕರಣದಲ್ಲೀಗ ಬೆಂಗಳೂರು ಮಲಗಿದೆ ಅಂತಾ ಕಿಡಿಕಾರಿದ್ದಾರೆ.

ಇದಕ್ಕೆ ಕಾರಣ ಬೆಂಗಳೂರಿಗರು ಮಧು ಪ್ರಕರಣದ ಬಗ್ಗೆ ಚಕಾರವೆತ್ತದೇ ಇರೋದು. ಮತದಾನದಲ್ಲಿ ಜನ ಮಗ್ನರಾಗಿದ್ದಾರಾ ಅಂದ್ರೆ, ಸಿಲಿಕಾನ್‍ ಸಿಟಿಯಲ್ಲಿ ಮತದಾನವಾಗಿದ್ದೇ ಶೇ 45 ರಷ್ಟು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಡವಾದ್ರೂ ಪರವಾಗಿಲ್ಲ.ಮುಗ್ದ ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಕೊಲೆಯಂತಹ ಪ್ರಕರಣಕ್ಕೆ ಪ್ರತಿಕ್ರಿಯಿಸಿ ಅಂತಾ ನಿರ್ದೇಶಕ ಯೋಗರಾಜ್‍ ಭಟ್‍ ಟ್ವಿಟ್‍ ಮೂಲಕ ಕರೆ ನೀಡಿದ್ದಾರೆ.

ಮಾನವೀಯತೆ ಮರೆತ ಕನಕಗಿರಿಯ ಬಿಜೆಪಿ ಶಾಸಕ…!

Posted: 21 Apr 2019 01:39 AM PDT

ಚುನಾವಣೆ ಪ್ರಚಾರದ ಅಬ್ಬರದಲ್ಲಿರುವ ರಾಜಕಾರಣಿಗಳಿಗೆ ಮಾನವೀಯತೆಯೇ ಮರೆತು ಹೋಗಿದಿಯಾ ಎಂಬ ಪ್ರಶ್ನೆ ಎದ್ದಿದೆ. ಕೊಪ್ಪಳದ ಗಂಗಾವತಿ ತಾಲೂಕಿನ ಗುಂಡೂರು ಕ್ರಾಸ್‍ ಬಳಿ ಬೈಕ್‍ ಟೈರ್ ಬ್ಲಾಸ್ಟ್ ಆಗಿ ಮಹಿಳೆಯೊಬ್ಬರಿಗೆ ಅಪಘಾತವಾಗಿತ್ತು.

ಜಾಲಿಹಾಳ ಕ್ಯಾಂಪ್ ನಿಂದ ಶ್ರೀರಾಮನಗರಕ್ಕೆ ಮಹಿಳೆ ತೆರಳುತ್ತಿದ್ದರು. ಆಗ ಮಹಿಳೆಗೆ ಅಪಘಾತವಾಗಿದೆ. ಆದ್ರೆ ಘಟನೆ ವೇಳೆ ಸ್ಥಳದಲ್ಲಿದ್ದ ಕನಕಗಿರಿಯ ಬಿಜೆಪಿ ಶಾಸಕ ಬಸವರಾಜ ದಡೆಸೂಗೂರು, ಮಹಿಳೆಯನ್ನು ಆಸ್ಪತ್ರೆಗೆ ಸೇರಿಸದೆ ಹಾಗೆಯೇ ಪ್ರಚಾರಕ್ಕೆ ತೆರಳಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಕಡ್ ರನೌಟ್‍ ಬಗ್ಗೆ ವೈರಲ್ ಆಗಿದೆ ಕೊಹ್ಲಿ ವಿಡಿಯೋ

Posted: 21 Apr 2019 01:36 AM PDT

ಈ ಬಾರಿಯ ಐಪಿಎಲ್‍ ಸೀಸನ್‍ ನಲ್ಲಿ , ಪಂಜಾಬ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್‍ ಅವರ ಮಂಕಡ್ ರನೌಟ್ ಭಾರಿ ಚರ್ಚೆಗೆ ಕಾರಣವಾಗಿತ್ತು. ಆದ್ರೀಗ ಮಂಕಡ್ ರನೌಟ್‍ ಪ್ರಕರಣದ ಬಗ್ಗೆ ವಿರಾಟ್ ಕೊಹ್ಲಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೋಲ್ಕತ್ತಾ ನೈಟ್‍ ರೈಡರ್ಸ್‍ ವಿರುದ್ಧ ನಡೆದ ಪಂದ್ಯದಲ್ಲಿ 18ನೇ ಓವರ್ ನ ಕೊನೆಯ ಎಸೆತದಲ್ಲಿ ಸುನಿಲ್‍ ನರೈನ್‍, ಬೌಲಿಂಗ್ ಮಾಡದೇ ಮುಂದೆ ಹೋದರು. ಈ ವೇಳೆ ನಾನ್‍ ಸ್ಟ್ರೈಕ್‍ ನಲ್ಲಿದ್ದ ವಿರಾಟ್ ಕೊಹ್ಲಿ ಕುಳಿತುಕೊಂಡು ಬ್ಯಾಟ್‍ ನ್ನು ಕ್ರಿಸ್‍ನಲ್ಲಿ ಇಟ್ಟಿದ್ರು. ಈ ಮೂಲಕ ತಮ್ಮನ್ನು ರನೌಟ್‍ ಮಾಡಲು ಸಾಧ್ಯವಿಲ್ಲ ಎಂಬಂತೆ ತೋರಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್‍ ಆಗಿದೆ.

ಈ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಆರ್.ಸಿ.ಬಿ. ಗೆಲುವು ಸಾಧಿಸಿತ್ತು.

ಏರ್ಪೋರ್ಟ್‍ ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

Posted: 21 Apr 2019 01:33 AM PDT

ದುಬೈ ಏರ್ಪೋರ್ಟ್‍ನಲ್ಲಿ ಭಾರತೀಯ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ದುಬೈನಿಂದ ಭಾರತಕ್ಕೆ ವಾಪಸಾಗುವಾಗ ಮಹಿಳೆಗೆ ವಿಮಾನ ನಿಲ್ದಾಣದಲ್ಲಿ ಪ್ರಸವ ವೇದನೆ ಕಾಣಿಸಿಕೊಂಡಿದೆ. ನೋವಿನಿಂದ ಆಕೆ ನರಳುತ್ತಿದ್ದರೂ, ಸುತ್ತ ನೆರೆದಿದ್ದ ಜನರಿಗೆ ಏನು ಮಾಡಬೇಕು ಅಂತಾ ತಿಳಿಯಲಿಲ್ಲ.

ಸ್ಥಳಕ್ಕಾಗಮಿಸಿದ ಏರ್ಪೋರ್ಟ್‍ ಮಹಿಳಾ ಅಧಿಕಾರಿ ಹನನ್‍ ಹುಸ್ಸೇನ್‍ ಮೊಹಮ್ಮದ್‍ ಮಹಿಳೆಯ ಸಹಾಯಕ್ಕೆ ಬಂದಿದ್ದಾರೆ. ತಕ್ಷಣವೇ ಅಲ್ಲಿಯೇ ಇದ್ದ ತಪಾಸಣಾ ಕೊಠಡಿಗೆ ಕರೆದುಕೊಂಡು ಹೋಗಿ ಮಹಿಳೆಗೆ ಡೆಲವರಿ ಮಾಡಿಸಿದ್ದಾರೆ. ಆದ್ರೆ ಮಗು ಉಸಿರಾಡುತ್ತಿರಲಿಲ್ಲ. ಹೀಗಾಗಿ ತಕ್ಷಣವೇ ತಾಯಿ- ಮಗುವನ್ನು ಆಸ್ಪತ್ರೆಗೆ ಕಳಿಸಲಾಗಿದೆ.

ಆದ್ರೆ ಇಂತಹ ಸಂದಿಗ್ದ ಸಂದರ್ಭದಲ್ಲಿ ಮಹಿಳಾ ಅಧಿಕಾರಿಯ ಸಮಯ ಪ್ರಜ್ಞೆ, ಅವರು ಸಂದರ್ಭವನ್ನು ನಿಭಾಯಿಸಿದ ರೀತಿಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಪುರಸ್ಕರಿಸಲಾಗಿದೆ.

ಹೈವೋಲ್ಟೇಜ್ ಕ್ಷೇತ್ರದಲ್ಲಿ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ ಮಾರಾಮಾರಿ

Posted: 21 Apr 2019 12:53 AM PDT

ಶಿವಮೊಗ್ಗ: ಜಿದ್ದಾಜಿದ್ದಿನ ಕಣವಾಗಿರುವ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಮತ್ತು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ನಡುವೆ ಗೆಲುವಿಗಾಗಿ ತೀವ್ರ ಪೈಪೋಟಿ ನಡೆದಿದ್ದು, ಬೆಂಬಲಿಗರ ಕಾದಾಟವೂ ಜೋರಾಗಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ನೆಲ್ಲಿಬೀಡು ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಈಡಿಗ ಮಠದ ಕಾರ್ಯದರ್ಶಿ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದರೆನ್ನಲಾಗಿದೆ.

ಇದೇ ಮಾರ್ಗವಾಗಿ ಪ್ರಚಾರಕ್ಕೆ ತೆರಳುತ್ತಿದ್ದ ಶಾಸಕ ಹರತಾಳು ಹಾಲಪ್ಪ ರಾಜೀ ಸಂಧಾನ ಮಾಡಿಸಲು ಮುಂದಾಗಿದ್ದಾರೆ. ಆದರೆ, ಮಾತುಕತೆ ನಡೆಯುವ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಹರತಾಳು ಹಾಲಪ್ಪ ಅವರ ಸಮ್ಮುಖದಲ್ಲಿ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಅಪಘಾತದಲ್ಲಿ ಬೈಕ್ ಸವಾರರ ದುರ್ಮರಣ

Posted: 21 Apr 2019 12:38 AM PDT

ತುಮಕೂರು: ಟೆಂಪೋಗೆ ಬೈಕ್ ಡಿಕ್ಕಿಯಾಗಿ ಆಂಧ್ರ ಪ್ರದೇಶದ ಇಬ್ಬರು ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ಪಾವಗಡದ ಹೊರ ವಲಯದಲ್ಲಿ ನಡೆದಿದೆ.

ಆಂಧ್ರ ಮೂಲದ ರಾಮಾಂಜಿ(30) ಮತ್ತು ಪ್ರತಾಪ್(28) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ನಲ್ಲಿ ತೆರಳುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಟೆಂಪೋಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಪಾವಗಡ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾವಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.