Translate

Thursday, March 14, 2019

Kannada News | Karnataka News | India News

Kannada News | Karnataka News | India News


ಸುಖಕರ ‘ಲೈಂಗಿಕ ಜೀವನ’ಕ್ಕೆ ಧ್ಯಾನ ಸಹಕಾರಿ

Posted: 14 Mar 2019 09:23 AM PDT

ಧ್ಯಾನ ನಿಮ್ಮ ಆರೋಗ್ಯದ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ. ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ನೀವು ಸದಾ ಖುಷಿಯಾಗಿರುವಂತೆ ಮಾಡುತ್ತದೆ.

ಪ್ರತಿ ದಿನ ಕೇವಲ 20 ನಿಮಿಷ ಮಾಡುವ ಧ್ಯಾನ ನಿಮ್ಮ ಇಡೀ ದಿನ ಉಲ್ಲಾಸದಿಂದ ಕಳೆಯುವಂತೆ ಮಾಡುತ್ತದೆ. ಧ್ಯಾನವನ್ನು ಯಾವ ಸಮಯದಲ್ಲಿಯಾದ್ರೂ ಮಾಡಬಹುದು. ಆದ್ರೆ ಬೆಳಿಗ್ಗೆ ಮಾಡಿದ್ರೆ ಹೆಚ್ಚು ಲಾಭ ಎಂಬುದು ತಜ್ಞರ ಅಭಿಪ್ರಾಯ.

ವಿಜ್ಞಾನಿಗಳ ಪ್ರಕಾರ ಪ್ರತಿದಿನ ಮಾಡುವ ಧ್ಯಾನ ಲೈಂಗಿಕ ಜೀವನವನ್ನು ಸುಧಾರಿಸಲು ನೆರವಾಗುತ್ತದೆಯಂತೆ. ಈ ಧ್ಯಾನ ಕಾಮೇಚ್ಚೆಯನ್ನು ಹೆಚ್ಚು ಮಾಡುತ್ತದೆಯಂತೆ. ಧ್ಯಾನ ಮನಸ್ಸನ್ನು ಶಾಂತವಾಗಿರಿಸುತ್ತದೆ. ಜೊತೆಗೆ ಏಕಾಗ್ರತೆ ಕೂಡ ಹೆಚ್ಚುತ್ತದೆ.

ಧ್ಯಾನ ಮಾಡುವುದ್ರಿಂದ ದೇಹದಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ. ಇದನ್ನು ಹೆಚ್ಚೆಚ್ಚು ಅಭ್ಯಾಸ ಮಾಡಿದಲ್ಲಿ ರಕ್ತ ಸಂಚಾರ ಮತ್ತಷ್ಟು ಸುಲಭವಾಗುತ್ತದೆ. ಇದು ಲೈಂಗಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ಲೈಂಗಿಕ ಜೀವನದಲ್ಲಿ ಸುಧಾರಣೆಯಾಗುತ್ತದೆ.

ಒತ್ತಡಕ್ಕೆ ಕಾರ್ಟಿಸೋಲ್ ಎಂಬ ಹಾರ್ಮೋನ್ ಕಾರಣ. ಧ್ಯಾನ ಮಾಡಿದಾಗ ಈ ಹಾರ್ಮೋನ್ ಬಿಡುಗಡೆಯಾಗುವುದು ಕಡಿಮೆಯಾಗುತ್ತದೆ. ಇದ್ರಿಂದ ಒತ್ತಡ ಕಡಿಮೆಯಾಗುತ್ತದೆ. ಜೊತೆಗೆ ಕಾಮಾಸಕ್ತಿ ಹೆಚ್ಚಾಗುತ್ತದೆ.

ಧ್ಯಾನ ವಿಶ್ವಾಸವನ್ನು ಹೆಚ್ಚು ಮಾಡುತ್ತದೆ. ಆತ್ಮವಿಶ್ವಾಸವುಳ್ಳ ವ್ಯಕ್ತಿ ಸುಂದರವಾಗಿ ಕಾಣ್ತಾನೆ. ಧ್ಯಾನದಿಂದ ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚಿ, ಸುಂದರವಾಗಿ ಕಾಣುವ ಜೊತೆಗೆ ಸಂತೋಷ ನೆಲೆಸಿರುತ್ತದೆ. ಇದು ಲೈಂಗಿಕ ಜೀವನದ ಮೇಲೂ ಪ್ರಭಾವ ಬೀರುತ್ತದೆ.

ಪಿ.ಹೆಚ್.ಡಿ. ಪದವಿ ಪಡೆದ ಆದಿಚುಂಚನಗಿರಿ ಶ್ರೀಗಳು

Posted: 14 Mar 2019 07:48 AM PDT

ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ. ಪದವಿ ಪಡೆದುಕೊಂಡಿದ್ದಾರೆ.

'ನಾಥ ಸಂಪ್ರದಾಯ: ಒಂದು ಸಾಂಸ್ಕೃತಿಕ ಅಧ್ಯಯನ' ಎಂಬ ಮಹಾಪ್ರಬಂಧವನ್ನು ಮಂಡಿಸಿ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಪಿ.ಹೆಚ್.ಡಿ. ಪದವಿ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.

ಗುಲ್ಬರ್ಗ ವಿಶ್ವವಿದ್ಯಾನಿಲಯದಿಂದ ಪಿ.ಹೆಚ್.ಡಿ. ಪದವಿ ಪಡೆದಿರುವ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರಿಗೆ ನನ್ನ ಗೌರವಪೂರ್ವಕ ಅಭಿನಂದನೆಗಳು. ನಾಥ ಸಂಪ್ರದಾಯ ಕುರಿತ ಮಹಾಪ್ರಬಂಧಕ್ಕೆ ಪಿ.ಹೆಚ್.ಡಿ. ದೊರೆತಿರುವುದರಿಂದ ಅತೀವ ಹರ್ಷವಾಗಿದೆ ಎಂದು ಸಿಎಂ ಹೇಳಿದ್ದಾರೆ.

ಮತ್ತೆ ಮೋದಿಯೇ ಪ್ರಧಾನಿ ಎಂದ್ರು ಹಿರಿಯ ಕಾಂಗ್ರೆಸ್ ನಾಯಕ

Posted: 14 Mar 2019 07:27 AM PDT

ಮಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ತಮಗೆ ಹಲವರು ಒತ್ತಾಯಿಸಿದ್ದು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಟಿಕೆಟ್ ಕೇಳುತ್ತೇನೆ. ಟಿಕೆಟ್ ನೀಡಿದರೆ ಸ್ಪರ್ಧೆ ಮಾಡುತ್ತೇನೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ಧನ ಪೂಜಾರಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಿದ್ರೆ ಸ್ಪರ್ಧಿಸುತ್ತೇನೆ. ಕಾಂಗ್ರೆಸ್ ಪಕ್ಷದ ವತಿಯಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ರಮಾನಾಥ ರೈ, ವಿನಯ ಕುಮಾರ್ ಸೊರಕೆ ಇಲ್ಲವೇ, ಬಿ.ಕೆ. ಹರಿಪ್ರಸಾದ್ ಅವರಿಗೆ ಟಿಕೆಟ್ ಕೊಡಬೇಕು.

ನಾನು ಅವರ ಪರವಾಗಿ ಕೆಲಸ ಮಾಡುತ್ತೇನೆ. ಬೇರೆಯವರಿಗೆ ಟಿಕೆಟ್ ನೀಡಿದರೆ ನಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ತಿಳಿಸಿದ್ದಾರೆ.

ಸದ್ಯಕ್ಕೆ ಮೋದಿ ಅವರನ್ನು ಸೋಲಿಸಲು ಯಾವುದೇ ಪಕ್ಷಕ್ಕೆ ಸಾಧ್ಯವಿಲ್ಲ. ಅವರು ಒಳ್ಳೆಯ ಕೆಲಸ ಮಾಡಿದ್ದು, ಮತ್ತೆ ಪ್ರಧಾನಿಯಾಗಲಿದ್ದಾರೆ. ಒಳ್ಳೆಯ ಕೆಲಸವನ್ನು ಮಾಡಿದ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡುವಲ್ಲಿ ಮುಜುಗರ ಇರಬಾರದು ಎಂದು ಹೇಳಿದ್ದಾರೆ.

ಪತ್ನಿಗೆ ‘ಲೈಂಗಿಕ ಕಿರುಕುಳ’ ನೀಡಿದ್ದ ಈ ಸ್ಟಾರ್ ಕ್ರಿಕೆಟಿಗನಿಗೆ ಸಂಕಷ್ಟ

Posted: 14 Mar 2019 07:04 AM PDT

ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಅವರ ವಿರುದ್ಧ ಚಾರ್ಜ್ ಶೀಟ್ ದಾಖಲಿಸಲಾಗಿದೆ.

ವಿಶ್ವಕಪ್ ಆರಂಭವಾಗುತ್ತಿರುವ ವೇಳೆಯಲ್ಲೇ ಮೊಹಮ್ಮದ್ ಶಮಿ ಅವರಿಗೆ ಹಿನ್ನಡೆಯಾದಂತಾಗಿದೆ. ಕೊಲ್ಕತ್ತಾ ಪೊಲೀಸರು ಐಪಿಸಿ ಸೆಕ್ಷನ್ 498ಎ(ವರದಕ್ಷಿಣೆ ಕಿರುಕುಳ), 354ಎ(ಲೈಂಗಿಕ ಕಿರುಕುಳ) ಪ್ರಕರಣ ಅಡಿ ಚಾರ್ಜ್ ಶೀಟ್ ದಾಖಲಿಸಿದ್ದಾರೆ.

ಜೂನ್ 22 ರಂದು ಮೊಹಮ್ಮದ್ ಶಮಿ ಅವರ ವಿಚಾರಣೆ ನಿಗದಿಯಾಗಿದೆ. ಮೇ 30 ರಿಂದ ಜೂನ್ 14 ರವರೆಗೆ ಏಕದಿನ ವಿಶ್ವಕಪ್ ನಡೆಯಲಿದೆ. ಮೊಹಮ್ಮದ್ ಶಮಿ ಅವರಿಂದ ದೂರವಾಗಿರುವ ಪತ್ನಿ ಹಸೀನ್ ಜಹಾನ್ ನೀಡಿದ್ದ ದೂರಿನ ಮೇರೆಗೆ ಕೋಲ್ಕೊತ್ತಾ ಮಹಿಳಾ ದೂರು ನಿರ್ವಹಣಾ ವಿಭಾಗದ ಪೊಲೀಸರು ಅಲಿಪೋರರ್ ಎಸಿಜೆಎಂ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

ಇದರಲ್ಲಿ ಹತ್ಯೆ ಯತ್ನ ಮತ್ತು ಅತ್ಯಾಚಾರಕ್ಕೆ ಶಿಕ್ಷೆಯಂತಹ ಗಂಭೀರ ಆರೋಪಗಳನ್ನು ಕೈಬಿಡಲಾಗಿದೆ. ಜೊತೆಗೆ ಮೊಹಮದ್ ಶಮಿ ಅವರ ಪೋಷಕರು ಸೇರಿದಂತೆ ಮೂವರು ಕುಟುಂಬ ಸದಸ್ಯರ ಹೆಸರನ್ನು ಕೈಬಿಡಲಾಗಿದೆ. ಕಳೆದ ವರ್ಷ ಮೊಹಮ್ಮದ್ ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಮತ್ತು ಅನೈತಿಕ ಸಂಬಂಧದ ಆರೋಪವನ್ನು ಹಸಿನ್ ಜಹಾನ್ ಹೊರಿಸಿದ್ದರು.

ಬಿಸಿಸಿಐ ಮೊಹಮ್ಮದ್ ಶಮಿ ಅವರ ವಾರ್ಷಿಕ ಗುತ್ತಿಗೆ ಹಿಂಪಡೆದು ತನಿಖೆಯ ಬಳಿಕ ಕ್ಲೀನ್ ಚಿಟ್ ಪಡೆದ ಅವರ ಗುತ್ತಿಗೆಯನ್ನು ನವೀಕರಣ ಮಾಡಲಾಗಿತ್ತು. ಈಗ ಮತ್ತೆ ಸಂಕಷ್ಟ ಎದುರಾಗಿದೆ ಎಂದು ಹೇಳಲಾಗಿದೆ.

ದೇವೇಗೌಡರಿಗೆ ಸಿ.ಟಿ. ರವಿ ಟಾಂಗ್

Posted: 14 Mar 2019 06:49 AM PDT

 ಶಿವಮೊಗ್ಗ: ಜನ ಕಷ್ಟದಲ್ಲಿದ್ದಾಗ ಬಾರದ ಕಣ್ಣೀರು ಮೊಮ್ಮಕ್ಕಳು ಚುನಾವಣೆ ನಿಂತಾಗ ಬಂದಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಟಿ. ರವಿ ಟಾಂಗ್ ಕೊಟ್ಟಿದ್ದಾರೆ.

ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಸನದಲ್ಲಿ ದೇವೇಗೌಡರ ಕುಟುಂಬ ಅತ್ತಿದ್ದಕ್ಕೆ ವ್ಯಂಗ್ಯವಾಡಿದ್ದಾರೆ.

ರೈತ ನಾಯಕ, ಮಣ್ಣಿನ ಮಗ ಎಂದೆಲ್ಲಾ ಟ್ಯಾಗ್ ಲೈನ್ ಇಟ್ಟುಕೊಂಡಿರುವ ದೇವೇಗೌಡರು ಜನ ಕಷ್ಟದಲ್ಲಿದ್ದಾಗ ಕಣ್ಣೀರು ಹಾಕಲಿಲ್ಲ. ಮೊಮ್ಮಕ್ಕಳು ಚುನಾವಣೆಗೆ ನಿಂತಾಗ ಅವರಿಗೆ ಕಣ್ಣೀರು ಬಂದಿದೆ. ಇದು ಅಪಹಾಸ್ಯದ ನಾಟಕವಾಗಿದೆ ಎಂದು ಹೇಳಿದ್ದಾರೆ.

ಯೋಧರು ವೀರಮರಣವನ್ನಪ್ಪಿದ ಸಂದರ್ಭದಲ್ಲಿ ಕಣ್ಣೀರು ಹಾಕಲಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡಾಗಲೂ ಕಣ್ಣೀರು ಹಾಕಲಿಲ್ಲ. ಈಗ ಅತ್ತಿರುವುದು ಅಪಹಾಸ್ಯದ ಹೈಡ್ರಾಮ ಎಂದು ವ್ಯಂಗ್ಯವಾಡಿದ್ದಾರೆ. ದೇವೇಗೌಡರು ಈ ರೀತಿ ನಾಟಕದಿಂದ ಅತ್ತಿರುವುದು ಯಾವ ಕಾರಣಕ್ಕೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದ್ದಾರೆ.

‘ಅಂಬಿ’ ಕುರಿತ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸುಮಲತಾ ಆಕ್ಷೇಪ

Posted: 14 Mar 2019 06:41 AM PDT

ಮಂಡ್ಯ: ಮಾಜಿ ಸಚಿವ, ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅವರ ಕುರಿತಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿರುವುದಕ್ಕೆ ಸುಮಲತಾ ಅಂಬರೀಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಂಬರೀಶ ಅಂತ್ಯಕ್ರಿಯೆ ವಿಚಾರವನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ. ಮಂಡ್ಯದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಸಿಎಂ, ರಕ್ಷಣಾ ಸಚಿವರಿಗೆ ಮನವಿ ಮಾಡಿ ಮಂಡ್ಯಕ್ಕೆ ಅಂಬರೀಶ್ ಅವರ ಪಾರ್ಥಿವ ಶರೀರ ತರಲು ಪ್ರಯತ್ನಿಸಿದ್ದೆ. ಈಗ ಅಂಬರೀಶ್ ಅವರ ಆತ್ಮ ಏನು ಹೇಳುತ್ತದೆ? ನೀವೇ ಯೋಚಿಸಿ. ಅಂಬರೀಶ್ ಅಭಿಮಾನಿಗಳು ನಮ್ಮ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ.

ನನಗೆ ನಿಖಿಲ್ ಬೇರೆಯಲ್ಲ, ಅಂಬರೀಶ್ ಅವರ ಮಗ ಬೇರೆ ಅಲ್ಲ, ಅಂಬರೀಶ್ ನಿಧನದ ಸುದ್ದಿಯನ್ನು ನನಗೆ ನಿಖಿಲ್ ಮೊದಲು ತಿಳಿಸಿದ್ದು ಎಂದು ಸಿಎಂ ಹೇಳಿದ್ದರು.

ಸಿಎಂ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುಮಲತಾ ಅವರು, ಅಂಬರೀಶ್ ಅವರ ಅಂತ್ಯಕ್ರಿಯೆ ವಿಚಾರವನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಆ ಬಗ್ಗೆ ನಾನು ಹೆಚ್ಚು ಏನು ಹೇಳುವುದಿಲ್ಲ ಎಂದು ತಿಳಿಸಿದ್ದಾರೆ.

ಮಲಗುವ ಭಂಗಿ ಹೇಳುತ್ತೆ ನಿಮ್ಮ ‘ವ್ಯಕ್ತಿತ್ವ’

Posted: 14 Mar 2019 06:14 AM PDT

ವ್ಯಕ್ತಿ ಎಚ್ಚರವಿದ್ದಾಗ ಭೌತಿಕ ಶರೀರ ಕೆಲಸ ಮಾಡುತ್ತದೆ. ಆತ/ಆಕೆ ನಿದ್ರೆ ಮಾಡಿದಾಗ ಮನಸ್ಸು ಕೆಲಸ ಮಾಡುತ್ತದೆ. ವ್ಯಕ್ತಿ ಮಲಗುವ ಭಂಗಿ ಅವರ ವ್ಯಕ್ತಿತ್ವವನ್ನು ಹೇಳುತ್ತದೆ.

ನೀವು ಬಲ ಅಥವಾ ಎಡ ಮಗ್ಗಲಿಗೆ ಮಲಗಿದ್ರೆ ಶನಿ ಮತ್ತು ಶುಕ್ರನ ಪ್ರಭಾವ ನಿಮ್ಮ ಮೇಲಿದೆ ಎಂದರ್ಥ. ಇಂಥ ವ್ಯಕ್ತಿಗಳು ಭಾವನಾತ್ಮಕವಾಗಿ ತಮ್ಮನ್ನು ತಾವು ಏಕಾಂಗಿಯೆಂದು ಭಾವಿಸುತ್ತಾರೆ. ಧನ ಹಾಗೂ ಹೆಸರಿನ ವಿಷ್ಯದಲ್ಲಿ ಇಂಥವರು ಭಾಗ್ಯಶಾಲಿಗಳಾಗಿರುತ್ತಾರೆ. ಪ್ರೀತಿ ಹಾಗೂ ಸ್ನೇಹಿತರ ವಿಷ್ಯದಲ್ಲಿ ಜಾಗರೂಕತೆ ಬಹಳ ಮುಖ್ಯ.

ನೀವು ನೇರವಾಗಿ, ಕೈ ಕಾಲುಗಳನ್ನು ಅಗಲಿಸಿ ಮಲಗುವವರಾಗಿದ್ದರೆ ಮಂಗಳ ಅಥವಾ ಸೂರ್ಯನ ಪ್ರಭಾವದಲ್ಲಿದ್ದೀರಿ ಎಂದರ್ಥ. ಪರಿಣಾಮ ಏನೇ ಆಗ್ಲಿ ಒತ್ತಾಯದ ಮೂಲಕ ವಸ್ತುಗಳನ್ನು ಕೊಳ್ಳಲು ಇಂಥ ವ್ಯಕ್ತಿಗಳು ಬಯಸ್ತಾರೆ. ಮನಸ್ಸು ಶುದ್ಧವಾಗಿದ್ದರೂ ಬಾಯಿ ಹಿಡಿತದಲ್ಲಿರುವುದಿಲ್ಲ. ಇಷ್ಟದ ವಸ್ತುಗಳನ್ನು ಪಡೆಯಲು ಇವ್ರು ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ.

ಕೈ ಕಾಲುಗಳನ್ನು ನೇರವಾಗಿಟ್ಟು ಮಲಗುವವರು ನೀವಾಗಿದ್ದರೆ ಸೂರ್ಯ ಹಾಗೂ ಶನಿ ಪ್ರಭಾವ ನಿಮ್ಮ ಮೇಲಿದೆ ಎಂದರ್ಥ. ನಿಯಮಗಳನ್ನು ಈ ವ್ಯಕ್ತಿಗಳು ಪಾಲನೆ ಮಾಡ್ತಾರೆ. ಕೌಟುಂಬಿಕ ಜೀವನ ಉತ್ತಮವಾಗಿರುವುದಿಲ್ಲ. ಸದಾ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ.

ಹೇಗೆ ಮಲಗಿದ್ರೂ ಮಲಗುವ ವೇಳೆ ಗೊಂಬೆ ಅಥವಾ ದಿಂಬು ಬಳಸುವವರು ಚಂದ್ರನ ಪ್ರಭಾವಕ್ಕೊಳಗಾಗಿರುತ್ತಾರೆ. ಯಾವುದೋ ದೊಡ್ಡ ಘಟನೆ ನಡೆದ ನಂತ್ರ ಇವರು ಅಸುರಕ್ಷರಂತೆ ವರ್ತಿಸುತ್ತಾರೆ. ಧನದ ವಿಚಾರದಲ್ಲಿ ಭಾಗ್ಯಶಾಲಿಗಳಾಗಿರುತ್ತಾರೆ.

ಸಿಕ್ಕಾಪಟ್ಟೆ ನಿದ್ರೆ ಮಾಡುವವರು ಶುಕ್ರನ ಪ್ರಭಾವಕ್ಕೆ ಒಳಗಾಗಿರುತ್ತಾರೆ. ಯಾವುದೇ ಒಳ್ಳೆ ಅಥವಾ ಕೆಟ್ಟ ವಿಷ್ಯ ಇವ್ರನ್ನು ತುಂಬಾ ಸಮಯ ಕಾಡಲು ಸಾಧ್ಯವಿಲ್ಲ. ಏನೇ ಆದ್ರೂ ತಮ್ಮಿಷ್ಟದಂತೆ ಇವ್ರು ಜೀವನ ನಡೆಸುತ್ತಾರೆ. ಭಾಗ್ಯ ಮತ್ತು ಯಶಸ್ಸು ಇವ್ರ ಜೊತೆಗಿರುತ್ತದೆ.

ದೇವೇಗೌಡರೇ ಅಭ್ಯರ್ಥಿಯಾಗಲಿ ಎಂದ್ರು ಎ. ಮಂಜು, ಕಾರಣ ಗೊತ್ತಾ…?

Posted: 14 Mar 2019 05:50 AM PDT

ಹಾಸನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಅಭ್ಯರ್ಥಿಯಾಗಲಿ ಎಂದು ಮಾಜಿ ಸಚಿವ ಎ. ಮಂಜು ಹೇಳಿದ್ದಾರೆ.

ಅರಕಲಗೂಡಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹಾಸನ ಕ್ಷೇತ್ರದಲ್ಲಿ ದೇವೇಗೌಡರೇ ಸ್ಪರ್ಧಿಸಬೇಕೆಂದು ಒತ್ತಾಯಿಸಿದ್ದಾರೆ.

ನಾನು, ದಿ. ಹನುಮೇಗೌಡರು ಸೇರಿಕೊಂಡು ದೇವೇಗೌಡರನ್ನು ಗೆಲ್ಲಿಸಿದ್ದೆವು. ನಿಮಗೆ ಜ್ಞಾಪಕವಿಲ್ಲ ಅನಿಸುತ್ತದೆ. ಮಂಡ್ಯದಲ್ಲಿ ಮತ್ತು ಹಾಸನದಲ್ಲಿ ಮೊಮ್ಮಕ್ಕಳನ್ನು ನಿಲ್ಲಿಸಿದ್ದೀರಿ. ವೇದಿಕೆ ಮೇಲೆಯೇ ಕಣ್ಣೀರು ಹಾಕುತ್ತೀರಿ. ಇದೇನಾ ನೀವು ಮಾಡೋದು ಎಂದು ಪ್ರಶ್ನಿಸಿದ್ದಾರೆ.

ನನಗೆ ಕಣ್ಣೀರು ಹಾಕಿ ನಾಟಕ ಮಾಡಲು ಬರುವುದಿಲ್ಲ. ರೈತನ ಮಗನಾಗಿ ರಾಜಕೀಯವಾಗಿ ಬೆಳೆದಿದ್ದೇನೆ. ನೀವೆಲ್ಲರೂ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದಾರೆ.

ಕೂಡಲಸಂಗಮದಲ್ಲಿ ಮಾತೆ ಮಹಾದೇವಿ ಕ್ರಿಯಾಸಮಾಧಿ

Posted: 14 Mar 2019 05:49 AM PDT

ಭಕ್ತರ ವಲಯದಲ್ಲಿ ಅಭಿನವ ಅಕ್ಕಮಹಾದೇವಿ, ಪ್ರಥಮ ಮಹಿಳಾ ಜಗದ್ಗುರು ಎಂದೇ ಕರೆಯಲ್ಪಡುವ ಮಾತೆ ಮಹಾದೇವಿ ಬಸವಕಲ್ಯಾಣದಲ್ಲಿ ಅಲ್ಲಮಪ್ರಭು ಶೂನ್ಯ ಪೀಠವನ್ನು ಸ್ಥಾಪಿಸಿ 12ನೇ ಶತಮಾನದ ಶೂನ್ಯಪೀಠ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದರು.

ಅಲ್ಲದೇ ಬಸವಕಲ್ಯಾಣದಲ್ಲಿ 108 ಅಡಿ ಎತ್ತರದ ವಿಶ್ವಗುರು ಬಸವಣ್ಣನವರ ಮೂರ್ತಿಯನ್ನು ಸ್ಥಾಪಿಸಿದ್ದಾರೆ. 1946ರ ಮಾರ್ಚ್ 13 ರಂದು ಚಿತ್ರದುರ್ಗ ಜಿಲ್ಲೆ ಸಾಸಲುಹಟ್ಟಿಯಲ್ಲಿ ಜನಿಸಿದ ಮಾತೆ ಮಹಾದೇವಿಯವರ ಜನ್ಮನಾಮ ರತ್ನಾ. ತಂದೆ ಡಾ. ಬಸಪ್ಪನವರು, ತಾಯಿ ಗಂಗಮ್ಮನವರು.

1966ರಲ್ಲಿ ಜಂಗಮ ದೀಕ್ಷೆ ಪಡೆದ ಮಾತೆ ಮಹಾದೇವಿಯವರ ದೀಕ್ಷಾಗುರು ಲಿಂಗಾನಂದ ಮಹಾಸ್ವಾಮೀಜಿ. ಬಸವ ಧರ್ಮ ಪ್ರಚಾರಕ್ಕೆ 1986 ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಮಾತೆ ಮಹಾದೇವಿ, ಅಮೆರಿಕ, ಕೆನಡಾದಲ್ಲೂ ಬಸವ ಧರ್ಮ ಪ್ರಚಾರ ನಡೆಸಿದ್ದರು.

ಬಸವಣ್ಣನವರ ಜೀವನ ಚರಿತ್ರೆ ಆಧರಿಸಿ 'ಕ್ರಾಂತಿಯೋಗಿ ಬಸವಣ್ಣ' ಚಲನಚಿತ್ರ ನಿರ್ಮಾಣ ಮಾಡಿದ್ದರು. ಮಾತೆ ಮಹಾದೇವಿಯವರ ಕಾದಂಬರಿ 'ಹೆಪ್ಪಿಟ್ಟ ಹಾಲು' ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇತ್ತೀಚಿಗೆ ಲಿಂಗಾಯಿತ ಧರ್ಮ ಹೋರಾಟದಲ್ಲಿ ಮಾತೆ ಮಹಾದೇವಿ ಪ್ರಮುಖವಾಗಿ ತೊಡಗಿಸಿಕೊಂಡಿದ್ದರು.

ನಿನ್ನೆ ಅವರ ಹುಟ್ಟುಹಬ್ಬ. 1 ವಾರದಿಂದ ಅವರ ಆರೋಗ್ಯ ಬಿಗಡಾಯಿಸಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಅವರು ಲಿಂಗೈಕ್ಯರಾಗಿದ್ದಾರೆ. ಮಾತೆ ಮಹಾದೇವಿ ಅವರ ಪಾರ್ಥಿವ ಶರೀರವನ್ನು ರಾಜಾಜಿನಗರದ ಬಸವ ಮಂಟಪಕ್ಕೆ ಕೊಂಡೊಯ್ದು, ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಿದ್ದು, ಅಲ್ಲಿಂದ ಬಸವ ಕಲ್ಯಾಣಕ್ಕೆ ತರಲಾಗುವುದು. ಬಸವ ಕಲ್ಯಾಣದಲ್ಲಿ ಶನಿವಾರ ಕ್ರಿಯಾಸಮಾಧಿ ನಡೆಯಲಿದೆ ಎನ್ನಲಾಗಿದೆ.

ಸ್ಟಾರ್ ಸಿಂಗರ್ ಹನುಮಂತನ ನೋಡಲು ಮುಗಿಬಿದ್ರು ಜನ

Posted: 14 Mar 2019 05:26 AM PDT

ರಾಯಚೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಸರಿಗಮಪ' ಸೀಸನ್ 15 ಶೋನಲ್ಲಿ ಹಾಡುವ ಮೂಲಕ ಕುರಿಗಾಯಿ ಹನುಮಂತ ಮನೆ ಮಾತಾಗಿದ್ದಾರೆ.

'ಸರಿಗಮಪ'ದಲ್ಲಿ ರನ್ನರ್ ಅಪ್ ಆಗಿರುವ ಹನುಮಂತ ಹೋದಲ್ಲಿ, ಬಂದಲ್ಲಿ ಅಭಿಮಾನಿಗಳು ಅವರನ್ನು ನೋಡಲು ಮುಗಿಬೀಳುತ್ತಾರೆ. ಇತ್ತೀಚೆಗೆಷ್ಟೇ ಕಲಬುರಗಿ ಜಿಲ್ಲೆಯಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಹನುಮಂತ ಮತ್ತು ಸೀಸನ್ 13 ರ ಚಾಂಪಿಯನ್ ಸುನಿಲ್ ಭಾಗವಹಿಸಿದ್ದರು. ಅವರಿಗೆ ಅಭಿಮಾನಿಗಳು ಆತ್ಮೀಯ ಸ್ವಾಗತ ನೀಡಿ, ಗೌರವಿಸಿದ್ದರು

ಅದೇ ರೀತಿ ರಾಯಚೂರಿನ ಮಸ್ಕಿಯಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಹನುಮಂತ ಭಾಗವಹಿಸಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಂಜಾರ ಉತ್ಸವದ ಮೆರವಣಿಗೆ ನಡೆದಿದ್ದು, ಹನುಮಂತ ಅವರನ್ನು ಕಂಡ ಜನ ಸಂಭ್ರಮಿಸಿದ್ದಾರೆ. ಹನುಮಂತ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಘೋಷಣೆ ಕೂಗಿದ್ದಾರೆ. ವೇದಿಕೆ ಕಾರ್ಯಕ್ರಮದಲ್ಲಿ ಲಂಬಾಣಿ ಸಮಾಜದ ವತಿಯಿಂದ ಹನುಮಂತ ಅವರನ್ನು ಗೌರವಿಸಲಾಗಿದೆ.

ಹೋಳಿಗಾಗಿಯೇ ಮಾರುಕಟ್ಟೆಗೆ ಬಂದಿದೆ ವಿಶೇಷ ಟಿ ಶರ್ಟ್

Posted: 14 Mar 2019 04:58 AM PDT

ಹೋಳಿ ಹತ್ತಿರ ಬರ್ತಿದೆ. ಹಬ್ಬಕ್ಕೆ ತಯಾರಿ ಜೋರಾಗಿ ನಡೆದಿದೆ. ಹೋಳಿಯಂದು ಬಹುತೇಕರು ಹಳೆ ಡ್ರೆಸ್ ಧರಿಸುತ್ತಾರೆ. ಬಿಳಿ ಬಣ್ಣದ ಹಳೆ ಡ್ರೆಸ್ ಧರಿಸಿ ನಂತ್ರ ಅದನ್ನು ಎಸೆಯುತ್ತಾರೆ.

ಆದ್ರೆ ಈ ಬಾರಿ ಹಬ್ಬವನ್ನು ಸ್ವಲ್ಪ ವಿಶೇಷವಾಗಿ ಆಚರಿಸಿ. ಹೋಳಿಗಾಗಿಯೇ ಮಾರುಕಟ್ಟೆಗೆ ಬಂದ ಗ್ರಾಫಿಕ್ಸ್ ಟೀ ಶರ್ಟ್ ಧರಿಸಿ ಹಬ್ಬವನ್ನು ಮತ್ತಷ್ಟು ಸಂಭ್ರಮಿಸಿ. ಮನೆಯಲ್ಲೊಂದೇ ಅಲ್ಲ ಕಚೇರಿ, ಕಾಲೇಜ್ ಹೋಳಿಗೆ ನೀವು ಇದನ್ನು ಧರಿಸಬಹುದು.

ತಪ್ಪು ತಿಳಿಯಬೇಡಿ, ಇದು ಹೋಳಿ ಎಂದು ಬರೆಯಲ್ಪುಟ್ಟಿರುವ ಟೀಶರ್ಟ್ ಮಾರುಕಟ್ಟೆಗೆ ಬಂದಿದೆ. ಅದ್ರ ಬೆಲೆ 249 ರೂಪಾಯಿ.

ಕಾಲೇಜ್ ಹುಡುಗಿಯರಿಗಾಗಿ ಸೂಪರ್ ಕೂಲ್ ಹೋಳಿಯ ಸೆಲ್ಫಿ ಟೀ ಶರ್ಟ್ ಗಮನ ಸೆಳೆಯುತ್ತಿದೆ. ಅದ್ರ ಬೆಲೆ 399 ರೂಪಾಯಿ.

It’s time for masti & lot of fun ಎಂದು ಬರೆದಿರುವ ಟೀ ಶರ್ಟ್ ಕೂಡ ಗ್ರಾಹಕರಿಗೆ ಇಷ್ಟವಾಗ್ತಿದೆ. ಇದ್ರ ಬೆಲೆ ಕೂಡ 399 ರೂಪಾಯಿ.

ಹೆಚ್ಚು ಗ್ರಾಫಿಕ್ಸ್, ಜಗಮಗ ಬೇಡವೆನ್ನುವವರು ಹೋಳಿ ಹೇ ಎಂದಷ್ಟೆ ಬರೆದಿರುವ ಸಿಂಪಲ್ ಟೀ ಶರ್ಟ್ ಧರಿಸಬಹುದು. ಇದು ನಿಮಗೆ 299 ರೂಪಾಯಿಗೆ ಸಿಗ್ತಿದೆ.

ಈಟ್ ಡ್ರಿಂಕ್, ಪ್ಲೇ ಹೋಳಿ ಎಂದು ಬರೆದಿರುವ ಟೀ ಶರ್ಟ್ ಬೆಲೆ 399 ರೂಪಾಯಿ. ಹುಡುಗರಿಗಾಗಿಯೇ The big bhang theory ಟೀ ಶರ್ಟ್ ಲಭ್ಯವಿದ್ದು, ಇದ್ರ ಬೆಲೆ 199 ರೂಪಾಯಿಯಾಗಿದೆ.

ಮನೆ ಮನೆ ಬಾಗಿಲಿಗೆ ಹಣ ಹಾಕಿ ಹೋಗ್ತಿರುವ ಈ ವ್ಯಕ್ತಿ ಯಾರು?

Posted: 14 Mar 2019 04:43 AM PDT

ಮನೆ ಬಾಗಿಲಿಗೆ ಹಣದ ಕವರ್ ಬಂದು ಬಿದ್ರೆ ಒಮ್ಮೆ ಆಶ್ಚರ್ಯಗೊಳ್ಳೋದು ಖಚಿತ. ವಿಳಾಸವಿಲ್ಲದ ಕವರ್ ನಲ್ಲಿ ಹಣ ಹಾಕಿದವರು ಯಾರು ಎಂಬ ಪ್ರಶ್ನೆ ಕಾಡುತ್ತದೆ. ಸ್ಪೇನ್ ನ ಸಣ್ಣ ಹಳ್ಳಿ ವಿಲ್ಲಾರಾಮಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗ್ರಾಮಸ್ಥರಿಗೆ ಹಣದ ಸಹಾಯ ಮಾಡ್ತಿದ್ದಾನೆ.

ಈ ಗ್ರಾಮದಲ್ಲಿ ಸುಮಾರು 800 ಜನರಿದ್ದಾರೆ. ಕವರ್ ನಲ್ಲಿ ಹಣ ಹಾಕಿ, ಅದನ್ನು ಮನೆಯ ಬಾಗಿಲ ಬಳಿ ಇಟ್ಟು ಹೋಗ್ತಿದ್ದಾನೆ. ಗ್ರಾಮಸ್ಥರಲ್ಲಿ ಈ ನಿಗೂಢ ಘಟನೆ ಕುತೂಹಲ ಮೂಡಿಸಿದೆ. ಸುಮಾರು 15 ಜನರು 100 ಯುರೋವರೆಗೆ ನಗದು ಸ್ವೀಕರಿಸಿದ್ದಾರೆಂದು ಅಲ್ಲಿನ ಮೇಯರ್ ಹೇಳಿದ್ದಾರೆ.

ಸಿಕ್ಕ ಹಣದ ಬಗ್ಗೆ ಕೆಲವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೆಲವರು ಬ್ಯಾಂಕ್ ಗೆ ಹೋಗಿ ದೂರು ನೀಡಿದ್ದಾರೆ. ಮತ್ತೆ ಕೆಲವರಿಗೆ ಸಿಕ್ಕ ಹಣ ಅಸಲಿಯಾ? ನಕಲಿಯಾ ಎಂಬ ಪ್ರಶ್ನೆ ಕಾಡಿದೆ. ರಾಬಿನ್ ಹುಡ್ ಆಫ್ ವಿಲ್ಲಾರಾಮಿ ಎಂದು ಆತನನ್ನು ಕರೆಯಲಾಗುತ್ತಿದೆ. ಈ ಗ್ರಾಮಕ್ಕೆ ಆರ್ಥಿಕ ಸಹಾಯ ಮಾಡ್ತಿರುವ ವ್ಯಕ್ತಿ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

ಬ್ರೇಕಿಂಗ್ ನ್ಯೂಸ್: ಮಾತೆ ಮಹಾದೇವಿ ಲಿಂಗೈಕ್ಯ

Posted: 14 Mar 2019 04:36 AM PDT

ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೂಡಲ ಸಂಗಮದ ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರು ಇಂದು ಮಧ್ಯಾಹ್ನ 3-30 ಕ್ಕೆ ಲಿಂಗೈಕ್ಯರಾಗಿದ್ದಾರೆ.

ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಮಾತೆ ಮಹಾದೇವಿಯವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬಂದಿರಲಿಲ್ಲವೆಂದು ಹೇಳಲಾಗಿದೆ.

ಗೃಹ ಸಚಿವ ಎಂ.ಬಿ. ಪಾಟೀಲ್, ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಜೊತೆ ಸಮಾಲೋಚಿಸಿದ್ದು, ಅಗತ್ಯವಿದ್ದರೆ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯಲು ಸಿದ್ಧವೆಂದು ಹೇಳಿದ್ದರು. ಆದರೆ ಮಾತೆ ಮಹಾದೇವಿ ಅವರ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ಇಂದು ಮಧ್ಯಾಹ್ನ 3-30 ಕ್ಕೆ ಲಿಂಗೈಕ್ಯರಾಗಿದ್ದಾರೆ.

ತಾಯಿ ಶೀಲ ಶಂಕಿಸಿ ಮಗ ಮಾಡ್ದ ಇಂಥ ಕೆಲಸ

Posted: 14 Mar 2019 04:30 AM PDT

ಪುದುಚೇರಿಯಲ್ಲಿ ಮಗನೇ ತಾಯಿಯನ್ನು ಹತ್ಯೆಗೈದು ಒಂದು ವಾರಗಳ ಕಾಲ ಶವದ ಜೊತೆಗಿದ್ದ ಘಟನೆ ಬೆಳಕಿಗೆ ಬಂದಿದೆ. ಮಗನಿಗೆ ತಾಯಿ ಮೇಲೆ ಅನುಮಾನವಿತ್ತು.

ತಾಯಿ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಕಾರಣಕ್ಕೆ ಆಗಾಗ ತಾಯಿ ಜೊತೆ ಗಲಾಟೆ ಮಾಡ್ತಿದ್ದ ಎನ್ನಲಾಗಿದೆ. ವಾರದ ಹಿಂದೆ ತಾಯಿ ಹತ್ಯೆಗೈದಿದ್ದ ಮಗ,ಬುಧವಾರ ಪೊಲೀಸ್ ಮುಂದೆ ಶರಣಾಗಿದ್ದಾನೆ.

2013 ರಲ್ಲಿ ಆರೋಪಿ ತಂದೆ ಸಾವನ್ನಪ್ಪಿದ್ದನಂತೆ. ಆರೋಪಿ ತಂದೆಗೆ ಎರಡು ಪತ್ನಿಯರು. ಅದ್ರಲ್ಲಿ ಎರಡನೇ ಪತ್ನಿ ಆರೋಪಿ ತಾಯಿ. ಆಕೆ ಹಾಗೂ ಮೊದಲ ಪತ್ನಿ ಮಧ್ಯೆ ಆಸ್ತಿ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತಂತೆ. ಮೊದಲ ಪತ್ನಿ ತಮ್ಮನ ಹತ್ಯೆ ಪ್ರಕರಣದಲ್ಲಿ ಎರಡನೇ ಪತ್ನಿ ಜೈಲಿಗೆ ಹೋಗಿ ಬಂದಿದ್ದಳಂತೆ.

ಜೈಲಿನಿಂದ ಹೊರ ಬಂದ ಮೇಲೆ ಮಗನ ಜೊತೆ ವಾಸವಾಗಿದ್ದ ಮಹಿಳೆ ಅನೇಕರ ಜೊತೆ ಸಂಬಂಧ ಹೊಂದಿದ್ದಳು ಎಂದು ಮಗ ಆರೋಪಿಸಿದ್ದಾನೆ. ತಾಯಿ-ಮಗನ ಗಲಾಟೆಗೆ ಬೇಸತ್ತು ಆರೋಪಿ ಪತ್ನಿ ಮನೆ ಬಿಟ್ಟಿದ್ದಳಂತೆ. ಸ್ಪೇನ್ ನಲ್ಲಿರುವ ಸಹೋದರಿ ಕೂಡ ಮಾತುಕತೆ ನಿಲ್ಲಿಸಿದ್ದಳಂತೆ. ಘಟನೆ ನಡೆದ ದಿನವೂ ಇಬ್ಬರ ಮಧ್ಯೆ ಗಲಾಟೆಯಾಗಿದೆ. ಚೂಪಾದ ಚಾಕುವಿನಿಂದ ತಾಯಿ ಕತ್ತು ಕೊಯ್ದ ಆರೋಪಿ ನಂತ್ರ ಶವವನ್ನು ಕೋಣೆಯಲ್ಲಿ ಇಟ್ಟಿದ್ದನಂತೆ. ಎಂದಿನಂತೆ ಎಲ್ಲ ಕೆಲಸ ಮಾಡ್ತಿದ್ದ ಆರೋಪಿ ವಾರದ ನಂತ್ರ ಸತ್ಯ ಬಾಯ್ಬಿಟ್ಟಿದ್ದಾನೆ.

ಜಾಹೀರಾತು ನೀಡಿ ಅಪರಾಧ ಪ್ರಕರಣದ ಬಗ್ಗೆ ಮಾಹಿತಿ ನೀಡಬೇಕು ಅಭ್ಯರ್ಥಿಗಳು

Posted: 14 Mar 2019 04:24 AM PDT

ಚುನಾವಣಾ ಆಯೋಗ, 2019ರ ಲೋಕಸಭೆ ಚುನಾವಣಾ ದಿನಾಂಕ ಘೋಷಣೆ ಜೊತೆ ಅಭ್ಯರ್ಥಿಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಘೋಷಣೆ ಮಾಡಿದೆ. ಅಭ್ಯರ್ಥಿಗಳು ನಿಯಮ ಪಾಲನೆ ಮಾಡದೆ ಹೋದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಈ ಬಾರಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ತಮ್ಮ ಅಪರಾಧ ಪ್ರಕರಣಗಳ ಬಗ್ಗೆ ಜಾಹೀರಾತು ನೀಡಬೇಕಾಗುತ್ತದೆ.

ಅಭ್ಯರ್ಥಿಗಳು ತಮ್ಮ ವಿರುದ್ಧದದ ಅಪರಾಧ ಪ್ರಕರಣಗಳ ಬಗ್ಗೆ ಮಾಧ್ಯಮದಲ್ಲಿ ಕನಿಷ್ಠ ಮೂರು ಬಾರಿ ಜಾಹೀರಾತು ನೀಡಬೇಕಾಗುತ್ತದೆ. ಈ ನಿಯಮವನ್ನು ಎಲ್ಲ ಅಭ್ಯರ್ಥಿಗಳು ಪಾಲಿಸಬೇಕಾಗುತ್ತದೆ. 2018ರಲ್ಲಿಯೇ ಚುನಾವಣಾ ಆಯೋಗ ಈ ನಿಯಮ ಜಾರಿಗೆ ತಂದಿದೆ. 2019ರ ಲೋಕಸಭೆ ಚುನಾವಣಾ ಅವಧಿಯಲ್ಲಿ ಇದು ಮೊದಲ ಬಾರಿ ಚಾಲ್ತಿಗೆ ಬರಲಿದೆ.

ರಾಜಕೀಯ ಪಕ್ಷಗಳು ಕೂಡ ತಮ್ಮ ಅಭ್ಯರ್ಥಿಗಳ ಅಪರಾಧ ಪ್ರಕರಣವನ್ನು ಜಾಹೀರಾತಿನ ಮೂಲಕ ಎಲ್ಲರ ಮುಂದಿಡಬೇಕು. ಯಾವುದೇ ಅಪರಾಧ ಪ್ರಕರಣವಿಲ್ಲದ ಅಭ್ಯರ್ಥಿಗಳು ಇದ್ರ ಬಗ್ಗೆ ಉಲ್ಲೇಖ ಮಾಡಬೇಕು. ಅಭ್ಯರ್ಥಿ ಹಾಗೂ ಪಕ್ಷಗಳು ಪ್ರಕಟಿಸುವ ಜಾಹೀರಾತಿನ ವೆಚ್ಛವನ್ನು ಚುನಾವಣಾ ಪ್ರಚಾರದ ವೆಚ್ಛವಾಗಿ ಪರಿಗಣಿಸಲಾಗುತ್ತದೆ.

ಆರೋಗ್ಯಕರ ಖರ್ಜೂರ ಡ್ರೈ ಫ್ರೂಟ್ಸ್ ಬರ್ಫಿ ಮಾಡುವುದು ಹೇಗೆ…

Posted: 14 Mar 2019 04:09 AM PDT

ಡ್ರೈ ಫ್ರೂಟ್ಸ್ ನಮ್ಮ ದೈನಂದಿನ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳಲ್ಲಿರುವ ವಿಟಮಿನ್ ಮತ್ತು ಮಿನರಲ್‌ಗಳು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅತ್ಯವಶ್ಯಕವಾದುದು. ಹಾಗಾದರೆ ಈ ಡ್ರೈ ಫ್ರೂಟ್ಸ್ ಬರ್ಫಿ ಹೇಗೆ ಮಾಡುವುದು ಅಂತ ನೋಡಿ.

ಬೇಕಾಗುವ ಸಾಮಗ್ರಿಗಳು

ಖರ್ಜೂರ ಒಂದು ಬೌಲ್. ಗೋಡಂಬಿ, ಬಾದಾಮಿ, ಪಿಸ್ತಾ ಸಣ್ಣಗೆ ಕಟ್ ಮಾಡಿರೋದು ಅರ್ಧ ಬೌಲ್. ಗಸಗಸೆ 50 ಗ್ರಾಂ, ತುಪ್ಪ 4 ಚಮಚ.

ಮಾಡುವ ವಿಧಾನ

ಖರ್ಜೂರವನ್ನು ಮಿಕ್ಸಿ ಜಾರ್ ನಲ್ಲಿ ಅರೆದಿಡಬೇಕು. ಸ್ವಲ್ಪ ತುಪ್ಪ ಬಿಸಿ ಮಾಡಿ ಗಸಗಸೆಯನ್ನು ಹುರಿದು ಕೊಳ್ಳಬೇಕು. ಆಮೇಲೆ ಡ್ರೈ ಫ್ರೂಟ್ಸ್ ಹುರಿಯಬೇಕು.
ಸ್ವಲ್ಪ ತುಪ್ಪ ಬಿಸಿ ಮಾಡಿ ಅದಕ್ಕೆ ಖರ್ಜೂರ ಮಿಶ್ರಣ ಹಾಕಿ ಮೆತ್ತಗೆ ಮಾಡಿ ಕೊಳ್ಳಬೇಕು. ಆಮೇಲೆ ಡ್ರೈ ಫ್ರೂಟ್ಸ್ ಮತ್ತು ಗಸಗಸೆಯ ಅರ್ಧಭಾಗವನ್ನು ಹಾಕಿ ಕಲಸಿ ಕೊಳ್ಳಬೇಕು. ಈ ಮಿಶ್ರಣ ಸ್ವಲ್ಪ ಆರಿದ ಮೇಲೆ ಉಳಿದ ಗಸಗಸೆ, ಡ್ರೈ ಫ್ರೂಟ್ಸ್ ಉದುರಿಸಿ ಚೆನ್ನಾಗಿ ರೋಲ್ ಮಾಡಿ ಪೇಪರ್ ಫಾರ್ ನಲ್ಲಿ ಗಟ್ಟಿಯಾಗಿ ಸುತ್ತಬೇಕು. ಫ್ರಿಡ್ಜ್ ನಲ್ಲಿ 40 ನಿಮಿಷ ಇಟ್ಟು ನಂತರ ಬರ್ಫಿ ಅಂತೆ ಕತ್ತರಿಸಿದರೆ ಖರ್ಜೂರ ಡ್ರೈ ಫ್ರೂಟ್ಸ್ ಬರ್ಫಿ ರೆಡಿ ಟು ಈಟ್.

ಅತ್ತೆ ಸತ್ತದ್ದಕ್ಕೆ ಖುಷಿಪಟ್ಟ ಸೊಸೆ ಸ್ಥಿತಿ ಏನಾಯ್ತು ಗೊತ್ತಾ…?

Posted: 14 Mar 2019 04:09 AM PDT

ಅತ್ತೆ, ಸೊಸೆ ಅಂದ್ರೆ ಎಣ್ಣೆ ಸೀಗೆಕಾಯಿ ಸಂಬಂಧ ಅಂತಾರೆ. ಹೀಗೆಯೇ ಅತ್ತೆ ಸತ್ತರು ಅಂತಾ ಸುದ್ದಿ ಕೇಳುತ್ತಿದ್ದಂತೆ ಸಂತಸ ವ್ಯಕ್ತಪಡಿಸಿದ ಪತ್ನಿಯನ್ನು ಪತಿ ಮೂರು ಅಂತಸ್ತಿನ ಬಂಗಲೆಯಿಂದ ನೂಕಿ ಹತ್ಯೆಗೈದಿದ್ದಾನೆ.

ಮಹಾರಾಷ್ಟ್ರದ ಕೊಲ್ಲಾಪುರದ ಅಪ್ಟೆ ನಗರದಲ್ಲಿ ವಾಸವಿದ್ದ ಶುಭಾಂಗಿ ಸಂದೀಪ್‍ ಲೋಖಂಡೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿತ್ತು. ಆದ್ರೆ ಪೊಲೀಸರ ತನಿಖೆಯ ಬಳಿಕ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಶುಭಾಂಗಿ ಅತ್ತೆ ಅನೇಕ ತಿಂಗಳಿಂದ ಹಾಸಿಗೆ ಹಿಡಿದಿದ್ರು. ಅತ್ತೆ ತೀರಿಕೊಂಡ ಸುದ್ದಿ ಕೇಳಿ ನೊಂದ ಸೊಸೆ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅತ್ತೆ-ಸೊಸೆ ಅನ್ಯೋನ್ಯವಾಗಿದ್ದು, ಅವರ ಸಾವಿನಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರಿಗೆ ಶುಭಾಂಗಿ ಪತಿ ತಿಳಿಸಿದ್ದ. ಪೊಲೀಸರು ಕೂಡಾ ಆಕಸ್ಮಿಕ ಸಾವು ಅಂತಾ ದಾಖಲಿಸಿಕೊಂಡಿದ್ರು.

ಆದ್ರೆ ಶುಭಾಂಗಿ ಪತಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಸತ್ಯ ಹೊರಹಾಕಿದ್ದಾನೆ. ಅತ್ತೆ ಸಾವಿಗೆ ಖುಷಿ ಪಟ್ಟಿದ್ದರಿಂದ ಪತ್ನಿಯನ್ನು ಮೂರಂತಸ್ತಿನ ಮಹಡಿಯಿಂದ ನೂಕಿ ಸಾಯಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಸೂದ್ ಅಜರ್ ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ಚೀನಾ ಮತ್ತೆ ಅಡ್ಡಗಾಲು

Posted: 14 Mar 2019 04:06 AM PDT

ಮಸೂದ್ ಅಜರ್ ಜೈಷ್-ಇ-ಮೊಹಮ್ಮದ್‍ ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರ. ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್‍. ಈತನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಲು ಮುಂದಾಗಿರುವ ವಿಶ್ವ ಸಂಸ್ಥೆ ಭದ್ರತಾ ಮಂಡಳಿ ನಿರ್ಧಾರಕ್ಕೆ ಮತ್ತೆ ಹಿನ್ನಡೆಯಾಗಿದೆ.

ಕಾರಣ ಚೀನಾ ಇದಕ್ಕೆ ಅಡ್ಡಗಾಲು ಹಾಕಿದೆ. ಈ ಮೂಲಕ ಕಳೆದ 10 ವರ್ಷಗಳಲ್ಲಿ ಉಗ್ರ ಮಸೂದ್‍ ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನ ಸತತ ನಾಲ್ಕನೇ ಬಾರಿಯೂ ವಿಫಲವಾಗಿದೆ.

ಪುಲ್ವಾಮಾ ದಾಳಿಯ ನಂತರ ಭದ್ರತಾ ಸಮಿತಿಯ ಖಾಯಂ ಸದಸ್ಯ ರಾಷ್ಟ್ರಗಳಾದ ಫ್ರಾನ್ಸ್, ಇಂಗ್ಲೆಂಡ್, ಅಮೆರಿಕಾ, ವಿಶ್ವಸಂಸ್ಥೆಯ ಬಳಿ ಮಸೂದ್ ಅಜರ್ ನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರಿಸಲು ಮನವಿ ಮಾಡಿದ್ದವು. ಆದ್ರೆ ಇದಕ್ಕೆ ಚೀನಾ ಬೆಂಬಲ ನೀಡಿಲ್ಲ. ಹೀಗಾಗಿ ಚೀನಾ ನಡೆಗೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ.

ಒಂದು ವೇಳೆ ಮಸೂದ್ ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆಯಾದರೆ ಆತ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗಲು ಸಾಧ್ಯವಿಲ್ಲ. ಇದರೊಂದಿಗೆ ಆತನ ಮೇಲೆ ಸಾಕಷ್ಟು ನಿರ್ಬಂಧಗಳನ್ನು ಹೇರಲಾಗುತ್ತೆ. ಆದ್ರೆ ಮಸೂದ್‍ ಅಜರ್ ನನ್ನು ಉಗ್ರರ ಪಟ್ಟಿಗೆ ಸೇರಿಸುವ ಪ್ರಯತ್ನ ಮುಂದುವರೆಯಲಿದೆ ಎಂದು ಭಾರತ ಸ್ಪಷ್ಟಪಡಿಸಿದೆ.

ರಾಹುಲ್‍ ಗಾಂಧಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಅನಂತ್‍ ಕುಮಾರ್ ಹೆಗ್ಡೆ ವಿರುದ್ಧ ದೂರು

Posted: 14 Mar 2019 04:04 AM PDT

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಕಾಂಗ್ರೆಸ್, ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ರಾಹುಲ್‍ ಗಾಂಧಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರಕಾಶ್ ರಾಥೋಡ್ ನೇತೃತ್ವದಲ್ಲಿ ದೂರು ದಾಖಲಿಸಲಾಗಿದೆ.

ಎಐಸಿಸಿ ಅಧ್ಯಕ್ಷ ರಾಹುಲ್‍ ಗಾಂಧಿಯವರ ತಂದೆ ಮುಸಲ್ಮಾನರು, ತಾಯಿ ಕ್ರೈಸ್ತರು, ಹೀಗಾಗಿ ಅವರು ಡಿಎನ್‍ಎ ಪರೀಕ್ಷೆ ಮಾಡಿಸಿಕೊಳ್ಳಲಿ ಅಂತಾ ಅನಂತ್ ಕುಮಾರ್ ಹೆಗ್ಡೆ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ರು

ಹೀಗಾಗಿ ರಾಹುಲ್‍ ಗಾಂಧಿ ಹುಟ್ಟಿನ ಮೂಲವನ್ನು ಪ್ರಶ್ನಿಸುವ ಮೂಲಕ ಅವರ ತೇಜೋವಧೆ ಮಾಡಿದ್ದಾರೆ. ಇದ್ರಿಂದಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಕನ್ನಡ ಚಿತ್ರದ ಹಾಡಿಗೆ ಧ್ವನಿಯಾದ ‘ಬಿಗ್ ಬಿ’

Posted: 14 Mar 2019 04:02 AM PDT

ಬಿಗ್ ಬಿ ಅಮಿತಾಬ್ ಬಚ್ಚನ್‍ ಕನ್ನಡ ಚಿತ್ರವೊಂದಕ್ಕೆ ಧ್ವನಿಯಾಗಿದ್ದಾರೆ. ಹೌದು, ಕನ್ನಡದ 'ಬಟರ್ ಫ್ಲೈ’ ಚಿತ್ರಕ್ಕೆ ಹಾಡು ಹಾಡಿದ್ದಾರೆ ಎಂದು ಚಿತ್ರದ ನಾಯಕಿ ಮತ್ತು ನಿರ್ಮಾಪಕಿ ಕೂಡಾ ಆಗಿರುವ ಪಾರುಲ್ ಯಾದವ್ ತಿಳಿಸಿದ್ದಾರೆ.

1978 ರಲ್ಲಿ ತೆರೆ ಕಂಡಿದ್ದ ದೇವದಾಸಿ ಚಿತ್ರದ 'ಸುಖವೀವ ಸುರಪಾನವಿದು ಸ್ವರ್ಗ ಸಮಾನಮ್‍' ಎಂಬ ಹಾಡನ್ನು ಬಟರ್ ಫ್ಲೈ ಚಿತ್ರದಲ್ಲಿ ಮರು ಬಳಕೆ ಮಾಡಲಾಗ್ತಿದೆ. ಅಂದು ಜಿ.ಕೆ. ವೆಂಕಟೇಶ್‍ ಮ್ಯೂಜಿಕ್‍ನಲ್ಲಿ ಎಸ್‍ಪಿಬಿ ಈ ಹಾಡನ್ನು ಹಾಡಿದ್ರು.

ಇದೀಗ ಅದೇ ಹಾಡನ್ನು ರ್ಯಾಪ್ ಶೈಲಿಯಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಡಿದ್ದಾರೆ. ಕನ್ನಡ ಮತ್ತು ತಮಿಳು ಭಾಷೆಯಲ್ಲಿ ನಿರ್ಮಾಣವಾಗ್ತಿರೋ ಈ ಚಿತ್ರವನ್ನು ರಮೇಶ್‍ ಅರವಿಂದ್ ನಿರ್ದೇಶನ ಮಾಡುತ್ತಿದ್ದಾರೆ.

ಬಾಲಿವುಡ್‍ ಬಿಗ್ ಬಿ ಅಮಿತಾಬ್‍ ಬಚ್ಚನ್‍ ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೃತ ಧಾರೆ’ ಚಿತ್ರದಲ್ಲಿ ಪುಟ್ಟ ಪಾತ್ರವೊಂದರಲ್ಲಿ ಅಭಿನಯಿಸಿದ್ರು.

ಮದುವೆ ಮನೆಯಲ್ಲೂ ಮೋದಿ ಹವಾ: ಮತ್ತೊಮ್ಮೆ ಮೋದಿ ಎಂದ ನವ ಜೋಡಿ

Posted: 14 Mar 2019 03:57 AM PDT

ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಅಭ್ಯರ್ಥಿಗಳು ಅಖಾಡಕ್ಕಿಳಿದು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಈ ಮಧ್ಯೆ ಮದುವೆ ಮನೆಯಲ್ಲೂ ರಾಜಕೀಯ ರಂಗೇರಿದೆ. ನವಜೋಡಿಯೊಂದು ಮತ್ತೊಮ್ಮೆ ಮೋದಿ ಎಂದು ಕೂಗುವ ಮೂಲಕ ಬಿಜೆಪಿ ಪರ ಪ್ರಚಾರ ನಡೆಸಿದ್ದಾರೆ.

ದಾವಣಗೆರೆ ಜಿಲ್ಲೆ ಹರಿಹರದಲ್ಲಿ ನಡೆದ ಮದುವೆ ಆರತಕ್ಷತೆಯಲ್ಲಿ ನವಜೋಡಿಗಳಾದ ವಿಜಯ್ ಮತ್ತು ನಾಗಲಕ್ಷ್ಮಿ, ಮೋದಿ ಮತ್ತೊಮ್ಮೆ ಅಂತಾ ಕೂಗುತ್ತಾ, ಸ್ನೇಹಿತರಲ್ಲಿ, ಬಂಧು-ಬಾಂಧವರಲ್ಲಿ ಮೋದಿಗೆ ವೋಟ್‍ ಹಾಕಿ ಅಂತಾ ಕೇಳಿಕೊಂಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಸುಳ್ಯದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬ್ಬಬರು ಮೋದಿಯವರ ‘ಮನ್‍ ಕಿ ಬಾತ್‍’ ಕೇಳುತ್ತಾ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದರು.

ಸೆಕ್ಸ್ ವೇಳೆ ನಡೆದ ಈ ಘಟನೆ ಮಹಿಳೆ ಆಸ್ಪತ್ರೆ ಸೇರುವಂತೆ ಮಾಡ್ತು…!

Posted: 14 Mar 2019 03:29 AM PDT

ಸ್ಪೇನ್ ನಲ್ಲಿ ದಂಗಾಗಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರೇಮಿ ಜೊತೆ ಓರಲ್ ಸೆಕ್ಸ್ ನಡೆಸಿದ್ದ ಯುವತಿಯೊಬ್ಬಳು ಆಸ್ಪತ್ರೆ ಸೇರುವಂತಾಗಿದೆ.

ಮಾಹಿತಿ ಪ್ರಕಾರ, ಸ್ಪೇನ್ ನಿವಾಸಿ 31 ವರ್ಷದ ಮಹಿಳೆ ಬಾಯ್ ಫ್ರೆಂಡ್ ಜೊತೆ ಓರಲ್ ಸೆಕ್ಸ್ ಮಾಡಿದ್ದಾಳೆ. ನಂತ್ರ ಆಕೆಗೆ ವಾಂತಿ ಕಾಣಿಸಿಕೊಂಡಿದೆ. ಪರೀಕ್ಷೆ ನಡೆಸಿದ ವೈದ್ಯರು ಇದೊಂದು ಅಪಾಯಕಾರಿ ಅಲರ್ಜಿ ಎಂದಿದ್ದಾರೆ.

ಮಹಿಳೆ, ಗೆಳೆಯನ ವೀರ್ಯವನ್ನು ನುಂಗಿದ್ದಾಳೆ. ತಕ್ಷಣ ಆಕೆಗೆ ವಾಂತಿ ಶುರುವಾಗಿದೆ. ಉಸಿರಾಡಲು ತೊಂದರೆಯಾಗಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೆಕ್ಸ್ ಗಿಂತ ನಾಲ್ಕು ಗಂಟೆ ಮೊದಲು ಬಾಯ್ ಫ್ರೆಂಡ್ ಅಮೋಕ್ಸಿಸಿಲಿನ್  ಕ್ಲಾವುಲಾನಿಕ್ ಆಸಿಡ್ ಪೆನ್ಸಿಲಿನ್ ಸೇವನೆ ಮಾಡಿದ್ದನಂತೆ. ಇದ್ರಿಂದ ಮಹಿಳೆ ಸ್ಥಿತಿ ಹೀಗಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಹುಡುಗಿಗೆ ಪೆನ್ಸಿಲಿನ್ ಅಲರ್ಜಿಯಿತ್ತಂತೆ. ಹಾಗಾಗಿ ಆಕೆಗೆ ವಾಂತಿಯಾಗಿದೆ. ಸದ್ಯ ಮಹಿಳೆ ಪರಿಸ್ಥಿತಿ ಸುಧಾರಿಸಿದೆ. ಆಕೆ ಹೆಸ್ರು ಬಹಿರಂಗವಾಗಿಲ್ಲ. ಯಾವುದೇ ಅಲರ್ಜಿಯಿದ್ರೆ ಸೆಕ್ಸ್ ವೇಳೆ ಅಗತ್ಯವಾಗಿ ಕಾಂಡೋಮ್ ಬಳಸಿ ಎಂದು ಮಹಿಳೆ ಸಲಹೆ ನೀಡಿದ್ದಾಳೆ.

ಈ ಮತಗಟ್ಟೆಯಲ್ಲಿರೋದು ಒಬ್ಬನೇ ಮತದಾರ

Posted: 14 Mar 2019 02:43 AM PDT

ಲೋಕಸಭೆ ಚುನಾವಣೆ ಹತ್ತಿರ ಬರ್ತಿದ್ದಂತೆ ತಯಾರಿ ಜೋರಾಗಿ ನಡೆಯುತ್ತಿದೆ. ಪ್ರತಿಯೊಬ್ಬ ನಾಗರಿಕ ಮತದಾನ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಜಾಗೃತಿ ಕಾರ್ಯಕ್ರಮ ಶುರು ಮಾಡಿದ್ದಾರೆ. ಒಬ್ಬೇ ಒಬ್ಬ ಕೂಡ ಮತದಾನದಿಂದ ತಪ್ಪಿಸಿಕೊಳ್ಳಬಾರದು ಎಂಬುದು ಚುನಾವಣಾ ಆಯೋಗದ ಉದ್ದೇಶ. ಇದೇ ಕಾರಣಕ್ಕೆ ಅರಣ್ಯ ಪ್ರದೇಶದಲ್ಲಿ ಮತಗಟ್ಟೆ ನಿರ್ಮಿಸುತ್ತದೆ.

ಯಸ್, ಗುಜರಾತಿನ ಗಿರ್ ಕಾಡಿನಲ್ಲಿ ಒಬ್ಬ ಸನ್ಯಾಸಿಗಾಗಿ ಮತಗಟ್ಟೆ ನಿರ್ಮಾಣ ಮಾಡಲಾಗುತ್ತದೆ. ಜುನಾಗಡದ ಗಿರ್ ಅರಣ್ಯ ಪ್ರದೇಶದ ಬನೇಜಾ ಎಂಬ ಸ್ಥಳವಿದೆ. ಅಲ್ಲಿರುವ ಭರತ್ ದಾಸ್ ಬಾಪು ಎಂಬುವವರಿಗೆ ಚುನಾವಣಾ ಆಯೋಗ ವಿಶೇಷ ಮತಗಟ್ಟೆ ನಿರ್ಮಾಣ ಮಾಡುತ್ತದೆ.

ಬಾಬಾ ಗಂಗಾ ಮಹದೇವ್ ದೇವಸ್ಥಾನದಲ್ಲಿ ಭರತ್ ದಾಸ್ ಸನ್ಯಾಸಿ. ಗೀರ್-ಗದ್ದಾ ಕ್ಷೇತ್ರಕ್ಕೆ ಬರುವ ಈ ಅರಣ್ಯದಿಂದ ಮತ ಕೇಂದ್ರಕ್ಕೆ ಹೋಗುವುದು ಕಷ್ಟ. ಸುಮಾರು 30 ಕಿಲೋಮೀಟರ್ ಸಂಚರಿಸಬೇಕು. ಅಲ್ಲಿ ಕಾಡು ಪ್ರಾಣಿಗಳ ಕಾಟ ಹೆಚ್ಚು. ಹಾಗಾಗಿ ಸನ್ಯಾಸಿಗಾಗಿಯೇ ವಿಶೇಷ ಮತಗಟ್ಟೆ ನಿರ್ಮಾಣ ಮಾಡುತ್ತದೆ ಚುನಾವಣಾ ಆಯೋಗ.

ಅನಾರೋಗ್ಯ ಹಿನ್ನೆಲೆ: ಸ್ವಿಸ್ ಓಪನ್ ಚಾಂಪಿಯನ್ ಶಿಪ್ ತಪ್ಪಿಸಿಕೊಂಡ ಸೈನಾ ನೆಹ್ವಾಲ್

Posted: 14 Mar 2019 02:40 AM PDT

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಸ್ವಿಸ್ ಓಪನ್ ಚಾಂಪಿಯನ್ ಶಿಪ್ ನಿಂದ ಹೊರ ಬಿದ್ದಿದ್ದಾರೆ.

ಸೈನಾ  ಗ್ಯಾಸ್ಟ್ರೋಎಂಟರೈಟಿಸ್ ನಿಂದ ಬಳಲುತ್ತಿದ್ದು, ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ಈ ವಿಷ್ಯವನ್ನು ಸೈನಾ ನೆಹ್ವಾಲ್, ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ.

ಇನ್ಸ್ಟ್ರಾಗ್ರಾಮ್ ನಲ್ಲಿ ಸೈನಾ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಸೋಮವಾರದಿಂದ ತುಂಬಾ ಹೊಟ್ಟೆ ನೋವು ಕಾಣಿಸಿಕೊಳ್ತಾಯಿತ್ತು. ಈ ಮಧ್ಯೆಯೂ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ನ ಕೆಲ ಆಟಗಳನ್ನು ಆಡಿದೆ.

ಆದ್ರೆ ಆಟ ಮುಂದುವರಿಸಲು ಸಾಧ್ಯವಾಗಲಿಲ್ಲ. ಚಾಂಪಿಯನ್ ಶಿಪ್ ಬಿಟ್ಟು ಭಾರತಕ್ಕೆ ವಾಪಸ್ ಬಂದೆ. ಚಿಕಿತ್ಸೆ ನೀಡಿದ ವೈದ್ಯರು ಗ್ಯಾಸ್ಟ್ರೋಎಂಟರೈಟಿಸ್ ಎಂದಿದ್ದಾರೆ. ವಿಶ್ರಾಂತಿಗೆ ಸಲಹೆ  ನೀಡಿದ್ದಾರೆ ಎಂದು ಸೈನಾ ಹೇಳಿದ್ದಾರೆ.

ಆಲ್ ಇಂಗ್ಲೆಂಡ್ ಚಾಂಪಿಯ್ ಶಿಪ್ ನಲ್ಲಿ ಸೈನಾ ಕ್ವಾಟರ್ಫೈನಲ್ ಪ್ರವೇಶ ಮಾಡಿದ್ದರು. ಆದ್ರೆ ಆಟ ಮುಂದುವರೆಸಲಾಗದೆ ಭಾರತಕ್ಕೆ ವಾಪಸ್ ಆಗಿದ್ದಾರೆ. ಗ್ಯಾಸ್ಟ್ರೋಎಂಟರೈಟಿಸ್ ಕಾರಣ, ಸ್ವಿಸ್ ಓಪನ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳದಿರಲು ಸೈನಾ ನಿರ್ಧರಿಸಿದ್ದಾರೆ.

ಗ್ಯಾಸ್ಟ್ರೋಎಂಟರೈಟಿಸ್, ಆಹಾರ, ಔಷಧಿಗಳಲ್ಲಿನ ಏರುಪೇರಿನಿಂದಾಗಿ ಬರುತ್ತದೆ. ವಾಕರಿಕೆ, ವಾಂತಿ, ಕಿಬ್ಬೊಟ್ಟೆ ನೋವು, ತಲೆನೋವು, ಜ್ವರ, ಮೂರ್ಛೆ ಹೋಗುವುದು, ಹಸಿವು, ಅತಿಸಾರ, ನಿಶಕ್ತಿ ಕಾಣಿಸಿಕೊಳ್ಳುತ್ತದೆ.

ಮೋದಿ ಬೆಂಬಲಿಗರನ್ನು ಮೂರ್ಖರೆಂದು ಮತ್ತೆ ವಿವಾದಕ್ಕೊಳಗಾದ ನಟಿ ರಮ್ಯಾ

Posted: 14 Mar 2019 02:15 AM PDT

ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಮತ್ತೆ ಸುದ್ದಿಗೆ ಬಂದಿದ್ದಾರೆ. ಅವ್ರ ವಿವಾದಾತ್ಮಕ ಟ್ಟೀಟ್ ಈಗ ಚರ್ಚೆಗೆ ಕಾರಣವಾಗಿದೆ. ನಟಿ ರಮ್ಯಾ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೋಟೋ ಹಾಕಿ, ಮೋದಿ ಬೆಂಬಲಿಗರು ಮೂರ್ಖರು ಎಂದು ಟ್ಟೀಟ್ ಮಾಡಿದ್ದಾರೆ.

ಮೋದಿಯ ಮೂವರು ಬೆಂಬಲಿಗರಲ್ಲಿ ಒಬ್ಬರು, ಉಳಿದ ಇಬ್ಬರಂತೆ ಮೂರ್ಖರು ಎಂದು ರಮ್ಯಾ ಟ್ಟೀಟ್ ಮಾಡಿದ್ದಾರೆ. ಅಂದ್ರೆ 2014 ರಲ್ಲಿ ಮೋದಿ ನೇತೃತ್ವದ ಬಿಜೆಪಿಗೆ ಮತ ಹಾಕಿದ ಎಲ್ಲರೂ ರಮ್ಯಾ ಪ್ರಕಾರ ಮೂರ್ಖರು ಎಂದಾಯ್ತು. ರಮ್ಯಾ ಈ ಟ್ಟೀಟ್ ಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಮೋದಿ ಅಭಿಮಾನಿಗಳು ರಮ್ಯಾ ಟ್ಟೀಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಹುಲ್ ಮೂರ್ಖರು ಅಂತಾ ಕೆಲವರು ಹೇಳಿದ್ರೆ ಮತ್ತೆ ಕೆಲವರು ರಮ್ಯಾ ವಿರುದ್ಧವೇ ಕಿಡಿಕಾರಿದ್ದಾರೆ. ರಮ್ಯಾ ವಿವಾದಾತ್ಮಕ ಟ್ಟೀಟ್ ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅನೇಕ ಬಾರಿ ರಮ್ಯಾ ವಿವಾದಾತ್ಮಕ ಟ್ವಿಟ್ ಮಾಡಿದ್ದಾರೆ.

 

ತಾತಾ – ಅಪ್ಪನ ಅನುಪಸ್ಥಿತಿಯಲ್ಲೇ ಶುಭ ಗಳಿಗೆಯಲ್ಲಿ ನಿಖಿಲ್‍ ಹೆಸರು ಘೋಷಣೆ

Posted: 14 Mar 2019 02:02 AM PDT

ದೇವೇಗೌಡರ ಕುಟುಂಬದಲ್ಲಿ ಜ್ಯೋತಿಷ್ಯ, ಶಾಸ್ತ್ರ, ಸಂಪ್ರದಾಯವನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತೆ. ಇದಕ್ಕೆ ಇವತ್ತಿನ ಕಾರ್ಯಕ್ರಮವೂ ಸಾಕ್ಷಿ. ದೇವೇಗೌಡರು, ಕುಮಾರಸ್ವಾಮಿ ಬರುವ ಮೊದಲೇ ಶುಭಗಳಿಗೆಯಲ್ಲಿ ನಿಖಿಲ್‍ರನ್ನು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೆಂದು ಘೋಷಣೆ ಮಾಡಿದ್ದಾರೆ.

ನಿನ್ನೆ ಪೂಜೆ ಪುನಸ್ಕಾರದ ಬಳಿಕ ಪ್ರಜ್ವಲ್‍ ರೇವಣ್ಣರನ್ನು ಹಾಸನ ಅಭ್ಯರ್ಥಿಯೆಂದು ಘೋಷಣೆ ಮಾಡಲಾಗಿತ್ತು. ಇವತ್ತು ನಿಖಿಲ್‍ ಕುಮಾರಸ್ವಾಮಿಯವರನ್ನು ಒಳ್ಳೆಯ ಮುಹೂರ್ತದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯೆಂದು ಸಚಿವ ಡಿ.ಸಿ. ತಮ್ಮಣ್ಣ ಘೋಷಿಸಿದ್ದಾರೆ.

ಮಂಡ್ಯದ ಸಿಲ್ವರ್ ಜ್ಯೂಬ್ಲಿ ಪಾರ್ಕ್ ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಸಚಿವರು, ನಿಖಿಲ್‍ರನ್ನು ಮೈತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.

ಶುಭಗಳಿಗೆಯಲ್ಲಿ, ಅಂದ್ರೆ 12 ಗಂಟೆಯೊಳಗೆ ನಿಖಿಲ್‍ ಹೆಸರನ್ನು ಘೋಷಿಸುವಂತೆ ದೇವೇಗೌಡರು ತಿಳಿಸಿದ್ರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತಂದೆ, ತಾತನ ಅನುಪಸ್ಥಿತಿಯಲ್ಲೇ ನಿಖಿಲ್‍ ಅಭ್ಯರ್ಥಿಯೆಂದು ಘೋಷಿಸಿದ್ದಾರೆ.

ಹೆಚ್ಚಾದ ಪೆಟ್ರೋಲ್ ಬೆಲೆ – ಇಳಿಕೆಯಾದ ಡೀಸೆಲ್ ದರ

Posted: 14 Mar 2019 01:58 AM PDT

ಎಂದಿನಂತೆ ಗುರುವಾರವೂ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಳಿತ ಉಂಟಾಗಿದ್ದು, ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿದ್ದರೆ ಡೀಸೆಲ್ ಬೆಲೆ ಇಳಿದಿದೆ.

ಇಂಡಿಯನ್ ಆಯಿಲ್ ಕಾರ್ಪೋರೇಷನ್ ಮಾಹಿತಿ ಪ್ರಕಾರ ಗುರುವಾರ ದೇಶಾದ್ಯಂತ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್ ಗೆ ಆರರಿಂದ ಏಳು ಪೈಸೆಗಳಷ್ಟು ಹೆಚ್ಚಳ ಆಗಿದೆ. ಮತ್ತೊಂದೆಡೆ ಡೀಸೆಲ್ ದರದಲ್ಲಿ ಪ್ರತಿ ಲೀಟರ್ ಗೆ ಐದರಿಂದ ಆರು ಪೈಸೆ ಇಳಿಕೆ ಆಗಿದೆ.

ಪರಿಣಾಮವಾಗಿ ಗುರುವಾರ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 78.10 ಹಾಗೂ ಡೀಸೆಲ್ 70.52 ರೂ.ಗೆ ಮಾರಾಟವಾಗಿದೆ. ಹಾಗೇ ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 75.27, ಡೀಸೆಲ್ 71.15 ರೂ.ಗೆ ಮಾರಾಟವಾಗಿದೆ. ಕೋಲ್ಕತದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 74.56, ಡೀಸೆಲ್ 69.11 ರೂ.ಗೆ ಮಾರಾಟವಾಗಿದೆ.

ಇದೆಂತಾ ಡಾಕ್ಟರ್ ಸ್ವಾಮಿ…! ರೋಗಿಗೆ ಖಾಯಿಲೆ ಬಗ್ಗೆ ಹೇಳಲೆ ಇಲ್ಲ

Posted: 14 Mar 2019 01:25 AM PDT

ಶಸ್ತ್ರಚಿಕಿತ್ಸೆ ವೇಳೆ ದೇಹದೊಳಗೆ ಕತ್ತರಿ ಸೇರಿದಂತೆ ಕೆಲ ವಸ್ತುಗಳನ್ನು ಇಟ್ಟು ಹೊಲಿಗೆ ಮಾಡಿದ ಪ್ರಕರಣಗಳನ್ನು ನಾವು ಕೇಳಿದ್ದೇವೆ. ಆದ್ರೆ ಈ ಘಟನೆ ಸ್ವಲ್ಪ ವಿಚಿತ್ರವಾಗಿದೆ. ಈ ಘಟನೆಯಲ್ಲಿ ರೋಗಿಗೆ ಬ್ರೇನ್ ಟ್ಯೂಮರ್ ಇದೆ ಎಂಬುದನ್ನು ಹೇಳಲು ವೈದ್ಯ ಮರೆತಿದ್ದಾನೆ. 19 ತಿಂಗಳ ನಂತ್ರ ರೋಗಿಗೆ ವಿಷ್ಯ ತಿಳಿದಿದೆ.

ಘಟನೆ ಚೀನಾದಲ್ಲಿ ನಡೆದಿದೆ. 53 ವರ್ಷದ ಲೀ ಶಂಗ್ ಲಾಂಗ್ 19 ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದನಂತೆ. ಆ ವೇಳೆ ಬ್ರೇನ್ ಟ್ಯೂಮರ್ ತೆಗೆದು ಚಿಕಿತ್ಸೆ ನೀಡಿದ್ದರಂತೆ ವೈದ್ಯರು. ಚಿಕಿತ್ಸೆ ಯಶಸ್ವಿಯಾಗಿತ್ತಂತೆ. ಆದ್ರೆ ಶಂಗ್ ಎಡ ಕಿವಿ ಕೇಳ್ತಿರಲಿಲ್ಲವಂತೆ.

19 ತಿಂಗಳ ನಂತ್ರ ಶಂಗ್ ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದನಂತೆ. ಆಸ್ಪತ್ರೆಗೆ ದಾಖಲಿಸಿದಾಗ ಮೆದುಳು ಸರಿಯಿತ್ತಂತೆ. 6 ತಿಂಗಳ ನಂತ್ರ ಹಾರ್ಟ್ ಚೆಕ್ ಮಾಡುವಂತೆ ಸಲಹೆ ನೀಡಲಾಗಿತ್ತಂತೆ. ಆದ್ರೆ ಒಂದು ತಿಂಗಳಲ್ಲಿಯೇ ಅನೇಕ ಬಾರಿ ಶಂಗ್ ಪ್ರಜ್ಞೆ ತಪ್ಪಿದ್ದನಂತೆ. ಮತ್ತೆ ಶಂಗ್ ಆಸ್ಪತ್ರೆಗೆ ದಾಖಲಾದಾಗ ವೈದ್ಯರು ಮತ್ತೆ ಬ್ರೈನ್ ಟ್ಯೂಮರ್ ಆಗಿದೆ ಎಂದಿದ್ದಾರೆ. ಮತ್ತೆ ಎಂಬ ಶಬ್ದ ಶಂಗ್ ಆಘಾತಕ್ಕೀಡು ಮಾಡಿದೆ. ವಿವರ ಕೇಳಿದಾಗ 19 ತಿಂಗಳ ಹಿಂದೆಯೇ ಬ್ರೈನ್ ಟ್ಯೂಮರ್ ಆಗಿತ್ತು. ಅದನ್ನು ವೈದ್ಯರು ತೆಗೆದಿದ್ದಾರೆ ಎಂಬುದು ಗೊತ್ತಾಗಿದೆ. ಮತ್ತೆ ಶಂಗ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಮಾಡಿಸಿಕೊಳ್ತಿದ್ದಾನೆ. ಆಸ್ಪತ್ರೆ ವಿರುದ್ಧ ದೂರು ನೀಡಿದ್ದಾನೆ.

ದತ್ತಿ ಕಾರ್ಯಗಳಿಗೆ ಅಜೀಂ ಪ್ರೇಮ್‍ಜಿ ನೀಡ್ತಿರುವ ಕೊಡುಗೆ 1.4 ಲಕ್ಷ ಕೋಟಿ ರೂಪಾಯಿ…!

Posted: 14 Mar 2019 01:02 AM PDT

ವಾಣಿಜ್ಯೋದ್ಯಮಿ, ಪ್ರತಿಷ್ಠಿತ ಸಂಸ್ಥೆ ವಿಪ್ರೋದ ಅಧ್ಯಕ್ಷ ಅಜೀಂ ಪ್ರೇಮ್‍ಜಿ ಅವರದ್ದು ದಾನ ಧರ್ಮದಲ್ಲಿ ಎತ್ತಿದ ಕೈ. ಶಿಕ್ಷಣ ಕ್ಷೇತ್ರಕ್ಕೆ ತಮ್ಮದೆ ಆದ ಕೊಡುಗೆ ನೀಡುತ್ತಾ ಬಂದಿರುವ ಅಜೀಂ ಪ್ರೇಮ್‍ಜಿ ಈಗ 52,500 ಕೋಟಿ ರೂಪಾಯಿಗಳನ್ನು ನೀಡುತ್ತಿದ್ದಾರೆ.

ಅಜೀಂ ಪ್ರೇಮ್‍ಜಿ ಅವರು ವಿಪ್ರೋ ಸಂಸ್ಥೆಯಲ್ಲಿ ತಮ್ಮ ಪಾಲು ಬಂಡವಾಳದ ಶೇ.34 ರಷ್ಟನ್ನು ದತ್ತಿ ಕಾರ್ಯಕ್ರಮಗಳಿಗೆ ನೀಡಲು ಮುಂದಾಗಿದ್ದಾರೆ. ಅವರ ದುಡಿಮೆಯಲ್ಲಿ ದಾನ ಧರ್ಮದ ಉದ್ದೇಶಕ್ಕೆ ನೀಡುತ್ತಿರುವ ಒಟ್ಟಾರೆ ಮೊತ್ತ ಈಗ 1.4 ಲಕ್ಷ ಕೋಟಿಗೆ ತಲುಪಿದೆ.

ದೇಶದ ಎರಡನೇ ಅತಿದೊಡ್ಡ ಶ್ರೀಮಂತರಾಗಿರುವ ಅಜೀಂ ಪ್ರೇಮ್‍ಜಿ ಅವರ ಸಂಸ್ಥೆಗಳು ವಿಪ್ರೋದಲ್ಲಿ ಶೇಕಡಾ 74 ರಷ್ಟು ಪಾಲು ಬಂಡವಾಳ ಹೊಂದಿವೆ. ಲಾಭರಹಿತ ಸಂಘಟನೆಯಾಗಿರುವ ಪ್ರೇಮ್‍ಜಿ ಫೌಂಡೇಷನ್‍ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದೆ.

ಸಿಟಿ ಬಸ್‍ ನಲ್ಲಿ ಆಕರ್ಷಿಸುತ್ತಿದೆ ‘ಅಭಿನಂದನ್‍’ ಚಿತ್ರ

Posted: 14 Mar 2019 12:58 AM PDT

ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ಹೊಡೆದುರುಳಿಸಿ, ಪಾಕಿಸ್ತಾನದ ಸೇನೆ ಕೈಗೆ ಸಿಕ್ಕು ಮತ್ತೆ ಸುರಕ್ಷಿತವಾಗಿ ಭಾರತಕ್ಕೆ ವಾಪಸ್‍ ಬಂದ ವಿಂಗ್ ಕಮಾಂಡರ್ ಅಭಿನಂದನ್‍ ಅವರಿಗೆ ಮಂಗಳೂರಿನ ಸಿಟಿ ಬಸ್‍ ಒಂದರಲ್ಲಿ ವಿಶಿಷ್ಟವಾಗಿ ಅಭಿನಂದನೆ ಸಲ್ಲಿಸಲಾಗಿದೆ.

ವಿಕ್ರಮ್ ಶೆಟ್ಟಿ ಎಂಬವರ ಮಾಲೀಕತ್ವದ ಬಸ್ ನಲ್ಲಿ ಅಭಿನಂದನ್‍ ಚಿತ್ರ ಬಿಡಿಸಿ 'ವಿ ಸೆಲ್ಯೂಟ್ ಇಂಡಿಯನ್‍ ಆರ್ಮಿ’ ಎಂದು ಬರೆಯಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಸ್‍ ನ ಚಿತ್ರ ವೈರಲ್‍ ಆಗಿದ್ದು, ರಾಷ್ಟ್ರಮಟ್ಟದ ಹಲವಾರು ನಾಯಕರು ಕೂಡಾ ತಮ್ಮ ಸೋಶಿಯಲ್ ಮೀಡಿಯಾ ಪೇಜ್‍ಗಳಲ್ಲಿ ಇದನ್ನು ಹಂಚಿಕೊಳ್ತಿದ್ದಾರೆ. ಅಲ್ಲದೆ ಇದಕ್ಕೆ ಪ್ರಯಾಣಿಕರಿಂದ ಪ್ರಶಂಸೆ ಕೂಡಾ ವ್ಯಕ್ತವಾಗಿದೆ.

ವಿಕ್ರಮ್ ಶೆಟ್ಟಿಯವರ ಬಳಿ ಮೂರು ಬಸ್‍ಗಳಿದ್ದು ಒಂದೊಂದು ಬಸ್‍ನಲ್ಲೂ ವಿಶಿಷ್ಟ ಪರಿಕಲ್ಪನೆಯ ಪೇಂಟಿಂಗ್ ಮಾಡಿಸಿದ್ದಾರೆ. ಒಂದು ಬಸ್‍ನಲ್ಲಿ ಕರಾವಳಿಯ ಜನಪದ ಕ್ರೀಡೆಯನ್ನು ಉಳಿಸುವ ಸಲುವಾಗಿ ‘ಸೇವ್ ಕಂಬಳ’ ಎಂದು ಚಿತ್ರಿಸಿದ್ರೆ, ಮತ್ತೊಂದರಲ್ಲಿ ಸ್ವಚ್ಛತೆ ಮೂಡಿಸುವ ಚಿತ್ರಗಳನ್ನು ಬರೆಯಲಾಗಿದೆ. ಹಾಗೆಯೇ ಇನ್ನೊಂದರಲ್ಲಿ ಅಭಿನಂದನ್‍ ಚಿತ್ರದ ಜೊತೆಗೆ ‘ವಿ ಸೆಲ್ಯೂಟ್‍ ಇಂಡಿಯನ್ ಆರ್ಮಿ’ ಅಂತಾ ಬರೆಯಲಾಗಿದೆ.